ಪ್ರಧಾನಿ ತೀರ್ಪು ಅಸಮರ್ಪಕ

7

ಪ್ರಧಾನಿ ತೀರ್ಪು ಅಸಮರ್ಪಕ

Published:
Updated:

ಮಂಗಳೂರು: ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕಾವೇರಿ ನದಿ ಪ್ರಾಧಿಕಾರದ ಅಧ್ಯಕ್ಷರ ನೆಲೆಯಲ್ಲಿ ಪ್ರಧಾನಿ ಅವರು ತಮಿಳುನಾಡಿಗೆ ನೀರು ಬಿಡಲು ಆದೇಶಿರುವುದನ್ನು ಹೇಗೆ ಬೇಕಾದರೂ ವ್ಯಾಖ್ಯಾನಿಸಬಹುದಾದರೂ, ಆ ತೀರ್ಪು ಅಸಮರ್ಪಕವಾಗಿದೆ ಎಂಬುದನ್ನು ಪಕ್ಷವೂ ಒಪ್ಪಿಕೊಳ್ಳುತ್ತದೆ ಎಂದು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಗುರುವಾರ ನಗರಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಮಾಡಲಾದ ಸಿದ್ಧತೆಗಳನ್ನು ಸೋಮವಾರ ಇಲ್ಲಿ ಪರಿಶೀಲಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ವರ್ಷದ ಕೆಲವು ತಿಂಗಳಲ್ಲಿ ಕಾವೇರಿ ಬಿಕ್ಕಟ್ಟು ಉಲ್ಬಣವಾಗುವುದನ್ನು ತಪ್ಪಿಸುವ ಸಲುವಾಗಿ ಕೆಪಿಸಿಸಿ ವತಿಯಿಂದ ಶೀಘ್ರ ಪರಿಣತರ ತಂಡ  ರಚಿಸಲಾಗುವುದು. ಅಧ್ಯಯನ ಮತ್ತು ಸಂಶೋಧನೆ ನಡೆಸುವ ಈ ತಂಡ ತಮಿಳುನಾಡಿಗೂ ಭೇಟಿ ನೀಡಿ ವರದಿ ಸಿದ್ಧಪಡಿಸಲಿದೆ.ಅದನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಸಲ್ಲಿಸಲಾಗುವುದು ಎಂದರು.ಪ್ರಧಾನಿ ಅವರು ತಮಿಳುನಾಡಿನ ಏಜೆಂಟ್‌ನಂತೆ ವರ್ತಿಸುತ್ತಿದ್ದಾರೆ ಎಂಬ ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇಂತಹ ಹೇಳಿಕೆ ಈಶ್ವರಪ್ಪ ಅವರಂತಹ ಉನ್ನತ ಸ್ಥಾನದಲ್ಲಿರುವವರಿಗೆ ಯೋಗ್ಯವಾದುದಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಧಾನಿ ಹೇಗೆ ಕೆಲಸ ಮಾಡಬೇಕೆಂಬುದನ್ನು ಅವರು ಅರ್ಥ ಮಾಡಿಕೊಂಡು ಮಾತನಾಡಬೇಕಿತ್ತು ಎಂದರು.ಎರಡೂ ರಾಜ್ಯಗಳ ಹೋರಾಟವನ್ನು ಮಳೆಯೇ ಅಂತ್ಯಗೊಳಿಸುವ ಲಕ್ಷಣ ಕಾಣಿಸುತ್ತಿದೆ. ಭಾನುವಾರ ಸುರಿದ ಮಳೆಯಿಂದ ಕೆಆರ್‌ಎಸ್‌ಗೆ 8,600 ಕ್ಯೂಸೆಕ್ ನೀರು ಹರಿದುಬರುತ್ತಿದೆ. ನೀರನ್ನು ಹೊರಗೆ ಬಿಡುತ್ತಿಲ್ಲವಾದ ಕಾರಣ ಅದೆಲ್ಲವೂ ಸಂಗ್ರಹವಾಗುತ್ತದೆ ಎಂದರು.ಕಾಂಗ್ರೆಸ್ ಟಿಕೆಟ್ ಮಾರಾಟವಾಗುತ್ತಿದೆ ಎಂಬ ರಮೇಶ್ ಕುಮಾರ್ ಆರೋಪ ಅಲ್ಲಗಳೆದ ಅವರು, ಇದು ಅವರ ವೈಯಕ್ತಿಕ ಅಭಿಪ್ರಾಯ, ಎಲ್ಲೆಲ್ಲಿ ಟಿಕೆಟ್ ಮಾರಾಟವಾಗಿದೆ ಎಂಬುದನ್ನು ಅವರು ಬಹಿರಂಗಪಡಿಸಲಿ ಎಂದು ಸವಾಲು ಎಸೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry