ಮಂಗಳವಾರ, ಮೇ 18, 2021
22 °C

ಪ್ರಧಾನಿ ವಿದೇಶ ಪ್ರವಾಸ ವೆಚ್ಚ ರೂ. 642 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಧಾನಿ ವಿದೇಶ ಪ್ರವಾಸ ವೆಚ್ಚ ರೂ. 642 ಕೋಟಿ

ನವದೆಹಲಿ: ಆಡಳಿತದಲ್ಲಿ ಪಾರದರ್ಶಕತೆ ತರುವ ಪ್ರಯತ್ನದ ಅಂಗವಾಗಿ ಪ್ರಧಾನಿ ಕಚೇರಿಯು, ಮನಮೋಹನ್ ಸಿಂಗ್ ಅವರ ವಿದೇಶ ಪ್ರವಾಸಕ್ಕೆ ಆಗಿರುವ ವೆಚ್ಚದ ಬಗ್ಗೆ ಇದೆ ಮೊದಲ ಬಾರಿಗೆ ಮಾಹಿತಿ ಪ್ರಕಟಿಸಿದೆ.2004ರಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಈವರೆಗೆ ಅವರು ಭಾರತೀಯ ವಾಯುಪಡೆಯ ಬೋಯಿಂಗ್ ವಿಮಾನದಲ್ಲಿ ಕೈಗೊಂಡ ಪ್ರವಾಸಕ್ಕೆ ಒಟ್ಟು  ರೂ. 642 ಕೋಟಿ ವೆಚ್ಚವಾಗಿದೆ ಎಂದು ತಿಳಿಸಿದೆ. ಸಿಂಗ್ ಅವರು ಈವರೆಗೆ 62 ರಾಷ್ಟ್ರಗಳಿಗೆ ಪ್ರವಾಸ ಕೈಗೊಂಡಿದ್ದು, ಪ್ರತಿ ಪ್ರಯಾಣಕ್ಕೂ ಆಗಿರುವ ಖರ್ಚಿನ ವಿವರಗಳನ್ನು ಪ್ರಧಾನಿ ಕಾರ್ಯಾಲಯದ ಅಂತರಜಾಲ ತಾಣದಲ್ಲಿ ನಮೂದಿಸಲಾಗಿದೆ. ಇನ್ನೂ ಐದು ಪ್ರವಾಸದ ವಿವರಗಳನ್ನು ಶೀಘ್ರದಲ್ಲಿಯೇ ಪ್ರಕಟಿಸಲಿದೆ.ಮೇ ತಿಂಗಳಲ್ಲಿ ಅವರು ಕೈಗೊಂಡ ಜಪಾನ್ ಹಾಗೂ ಥಾಯ್ಲೆಂಡ್ ಪ್ರವಾಸದ ವಿವರಗಳನ್ನು  ಇನ್ನೂ ಒದಗಿಸಿಲ್ಲ. ಸರ್ಕಾರದ ಎಲ್ಲ ಇಲಾಖೆಗಳ ವಿವರಗಳನ್ನೂ ಸಾರ್ವಜನಿಕ ಹಿತಾಸಕ್ತಿ ಮೇರೆಗೆ ಪ್ರಕಟಿಸುವಂತೆ ಸೂಚಿಸುವ ಮಾಹಿತಿ ಹಕ್ಕು ಕಾಯ್ದೆಯ 4ನೇ ವಿಭಾಗದ ಅಡಿ ಈ ಕ್ರಮ ಕೈಗೊಳ್ಳಲಾಗಿದೆ.`ಜನತೆಗೆ ಮಾಹಿತಿ ಕೊಡಲು ಬದ್ಧರಾಗಿದ್ದೇವೆ. ನಮ್ಮ ಭರವಸೆಯನ್ನು ಈಡೇರಿಸಿದ್ದೇವೆ' ಎಂದು ಪ್ರಧಾನಿ ಮಾಧ್ಯಮ ಸಲಹೆಗಾರ ಪಂಕಜ್ ಪಚೌರಿ ತಿಳಿಸಿದ್ದಾರೆ.ಇದೇ ಮೊದಲು: ಪ್ರಧಾನಿ ಕಾರ್ಯಾಲಯದಲ್ಲಿ ಕೆಲಸ ಮಾಡುವ ಹಿರಿಯ ಅಧಿಕಾರಿಗಳೂ ಸೇರಿದಂತೆ ಎಲ್ಲ ಸಿಬ್ಬಂದಿ ಪಡೆಯುವ ವೇತನದ ವಿವರಗಳನ್ನು ಈಗಾಗಲೇ ಪ್ರಕಟಿಸಲಾಗಿದೆ. ಪ್ರಧಾನಿಯ ವಿದೇಶ ಪ್ರಯಾಣ ವೆಚ್ಚದ ವಿವರಗಳನ್ನು ಇದೇ ಮೊದಲ ಬಾರಿಗೆ ಸರ್ಕಾರ ಪ್ರಕಟಿಸಿದೆ.ಕಳೆದ ಜೂನ್‌ನಲ್ಲಿ ಮೆಕ್ಸಿಕೊದಲ್ಲಿ ನಡೆದ ಜಿ-20 ಶೃಂಗಸಭೆ ಹಾಗೂ ವಿಶ್ವಸಂಸ್ಥೆಯು ಬ್ರೆಜಿಲ್‌ನಲ್ಲಿ ಏರ್ಪಡಿಸಿದ್ದ `ಸುಸ್ಥಿರ ಅಭಿವೃದ್ಧಿ ಸಮಾವೇಶ'ದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಸಿಂಗ್ ಕೈಗೊಂಡ ಪ್ರವಾಸಕ್ಕೆ ಅತ್ಯಧಿಕ , ಅಂದರೆ ರೂ. 27 ಕೋಟಿ ವೆಚ್ಚವಾಗಿದೆ. 2008ರಲ್ಲಿ ರೂ. 24 ಕೋಟಿ ವೆಚ್ಚದಲ್ಲಿ ಅಮೆರಿಕ ಹಾಗೂ ಫ್ರಾನ್ಸ್‌ಗೆ ಕೈಗೊಂಡ 9 ದಿನಗಳ ಪ್ರವಾಸ ಎರಡನೇ ಅಧಿಕ ವೆಚ್ಚದ ಪ್ರಯಾಣ. ರೂ. 3.07 ಕೋಟಿ ವೆಚ್ಚದಲ್ಲಿ ಢಾಕಾಕ್ಕೆ ತೆರಳಿದ್ದು ಕಡಿಮೆ ವೆಚ್ಚದ ಪ್ರವಾಸವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.