ಸೋಮವಾರ, ಏಪ್ರಿಲ್ 12, 2021
29 °C

ಪ್ರಧಾನಿಗೆ ಮುಖಭಂಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಂದ್ರ ಜಾಗೃತ ಆಯೋಗದ (ಸಿವಿಸಿ) ಮುಖ್ಯ ಆಯುಕ್ತರಾದ ಪಿ.ಜೆ.ಥಾಮಸ್ ನೇಮಕ ಅಕ್ರಮ ಎಂದು ಸಾರಿ ಅದನ್ನು ರದ್ದುಮಾಡುವ ಮೂಲಕ ಪ್ರಧಾನಿ ಮನಮೋಹನ್‌ಸಿಂಗ್ ಅವರಿಗೆ ಸುಪ್ರೀಂಕೋರ್ಟ್ ಇನ್ನೊಂದು ತಪರಾಕಿ ನೀಡಿದೆ.ಕಾಮನ್‌ವೆಲ್ತ್ ಗೇಮ್ಸ್ ಮತ್ತು 2ಜಿ ತರಂಗಾಂತರ ಹಗರಣಗಳ ವಿಚಾರಣೆ ಸಂದರ್ಭದಲ್ಲಿ ಪ್ರಧಾನಿ ಬಗ್ಗೆ ಕಟುನುಡಿಗಳನ್ನಾಡಿರುವ ಸುಪ್ರೀಂಕೋರ್ಟ್ ಮತ್ತೊಮ್ಮೆ  ಅವರನ್ನೇ ಗುರಿಯಾಗಿಸಿ ಯುಪಿಎ ಸರ್ಕಾರವನ್ನು ಮುಜುಗರಕ್ಕೀಡು ಮಾಡಿದೆ. ‘ಥಾಮಸ್ ಅವರ ನೇಮಕಕ್ಕೆ ಶಿಫಾರಸು ಮಾಡಿರುವ ಉನ್ನತಾಧಿಕಾರ ಸಮಿತಿ, ಅವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಗಮನಕ್ಕೆ ತೆಗೆದುಕೊಂಡಿಲ್ಲ. ಈ ಕಾರಣದಿಂದಾಗಿ ಆ ಶಿಫಾರಸಿಗೆ ಕಾನೂನಿನಲ್ಲಿ ಬೆಲೆಯೇ ಇಲ್ಲ’ ಎಂದು ಸುಪ್ರೀಂಕೋರ್ಟ್ ಹೇಳಿದೆ. ಪ್ರಧಾನಿ ಮನಮೋಹನ್‌ಸಿಂಗ್ ಮತ್ತು ಗೃಹಸಚಿವ ಪಿ.ಚಿದಂಬರಂ ಅವರನ್ನೊಳಗೊಂಡ ಮೂವರು ಸದಸ್ಯರ ಉನ್ನತಾಧಿಕಾರ ಸಮಿತಿಯೇ ಥಾಮಸ್ ಅವರ ನೇಮಕಕ್ಕೆ ಶಿಫಾರಸು ಮಾಡಿರುವುದು ಗಮನಾರ್ಹ. ಕೇರಳ ಹೈಕೋರ್ಟ್ ವಿಚಾರಣೆ ನಡೆಸುತ್ತಿರುವ ಪಾಮೋಲಿನ್ ಎಣ್ಣೆ ಆಮದು ಹಗರಣದಲ್ಲಿ ಥಾಮಸ್ ಅವರು ಪ್ರಮುಖ ಆರೋಪಿ ಎಂದು ಸಮಿತಿಗೆ ಗೊತ್ತಿತ್ತು. ಸಮಿತಿಯ ಇನ್ನೊಬ್ಬ ಸದಸ್ಯೆಯಾದ ಲೋಕಸಭೆಯ ವಿರೋಧಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರು ಥಾಮಸ್ ಹೊತ್ತಿರುವ ಕಳಂಕಗಳ ಪಟ್ಟಿಯನ್ನೂ ಸಮಿತಿ ಮುಂದೆ ಮಂಡಿಸಿದ್ದಾರೆ. ಇವೆಲ್ಲವನ್ನೂ ನಿರ್ಲಕ್ಷಿಸಿ ಬಹುಮತದ ಬಲದಿಂದ ಥಾಮಸ್ ನೇಮಕಕ್ಕೆ ಶಿಫಾರಸು ಮಾಡಿರುವ ಉನ್ನತಾಧಿಕಾರ ಸಮಿತಿಯ ನಿಲುವು ಸರ್ವಾಧಿಕಾರಿ ಧೋರಣೆಯದು.ಸಿವಿಸಿಯಂತಹ ಸಂಸ್ಥೆಗಳ ಮುಖ್ಯಸ್ಥರನ್ನಾಗಿ ನೇಮಕಗೊಳ್ಳುವವರ ಬಯೋಡಾಟವನ್ನಷ್ಟೇ ನೋಡಿದರೆ ಸಾಲದು, ಅದಕ್ಕಿಂತಲೂ ಮುಖ್ಯವಾಗಿ ವ್ಯಕ್ತಿಯ ಪ್ರಾಮಾಣಿಕ ನಡವಳಿಕೆಯನ್ನು ಗಮನಕ್ಕೆ ತೆಗೆದುಕೊಳ್ಳಬೇಕು ಎಂಬುದೇ ಸುಪ್ರೀಂಕೋರ್ಟ್ ತೀರ್ಪಿನ ಸಾರ. ಆದರೆ ಸಾರ್ವಜನಿಕ ಜೀವನದಲ್ಲಿನ ಭ್ರಷ್ಟಾಚಾರದಲ್ಲಿ ಷಾಮೀಲಾಗಿರುವ ರಾಜಕೀಯ ನಾಯಕರೇ ಕೂಡಿ ವ್ಯವಸ್ಥಿತವಾದ ಸಂಚಿನ ರೂಪದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಇರುವ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿದ್ದಾರೆ.ಈಗಲೂ ಕಾಲ ಮಿಂಚಿಲ್ಲ. ಸಿವಿಸಿ, ಸಿಬಿಐ ಮೊದಲಾದ ಸಂವಿಧಾನಬದ್ಧ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ಇಲ್ಲದಂತೆ ಅವುಗಳಿಗೆ ಸ್ವಾಯತ್ತತೆಯನ್ನು ನೀಡಲು ಸರ್ಕಾರ ಮುಂದಾಗಬೇಕು. ಆ ಸಂಸ್ಥೆಗಳ ಮುಖ್ಯಸ್ಥರನ್ನು ನೇಮಿಸಲು ಪ್ರಜಾಸತ್ತಾತ್ಮಕ ಮತ್ತು ಪಾರದರ್ಶಕವಾದ ವ್ಯವಸ್ಥೆಯೊಂದನ್ನು ರೂಪಿಸಬೇಕು. ಇದನ್ನೆಲ್ಲ ವಿನೀತ್ ನಾರಾಯಣ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಾಲ್ಕುವರ್ಷಗಳ ಹಿಂದೆಯೇ ಹೇಳಿತ್ತು.ಅದನ್ನು ಪಾಲಿಸಿದ್ದರೆ ಪಿ.ಜೆ.ಥಾಮಸ್ ಅವರಂತಹ ಕಳಂಕಿತರು ನೇಮಕಗೊಳ್ಳಲು ಅವಕಾಶವೇ ಇರುತ್ತಿರಲಿಲ್ಲ. ಪ್ರಧಾನಿ ಮನಮೋಹನ್ ಸಿಂಗ್ ಅವರು ವಿಚಾರ-ಆಚಾರಗಳೆರಡರಲ್ಲಿಯೂ ಪ್ರಾಮಾಣಿಕರಾಗಿದ್ದರೆ ಸುಪ್ರೀಂಕೋರ್ಟ್ ತೀರ್ಪುಗಳ ಮಾರ್ಗದರ್ಶನದಲ್ಲಿ ಸಿವಿಸಿಯ ಸುಧಾರಣೆಗೆ ಚಾಲನೆ ನೀಡಬೇಕು. ಮಾಡಿರುವ ಪಾಪಕ್ಕೆ ಇದೇ ಸರಿಯಾದ ಪ್ರಾಯಶ್ಚಿತ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.