ಭಾನುವಾರ, ಮೇ 16, 2021
29 °C
ಮೊದಲ ಓದು

ಪ್ರಬುದ್ಧ ಪದ್ಮನಯನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ನಡ ಕಾದಂಬರಿಗಳ ಪಿತಾಮಹ ಎಂದೇ ಹೆಸರಾದ ಗಳಗನಾಥರು (ವೆಂಕಟೇಶ ತಿರಕೋ ಕುಲಕರ್ಣಿ) ಕಾದಂಬರಿಗಳನ್ನು ಬರೆದು ಕನ್ನಡಿಗರಲ್ಲಿ ವಾಚಾನಾಭಿರುಚಿಯನ್ನು ಹೆಚ್ಚಿಸಿದವರು.

ಅನುವಾದಗಳೂ ಸೇರಿದಂತೆ ಕನ್ನಡದಲ್ಲಿ ಸುಮಾರು 22 ಕಾದಂಬರಿಗಳನ್ನು ಬರೆದ ಗಳಗನಾಥರ ಮೊದಲ ಕಾದಂಬರಿ `ಪ್ರಬುದ್ಧ ಪದ್ಮನಯನೆ' (1898). ಕನ್ನಡ ಸಾಹಿತ್ಯ ಪರಿಷತ್ತು ಈಗ ಈ ಕಾದಂಬರಿಯ ಮರುಮುದ್ರಣ ಮಾಡಿದೆ.ಪದ್ಮನಯನೆ ಎಂಬ ಸುಂದರಿಯ ವೃತ್ತಾಂತವನ್ನು ಈ ಕಾದಂಬರಿ ಹೊಂದಿದೆ. ಆಕೆಯ ತೊಂದರೆ, ತಾಪತ್ರಯ, ಆಕೆಯ ಮರಳು ಮಾಡುವ ಸೌಂದರ್ಯ, ಪ್ರೇಮ, ಸಾಹಸ ಇತ್ಯಾದಿಗಳನ್ನು ಗಳಗನಾಥರು ತುಸು ಹೆಚ್ಚಾಗಿಯೇ ವರ್ಣಿಸುತ್ತ ಹೋಗುತ್ತಾರೆ. ಅದರೊಂದಿಗೆ ಕಥೆಯೂ ಹರಿಯುತ್ತದೆ. ಕಾದಂಬರಿಕಾರರೇ ಹೇಳಿರುವಂತೆ ಇದು `ಶೃಂಗಾರ-ವೀರ-ಶೋಕಾದ್ಭುತರಸ' ಪ್ರಧಾನ ಆಗಿರುವಂಥದ್ದು.ಪುರಾಣದ, ಮಕ್ಕಳ ಕಥೆಯಂತೆ ಇದು ಓದಿಸಿಕೊಳ್ಳುತ್ತದೆ. ಆಸಕ್ತರು ಸುಮಾರು ನೂರು ವರ್ಷ ಹಿಂದಿನ ಕನ್ನಡ ಕಾದಂಬರಿಯ ಗದ್ಯವನ್ನು ಈಗಿನ ಗದ್ಯದೊಂದಿಗೆ ಇಟ್ಟು ನೋಡಬಹುದು. ಜೊತೆಗೆ ಅದರ ವಿವರಣಾತ್ಮಕ ಶೈಲಿಯನ್ನು ಕೂಡ.`ಬರಬರುತ್ತ ಪದ್ಮನಯನೆಗೆ ಹದಿನಾರು ವರ್ಷಗಳು ತುಂಬಿ ಯೌವನವು ವ್ಯಕ್ತವಾಯಿತು. ಆಕೆಯ ಶರೀರವು ಗೌರವರ್ಣದ್ದು, ಮೂಗು ಸರಳ, ಕಣ್ಣು ದೊಡ್ಡವು. ತುಟಿಗಳು ಅಚ್ಚ ಕೆಂಪು, ಕುಚಗಳು ತಮ್ಮ ಸೀಮೆಯನ್ನು ಒತ್ತಿ ಅದೇ ಮೇಲಕ್ಕೆ ಬಂದಿದ್ದವು, ಟೊಂಕವು ಸಣ್ಣಾಗಿತ್ತು. ನಿತಂಬಗಳು ಸ್ಥೂಲವಾಗಿದ್ದವು.

ಆಕೆಯು ತುಂಬಿದ ಮೈಕಟ್ಟಿನಿಂದಲೂ, ಸ್ವಚ್ಛವಾದ ಹಣೆಯನ್ನಲಂಕರಿಸುವ ಉಂಗುರಗೂದಲುಗಳಿಂದಲೂ ಮನೋಹರವಾಗಿ ಒಪ್ಪುತ್ತಿದ್ದಳು. ಪದ್ಮನಯನೆಯ ಕಣ್ಣಿನ ನೋಟ, ಹುಬ್ಬುಗಳ ಅಪರೂಪದ ಅಲೆದಾಟ, ನಗೆಮೊಗದ ಮಾಟ, ಮಂಜುಲವಾಣಿಯ ಸವಿಯೂಟ ಇವು ಎಂಥವರನ್ನಾದರೂ ಮರಳುಮಾಡದೆ ಬಿಡುತ್ತಿದ್ದಿಲ್ಲ'.

(ಪುಟ12)ಇಂಥ ರಸಿಕ ವರ್ಣನೆಗಳು ತುಂಬಿರುವ ಗಳಗನಾಥರ ಕಾದಂಬರಿಗಳು ಆಗಿನ ವಾಚಕರನ್ನು ಮೋಡಿಮಾಡಿದ್ದರಲ್ಲಿ ಅಂಥ ವಿಶೇಷವೇನಿಲ್ಲ!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.