ಪ್ರಧಾನಿ ಮನಮೋಹನ್ ಸಿಂಗ್ ಘೋಷಣೆ: ಪಿಎಸಿ ಮುಂದೆ ಹಾಜರಿಗೆ ಸಿದ್ಧ

7

ಪ್ರಧಾನಿ ಮನಮೋಹನ್ ಸಿಂಗ್ ಘೋಷಣೆ: ಪಿಎಸಿ ಮುಂದೆ ಹಾಜರಿಗೆ ಸಿದ್ಧ

Published:
Updated:

ನವದೆಹಲಿ: ‘2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಮುಚ್ಚಿಡುವಂತಹುದೇನೂ ಇಲ್ಲ’ ಎಂದು ಖಡಾಖಂಡಿತ ದನಿಯಲ್ಲಿ ಸೋಮವಾರ ಇಲ್ಲಿ ಸ್ಪಷ್ಟಪಡಿಸಿದ ಪ್ರಧಾನಿ ಡಾ.ಮನಮೋಹನ ಸಿಂಗ್, ‘ಅಗತ್ಯಬಿದ್ದರೆ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಎದುರು ಹಾಜರಾಗಲು ನಾನು ಸಿದ್ಧ’ ಎಂದು ಘೋಷಿಸಿದರು.ಕಾಂಗ್ರೆಸ್ ಪಕ್ಷದ 83ನೇ ಮಹಾಧಿವೇಶನದ ಎರಡನೇ ದಿನ ಎಐಸಿಸಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ 2ಜಿ ಸ್ಪೆಕ್ಟ್ರಂ ಹಗರಣದ ವಿಷಯದಲ್ಲಿ ಬಿಜೆಪಿ ವಿರುದ್ಧ ತೀವ್ರ ಹರಿಹಾಯ್ದರು.‘2ಜಿ ಸ್ಪೆಕ್ಟ್ರಂ ಪರವಾನಗಿ ವಿಷಯಕ್ಕೆ ಸಂಬಂಧಿಸಿದಂತೆ ಪ್ರಮುಖ ವಿರೋಧ ಪಕ್ಷಗಳು ಯುಪಿಎ ಸರ್ಕಾರದ ವಿರುದ್ಧ ಅಪಪ್ರಚಾರ ನಡೆಸಿವೆ. ಈ ವಿಷಯವನ್ನು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಒಪ್ಪಿಸಲು ಸರ್ಕಾರ ಸಿದ್ಧವಿರಲಿಲ್ಲ ಎಂದು ಸಾರ್ವಜನಿಕರೆದುರು ಸುಖಾಸುಮ್ಮನೇ ಸುಳ್ಳನ್ನು ಬಿಂಬಿಸಲು ಯತ್ನಿಸಲಾಗುತ್ತಿದೆ’ ಎಂದು ದೂರಿದರು.‘ಒಂದು ವೇಳೆ ಜೆಪಿಸಿ ತನಿಖೆಗೆ ಒಪ್ಪಿಕೊಂಡುಬಿಟ್ಟರೆ ಎಲ್ಲಿ ಪ್ರಧಾನಿಯವರೂ ಸಮಿತಿಯ ಎದುರು ವಿಚಾರಣೆಗೆ ಹಾಜರಾಗಬೇಕಾಗುತ್ತದೆಯೋ ಎಂದು ಕಾಂಗ್ರೆಸ್ ಆತಂಕಗೊಂಡಿದೆ. ಅದಕ್ಕಾಗಿಯೇ ಕಾಂಗ್ರೆಸ್ ಜೆಪಿಸಿ ತನಿಖೆಗೆ ಒಪ್ಪಲಿಲ್ಲ’ ಎಂಬರ್ಥ ಬರುವಂತೆ ಬಿಜೆಪಿ ಎಲ್ಲರೆದರು ಸಾರಿಕೊಂಡು ಹೊರಟಿದೆ. ನಿಜ ಹೇಳುತ್ತೇನೆ, ಈ ವಿಷಯದಲ್ಲಿ ಮುಚ್ಚಿಡುವಂತಹುದೇನೂ ಇಲ್ಲ. ಸಾರ್ವಜನಿಕರ ಮುಂದೆ ಈ ಬಗೆಗಿನ ಎಲ್ಲ ಸಂಗತಿಗಳನ್ನೂ ಪ್ರಾಮಾಣಿಕವಾಗಿ ತೆರೆದಿಡಲು ನಾನು ಸಿದ್ಧ’ ಎಂದು ಸಿಂಗ್ ತಿಳಿಸಿದರು.‘ಪಿಎಸಿಯ ಅಧ್ಯಕ್ಷರಿಗೆ ಪತ್ರ ಬರೆದು, ಸಮಿತಿಯ ಮುಂದೆ ಹಾಜರಾಗಲು ನಾನು ಸಿದ್ಧನಿದ್ದೇನೆ’ ಎಂದು ತಿಳಿಸುವುದಾಗಿ ಹೇಳಿದ ಪ್ರಧಾನಿಯವರು, ‘ಒಂದು ವೇಳೆ ಸಮಿತಿ ಮುಂದೆ ನನ್ನ ಹಾಜರಾತಿ ಅನಿವಾರ್ಯವಾದರೆ ಅದಕ್ಕಾಗಿ ಅತ್ಯಂತ ಸಂತೋಷಪಡುತ್ತೇನೆ’ ಎಂದರು.‘ಆರೂವರೆ ವರ್ಷಗಳಿಂದ ಈ ಮಹಾನ್ ದೇಶದ ಪ್ರಧಾನಿಯಾಗಿರುವ ನಾನು ಸಾರ್ವಜನಿಕರ ಕಲ್ಯಾಣಕ್ಕಾಗಿ ಸಾಮರ್ಥ್ಯ ಮೀರಿ ಶ್ರಮಿಸಿದ್ದೇನೆ. ಪ್ರಧಾನಿಯಾದವರು ಸಾರ್ವಜನಿಕರ ಸಂಶಯಗಳಿಗೆ ಸಿಲುಕಿರಬಾರದು. ಹಾಗಾಗಿಯೇ ನಾನು ಪಿಎಸಿ ಎದುರು ಹಾಜರಾಗಲು ಸಿದ್ಧ’ ಎಂದು ಘೋಷಿಸಿದರು.‘ಈ ವಿಷಯವನ್ನು ರಾಜಕೀಯಗೊಳಿಸಲಾಗುತ್ತಿದೆ’ ಎಂದ ಅವರು, ‘ಜೆಪಿಸಿಗೆ ಇರುವಂತಹ ಎಲ್ಲ ಅಧಿಕಾರಗಳೂ ಪಿಎಸಿಗೆ ಇರುತ್ತವೆ. ಪಿಎಸಿ ಶಿಫಾರಸು ಮಾಡುವ ತೀರ್ಮಾನವನ್ನು ಜಾರಿಗೊಳಿಸಲು ಸರ್ಕಾರ ಸಿದ್ಧವಿದೆ. ಜೆಪಿಸಿ ತನಿಖೆಯಿಂದ ಮುಖ್ಯ ಉದ್ದೇಶ ಈಡೇರುವುದಿಲ್ಲ. ಇದರಿಂದ ವಿಚಾರಣೆ ಇನ್ನಷ್ಟು ವಿಳಂಬವಾಗುತ್ತದಷ್ಟೇ’ ಎಂದರು.

‘ಹಗರಣಗಳ ಮುಖ್ಯಮಂತ್ರಿ ನಮ್ಮಲಿಲ್ಲ’

ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ಸರ್ಕಾರ ಗಂಭೀರವಾಗಿ ಗಮನಹರಿಸುತ್ತಿಲ್ಲ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ ಎಂಬ ಆರೋಪಗಳನ್ನು ಪ್ರಧಾನಿ ತಳ್ಳಿ ಹಾಕಿದರು.‘ಈಗಾಗಲೇ ಈ ದಿಸೆಯಲ್ಲಿ ಪಕ್ಷವು ಕೈಗೊಂಡಿರುವ ಕ್ರಮಗಳು ಎಲ್ಲರಿಗೂ ವೇದ್ಯವಾಗಿವೆ. ರಾಜ್ಯದಲ್ಲೇ ಆಗಲಿ ಅಥವಾ ಕೇಂದ್ರದಲ್ಲೇ ಆಗಲಿ ಯಾವುದೇ ಕಳಂಕಿತ ನಾಯಕರು ಹುದ್ದೆಗಳಲ್ಲಿ ಇಲ್ಲ. ಇಂತಹ ಆರೋಪಗಳು, ಅನುಮಾನಗಳ ಅಡಿ ಸಿಲುಕಿದವರನ್ನೆಲ್ಲಾ ಈಗಾಗಲೇ ಅಧಿಕಾರದಿಂದ ದೂರವಿರಿಸಲಾಗಿದೆ’ ಎಂದರು.ಇದೇ ವೇಳೆ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೆಸರನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಸಿಂಗ್, ‘ಭ್ರಷ್ಟಾಚಾರದ ಬಗ್ಗೆ ಭಾರಿ ದನಿಯಲ್ಲಿ ಪ್ರತಿಭಟಿಸುವ ವಿರೋಧ ಪಕ್ಷಗಳು ಎಂತಹ ಸ್ಥಿತಿಯಲ್ಲಿವೆ ಎಂಬುದು ನಮಗೆ ಗೊತ್ತು. ನಾವು ತತ್ವಬದ್ಧ ರಾಜಕಾರಣ ನಡೆಸುತ್ತಿದ್ದೇವೆ. ಹಗರಣಗಳ ಮೇಲೆ ಹಗರಣಗಳ ಆರೋಪ ಎದುರಿಸುತ್ತಿರುವ ಯಾವುದೇ ಮುಖ್ಯಮಂತ್ರಿ ನಮ್ಮ ಪಕ್ಷದಲ್ಲಿಲ್ಲ’ ಎಂದು ವ್ಯಂಗ್ಯವಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry