ಪ್ರಧಾನಿ ಹುದ್ದೆಗೆ ಸ್ಪರ್ಧಿ ಅಲ್ಲ: ಅಡ್ವಾಣಿ ಸ್ಪಷ್ಟನೆ

6

ಪ್ರಧಾನಿ ಹುದ್ದೆಗೆ ಸ್ಪರ್ಧಿ ಅಲ್ಲ: ಅಡ್ವಾಣಿ ಸ್ಪಷ್ಟನೆ

Published:
Updated:

ಸಾತ್ನಾ/ ಭೋಪಾಲ (ಮಧ್ಯಪ್ರದೇಶ), (ಪಿಟಿಐ/ ಐಎಎನ್‌ಎಸ್):  ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಲು ರಥಯಾತ್ರೆ ಕೈಗೊಂಡಿರುವುದಾಗಿ ಎದುರಾಳಿಗಳು ಮಾಡಿರುವ ಆರೋಪವನ್ನು ನಿರಾಕರಿಸಿರುವ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ, ವಂಶಪಾರಂಪರ್ಯ ರಾಜಕಾರಣದಲ್ಲಿ ನಂಬಿಕೆ ಇಡದ ನಮ್ಮ ಪಕ್ಷ ಪ್ರಧಾನಿ ಹುದ್ದೆ ಅಭ್ಯರ್ಥಿ ಆಯ್ಕೆಗೆ ಸಾಮೂಹಿಕ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.`ನಾನು ಪ್ರಧಾನಿ ಹುದ್ದೆ ಪೈಪೋಟಿಯಲ್ಲಿ ಇಲ್ಲ~ ಎಂದು ಶುಕ್ರವಾರ ಇಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಪ್ರಧಾನಿಯನ್ನೂ ಲೋಕಪಾಲ್ ಮಸೂದೆ ವ್ಯಾಪ್ತಿಗೆ ತರುವ ಪ್ರಸ್ತಾವಕ್ಕೆ ತಮ್ಮ ಸಹಮತ ಇದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಲಂಚ ಆರೋಪ: ರಾಜ್ಯದಲ್ಲಿನ ಆಡಳಿತಾರೂಢ ಬಿಜೆಪಿಯು ಅಡ್ವಾಣಿ ಅವರ ರಥಯಾತ್ರೆಗೆ ಮುನ್ನ ಮಾಧ್ಯಮ ಪ್ರತಿನಿಧಿಗಳಿಗೆ ಲಂಚ ನೀಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.`ಕಪ್ಪುಹಣದ ವಿರುದ್ಧ ಹುಯಿಲೆಬ್ಬಿಸುತ್ತಿರುವ ಬಿಜೆಪಿ ಸ್ವತಃ ಯಾತ್ರೆಗೆ ಕಪ್ಪುಹಣವನ್ನು ಬಳಸುತ್ತಿದೆ~ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕಾಂತಿಲಾಲ್ ಭುರಿಯಾ ಟೀಕಿಸಿದ್ದಾರೆ. ಕೆಲವು ಪತ್ರಕರ್ತರಿಗೆ ತಲಾ 500 ರೂಪಾಯಿ ಲಂಚ ಕೊಡಲಾಗಿದೆ ಎಂಬ ಕಾಂಗ್ರೆಸ್ ಆರೋಪವನ್ನು ಬಿಜೆಪಿ ಸ್ಥಳೀಯ ಘಟಕ ಅಲ್ಲಗಳೆದಿದೆ.ತನಿಖೆಗೆ ಸೂಚನೆ: ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅಡ್ವಾಣಿ, ವಿಷಯವನ್ನು ತನಿಖೆಗೆ ಒಳಪಡಿಸುವಂತೆ ಮಧ್ಯಪ್ರದೇಶ ಬಿಜೆಪಿ ಅಧ್ಯಕ್ಷರಿಗೆ ಸೂಚನೆ ನೀಡುವುದಾಗಿ ತಿಳಿಸಿದ್ದಾರೆ.ಈ ಮಧ್ಯೆ, ಸಾತ್ನಾದಲ್ಲಿ ಅಡ್ವಾಣಿ ಅವರ ಯಾತ್ರೆಗೆ ಕಪ್ಪು ಬಾವುಟ ತೋರಿಸಲು ಮುಂದಾದ ಸುಮಾರು ಎರಡು ಡಜನ್ ಕಾಂಗ್ರೆಸ್ ಕಾರ್ಯಕರ್ತರನ್ನು ಶುಕ್ರವಾರ ಸ್ಥಳೀಯ ಪೊಲೀಸರು ಬಂಧಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry