ಬುಧವಾರ, ಮೇ 18, 2022
27 °C

ಪ್ರಧಾನಿ ಹುದ್ದೆಗೆ ಮೋದಿ ಅರ್ಹರಲ್ಲ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ/ಮುಂಬೈ/ಪಟ್ನಾ (ಪಿಟಿಐ, ಐಎಎನ್‌ಎಸ್): ಎನ್‌ಡಿಎ ಹೆಸರಿಸುವ ಪ್ರಧಾನಿ ಅಭ್ಯರ್ಥಿ ಜಾತ್ಯತೀತ ಮನೋಭಾವದ ವ್ಯಕ್ತಿ ಆಗಿರಬೇಕು ಎಂದು ಹೇಳುವ ಮೂಲಕ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೊಸ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದಾರೆ.ಪ್ರಧಾನಿ ಸ್ಥಾನಕ್ಕೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅರ್ಹರಲ್ಲ ಎನ್ನುವ ಅರ್ಥವನ್ನು ಧ್ವನಿಸುವ ಈ ಹೇಳಿಕೆಯಿಂದ ಬಿಜೆಪಿ-ಜೆಡಿಯು ಮೈತ್ರಿಯಲ್ಲಿ ಮತ್ತೆ ಬಿರುಕು ಮೂಡುವ ಸಾಧ್ಯತೆ ಇದೆ.ರಾಷ್ಟ್ರಪತಿ ಚುನಾವಣೆ ವಿಷಯದಲ್ಲಿ ಬಿಜೆಪಿ ಹಾಗೂ ಜೆಡಿಯು ಮಧ್ಯೆ ಭಿನ್ನಾಭಿಪ್ರಾಯ ಇರುವಾಗಲೇ ಇದೀಗ ನಿತೀಶ್ ಅವರು ಈ ಹೇಳಿಕೆ ನೀಡಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.ಲೋಕಸಭೆ ಚುನಾವಣೆ ಬಳಿಕ ಪ್ರಧಾನಿ ಆಯ್ಕೆ ಮಾಡಲಾಗುತ್ತದೆ ಎಂಬ ಬಿಜೆಪಿ ಹೇಳಿಕೆಗೆ ವ್ಯತಿರಿಕ್ತವಾಗಿ ಪ್ರತಿಕ್ರಿಯಿಸಿರುವ ನಿತೀಶ್, `ಎನ್‌ಡಿಎ ತನ್ನ ಪ್ರಧಾನಿ ಅಭ್ಯರ್ಥಿಯನ್ನು ಪ್ರಕಟಿಸಬೇಕು. ತಾವು ಮತ ಹಾಕುತ್ತಿರುವುದು ಯಾರಿಗೆ, ಈ ದೇಶವನ್ನು ಯಾರು ಮುನ್ನಡೆಸುತ್ತಾರೆ ಎನ್ನುವುದು ಜನರಿಗೆ ಗೊತ್ತಾಗಬೇಕು~ ಎಂದು ಹೇಳಿದ್ದಾರೆ.

`ವಾಜಪೇಯಿ ಅವರಂಥ ನಾಯಕ ಬೇಕು~
`ಎನ್‌ಡಿಎ ಹೆಸರಿಸುವ ಪ್ರಧಾನಿ ಅಭ್ಯರ್ಥಿ ಮಾಜಿ ಪ್ರಧಾನಿ ವಾಜಪೇಯಿ ಅವರಂಥ ಮುಕ್ತ ಮನೋಭಾವದ ವ್ಯಕ್ತಿ ಆಗಿರಬೇಕು~ ಎಂದು ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಮಂಗಳವಾರ ತಿಳಿಸಿದ್ದಾರೆ.`ಪ್ರಧಾನಿ ಅಭ್ಯರ್ಥಿಯನ್ನು ಎನ್‌ಡಿಎ ನಿರ್ಧರಿಸಬೇಕೇ ಹೊರತೂ ಬಿಜೆಪಿ ಅಲ್ಲ~ ಎಂದೂ ಅವರು ಹೇಳಿದ್ದಾರೆ.`ಅಭಿವೃದ್ಧಿ ಕಾಣದ ಬಿಹಾರದಂಥ ರಾಜ್ಯಗಳಿಗೆ ಮಿಡಿಯುವಂಥ ವ್ಯಕ್ತಿ ಎನ್‌ಡಿಎ ನಾಯಕನಾಗಬೇಕೇ ಹೊರತೂ ಅಭಿವೃದ್ಧಿ ಹೊಂದಿದ ರಾಜ್ಯಗಳಿಗೆ ಒತ್ತು ನೀಡುವ ವ್ಯಕ್ತಿ ಅಲ್ಲ~ ಎಂದು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಿತೀಶ್ ಹೇಳಿದ್ದಾರೆ.ನಿತೀಶ್ ಅವರು ನೇರವಾಗಿ ಯಾರ ಹೆಸರನ್ನೂ ಪ್ರಸ್ತಾಪಿಸದಿದ್ದರೂ, ಮೋದಿ ಅವರನ್ನು ಗುರಿಯಾಗಿಟ್ಟುಕೊಂಡೇ ಈ ಹೇಳಿಕೆ ನೀಡಿದಂತಿದೆ. ಬಿಹಾರವು ಜಾತಿ ರಾಜಕಾರಣದಿಂದಾಗಿ ಹಿಂದೆ ಬಿದ್ದಿದೆ ಎಂದು ಮೋದಿ ಟೀಕಿಸಿರುವುದು ಇವರಿಬ್ಬರ ಸಂಬಂಧ ಹಳಸಲು ಕಾರಣವಾಗಿದೆ.`ಮೋದಿ ಟೀಕೆಯು ಇದ್ದಿಲು ಮಸಿಯನ್ನು ಆಡಿಕೊಂಡಂತಿದೆ. ಕೋಮುವಾದ ತುಂಬಿಕೊಂಡ ವ್ಯಕ್ತಿಗೆ ಇತರರ ಮೇಲೆ ಜಾತಿ ರಾಜಕಾರಣದ ಗೂಬೆ ಕೂರಿಸುವ ನೈತಿಕ ಹಕ್ಕು ಇಲ್ಲ~ ಎಂದು ನಿತೀಶ್ ಖಾರವಾಗಿ ಪ್ರತಿಕ್ರಿಯಿಸಿದ್ದರು.ಪ್ರಧಾನಿ ಅಭ್ಯರ್ಥಿಯನ್ನು ಮುಂಚಿತವಾಗಿಯೇ ಪ್ರಕಟಿಸಲು ಒತ್ತಡ ಹೇರಿರುವ ನಿತೀಶ್, `ಮೈತ್ರಿಕೂಟದಲ್ಲಿ ಎಲ್ಲರೂ ಒಪ್ಪುವಂಥ ವ್ಯಕ್ತಿಯನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಬೇಕು. ಮೈತ್ರಿಕೂಟದ ನಾಯಕ ಜಾತ್ಯತೀತ ಮನೋಭಾವದವನಾಗಿರಬೇಕು~ ಎಂದು ಅಭಿಪ್ರಾಯಪಟ್ಟಿದ್ದಾರೆ.ಜೆಡಿಯು ಸಮ್ಮತಿ: ಎನ್‌ಡಿಎ ಪ್ರಧಾನಿ ಅಭ್ಯರ್ಥಿ ಕುರಿತಂತೆ ನಿತೀಶ್ ನಿಲುವನ್ನು ಎನ್‌ಡಿಎ ಮಿತ್ರ ಪಕ್ಷ ಜೆಡಿಯು ಅನುಮೋದಿಸಿದೆ. `ನಿತೀಶ್ ಹೇಳಿಕೆಯನ್ನು ಸರಿಯಾಗಿ ಅರ್ಥೈಸಬೇಕು~ ಎಂದು ಬಿಹಾರ ಜೆಡಿಯು ಅಧ್ಯಕ್ಷ ವಸಿಷ್ಠ ನಾರಾಯಣ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.`ನಿತೀಶ್ ಅವರದ್ದು ದೃಢ ನಿಲುವು. ಹಿಂದೆ ಕೂಡ ಅವರು ಇದೇ ನಿಲುವು ಹೊಂದಿದ್ದರು. ಮುಂದೆಯೂ ಅದಕ್ಕೆ ಬದ್ಧರಾಗಿರುತ್ತಾರೆ~ ಎಂದೂ ಅವರು ಹೇಳಿದರು.ಖುರ್ಷಿದ್ ಬೆಂಬಲ: ನಿತೀಶ್ ಕುಮಾರ್ ಹೇಳಿಕೆಯನ್ನು ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಬೆಂಬಲಿಸಿದ್ದಾರೆ. `ಜಾತ್ಯತೀತನಲ್ಲದ ವ್ಯಕ್ತಿ ಪ್ರಧಾನಿ ಪಟ್ಟ ಏರಬಹುದು ಎನ್ನುವ ಭಯವನ್ನು ನಿತೀಶ್ ಹುಟ್ಟುಹಾಕಿರುವುದು ಯಾಕೆ?~ ಎಂದು ಅವರು ಇದೇ ವೇಳೆ ಪ್ರಶ್ನಿಸಿದ್ದಾರೆ. `ಜಾತ್ಯತೀತನಲ್ಲದ ವ್ಯಕ್ತಿ ಪ್ರಧಾನಿ ಪಟ್ಟ ಏರಬಾರದು ಎನ್ನುವುದು ಸ್ವಾಗತಾರ್ಹ ವಿಷಯ. ನಮ್ಮದು ಜಾತ್ಯತೀತ ರಾಷ್ಟ್ರ. ಹಾಗಾಗಿ ನಮ್ಮ ಪ್ರಧಾನಿ ಕೂಡ ಇದಕ್ಕೆ ಬದ್ಧರಾಗಿರಬೇಕು~ ಎಂದಿದ್ದಾರೆ.ಜಾತ್ಯತೀತ ಮುಖವಾಡ: ಎನ್‌ಡಿಎ ಪ್ರಧಾನಿ ಅಭ್ಯರ್ಥಿ ಕುರಿತಂತೆ ನಿತೀಶ್ ಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಹಾರದ ಬಿಜೆಪಿ ಮುಖಂಡ, ಪಶುಸಂಗೋಪನಾ ಸಚಿವ ಗಿರಿರಾಜ್ ಸಿಂಗ್, `ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಕೆಲವರು ಜಾತ್ಯತೀತ ಮುಖವಾಡ ಹಾಕುತ್ತಾರೆ~ ಎಂದು ಟೀಕಿಸಿದ್ದಾರೆ.ಇದಕ್ಕೆ ಎಲ್‌ಜೆಪಿ ಅಧ್ಯಕ್ಷ ರಾಂ ವಿಲಾಸ್ ಪಾಸ್ವಾನ್ ಹಾಗೂ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಅವರನ್ನು ಉಲ್ಲೇಖಿಸಿದ ಅವರು, `ಪಾಸ್ವಾನ್ ಅವರು ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಅಧಿಕಾರ ಅನುಭವಿಸಿದರು. ಆದರೆ ಎನ್‌ಡಿಎ ಬಿಟ್ಟು ಹೊರ ನಡೆದಾಗ ಜಾತ್ಯತೀತ ನಾಯಕರಾದರು. 1990ರಲ್ಲಿ ಬಿಹಾರದಲ್ಲಿ ಸರ್ಕಾರ ರಚನೆಗೆ ಲಾಲು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೈಲಾಶ್‌ಪತಿ ಮಿಶ್ರಾ ನೆರವು ಕೇಳಿದ್ದರು. ಜನರು ಮುಂದಿನ ಪ್ರಧಾನಿಯನ್ನು ನಿರ್ಧರಿಸುತ್ತಾರೆ. ಅವರಿಗೆ ಜಾತ್ಯತೀತ ಸೋಗಿನ ನಾಯಕರು ಬೇಕಿಲ್ಲ~ ಎಂದರು.ಅಭ್ಯರ್ಥಿಯನ್ನು ಹೆಸರಿಸಿ:
ಯುಪಿಎ ರಾಷ್ಟ್ರಪತಿ ಅಭ್ಯರ್ಥಿ ಪ್ರಣವ್ ಮುಖರ್ಜಿ ಅವರಿಗೆ ಬೆಂಬಲ ಸೂಚಿಸಿದ ಬೆನ್ನಲ್ಲಿಯೇ ಶಿವಸೇನೆಯು, ಎನ್‌ಡಿಎ ತನ್ನ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಬೇಕು ಎಂದು ಪಟ್ಟು ಹಿಡಿದಿದೆ.

`ಮೈತ್ರಿಕೂಟದ ಎಲ್ಲ ಅಂಗಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎನ್‌ಡಿಎ ಈ ದಿಸೆಯಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ಭಾವಿಸುತ್ತೇನೆ~ ಎಂದು ಶಿವಸೇನೆ ಮುಖಂಡ, ರಾಜ್ಯ ಸಭಾ ಸದಸ್ಯ ಭರತ್ ಕುಮಾರ್ ರಾವತ್ ಹೇಳಿದ್ದಾರೆ.

ಜಾತ್ಯತೀತ ನಾಯಕ ಯಾರು?

ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರು ನಿತೀಶ್ ಕುಮಾರ್ ಅವರನ್ನು ಕೇಳಿದ ಪ್ರಶ್ನೆ ಇದು.

ನಿತೀಶ್ ಬಿಹಾರದಲ್ಲಿ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನಂಥ ಕೋಮು ಶಕ್ತಿಗಳ ತೊಡೆಯ ಮೇಲೆ ಕುಳಿತು ಅಧಿಕಾರ ಚಲಾಯಿಸುತ್ತಿದ್ದಾರೆ ಎಂದೂ ಲಾಲು ಆರೋಪಿಸಿದ್ದಾರೆ.ನಿತೀಶ್ ಅವರ ಜಾತ್ಯತೀತ ನಿಲುವನ್ನು ಪ್ರಶ್ನಿಸಿರುವ ಅವರು, `ಗೋಧ್ರಾ ರೈಲು ದುರಂತ ನಡೆದಾಗ ರೈಲ್ವೆ ಸಚಿವರು ಯಾರಾಗಿದ್ದರು~? ಎಂದು ಕೇಳಿದ್ದಾರೆ.ನಿತೀಶ್ ಸ್ವತಃ ತಮ್ಮನ್ನೇ ಎನ್‌ಡಿಎ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆಯೇ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದೂ ಅವರು ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.