ಭಾನುವಾರ, ಫೆಬ್ರವರಿ 28, 2021
23 °C

ಪ್ರಧಾನಿ ಭೇಟಿಗೆ ಮಧ್ಯಸ್ಥಿಕೆ ವಹಿಸಲು ಸಿದ್ಧ: ಶೆಟ್ಟರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಧಾನಿ ಭೇಟಿಗೆ ಮಧ್ಯಸ್ಥಿಕೆ ವಹಿಸಲು ಸಿದ್ಧ: ಶೆಟ್ಟರ್

ಬಳ್ಳಾರಿ:  ಮಹಾದಾಯಿ ವಿವಾದವನ್ನು ಬಗೆಹರಿಸುವ ಸಂಬಂಧ, ಪ್ರಧಾನಿ ಭೇಟಿಗೆ ಮಧ್ಯಸ್ಥಿಕೆ ವಹಿಸುವುದಾಗಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ತಿಳಿಸಿದರು.ಕೇಂದ್ರ ಕಾರಾಗೃಹದಲ್ಲಿ ಬುಧವಾರ ರೈತರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿವಾದ ಬಗೆಹರಿಯಲು ಪ್ರಧಾನಿ ಮಧ್ಯಪ್ರವೇಶ ಆಗಲೇಬೇಕು. ಆ ಬಗ್ಗೆ ಪ್ರಶ್ನೆಯೇ ಇಲ್ಲ. ಆದರೆ ಅದಕ್ಕೂ ಮುನ್ನ ಮೂರೂ ರಾಜ್ಯದ ಮುಖ್ಯಮಂತ್ರಿಗಳು, ವಿರೋಧ ಪಕ್ಷಗಳು ಒಟ್ಟಿಗೆ ಕುಳಿತು ಚರ್ಚಿಸಬೇಕು’ ಎಂದರು.‘ರಾಜ್ಯ ಸರ್ಕಾರದ ಸಹಕಾರ ದೊರೆತರೆ ಭೇಟಿಯ ನೇತೃತ್ವ ವಹಿಸುವೆ. ಮೂರೂ ರಾಜ್ಯಗಳಲ್ಲಿ ಸೌಹಾರ್ದ ವಾತಾವರಣ ನಿರ್ಮಾಣವಾದರೆ ಮಾತ್ರ ನ್ಯಾಯಮಂಡಳಿ ಹೊರಗೆ ವಿವಾದ ಬಗೆಹರಿಸಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.ನವಲಗುಂದದಲ್ಲಿ ಬಂಧಿಸಲಾದ ಎಲ್ಲರನ್ನೂ ಎರಡು ದಿನದೊಳಗೆ ಬಿಡುಗಡೆ ಮಾಡಿ, ಅವರ ವಿರುದ್ಧದ ಎಲ್ಲ ಮೊಕದ್ದಮೆ ವಾಪಸ್‌ ಪಡೆಯಬೇಕು. ಇಲ್ಲದಿದ್ದರೆ ದೊಡ್ಡ ಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.‘ಎಂಟು ಕಾನ್‌ಸ್ಟೆಬಲ್‌ಗಳನ್ನು ಸೇವೆಯಿಂದ ಅಮಾನತು ಮಾಡಿರುವುದಷ್ಟೇ ಸಾಲದು. ಹಲ್ಲೆ ನಡೆಸಲು ಸೂಚಿಸಿದ ಅಧಿಕಾರಿಯ ವಿರುದ್ಧವೂ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ ಅವರು, ‘ಹೋರಾಟಗಾರರ ವಿರುದ್ಧ ಕೊಲೆಗೆ ಯತ್ನ ಮೊಕದ್ದಮೆ ದಾಖಲಿಸುವ ಮೂಲಕ ಸರ್ಕಾರ ತಪ್ಪು ಹೆಜ್ಜೆ ಇಟ್ಟಿದೆ. ಗೃಹಸಚಿವರು ಕ್ಷಮೆಯಾಚಿಸಿದ್ದಾರೆ. ಆದರೆ ಅಮಾಯಕರು ಜೈಲಿನಲ್ಲಿ ಕೊಳೆಯಬೇಕೇ ಎಂಬ ಪ್ರಶ್ನೆಗೆ ಅವರು ಉತ್ತರಿಸಬೇಕು’ ಎಂದರು.ಘೇರಾವ್‌: ಬಳ್ಳಾರಿ ಕಾರಾಗೃಹದಿಂದ ಶೆಟ್ಟರ್‌ ಹೊರಗೆ ಬರುತ್ತಿದ್ದಂತೆಯೇ ಕಳಸಾ ಬಂಡೂರಿ ಹೋರಾಟ ಸಮನ್ವಯ ಸಮಿತಿ, ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಹಾಗೂ ಹಲವು ರೈತರು ಘೇರಾವ್‌ ಮಾಡಲು ಯತ್ನಿಸಿದ ಘಟನೆಯೂ ನಡೆಯಿತು. ಪೊಲೀಸರು ಅವರನ್ನು ಚದುರಿಸಿದರು.ಮಟ್ಟೆಣ್ಣವರ ಭೇಟಿ: ಇದಕ್ಕೂ ಮುನ್ನ ಕಾರಾಗೃಹಕ್ಕೆ ಭೇಟಿ ನೀಡಿದ್ದ ಕಳಸಾ ಹೋರಾಟಗಾರ ಗಿರೀಶ್‌ ಮಟ್ಟೆಣ್ಣವರ, ಶೆಟ್ಟರ್‌ ಅವರನ್ನು ಭೇಟಿ ಮಾಡುವ ಮನಸ್ಥಿತಿಯಲ್ಲಿ ರೈತರು ಇಲ್ಲ ಎಂದು ತಿಳಿಸಿದ್ದರು.ನ್ಯಾಯಾಂಗ ತನಿಖೆಗೆ ಒತ್ತಾಯ

ಚಿತ್ರದುರ್ಗ: ‘
ಮಹಾದಾಯಿ ಹೋರಾಟದ ವೇಳೆ ನವಲಗುಂದ ತಾಲ್ಲೂಕಿನ ಯಮನೂರಿನಲ್ಲಿ ರೈತರ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು’ ಎಂದು ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಸರ್ಕಾರವನ್ನು ಒತ್ತಾಯಿಸಿದರು.

ನಗರದ ಕಾರಾಗೃಹದಲ್ಲಿರುವ 57 ಮಂದಿ ಮಹಾದಾಯಿ ಹೋರಾಟಗಾರರನ್ನು ಬುಧವಾರ ಭೇಟಿಯಾದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ದೌರ್ಜನ್ಯ ಪ್ರಕರಣವನ್ನು ಎಡಿಜಿಪಿ ನೇತೃತ್ವದ ಸಮಿತಿಯೊಂದು ತನಿಖೆ ನಡೆಸುತ್ತಿದೆ. ಆದರೆ, ಈ ಪ್ರಕರಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಕೈವಾಡವಿರುವ ಸಾಧ್ಯತೆಯಿದೆ.ಆದ್ದರಿಂದ ಈ ಸಮಿತಿ ನ್ಯಾಯಸಮ್ಮತವಾಗಿ ತನಿಖೆ ನಡೆಸುವ ವಿಶ್ವಾಸವಿಲ್ಲ. ಹಾಗಾಗಿ ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದ ತನಿಖಾ ಸಮಿತಿಯೇ ಪ್ರಕರಣದ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿರು.‘ಸರ್ಕಾರ 4–5 ಮಂದಿ ಕಾನ್‌ಸ್ಟೆಬಲ್‌ಗಳನ್ನು ಅಮಾನತು ಮಾಡಿದರೆ ಸಾಲದು. ಅವರಿಗೆ ರೈತರ ಮೇಲೆ ಲಾಠಿ ಬೀಸಲು ನಿರ್ದೇಶನ ಕೊಟ್ಟವರು ಯಾರು ಎಂಬುದು ಗೊತ್ತಾಗಬೇಕು ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.