ಶುಕ್ರವಾರ, ನವೆಂಬರ್ 22, 2019
22 °C
2ಜಿ ತರಂಗಾಂತರ ಹಂಚಿಕೆ ಹಗರಣ

ಪ್ರಧಾನಿ ಹಾಜರಿಗೆ ಪತ್ರ

Published:
Updated:

ನವದೆಹಲಿ (ಪಿಟಿಐ): 2ಜಿ ಹಗರಣಕ್ಕೆ ಸಂಬಂಧಪಟ್ಟ ಸತ್ಯ ಹೊರಬರಲು ಈ ಸಂಬಂಧ ರಚಿಸಲಾಗಿರುವ ಜಂಟಿ ಸಂಸದೀಯ ಸಮಿತಿಯ ಮುಂದೆ ಪ್ರಧಾನಿ ಡಾ. ಮನಮೋಹನ ಸಿಂಗ್ ಹಾಗೂ ಹಣಕಾಸು ಸಚಿವ ಪಿ.ಚಿದಂಬರಂ ಅವರು ಹಾಜರಾಗಬೇಕು ಎಂದು ಜೆಪಿಸಿ ಸದಸ್ಯರ್ಲ್ಲಲಿ ಒಬ್ಬರಾದ ಯಶವಂತ ಸಿನ್ಹಾ ಒತ್ತಾಯಿಸಿದ್ದಾರೆ.`ಮಾಜಿ ದೂರಸಂಪರ್ಕ ಸಚಿವ ಎ. ರಾಜಾ ಅವರು ಮಾಡಿದ ಆರೋಪದ ಹಿನ್ನೆಲೆಯಲ್ಲಿ ನೀವು ಸಮಿತಿಯ ಮುಂದೆ ಹಾಜರಾಗಿ, ನಿಮ್ಮ ಮೇಲಿರುವ ಆರೋಪಗಳಿಗೆ ಉತ್ತರ ನೀಡಿ ಕಳಂಕರಹಿತರಾಗಿ' ಎಂದು ಯಶವಂತ ಸಿನ್ಹಾ ಅವರು ಸೋಮವಾರ  ಪ್ರಧಾನಿಗೆ ಪತ್ರ ಬರೆದಿದ್ದರು.`ಸಮಿತಿಯ ಮುಂದೆ ಹಾಜರಾಗಲು ನೀವು ಹಿಂದೇಟು ಹಾಕಿದರೆ ಇದರಿಂದ ನಿಮ್ಮ ಮೇಲೆ ಅನುಮಾನ ಮೂಡಲು ಕಾರಣವಾಗುತ್ತದೆ. ನೀವು ಏನನ್ನೊ ಬಚ್ಚಿಡಲು ಯತ್ನಿಸುತ್ತಿದ್ದೀರಿ ಎಂಬ ಗುಮಾನಿಯನ್ನು ಸಮರ್ಥಿಸಿದಂತೆ ಆಗುತ್ತದೆ' ಎಂದು ಪತ್ರದಲ್ಲಿ ಸಿನ್ಹಾ ಉಲ್ಲೇಖಿಸಿದ್ದರು.ಜೆಪಿಸಿ ನಡೆಸುತ್ತಿರುವ ಸಭೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಯಶವಂತ ಸಿನ್ಹಾ, `ಅಧ್ಯಕ್ಷರು ನಡೆಸುತ್ತಿರುವ ಜೆಪಿಸಿ ಸಭೆಗಳೇ ಒಂದು ರೀತಿಯ ಹಗರಣದಂತಾಗಿವೆ. ಎರಡು ತಿಂಗಳಿನಿಂದ ಸಭೆಗಳು ನಡೆದೇ ಇಲ್ಲ. ನನ್ನನ್ನೂ ಒಳಗೊಂಡಂತೆ ಸಮಿತಿಯ ಎಲ್ಲ ಸದಸ್ಯರೂ  ಸಭೆ ನಡೆಸುವಂತೆ ಅಧ್ಯಕ್ಷರಿಗೆ ಮನವಿ ಮಾಡುತ್ತಲೇ ಇದ್ದೇವೆ' ಎಂದು ಆರೋಪಿಸಿದ್ದಾರೆ.`ಮಾಜಿ ಸಚಿವ ಎ. ರಾಜಾ ಅವರು ಜೆಪಿಸಿ ಎದುರು ಹಣಕಾಸು ಸಚಿವರು ಮತ್ತು ಪ್ರಧಾನ ಮಂತ್ರಿಯವರ  ವಿರುದ್ಧವೇ ಆರೋಪ ಮಾಡಿದ್ದರು' ಎಂದಿದ್ದಾರೆ.

`ಒಂದು ಪಕ್ಷ ರಾಜಾ ಅವರು ಹಾಜರಾಗಿ ತಮ್ಮ  ಹೇಳಿಕೆ ನೀಡಿದರೆ, ಪ್ರಧಾನಿ ಮತ್ತು ಹಣಕಾಸು ಸಚಿವರು ಇಕ್ಕಟ್ಟಿಗೆ ಸಿಲುಕುತ್ತಾರೆ. ಈ ಕಾರಣದಿಂದಾಗಿ ಅವರಿಬ್ಬರನ್ನು ರಕ್ಷಿಸಲು ಜೆಪಿಸಿ ಅಧ್ಯಕ್ಷರು ರಾಜಾ ಅವರನ್ನು ಸಾಕ್ಷ್ಯ ಹೇಳಲು ಕರೆಯುತ್ತಿಲ್ಲ. ಅದಕ್ಕಾಗಿಯೇ ಹಗರಣದ ಸತ್ಯ ಹೊರಬರಬೇಕೆಂಬ ಉದ್ದೇಶದಿಂದ ನಾನು  ಜೆಪಿಸಿ ಎದುರು ಹಾಜರಾಗಬೇಕೆಂದು ಪ್ರಧಾನಿಯವರಿಗೆ ಪತ್ರ ಬರೆದಿದ್ದೇನೆ' ಎಂದು ಸಿನ್ಹಾ ತಮ್ಮ ಪತ್ರಕ್ಕೆ ಸ್ಪಷ್ಟನೆ ನೀಡಿದ್ದಾರೆ.ಮನೀಷ್ ತಿವಾರಿ ಪ್ರತಿಕ್ರಿಯೆ: ಯಶವಂತ ಸಿನ್ಹಾ ಅವರ  ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ವಾರ್ತಾ ಸಚಿವ ಮನೀಷ್ ತಿವಾರಿ, `ಸಿನ್ಹಾ ಅವರ ಈ ಬೇಡಿಕೆಯನ್ನು ಜೆಪಿಸಿ ತಿರಸ್ಕರಿಸಿದ್ದು, ಇದೊಂದು ವಿವೇಚನಾರಹಿತ ಬೇಡಿಕೆಯಾಗಿದೆ ಎಂದು ಸಮಿತಿ ಹೇಳಿತ್ತು' ಎಂದು ಹಿಂದಿನ ಘಟನೆಗಳನ್ನು ನೆನಪಿಸಿದ್ದಾರೆ.ಹಗರಣ ವಿಚಾರಣೆ ಹಂತದಲ್ಲಿರುವುದರಿಂದ ಜೆಪಿಸಿ ಸದಸ್ಯರಾಗಿರುವ ಯಶವಂತ ಸಿನ್ಹಾ, ಹಗರಣಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡುವಂತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.ಯಶವಂತ ಸಿನ್ಹಾ ಪತ್ರ: ಚಾಕೊ ಟೀಕೆ

ನವದೆಹಲಿ (ಪಿಟಿಐ):
2ಜಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಹಾಗೂ ಹಣಕಾಸು ಸಚಿವರು ಜಂಟಿ ಸದನ ಸಮಿತಿ (ಜೆಪಿಸಿ) ಎದುರು ಹಾಜರಾಗಿ ಹೇಳಿಕೆ ನೀಡಬೇಕೆಂಬ  ಮಾಜಿ ಸಚಿವ ಯಶವಂತ ಸಿನ್ಹಾ ಅವರು ಬರೆದಿರುವ ಪತ್ರದ ಸಂಬಂಧ ಜೆಪಿಸಿ ಅಧ್ಯಕ್ಷ ಪಿ.ಸಿ.ಚಾಕೊ ಅವರು ಸಮಿತಿಯ ಸದಸ್ಯರೂ ಆದ ಬಿಜೆಪಿ ನಾಯಕ ಯಶವಂತ ಸಿನ್ಹಾ ವಿರುದ್ಧ ಹರಿಹಾಯ್ದಿದ್ದಾರೆ.

ಪ್ರಧಾನಿಗೆ ಸಿನ್ಹಾ ಬರೆದಿರುವ ಪತ್ರದ ಕುರಿತು ಸುದ್ದಿ ಸಂಸ್ಥೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚಾಕೊ, `ಜೆಪಿಸಿಯ ಒಬ್ಬ ಸದಸ್ಯರಾಗಿ ಸಿನ್ಹಾ ಅವರು ಹೇಗೆ ಪ್ರಧಾನಿಯವರಿಗೆ ಪತ್ರ ಬರೆಯುತ್ತಾರೆ. ಇಂಥ ವಿಚಾರಗಳು ಸಮಿತಿಯಲ್ಲಿ ನಿರ್ಧಾರವಾಗಬೇಕು' ಎಂದು ಹೇಳಿದ್ದಾರೆ.

`ಇದು ಸಿನ್ಹಾ ಅವರ ಚುನಾವಣಾ ಸ್ಟಂಟ್, ಸಂಸದೀಯ  ನಡವಳಿಕೆಗಳ ಉಲ್ಲಂಘನೆ' ಎಂದು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)