ಪ್ರಧಾನಮಂತ್ರಿಗೆ ಅಣ್ಣಾ ಹಜಾರೆ ಶೀಘ್ರ ಪತ್ರ

7

ಪ್ರಧಾನಮಂತ್ರಿಗೆ ಅಣ್ಣಾ ಹಜಾರೆ ಶೀಘ್ರ ಪತ್ರ

Published:
Updated:
ಪ್ರಧಾನಮಂತ್ರಿಗೆ ಅಣ್ಣಾ ಹಜಾರೆ ಶೀಘ್ರ ಪತ್ರ

ರಾಳೇಗಣ ಸಿದ್ದಿ (ಪಿಟಿಐ): ಚುನಾವಣಾ ಸುಧಾರಣೆ ಮತ್ತು ಸಂಸದರ ಕಾರ್ಯಕ್ಷಮತೆ ಮೌಲ್ಯಾಂಕನ ಕುರಿತಂತೆ ಅಣ್ಣಾ ಹಜಾರೆ ಅವರು ಪ್ರಧಾನಿಗೆ ಶೀಘ್ರ ಪತ್ರ ಬರೆಯಲಿದ್ದಾರೆ.ಪ್ರಬಲ ಜನ ಲೋಕಪಾಲ ಮಸೂದೆಗೆ ಒತ್ತಾಯಿಸಿ ಅಣ್ಣಾ ಹಜಾರೆ ನಡೆಸಿದ ನಿರಶನದ ನಂತರ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಎರಡು ದಿನಗಳ ಕಾಲದ ಅಣ್ಣಾ ತಂಡದ ಕೇಂದ್ರ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. `ಚುನಾವಣಾ ಸುಧಾರಣೆ, ಸಂಸದರ ಕಾರ್ಯಕ್ಷಮತೆ ಮೌಲ್ಯಾಂಕನದ ಜೊತೆಗೆ ಭೂ ಸ್ವಾಧೀನ ಮಸೂದೆ ಬಗ್ಗೆಯೂ ಪ್ರಧಾನಿ ಅವರ ಅನಿಸಿಕೆ ತಿಳಿಯಲು ಇಡೀ ನಿರಶನದ ಪರವಾಗಿ ಅಣ್ಣಾ ಹಜಾರೆ ಅವರೇ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ  ಪತ್ರ ಬರೆಯಲಿದ್ದಾರೆ~ ಎಂದು ಶನಿವಾರ ಮುಕ್ತಾಯವಾದ ಮೊದಲ ದಿನದ ಸಭೆಯ ನಂತರ ಅರವಿಂದ ಕೇಜ್ರಿವಾಲ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.`ಚುನಾವಣೆಯಲ್ಲಿ ಸ್ಪರ್ಧಿಸಿದ ಉಮೇದುವಾರರನ್ನು ತಿರಸ್ಕರಿಸಲು ಮತಯಂತ್ರದಲ್ಲಿ ಅವಕಾಶ ನೀಡುವ ಮತ್ತು ಕಾರ್ಯಕ್ಷಮತೆ ಉತ್ತಮವಾಗಿಲ್ಲದ ಜನಪ್ರತಿನಿಧಿಗಳನ್ನು ವಾಪಸು ಕರೆಯಿಸಿಕೊಳ್ಳುವ ಹಕ್ಕು ಮತದಾರರಿಗೆ ಇರಬೇಕು ಎಂಬ ವಿಚಾರವಾಗಿಯೂ ಪ್ರಧಾನಿ ಅವರಿಗೆ ಪತ್ರ ಬರೆಯಲಿದ್ದಾರೆ. ಇದೇ ವಿಚಾರವಾಗಿ ಅಣ್ಣಾ ತಂಡವು ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೇಷಿ ಅವರನ್ನು ಶೀಘ್ರದಲ್ಲೇ ಭೇಟಿ ಮಾಡಲಿದೆ~ ಎಂದು ತಿಳಿಸಿದರು.`ಅಭಿವೃದ್ಧಿ ಯೋಜನೆಗಾಗಿ ಜಮೀನು ವಶ ಪಡಿಸಿಕೊಳ್ಳುವ ಮುನ್ನ ಸಂಬಂಧಿಸಿದ ಗ್ರಾಮ ಸಭೆಯ ಅನುಮತಿ ಪಡೆದುಕೊಳ್ಳುವ ಅಂಶವನ್ನು ಈಗ ಲೋಕಸಭೆಯಲ್ಲಿ ಮಂಡಿಸಲಾಗಿರುವ ಭೂ ಸ್ವಾಧೀನ ಮಸೂದೆಯಲ್ಲಿ ಅಡಕ ಮಾಡಲಾಗಿದೆಯೇ ಎಂಬ ಬಗ್ಗೆ ಪ್ರಧಾನಿಯವರಿಂದ ಸ್ಪಷ್ಟನೆ ಕೋರಲು ಸಭೆಯಲ್ಲಿ ನಿರ್ಧರಿಸಲಾಯಿತು~ ಎಂದರು. ಸಭೆಯಲ್ಲಿ ಮಾಜಿ ಸಚಿವ ಶಾಂತಿ ಭೂಷಣ್, ಹಿರಿಯ ವಕೀಲ ಪ್ರಶಾಂತ್ ಭೂಷಣ್, ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ, ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಚಳವಳಿಗಾರಾದ ಅರವಿಂದ ಕೇಜ್ರಿವಾಲ್, ಮನಿಷ್ ಸಿಸೊಡಿಯಾ, ಮೇಧಾ ಪಾಟ್ಕರ್ ಮತ್ತಿತರರು ಭಾಗವಹಿಸಿದ್ದರು.

ಸಂಸದರಿಗೆ ಘೇರಾವ್: ಅಣ್ಣಾ ಕರೆ

ರಾಳೇಗಣ ಸಿದ್ದಿ (ಐಎಎನ್‌ಎಸ್): ಜನ ಲೋಕಪಾಲ ಮಸೂದೆ ವಿರೋಧಿಸುವ ಸಂಸದರನ್ನು ಘೇರಾವ್ ಮಾಡಿ ಎಂದು ಹಿರಿಯ ಗಾಂಧಿವಾದಿ, ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಕರೆ ನೀಡಿದ್ದಾರೆ.`ಜನ ಲೋಕಪಾಲ ಮಸೂದೆ ವಿರೋಧಿಸುವ ಸಂಸದರು ಮನೆಯಿಂದ ಹೊರಬಾರದಂತೆ ಮುತ್ತಿಗೆ ಹಾಕಿ~ ಎಂದು ಅವರು, `ಇಂತಹ ಸಂಸದರನ್ನು ಮತ್ತೆ ಚುನಾಯಿಸಬೇಡಿ. ಅವರಿಗೆ ಯಾರೂ ಮತ ಹಾಕ ಬೇಡಿ~ ಎಂದು  ಹಜಾರೆ ದೇಶವಾಸಿಗಳನ್ನು ವಿನಂತಿಸಿಕೊಂಡರು.

`ಲೋಕಪಾಲ ಹುದ್ದೆ: ಆಕಾಂಕ್ಷಿಯಲ್ಲ~

ಪುಣೆ (ಪಿಟಿಐ): ಅಣ್ಣಾ ತಂಡದ ಪ್ರಮುಖ ಸದಸ್ಯರಾದ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರು ಲೋಕಪಾಲ ಹುದ್ದೆಗೆ ತಾವು ಆಕಾಂಕ್ಷಿಯಲ್ಲ ಎಂದು ಶನಿವಾರ ಹೇಳಿದರು.`ಜನ ಲೋಕಪಾಲ ಮಸೂದೆಯಲ್ಲಿ ಲೋಕಪಾಲರ ನೇಮಕಕ್ಕೆ ಅರ್ಹತೆಗಳನ್ನು ಪಟ್ಟಿ ಮಾಡುವಾಗ ಸರ್ಕಾರ ಮತ್ತು ಅಣ್ಣಾ ತಂಡದ ಸದಸ್ಯರು ಆ ಹುದ್ದೆಯನ್ನು ಅಲಂಕರಿಸುವ ವ್ಯಕ್ತಿಯ ವಯಸ್ಸನ್ನು 70 ವರ್ಷಕ್ಕೆ ನಿಗದಿ ಪಡಿಸಿದ್ದಾರೆ. ನನಗೆ ಈಗ 72 ವರ್ಷ, ಆದ್ದರಿಂದ ನಾನು ಆ ಹುದ್ದೆಯ ಆಕಾಂಕ್ಷಿಯಲ್ಲ~ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry