ಪ್ರಧಾನಿ ಹುದ್ದೆ ಹೋದಾಗ ಸಿಹಿ ಹಂಚಿದರು!

7

ಪ್ರಧಾನಿ ಹುದ್ದೆ ಹೋದಾಗ ಸಿಹಿ ಹಂಚಿದರು!

Published:
Updated:

ಬೆಂಗಳೂರು: ‘ನಾನು ಪ್ರಧಾನಿ ಹುದ್ದೆಯಿಂದ ರಾಜೀನಾಮೆ ನೀಡಿದ ದಿನವೇ ಕೆಲವರು ಬೆಂಗಳೂರಿನಲ್ಲಿ ಸಿಹಿ ಹಂಚಿದರು. ಒಬ್ಬ ಕನ್ನಡಿಗ ಪ್ರಧಾನಿಯಾಗಿದ್ದಾಗಲೇ ಇಂಥ ಘಟನೆ ನಡೆಯಿತು’ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ನೊಂದು ನುಡಿದರು.77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ಭಾನುವಾರ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆಯಲ್ಲಿ ಕನ್ನಡ ನಾಡು-ನುಡಿಗೆ ಸೇವೆ ಸಲ್ಲಿಸಿದವರಿಗೆ ಸನ್ಮಾನ ನೆರವೇರಿಸಿ ಮಾತನಾಡಿದರು.‘ಈ ಕಾರಣದಿಂದಲೇ ಕನ್ನಡಿಗನಾಗಿ ಹುಟ್ಟಿ ತಪ್ಪು ಮಾಡಿದೆ ಎಂದಿದ್ದೆ. ಅದನ್ನು ವಿರೋಧಿಸಿ ವಾಚಕರ ವಾಣಿಗೆ ಹಲವರು ಪತ್ರ ಬರೆದರು. ಆದರೆ ನಾನು ಏಕೆ  ಹಾಗೆ ಹೇಳಿದೆ ಎಂಬುದನ್ನು ಸಮರ್ಥಿಸಿ ಡಾ.ಯು.ಆರ್.ಅನಂತಮೂರ್ತಿ ಅವರು ಲೇಖನ ಬರೆದರು. ನಾನು ಕನ್ನಡಿಗನೆಂದು ಹೇಳಿಕೊಳ್ಳುವುದಕ್ಕೆ ನನಗೆ ಹೆಮ್ಮೆ ಎನಿಸುತ್ತದೆ’ ಎಂದು ಅಭಿಮಾನದಿಂದ ಹೇಳಿದರು.ತಂದೆಯ ಸಮಾನ:
‘ಸಮ್ಮೇಳನಾಧ್ಯಕ್ಷರಾದ ಪ್ರೊ. ಜಿ.ವೆಂಕಟಸುಬ್ಬಯ್ಯನವರು ನನಗೆ ತಂದೆಯ ಸಮಾನರಿದ್ದಂತೆ. ಅವರು ಮೊದಲ ದಿನದ ಭಾಷಣದಲ್ಲಿ ಹೇಳಿರುವ ‘ತಲೆತುಂಬ ಕಲಿಯೋಣ, ತಲೆಯೆತ್ತಿ ನಿಲ್ಲೋಣ, ತಲೆ ಬಾಗಿ ನಡೆಯೋಣ’ ಎಂಬ ವಾಕ್ಯಗಳನ್ನು ಕನ್ನಡಿಗರು ತಮ್ಮ ಹೃದಯದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

ಈ ನಾಡಿನಲ್ಲಿ ಅಸಹ್ಯಕರ ಬೆಳವಣಿಗೆಗಳು ನಡೆಯುತ್ತಿರುವುದರಿಂದ ಈಚೆಗೆ ದೃಶ್ಯ ಮಾಧ್ಯಮವನ್ನು ನೋಡುವುದೇ ಇಲ್ಲ. ಇದ್ದದ್ದು ಇದ್ದಂತೆ ಹೇಳಿದರೆ ಕೆಂಡದಂಥ ಕೋಪ ಬರುತ್ತದೆ ಎಂದು ಯಾರ ಹೆಸರನ್ನೂ ಹೇಳದೇ ಟೀಕಿಸಿದರು.ಬಜೆಟ್‌ನಲ್ಲಿ ಹಣ: ‘ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಕಸಾಪ ನೌಕರರಿಗೆ ಸಂಬಳ ನೀಡುವುದಕ್ಕೆ ನಿರ್ಧರಿಸಿ ಬಜೆಟ್‌ನಲ್ಲಿ ಹಣವನ್ನೂ ತೆಗೆದಿರಿಸಿದ್ದೆ’ ಎಂದು ಸ್ಮರಿಸಿದ ಅವರು, ‘ಕಸಾಪ ಹೊರತರುತ್ತಿರುವ ‘ಶಿವಪುರಾಣ ರಹಸ್ಯ’ ಪುಸ್ತಕದ 1000 ಪ್ರತಿಗಳ ಮುದ್ರಣಕ್ಕೆ ತಗುಲುವ ವೆಚ್ಚವನ್ನು ನಾನೇ ಭರಿಸುತ್ತೇನೆ’ ಎಂದು ನಲ್ಲೂರು ಪ್ರಸಾದ್ ಅವರಿಗೆ ಭರವಸೆ ನೀಡಿರುವುದಾಗಿ ತಿಳಿಸಿದರು.ಅನಿವಾಸಿ ಭಾರತೀಯರೇ ಮೇಲು:
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ, ‘ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವಾಸವಾಗಿರುವ ಕನ್ನಡಿಗರು ತಮ್ಮ ಮಾತೃಭಾಷೆಯ ಬಗೆಗೆ ವಹಿಸುವ ಕಾಳಜಿ ನಮ್ಮ ರಾಜ್ಯದಲ್ಲಿ ಕಾಣಿಸುವುದಿಲ್ಲ. ಶುದ್ಧ ಕನ್ನಡ ಬಳಕೆ ಈಗ ಕಡಿಮೆಯಾಗುತ್ತಿದೆ. ಆದರೆ ಕನ್ನಡ ಮತ್ತೆ ಬೆಳಗಬೇಕು’ ಎಂದು           ಆಶಿಸಿದರು.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, ‘ಮಹಾಭಾರತದಲ್ಲಿ ಕರುನಾಡು ಎಂದು ಉಲ್ಲೇಖಿತವಾದ ರಾಜ್ಯದ ಜನತೆ ಇಂದು ಆತಂಕಗೊಂಡಿದ್ದಾರೆ. ಇದಕ್ಕಾಗಿ ನಾನು ಯಾರನ್ನೂ ದೂಷಿಸಲಾರೆ. ಆದರೆ ಪ್ರಾಮಾಣಿಕತೆ ಕಡಿಮೆಯಾಗುತ್ತಿದೆ. ಕನ್ನಡಿಗರನ್ನು ಬೊಟ್ಟು ಮಾಡುವ ಪರಿಸ್ಥಿತಿ ತಲೆದೋರಿದೆ. ಬಸವಣ್ಣನವರ ಸಮಾನತೆಯ ಆದರ್ಶಗಳು, ಮೌಲ್ಯಗಳು ಮರೆಯಾಗುತ್ತಿವೆ. ಜಾತಿ ಮತ್ತು ಧರ್ಮವನ್ನು ಆಧರಿಸಿದ ವ್ಯವಸ್ಥೆಯು ಸಮಾಜವನ್ನು ಇನ್ನಷ್ಟು ಹಿಂದಕ್ಕೊಯ್ಯುತ್ತಿದೆ. ಸಂಸ್ಕೃತಿ ಉಳಿಸುವುದೇ ಸಮ್ಮೇಳನದ ಉದ್ದೇಶವಾಗಲಿ’ ಎಂದು    ಹಾರೈಸಿದರು.ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಮಾತನಾಡಿ, ‘ಕನ್ನಡ ನುಡಿಗೆ ವ್ಯತ್ಯಾಸವಾದರೆ ಸಂಸ್ಕೃತಿ ಏನಾಗಬಹುದೋ ಎಂಬ ಆತಂಕ ಕಾಡುತ್ತಿದೆ. ಭಾಷೆ, ಜನಾಂಗ, ಜೀವನಪದ್ಧತಿಯ ಮೇಲೆ ಆಕ್ರಮಣ ನಡೆಯುತ್ತಿದೆ’ ಎಂದರು.ಕನ್ನಡ ಜೀವಂತ ಭಾಷೆ: ‘ಕನ್ನಡ ಭಾಷೆಯನ್ನು ಬೇರೆ ಭಾಷೆಗೆ ಹೋಲಿಕೆ ಮಾಡಿ ನೋಡುವಂಥದಲ್ಲ. ಇದು ಸಾಯುವ ಭಾಷೆಯಲ್ಲ, ಜೀವಂತ ಭಾಷೆ’ ಎಂದು ಘಂಟಾಘೋಷವಾಗಿ ಸಾರಿದರು.ಸಹಸ್ರ ಸಂಖ್ಯೆಯಲ್ಲಿದ್ದ ಸಭಿಕರು ಕಿವಿಗಡಚಿಕ್ಕುವ ಕರತಾಡನದ ಮೂಲಕ ಈ ಮಾತಿಗೆ ತಮ್ಮ ಸಮ್ಮತ ವ್ಯಕ್ತಪಡಿಸಿದರು.

ಗೌಡರ ಫೋಟೊ ತೆಗೆದ ಸಚಿವ ಅಶೋಕ!

 ರಾಜಕೀಯದಲ್ಲಿ ಯಾರೂ ಮಿತ್ರರೂ ಅಲ್ಲ, ಶತ್ರುಗಳೂ ಅಲ್ಲ ಎಂಬುದು ಭಾನುವಾರ ಮತ್ತೆ ಸಾಬೀತಾಯಿತು. ಸೈದ್ಧಾಂತಿಕ ಹಿನ್ನೆಲೆಯಲ್ಲಿ ಸದಾ ಮಾತಿನ ಯುದ್ಧ ನಡೆಸುತ್ತಲೇ ಇರುವ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಸ್ವಲ್ಪ ಹೊತ್ತು ಅದನ್ನು ಮರೆತಿದ್ದರೇನೋ.ಸನ್ಮಾನ ಸಮಾರಂಭ ನಡೆಯುತ್ತಿರುವಾಗ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಗೃಹ ಸಚಿವ ಆರ್.ಅಶೋಕ ಸಭಾಂಗಣದ ಮುಂದಿನ ಆಸನದಲ್ಲಿ ಕುಳಿತಿದ್ದರು. ಏನೆನ್ನೆಸಿತೋ ಏನೋ ಒಮ್ಮೆಲೆ ಪತ್ರಕರ್ತರೊಬ್ಬರ ಕ್ಯಾಮೆರಾ ಪಡೆದುಕೊಂಡು ಪಟಪಟನೇ ದೇವೇಗೌಡರ ಕೆಲ ಛಾಯಾಚಿತ್ರಗಳನ್ನು ತೆಗೆದರು! ‘ಹದ್ದಿನ ಕಣ್ಣಿನ’ ಪತ್ರಿಕಾ ಛಾಯಾಗ್ರಾಹಕರು ಬಿಟ್ಟಾರೆಯೇ? ಈ ದೃಶ್ಯವನ್ನು ತಮ್ಮ ಕ್ಯಾಮೆರಾದಲ್ಲಿಯೂ ಜೋಪಾನವಾಗಿ ಹಿಡಿದಿಟ್ಟರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry