ಶನಿವಾರ, ಮಾರ್ಚ್ 6, 2021
21 °C
ಬಿಬಿಸಿ ಸಂದರ್ಶನದಲ್ಲಿ ಆರ್‌ಬಿಐ ಗವರ್ನರ್‌ ಅಭಿಪ್ರಾಯ

ಪ್ರಧಾನಿ ಬಗ್ಗೆ ಈಗ ಏನು ಹೇಳಿದರೂ ಕಷ್ಟ: ರಾಜನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಧಾನಿ ಬಗ್ಗೆ ಈಗ ಏನು ಹೇಳಿದರೂ ಕಷ್ಟ: ರಾಜನ್‌

ಲಂಡನ್‌ (ಪಿಟಿಐ):  ‘ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನಾನು ಈ ಹಂತದಲ್ಲಿ ಏನಾದರೂ ಹೇಳಿದರೆ ಅದು ಸಮಸ್ಯೆಗಳಿಗೆ ಎಡೆಮಾಡಿಕೊಡಬಹುದು’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ರಘುರಾಂ ರಾಜನ್‌ ಅವರು ಬಿಬಿಸಿಗೆ ನೀಡಿರುವ  ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.‘ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನಿಮ್ಮ ಅಭಿಪ್ರಾಯ ಏನು. ಅವರನ್ನು ಹೇಗೆ ಬಣ್ಣಿಸುವಿರಿ’ ಎಂದು ಕೇಳಿದ ಪ್ರಶ್ನೆಗೆ,  ಉತ್ತರಿಸಲು ರಾಜನ್‌ ನಿರಾಕರಿಸಿದ್ದಾರೆ.‘ನಾನು ಈ ಪ್ರಶ್ನೆಗೆ ಉತ್ತರಿಸಲಾರೆ. ನಾನು ಏನೇ ಹೇಳಿದರೂ ಅದು ಸಮಸ್ಯಾತ್ಮಕವಾಗಬಹುದು. ಹೀಗಾಗಿ ನಾನು ಈ ಪ್ರಶ್ನೆಗೆ ಉತ್ತರಿಸದೆ ಇರಲು  ಇಷ್ಟಪಡುವೆ’ ಎಂದು ರಾಜನ್‌ ಪ್ರತಿಕ್ರಿಯಿಸಿದ್ದಾರೆ.ದಿಟ್ಟ ಹೇಳಿಕೆಗಳಿಗೆ ಖ್ಯಾತರಾಗಿರುವ ರಾಜನ್‌ ಅವರ ಅಭಿಪ್ರಾಯಗಳು ಈ ಹಿಂದೆ ಕೇಂದ್ರ ಸರ್ಕಾರದ ಪಾಲಿಗೆ ಸಾಕಷ್ಟು ಇರಿಸುಮುರಿಸು ಉಂಟು ಮಾಡಿದ್ದವು. ಅಂತರರಾಷ್ಟ್ರೀಯ ಹಣಕಾಸು ನಿಧಿಯ  ಮಾಜಿ ಮುಖ್ಯ ಅರ್ಥಶಾಸ್ತ್ರಜ್ಞರಾಗಿರುವ ರಾಜನ್‌, ತಾವು ರಾಜಕೀಯ ಪ್ರವೇಶಿಸುವುದನ್ನೂ ತಳ್ಳಿ ಹಾಕಿದ್ದಾರೆ.‘ರಾಜಕೀಯಕ್ಕೆ ಸಂಬಂಧಿಸಿದಂತೆ ನನ್ನ ಪತ್ನಿ ಎಲ್ಲವನ್ನೂ ತಳ್ಳಿ ಹಾಕುತ್ತಾಳೆ. ನನ್ನ ರಾಜಕೀಯ ಪ್ರವೇಶಕ್ಕೂ ಆಕೆಯ ಉತ್ತರ  ಇಲ್ಲ ಎಂದೇ ಆಗಿರುತ್ತದೆ’ ಎಂದಿದ್ದಾರೆ.‘ಸದ್ಯಕ್ಕೆ ಭಾರತದ ಅತ್ಯಂತ ಅಪೇಕ್ಷಿತ ವ್ಯಕ್ತಿ’  ಆಗಿರುವುದಕ್ಕೆ ನಿಮಗೆ ಏನು ಅನಿಸುತ್ತದೆ’ ಎನ್ನುವ ಪ್ರಶ್ನೆಗೆ, ‘ನಾನು 25 ವರ್ಷದವನಿದ್ದಾಗ ಇಂತಹ ಬೇಡಿಕೆ ವ್ಯಕ್ತವಾಗಿದ್ದರೆ ಚೆನ್ನಾಗಿರುತ್ತಿತ್ತು’ ಎಂದು 53 ವರ್ಷದ ರಾಜನ್‌  ಜಾಣತನದ ಉತ್ತರ ನೀಡಿದ್ದಾರೆ.‘ನಾನೊಬ್ಬ  ಬೇಸರ ಹಿಡಿಸುವ ವ್ಯಕ್ತಿ.  ನನ್ನನ್ನು ರಾಕ್‌ಸ್ಟಾರ್‌ ಬ್ಯಾಂಕರ್‌ ಎಂದು ಬಣ್ಣಿಸಿರುವುದು  ಉತ್ಪ್ರೇಕ್ಷಿತ’ ಎಂದೂ   ಪ್ರತಿಕ್ರಿಯಿಸಿದ್ದಾರೆ.

ಆರ್‌ಬಿಐ ಗವರ್ನರ್‌  ಹುದ್ದೆಯಲ್ಲಿನ ರಾಜನ್‌ ಅವರ ಅಧಿಕಾರಾವಧಿಯು ಹಲವಾರು ವಿವಾದಗಳಿಗೆ ಕಾರಣವಾಗಿದೆ.   ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ‘ಭಾರತದಲ್ಲಿಯೇ ತಯಾರಿಸಿ’ ಆಂದೋಲನ ಮತ್ತು  ಅಸಹಿಷ್ಣುತೆಗೆ ಸಂಬಂಧಿಸಿದ  ಚರ್ಚೆಗಳ ಕುರಿತು ಅವರು ಆಡಿದ್ದ ಮಾತುಗಳು ವಿವಾದ ಮೂಡಿಸಿದ್ದವು.  ಅನೇಕ ಸಂದರ್ಭಗಳಲ್ಲಿ ಅವರ ದಿಟ್ಟ ನಡೆ ನುಡಿಗಳು ಸರ್ಕಾರದ ಪಾಲಿಗೆ ಹಿತಕರವಾಗಿರಲಿಲ್ಲ. ವಿವಿಧ ಸಂದರ್ಭಗಳಲ್ಲಿ ಮಾಡಿದ ಭಾಷಣಗಳು ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದವು.  ಅಮೆರಿಕದ ರಾಜಕೀಯ ತತ್ವಜ್ಞಾನಿ ಫ್ರಾನ್ಸಿಸ್‌ ಫುಕುಯಮಾ ಅವರ,– ‘ಬಲಿಷ್ಠ ಸರ್ಕಾರವು ನಿಜವಾಗಿಯೂ ದೇಶಕ್ಕೆ ಒಳಿತನ್ನು ಉಂಟು ಮಾಡಬಲ್ಲುದೇ’  ಹೇಳಿಕೆಯನ್ನು ತಮ್ಮ ಒಂದು ಭಾಷಣದಲ್ಲಿ ರಾಜನ್‌ ಉಲ್ಲೇಖಿಸಿದ್ದರು.ಮನೆಯಲ್ಲಿ ಗೋಮಾಂಸ ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿ  ದಾದ್ರಿಯಲ್ಲಿ ಮುಸ್ಲಿಂ ವ್ಯಕ್ತಿಯ ಹತ್ಯೆ ನಡೆದಾಗ ದೇಶದಾದ್ಯಂತ   ಅಸಹಿಷ್ಣುತೆ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಸಹಿಷ್ಣುತೆ ಬೆಂಬಲಿಸಿ ಮಾತನಾಡಿದ್ದರು. ‘ಆಲೋಚನೆಗಳ ಅಭಿವ್ಯಕ್ತಿಗೆ ಮುಕ್ತ ಅವಕಾಶ ಇರಬೇಕು’ ಎಂದು ಆಡಿದ ಮಾತು ಮತ್ತು ಭಾರಿ ಪ್ರಚಾರದ ‘ಭಾರತದಲ್ಲಿಯೇ ತಯಾರಿಸಿ’ ಆಂದೋಲನದ ಬಗ್ಗೆ ವ್ಯಕ್ತಪಡಿಸಿದ ಅನಿಸಿಕೆಗಳು ವಿವಾದ ಸೃಷ್ಟಿಸಿದ್ದವು.‘ನಮ್ಮದು ಸೇವೆಗಳನ್ನು ಅವಲಂಬಿಸಿದ ಆರ್ಥಿಕತೆಯಾಗಿರುವುದರಿಂದ ಹೊಸ ಹೊಸ ಆಲೋಚನೆಗಳಿಗೆ ನಾವು ಮುಕ್ತರಾಗಿರಬೇಕು’ ಎಂದು ಹೇಳಿದ್ದರು.

‘ಭಾರತದಲ್ಲಿಯೇ ತಯಾರಿಸಿ’ ಆಂದೋಲನಕ್ಕೆ ಬದಲಾಗಿ, ದೇಶದ ನಾಜೂಕಿನ ಅರ್ಥ ವ್ಯವಸ್ಥೆಗೆ  ‘ಭಾರತಕ್ಕಾಗಿ ತಯಾರಿಸಿ’ ನೀತಿ ಹೆಚ್ಚು ಸೂಕ್ತವಾದದ್ದು’ ಎಂದು ಹೇಳಿದ್ದರು.‘ನಾನು ಮಾಡಿದ ಯಾವುದೇ ಭಾಷಣಗಳಲ್ಲಿ ನಾನು  ಸರ್ಕಾರದ ಬಗ್ಗೆ ಮುಚ್ಚುಮರೆ ಇಲ್ಲದ ಅಥವಾ ಸೂಚ್ಯವಾಗಿ ಟೀಕೆ ಮಾಡಿಲ್ಲ.  ನನ್ನ ಭಾಷಣಗಳನ್ನು ಓದಿದವರು ಅದನ್ನು ತಮಗೆ ಸರಿಕಂಡಂತೆ ವ್ಯಾಖ್ಯಾನಿಸಿದ್ದಾರೆ’ ಎಂದು ರಾಜನ್‌ ಹೇಳಿದ್ದಾರೆ.ಮುಚ್ಚುಮರೆ ಇಲ್ಲದ ನೇರ ಮಾತುಗಳೇ ರಾಜನ್‌ ಅವರನ್ನು ಎರಡನೆ ಅವಧಿಗೆ ಮರು ನೇಮಕ ಮಾಡಲು ಸರ್ಕಾರ ಹಿಂದೇಟು ಹಾಕಲು ಕಾರಣ ಇರಬಹುದು ಎಂಬ ಮಾತು ಕೇಳಿ ಬರುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.