ಶನಿವಾರ, ಮೇ 21, 2022
28 °C

ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆ: 2 ಸಾವಿರ ಕಿ.ಮೀ. ರಸ್ತೆ ಅಭಿವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: `ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆ~ (ಪಿಎಂಜಿಎಸ್‌ವೈ) ಎರಡನೇ ಹಂತದಡಿ ರಾಜ್ಯದ ಎರಡು ಸಾವಿರ ಕಿ.ಮೀ. ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮಂಜೂರಾತಿ ನೀಡಿದೆ.

ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ್ ಶೆಟ್ಟರ್ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಂ ರಮೇಶ್ ಅವರನ್ನು ಗುರುವಾರ ಭೇಟಿ ಮಾಡಿ ಪಿಎಂಜಿಎಸ್‌ವೈ ಎರಡನೇ ಹಂತದ ಯೋಜನೆಗೆ ಶೇ 25ರಷ್ಟು ವೆಚ್ಚ ಭರಿಸುವ ಸಂಬಂಧದ ಹಣಕಾಸು ಇಲಾಖೆ ಆದೇಶ ಪ್ರತಿ ಹಸ್ತಾಂತರಿಸಿದ ಬಳಿಕ ಎರಡು ಸಾವಿರ ಕಿ.ಮೀ. ರಸ್ತೆ ಅಭಿವೃದ್ಧಿಗೆ ಮಂಜೂರಾತಿ ನೀಡಲಾಯಿತು.

ಪ್ರತಿ ಕಿ.ಮೀ. ಅಭಿವೃದ್ಧಿಗೆ 35ರಿಂದ 40 ಲಕ್ಷ ರೂಪಾಯಿ ನಿಗದಿ ಆಗಲಿದ್ದು, ಇದರಲ್ಲಿ ಶೇ75 ಕೇಂದ್ರ ಹಾಗೂ 25ರಷ್ಟು ರಾಜ್ಯ ಸರ್ಕಾರ ಕೊಡಬೇಕು. ಕರ್ನಾಟಕ, ಆಂಧ್ರ, ಮಹಾರಾಷ್ಟ್ರ ಮತ್ತು ರಾಜಸ್ತಾನ್ ಸೇರಿದಂತೆ ಐದು ರಾಜ್ಯಗಳು ಮೊದಲ ಹಂತದ ಯೋಜನೆ ಪೂರ್ಣಗೊಳಿಸಿವೆ. ಈ ರಾಜ್ಯಗಳ ಒತ್ತಾ ಯದ ಮೇರೆಗೆ ಎರಡನೇ ಹಂತದ ಯೋಜನೆ ಆರಂಭಿಸಲಾಗಿದೆ.

ಮೊದಲ ಹಂತದ ಯೋಜನೆಗೆ ಸಂಪೂರ್ಣ ಹಣ ಭರಿಸಿದ್ದ ಕೇಂದ್ರ ಸರ್ಕಾರ, ಎರಡನೇ ಹಂತಕ್ಕೆ 50:50 ಸಮಾನ ವೆಚ್ಚ ಹಂಚಿಕೆ ಷರತ್ತು ಹಾಕಿತ್ತು. ಕರ್ನಾಟಕ ಮತ್ತಿತರ ರಾಜ್ಯಗಳು 75: 25 ಹಂಚಿಕೆ ಪಟ್ಟು ಹಿಡಿದವು. ಇದರಿಂದ ಕೇಂದ್ರ 75ರಷ್ಟು ಹಣ ನೀಡಲು ಒಪ್ಪಿಕೊಂಡಿದೆ. ಮೊದಲ ಹಂತದ ಯೋಜನೆ ಪುರ್ಣಗೊಳಿಸಿದ ಬಳಿಕ ಉಳಿದ ರಾಜ್ಯಗಳಿಗೂ ಈ ಯೋಜನೆ ಅನ್ವಯ ಆಗಲಿದೆ.

ಹನ್ನೆರಡು ವರ್ಷಗಳ ಹಿಂದೆ ವಾಜಪೇಯಿ ಸರ್ಕಾರ ಪಿಎಂಜಿಎಸ್‌ವೈ ಆರಂಭಿಸಿತ್ತು. ಯೋಜನೆಗೆ ಕಾಲಮಿತಿ ನಿಗದಿಪಡಿಸಲಾಗಿತ್ತು.

ಇದಕ್ಕಾಗಿ ರಾಜ್ಯಗಳು ಪ್ರತ್ಯೇಕ ಎಂಜಿನಿಯರ್‌ಗಳನ್ನು ನೇಮಕ ಮಾಡಿವೆ. ಯೋಜನೆ ಮುಗಿದ ಬಳಿಕ ಇವರಿಗೆ ಕೆಲಸವಿಲ್ಲದಂತಾಗಿರುವ ಹಿನ್ನೆಲೆಯಲ್ಲಿ ಎರಡನೇ ಹಂತದ ಯೋಜನೆಗೆ ಕರ್ನಾಟಕ ಮತ್ತಿತರ ರಾಜ್ಯಗಳು ಬೇಡಿಕೆ ಇಟ್ಟಿದ್ದವು. ಜೈರಾಂ ರಮೇಶ್ ಎರಡನೇ ಹಂತದ ಯೋಜನೆ ಆರಂಭಿಸುವುದಾಗಿ ಈ ಹಿಂದೆ ಪ್ರಕಟಿಸಿದ್ದರು. ಅದರಂತೆ ಯುಪಿಎ ಸರ್ಕಾರ- 2 ಯೋಜನೆಯನ್ನು ಕೆಲವು ಮಾರ್ಪಾಡುಗಳೊಂದಿಗೆ ಮುಂದುವರಿಸಿದೆ.

ಇದಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯ ನಿರ್ಮಾಣ ಮಾಡುವವರಿಗೆ ಕೊಡಮಾಡುವ ಸಹಾಯಧನಕ್ಕೆ ಸಂಬಂಧಿಸಿದ ಷರತ್ತುಗಳನ್ನು ಸಡಿಲಗೊಳಿಸಲು ಕೇಂದ್ರ ಸರ್ಕಾರ ಮುಂದೆ ಬಂದಿದೆ. ಬಡತನ ರೇಖೆಗಿಂತ ಕೆಳಗಿರುವವರಿಗೆ ಮಾತ್ರ ನೀಡಲಾಗುತ್ತಿರುವ ಸಹಾಯಧನ ಇನ್ನು ಮುಂದೆ ಎಲ್ಲ ಗ್ರಾಮೀಣ ಕುಟುಂಬಕ್ಕೂ ಲಭ್ಯವಾಗಲಿದೆ ಎಂದು ಜಗದೀಶ್ ಶೆಟ್ಟರ್‌ಅವರು `ಪ್ರಜಾವಾಣಿ~ಗೆ ತಿಳಿಸಿದರು.

ಇದುವರೆಗೆ ಶೌಚಾಲಯ ಫಲಾನುಭವಿಗಳಿಗೆ ರೂ 4600 ರೂಪಾಯಿ ಸಹಾಯಧನ ಸಿಗುತ್ತಿತ್ತು. ಕೇಂದ್ರ ಸರ್ಕಾರ ಇದನ್ನು ಹತ್ತು ಸಾವಿರಕ್ಕೆ ಹೆಚ್ಚಳ ಮಾಡಿದೆ. ಬಡತನ ರೇಖೆಗಿಂತ ಕೆಳಗಿರುವವರಿಗೆ ಮಾತ್ರ ಸಹಾಯಧನ ನೀಡಲಾಗುತ್ತಿದೆ. ಈ ಮಾರ್ಗಸೂಚಿ ಬದಲಾವಣೆ ಮಾಡಿ ಶೌಚಾಲಯ ನಿರ್ಮಿಸುವ ಎಲ್ಲ ಗ್ರಾಮೀಣ ಕುಟುಂಬಗಳಿಗೂ ನೀಡಲಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.