ಬುಧವಾರ, ಏಪ್ರಿಲ್ 14, 2021
24 °C

ಪ್ರಧಾನಿ ರಾಜೀನಾಮೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ‘ದೇಶದಲ್ಲಿ ಒಂದರ ನಂತರ ಒಂದರಂತೆ ಲಕ್ಷಾಂತರ ಕೋಟಿ ರೂಪಾಯಿಯ ಹಗರಣಗಳು ಬಯಲಾಗುತ್ತಿದ್ದು, ಇದಕ್ಕೆಲ್ಲ ಅವಕಾಶ ಕಲ್ಪಿಸುತ್ತಿರುವ ಪ್ರಧಾನಿ ಮನಮೋಹನ ಸಿಂಗ್ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿ ಅಖಿಲಭಾರತೀಯ ವಿದ್ಯಾರ್ಥಿ ಪರಿಷತ್ತಿನ ನೇತೃತ್ವದಲ್ಲಿ ಶುಕ್ರವಾರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.ಪರಿಷತ್ತು ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಹಾಸನದಲ್ಲಿ ಮೆರವಣಿಗೆ, ಪ್ರತಿಭಟನೆ ನಡೆಸಲಾಯಿತು.‘ಕೇಂದ್ರ ಸರ್ಕಾರ ಇತಿಹಾಸದಲ್ಲೇ ಕಂಡು-ಕೇಳರಿಯದ ಭ್ರಷ್ಟಾಚಾರದಲ್ಲಿ ತೊಡಗಿದೆ. 2ಜಿ ಸ್ಪೆಕ್ಟ್ರಂ ಹಂಚಿಕೆ, ಕಾಮನ್‌ವೆಲ್ತ್  ಕ್ರೀಡಾಕೂಟ, ಕಳಂಕಿತ ವ್ಯಕ್ತಿಗೆ ಜಾಗೃತ ದಳದ ಆಯುಕ್ತ ಹುದ್ದೆ ನೀಡಿದ್ದು... ಹೀಗೆ ಹಲವು ಪ್ರಕರಣಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಗೌರವ ಕುಂದುವಂತೆ ಮಾಡಿವೆ. ಸ್ವಿಸ್  ಬ್ಯಾಂಕ್‌ನಲ್ಲಿರುವ ಲಕ್ಷಾಂತರ ಕೋಟಿ ರೂಪಾಯಿ ಕಪ್ಪುಹಣದ ಬಗ್ಗೆ ಸರ್ಕಾರ ಮೌನವಾಗಿದೆ. ಇಷ್ಟೇ ಅಲ್ಲ ಬೆಳಕಿಗೆ ಬಂದ ಹಗರಣಗಳ ಬಗ್ಗೆ ಸರ್ಕಾರ ತನಿಖೆ ನಡೆಸಲು ಸಹ ಹಿಂಜರಿಯುತ್ತಿರುವುದು ನಾಚಿಕೆಗೇಡಿನ ವಿಚಾರ. ಇದೆಲ್ಲವನ್ನು ಸಹಿಸಿಕೊಂಡು ಕುಳಿತಿರುವ ಪ್ರಧಾನಿ ಮನಮೋಹನ ಸಿಂಗ್ ರಾಜೀನಾಮೆ ನೀಡಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಭ್ರಷ್ಟಾಚಾರ ನಿಯಂತ್ರಣಕ್ಕೆ ಸೂಕ್ತ ಕಾನೂನು ರೂಪಿಸಬೇಕು, ಹಗರಣಗಳಲ್ಲಿ ಭಾಗಿಯಾಗಿರುವ ಸಚಿವರು, ಸಂಸದರನ್ನು ಬಂಧಿಸಬೇಕು, ಸ್ವಿಸ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವವರ ಪಟ್ಟಿಯನ್ನು ಬಿಡುಗಡೆ ಮಾಡಬೇಕು, ಆ ಹಣವನ್ನು ತಂದು ದೇಶದ ಅಭಿವೃದ್ಧಿಗೆ ಬಳಸಬೇಕು, 500 ಹಾಗೂ ಸಾವಿರ ರೂಪಾಯಿಯ ನೋಟುಗಳನ್ನು ರದ್ದುಮಾಡಬೇಕು, ಚುನಾವಣಾ ವ್ಯವಸ್ಥೆಯನ್ನು ಸುಧಾರಿಸಲು ಕ್ರಮ ಕೈಗೊಳ್ಳಬೇಕು. ಈ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು’ ಎಂದರು.ವಿದ್ಯಾರ್ಥಿಗಳು ನಗರದ ಹೇಮಾವತಿ ಸರ್ಕಲ್‌ನಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಬಂದರು. ರಶ್ಮಿ, ನರೇಶ್, ಪುನೀತ್, ಮನು, ಚೇತನ್ ಮುಂತಾದವರು ನೇತೃತ್ವ ವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.