ಗುರುವಾರ , ಏಪ್ರಿಲ್ 15, 2021
28 °C

ಪ್ರಧಾನಿಗೆ ಸಂಜೆವರೆಗೆ ರಾಮದೇವ್ ಗಡುವು, ಕ್ರಾಂತಿಯ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್ಎಸ್): ವಿದೇಶದಲ್ಲಿ ಕೊಳೆಯುತ್ತಿರುವ ಕಪ್ಪು ಹಣವನ್ನು ಹಿಂದಕ್ಕೆ ತರುವುದೂ ಸೇರಿದಂತೆ ತಮ್ಮ ಬೇಡಿಕೆಗಳ ಬಗ್ಗೆ ಕ್ರಮ ಕೈಗೊಳ್ಳಲು  ಈ ದಿನ  ಸಂಜೆಯವರೆಗೆ ಪ್ರಧಾನಿ ಮನಮೋಹನ್ ಸಿಂಗ್ ಅವರು ತಾವು ಗಡುವು ನೀಡುತ್ತಿರುವುದಾಗಿ ಯೋಗ ಗುರು ಬಾಬಾ ರಾಮದೇವ್ ಭಾನುವಾರ ಘೋಷಿಸಿದರು. ಕ್ರಮ ಕೈಗೊಳ್ಳದೇ ಇದ್ದಲ್ಲಿ ರಾಷ್ಟ್ರದಲ್ಲಿ ದೊಡ್ಡ ಪ್ರಮಾಣದ ಕ್ರಾಂತಿ ನಡೆಯುವುದು ಎಂದೂ ಅವರು ಎಚ್ಚರಿಕೆ ನೀಡಿದರು.ರಾಮಲೀಲಾ ಮೈದಾನದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು ~ನಾನು ಪ್ರಧಾನಿಯವರ ವೈಯಕ್ತಿಕ ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತಿಲ್ಲ. ಆದರೆ ಈದಿನ ಸಂಜೆಯ ಒಳಗಾಗಿ ನಮ್ಮ ಚಳವಳಿಯ ನ್ಯಾಯೋಚಿತ ಬೇಡಿಕೆಗಳ ಬಗ್ಗೆ ಕ್ರಮ ಕೈಗೊಳ್ಳದೇ ಇದ್ದಲ್ಲಿ ಅದು ಅವರ ರಾಜಕೀಯ ಪ್ರಾಮಾಣಿಕತೆಯ ಬಗೆಗಿನ ಪ್ರಶ್ನಾರ್ಥಕ ಚಿಹ್ನೆಯಾಗುತ್ತದೆ~ ಎಂದು ರಾಮದೇವ್ ಬೆಂಬಲಿಗರ ಹರ್ಷೋದ್ಘಾರಗಳ ಮಧ್ಯೆ ಹೇಳಿದರು.~ನನ್ನ ನಿರಶನವನ್ನು ಮುಂದುವರೆಸುತ್ತಿದ್ದೇನೆ~ ಎಂದೂ ಯೋಗಗುರು ಈ ಸಂದರ್ಭದಲ್ಲಿ ಪ್ರಕಟಿಸಿದರು. ವಾಸ್ತವವಾಗಿ ಗುರುವಾರ ಆರಂಭಿಸಿದ್ದ ಮೂರು ದಿನಗಳ ನಿರಶನದ ಅವಧಿ ಶನಿವಾರ ಸಂಜೆಗೆ ಮುಕ್ತಾಯಗೊಂಡಿತ್ತು.ವಿದೇಶೀ ಬ್ಯಾಂಕುಗಳಲ್ಲಿ ಕೊಳೆಯುತ್ತಿರುವ ಕಪ್ಪು ಹಣವನ್ನು ಹಿಂದಕ್ಕೆ ತರುವುದು, ಪ್ರಬಲ ಲೋಕಪಾಲ ಮಸೂದೆ ಜಾರಿ ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಚುನಾವಣಾ ಆಯೋಗದ ಮುಖ್ಯಸ್ಥರ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವುದು ಸೇರಿದಂತೆ ತಮ್ಮ ಬೇಡಿಕೆಗಳನ್ನು ಪಟ್ಟಿ ಮಾಡಿ  ಪ್ರಧಾನಿಗೆ ಪತ್ರ ಬರೆದಿರುವುದಾಗಿ ರಾಮದೇವ್ ಹೇಳಿದರು.ಸರ್ಕಾರ ಕ್ರಮ ಕೈಗೊಳ್ಳುವವರೆಗೂ ನಿರಶನ ಮುಂದುವರೆಸಲು ನಾನು ಇಚ್ಛಿಸುತ್ತಿದ್ದೇನೆ. ಆದರೆ ಯಾವಾಗ ನಿರಶನ ಕೊನೆಗೊಳಿಸಲಾಗುವುದು ಎಂಬುದಾಗಿ ನಾವು ಸೋಮವಾರ ಬೆಳಗ್ಗೆ ಪ್ರಕಟಿಸುತ್ತೇವೆ ಎಂದು ರಾಮದೇವ್ ನುಡಿದರು.ಕಾಂಗ್ರೆಸ್ಸಿನ ಹೆಸರು ಕೆಡಿಸುವುದು ನಮ್ಮ ಉದ್ದೇಶವಲ್ಲ. ಕಪ್ಪು ಹಣ ಮತ್ತು ಭ್ರಷ್ಟಾಚಾರ ವಿರುದ್ಧ ಹೋರಾಡ ಬಯಸುವ ಯಾವುದೇ ರಾಜಕೀಯ ಪಕ್ಷ ನಮ್ಮ ಚಳವಳಿಯಲ್ಲಿ ಸೇರಿಕೊಳ್ಳಬಹುದು ಎಂದು ಅವರು ಹೇಳಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.