ಮಂಗಳವಾರ, ಮೇ 17, 2022
27 °C

ಪ್ರಧಾನಿ ವಿರುದ್ಧ ಹಕ್ಕುಚ್ಯುತಿ ಮಂಡನೆ: ಸದನ ದಿಕ್ಕು ತಪ್ಪಿಸಿದ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): 2008ರ ವಿಶ್ವಾಸಮತ ಯಾಚನೆ ವೇಳೆ ಸಂಸದರಿಗೆ ಲಂಚ ನೀಡಿಲ್ಲ ಎಂದು ಕಳೆದ ವಾರ ಸದನದಲ್ಲಿ ಹೇಳಿಕೆ ನೀಡಿದ ಪ್ರಧಾನಿ ಮನಮೋಹನ್ ಸಿಂಗ್ ಅವರ ವಿರುದ್ಧ ಬಿಜೆಪಿ ಮಂಗಳವಾರ ಲೋಕಸಭೆಯಲ್ಲಿ ಹಕ್ಕುಚ್ಯುತಿ ನಿರ್ಣಯ ಮಂಡಿಸಲಿದೆ.

ವಿಶ್ವಾಸಮತ ಯಾಚನೆ ವೇಳೆ ಸಂಸದರಿಗೆ ಲಂಚ ನೀಡಿತ್ತು ಎಂದು ಕಿಶೋರ್ ಚಂದ್ರ ದೇವ್ ಅವರ ಸಂಸದೀಯ ತನಿಖಾ ಸ್ಪಷ್ಟವಾಗಿ ಅಭಿಪ್ರಾಯಪಟ್ಟಿದೆ. ಆದರೆ ಪ್ರಧಾನಿಯವರು ಇದಕ್ಕೆ ವ್ಯತಿರಿಕ್ತವಾಗಿ ಹೇಳಿಕೆ ನೀಡುವ ಮೂಲಕ ಸದನವನ್ನು ದಾರಿ ತಪ್ಪಿಸಿದ್ದು, ಇದರ ವಿರುದ್ಧ ಬಿಜೆಪಿ ಹಕ್ಕುಚ್ಯುತಿ ನಿರ್ಣಯ ಮಂಡಿಸಲಿದೆ ಎಂದು ಪಕ್ಷದ ವಕ್ತಾರ ಷಾನವಾಜ್ ಹುಸೇನ್ ಹೇಳಿದ್ದಾರೆ.

ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕಿಯಾದ ಸುಷ್ಮಾ ಸ್ವರಾಜ್ ಹಕ್ಕುಚ್ಯುತಿ ನಿರ್ಣಯ ಮಂಡಿಸುವ ನಿರೀಕ್ಷೆ ಇದೆ.

ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕೂಡ ಸುಷ್ಮಾ ಸ್ವರಾಜ್ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸುವುದಾಗಿ ಪ್ರಕಟಿಸಿದೆ.

‘ಓಟಿಗಾಗಿ ನೋಟು’ ಪ್ರಕರಣ ಕುರಿತು ಕಳೆದ ವಾರ ಪ್ರಧಾನಿಯವರು ಸದನದಲ್ಲಿ ಹೇಳಿಕೆ ನೀಡಿದ ನಂತರವೂ ಸುಷ್ಮಾ ಸ್ವರಾಜ್ ಸುಮ್ಮನಾಗದೆ ಸ್ಪೀಕರ್ ಮೀರಾ ಕುಮಾರ್ ಅವರ ಸೂಚನೆಯನ್ನು ಪದೇಪದೇ ಧಿಕ್ಕರಿಸಿ ಸ್ಪಷ್ಟನೆ ನೀಡಲು ಒತ್ತಾಯಿಸಿದರು. ಆದರೆ ನಿಯಮಾವಳಿ ಪ್ರಕಾರ, ಸಚಿವರು ಹಾಗೂ ಪ್ರಧಾನಿಯವರು ಹೇಳಿಕೆ ನೀಡಿದ ನಂತರ ಲೋಕಸಭೆಯಲ್ಲಿ ಆ ಕುರಿತು ಸ್ಪಷ್ಟನೆ ಕೇಳಬಾರದು. ರಾಜ್ಯಸಭೆಯಲ್ಲಿ ಮಾತ್ರ ಇದಕ್ಕೆ ಅವಕಾಶವಿದೆ ಎಂದು ಕಾಂಗ್ರೆಸ್ ಆಪಾದಿಸಿದೆ.

ಇದೇ ವೇಳೆ ಈ ಕುರಿತು ಬಿಜೆಪಿ ನೇತೃತ್ವದ ಎನ್‌ಡಿಎ, ಲೋಕಸಭೆಯ 193ನೇ ನಿಯಮಾವಳಿಯಡಿ (ಮತದಾನಕ್ಕೆ ಅವಕಾಶ ಇರದ) ಚರ್ಚೆಗೆ ಒತ್ತಾಯಿಸುವ ಸಾಧ್ಯತೆ ಇದೆ.

ಸರ್ಕಾರಕ್ಕೆ ಕಲಾಪ ನಡೆಯಬೇಕೆಂಬ ಮನಸ್ಸಿದ್ದರೆ ಅದು ಈ ಬೇಡಿಕೆಗೆ ತಕ್ಷಣ ಸ್ಪಂದಿಸಲಿದೆ ಎಂದೂ ಹುಸೇನ್ ಹೇಳಿದ್ದಾರೆ.

‘ಪ್ರಧಾನಿಯವರು ಹೇಳಿಕೆ ನೀಡಿದ ನಂತರ ಲೋಕಸಭೆ ಮತ್ತು ರಾಜ್ಯಸಭೆಯ ಪ್ರತಿಪಕ್ಷ ನಾಯಕರಿಗೆ ಮಾತನಾಡಲು ಅವಕಾಶ ನೀಡುವುದಿಲ್ಲ. ಹೀಗಾಗಿ ನಾವು ಚರ್ಚೆಗೆ ಆಗ್ರಹಿಸುತ್ತೇವೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.