ಮಂಗಳವಾರ, ನವೆಂಬರ್ 12, 2019
28 °C

ಪ್ರಧಾನ ಹಂತಕ್ಕೆ ಚೇತನ್ ಆನಂದ್

Published:
Updated:

ನವದೆಹಲಿ (ಪಿಟಿಐ): ನಾಲ್ಕು ಬಾರಿಯ ರಾಷ್ಟ್ರೀಯ ಚಾಂಪಿಯನ್ ಚೇತನ್ ಆನಂದ್, ಅರವಿಂದ್ ಭಟ್, ಶುಭಾಂಕರ್ ದೇ ಹಾಗೂ ಎಚ್.ಎಸ್.ಪ್ರಣಯ್ ಅವರು ಇಂಡಿಯಾ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್‌ನ ಪ್ರಧಾನ ಹಂತದಲ್ಲಿ ಆಡಲು ಅವಕಾಶ ಪಡೆದುಕೊಂಡಿದ್ದಾರೆ.ಸಿರಿ ಪೋರ್ಟ್ ಕ್ರೀಡಾ ಸಮುಚ್ಚಯದಲ್ಲಿ ಮಂಗಳವಾರ ಆರಂಭವಾದ ಟೂರ್ನಿಯ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಚೇತನ್ 21-17, 21-12ರಲ್ಲಿ ಅಭಿಮನ್ಯು ಸಿಂಗ್ ಅವರನ್ನು ಮಣಿಸಿದರು. ಎರಡನೇ ಪಂದ್ಯದಲ್ಲಿ ಅವರು 22-20, 11-21, 21-13ರಲ್ಲಿ ಸಮೀರ್ ಅವರನ್ನು ಪರಾಭವಗೊಳಿಸಿದರು.ಹಿಮ್ಮಡಿ ನೋವಿನಿಂದ ಚೇತರಿಸಿಕೊಳ್ಳುತ್ತಿರುವ ಚೇತನ್ ಅವರಿಗೆ ಎರಡನೇ ಪಂದ್ಯದಲ್ಲಿ ಕಠಿಣ ಪೈಪೋಟಿ ಎದುರಾಯಿತು. ಆದರೆ ಅನುಭವಿ ಆಟಗಾರ ತಿರುಗೇಟು ನೀಡುವಲ್ಲಿ ಯಶಸ್ವಿಯಾದರು. `ನಾನು ಇನ್ನೂ ಶೇಕಡಾ ನೂರರಷ್ಟು ಫಿಟ್ ಆಗಿಲ್ಲ. ಆದರೆ ಸದ್ಯದ ಬೆಳವಣಿಗೆ ತೃಪ್ತಿ ನೀಡಿದೆ' ಎಂದು ಆನಂದ್ ಪ್ರತಿಕ್ರಿಯಿಸಿದ್ದಾರೆ.ಕರ್ನಾಟಕದ ಅರವಿಂದ್ ಭಟ್ 20-22, 21-14, 21-18ರಲ್ಲಿ ಆದಿತ್ಯ ಪ್ರಕಾಶ್ ಅವರನ್ನು ಸೋಲಿಸಿದರು. ಮೊದಲ ಗೇಮ್‌ನಲ್ಲಿಯೇ ಅರವಿಂದ್ ಆಘಾತ ಅನುಭವಿಸಿದರು. ಆದರೆ ಆ ಆಘಾತದಿಂದ ಅವರು ಬಹುಬೇಗನೇ ಚೇತರಿಸಿಕೊಂಡರು. ಎರಡು ಹಾಗೂ ಮೂರನೇ ಗೇಮ್‌ನಲ್ಲಿ ಉತ್ತಮ ಆಟದ ಮೂಲಕ ಪ್ರಧಾನ ಹಂತ ಪ್ರವೇಶಿಸಿದರು.ಇನ್ನುಳಿದ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಶುಭಾಂಕರ್ 21-23, 21-10, 21-16ರಲ್ಲಿ ಆಸ್ಕರ್ ಬನ್ಸಾಲ್ ಎದುರೂ, ಪ್ರಣಯ್ 21-17, 21-14ರಲ್ಲಿ ಅನೂಪ್ ಶ್ರೀಧರ್ ವಿರುದ್ಧವೂ ಗೆಲುವು ಸಾಧಿಸಿದರು.ಮಹಿಳೆಯರ ವಿಭಾಗದಲ್ಲಿ ರಿತುಪರ್ಣಾ ದಾಸ್, ತೃಪ್ತಿ ಮುರ್ಗುಂಡೆ, ಜಿ.ರುತ್ವಿಕಾ ಶಿವಾನಿ ಹಾಗೂ ಸೈಲಿ ರಾಣೆ ಕೂಡ ಪ್ರಧಾನ ಹಂತ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ರಿತುಪರ್ಣಾ 21-16, 21-11ರಲ್ಲಿ ಮೋಹಿತಾ ಸಹದೇವ್ ಎದುರೂ, ತೃಪ್ತಿ 21-19, 21-19ರಲ್ಲಿ ರಷ್ಯಾದ ಅನಾಸ್ತೇಸಿಯಾ ಚೆರ‌್ವಯ್‌ಕೋವಾ ಮೇಲೂ ಜಯ ಗಳಿಸಿದರು. ಶಿವಾನಿ 21-11, 21-11ರಲ್ಲಿ ವರ್ಷಾ ವಿ.ಬೆಳವಾಡಿ ವಿರುದ್ಧವೂ, ಸೈಲಿ 21-15, 21-14ರಲ್ಲಿ ಜಾಕ್ವೆಲಿನ್ ಕುನತ್ ಎದುರೂ ಗೆಲುವು ಸಾಧಿಸಿದರು.

ಪ್ರತಿಕ್ರಿಯಿಸಿ (+)