ಪ್ರಮಾಣಪತ್ರಕ್ಕೆ ನೆಮ್ಮದಿ ಕೇಂದ್ರಕ್ಕೆ ಲಗ್ಗೆ!

ಸೋಮವಾರ, ಮೇ 20, 2019
30 °C

ಪ್ರಮಾಣಪತ್ರಕ್ಕೆ ನೆಮ್ಮದಿ ಕೇಂದ್ರಕ್ಕೆ ಲಗ್ಗೆ!

Published:
Updated:

ಕುಷ್ಟಗಿ: ವಿವಿಧ ಕೆಲಸ ಕಾರ್ಯಗಳಿಗೆ ಅರ್ಜಿ ಸಲ್ಲಿಸುವ ಸಲುವಾಗಿ ಅಗತ್ಯವಾಗಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ಸಾಧ್ಯವಾಗದ ಕಾರಣ ಸಾರ್ವಜನಿಕರು ತಹಸೀಲ್ದಾರರ ಕಚೇರಿಯಲ್ಲಿರುವ ನೆಮ್ಮದ ಕೇಂದ್ರಕ್ಕೆ ಲಗ್ಗೆ ಹಾಕಿದ ಘಟನೆ ಸೋಮವಾರ ನಡೆದಿದೆ. ನಾಲ್ಕೂ ಹೋಬಳಿಗಳಿಗೆ ಸೇರಿದ ನೂರಾರು ಜನರು ಜಮಾಯಿಸಿದ್ದರಿಂದ ನೆಮ್ಮದಿ ಕೇಂದ್ರದಲ್ಲಿ ನೂಕುನುಗ್ಗಲು ಉಂಟಾಗಿತ್ತು.  ವಿಳಂಬಕ್ಕೆ ಆಕ್ರೋಶಗೊಂಡ ಜನರು ಕೇಂದ್ರದಲ್ಲಿನ ಸಿಬ್ಬಂದಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಜಾತಿ ಮತ್ತು ಆದಾಯ ಪ್ರಮಾಣಪತ್ರಕ್ಕೆ ಸಲ್ಲಿಕೆಯಾಗಿರುವ ಸಹಸ್ರ ಸಂಖ್ಯೆ ಅರ್ಜಿಗಳಲ್ಲಿ ಬಹುತೇಕ ಶಿಷ್ಯವೇತನ ಪಡೆಯುವುದಕ್ಕೆ ವಿದ್ಯಾರ್ಥಿಗಳಿಂದ ಸಲ್ಲಿಕೆಯಾಗಿವೆ.ಈ ವರ್ಷದಿಂದ ಶಿಷ್ಯವೇತನ ಪಡೆಯುವ ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ ಮತ್ತು ಸಾಮಾನ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಸ್ಕ್ಯಾನ್ ಮಾಡಿದ ಭಾವಚಿತ್ರ ಸಹಿತ ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು ಲಗತ್ತಿಸುವುದು ಕಡ್ಡಾಯವಾಗಿದೆ. ಹಾಗಾಗಿ ಆಯಾ ಹೋಬಳಿ ಕೇಂದ್ರಗಳ ನೆಮ್ಮದಿ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಲು ಸ್ವತಃ ವಿದ್ಯಾರ್ಥಿಗಳೇ ಬರಬೇಕಿದ್ದು ದಿನಗಟ್ಟಲೇ ಕಾಯ್ದು ಅರ್ಜಿ ಸಲ್ಲಿಸುತ್ತಿದ್ದು ಕಂಡುಬಂದಿತ್ತು.ಹೋಬಳಿ ನೆಮ್ಮದಿ ಕೇಂದ್ರಗಳಲ್ಲಿ ಸಲ್ಲಿಸಿದ ಅರ್ಜಿಗಳನ್ನು ವಿಲೇವಾರಿ ಮಾಡಲು ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರಿಗೆ ಕಳುಹಿಸಲಾಗುತ್ತದೆ. ಅವರಿಂದ ಬರುವ ವರದಿ ನಂತರ ತಹಸೀಲ್ದಾರರ ಕಚೇರಿಯಲ್ಲಿರುವ ಫ್ರಂಟ್ ನೆಮ್ಮದಿ ಕೇಂದ್ರಕ್ಕೆ ಬರುತ್ತದೆ. ಸಿರಸ್ತೇದಾರರಿಂದ ಚೆಕ್‌ಲೀಸ್ಟ್ ತಪಾಸಣೆ ನಡೆದ ನಂತರ ಆನ್‌ಲೈನ್ ಮೂಲಕ ಹೋಬಳಿ ನೆಮ್ಮದಿ ಕೇಂದ್ರಕ್ಕೆ ರವಾನೆಯಾಗುತ್ತದೆ.ಆಗಿದ್ದೇನು?: ಈ ಎಲ್ಲ ಪ್ರಕ್ರಿಯೆ ಆನ್‌ಲೈನ್ ಮೂಲಕ ನಡೆಯುವುದರಿಂದ ತಹಸೀಲ್ದಾರರ ಮಾದರಿ ಸಹಿಯುಳ್ಳ ಡಿಜಿಟಲ್ ಕಾರ್ಡ್ ಅನ್ನು ನೆಟ್‌ವರ್ಕ್‌ಗೆ ಅಪ್‌ಲೋಡ್ ಮಾಡಬೇಕಾಗುತ್ತದೆ. ನಂತರ ಅರ್ಜಿದಾರರಿಗೆ ಆಯಾ ಹೋಬಳಿ ಕೇಂದ್ರಗಳ ಮೂಲಕ ಪ್ರಮಾಣ ಲಭ್ಯವಾಗುತ್ತದೆ. ಆದರೆ ಯಡವಟ್ಟಾಗಿರುವುದು ಇಲ್ಲೇ, ಏಕೆಂದರೆ ಈ ಡಿಜಿಟಲ್ ಕಾಡ್ ತೂರಿಸಿದಾಗ ತಿರಸ್ಕೃತಗೊಳ್ಳುತ್ತಿರುವುದೇ ಸಮಸ್ಯೆಯ ಮೂಲ ಕಾರಣವಾಗಿದೆ. ಸದರಿ ಕಾರ್ಡ್ ಕೈಕೊಟ್ಟಿದ್ದರಿಂದ ಹಿಂದಿನಂತೆ ಪ್ರಮಾಣಪತ್ರಗಳನ್ನು ನೇರವಾಗಿ (ಮ್ಯಾನುವಲ್) ಕೊಡಬೇಕಾಗಿದ್ದು ಎಲ್ಲರೂ ಇಲ್ಲಿಗೇ ಬಂದು ಪ್ರಮಾಣಪತ್ರಗಳನ್ನು ಒಯ್ಯುವಂತಾಗಿದೆ. ದಿನನಿತ್ಯ ಸಹಸ್ರ ಸಂಖ್ಯೆಯಲ್ಲಿ ಅರ್ಜಿಗಳು ಬರುತ್ತಿರುವುದರಿಂದ ಪ್ರಮಾಣಪತ್ರ ವಿತರಣೆಯಲ್ಲಿ ಸಾಕಷ್ಟು ವಿಳಂಬವಾಗುತ್ತಿದೆ.ತಿಪ್ಪೆಯಾದ ಕೇಂದ್ರ: ವಿಲೇವಾರಿಯಾಗದ ತಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂಬುದನ್ನು ತಿಳಿಯಲು ಫ್ರಂಟ್ ನೆಮ್ಮದಿ ಕೇಂದ್ರಕ್ಕೆ ಬರುವ ಜನರು ಹುಡುಕಾಟದಲ್ಲಿ ಪೇರಿಸಿಟ್ಟ ಅರ್ಜಿಗಳನ್ನೆಲ್ಲ ಕಿತ್ತು ಬಿಸಾಡುತ್ತಿರುವುದರಿಂದ ತಿಪ್ಪೆಯಂತಾಗಿದ್ದ ನೆಮ್ಮದಿ ಕೇಂದ್ರ ಅರಾಜಕತೆ ಕೇಂದ್ರವಾಗಿತ್ತು. ಕೆಲ ಕಿಡಿಗೇಡಿಗಳು ಅರ್ಜಿಗಳ ರಾಶಿಯಲ್ಲೇ ನಡೆದಾಡುತ್ತಿರುವುದು ಕಂಡುಬಂದಿತು.ಆಕ್ರೋಶ: ಪ್ರಮಾಣಪತ್ರಕ್ಕಾಗಿ ಆಗಮಿಸಿದ್ದ ಜನ ಆಕ್ರೋಶ ವ್ಯಕ್ತಪಡಿಸಿ ಶಿಷ್ಯವೇತನ ಅರ್ಜಿ ಸಲ್ಲಿಕೆಗೆ ಸೆ.30 ಕೊನೆ ದಿನವಾಗಿದೆ, ಅರ್ಜಿ ಸಲ್ಲಿಸಿ ಒಂದೂವರೆ ತಿಂಗಳಾಗಿದೆ ಎಂದು ಹನಮಸಾಗರದ ಮಂಜುನಾಥ, ತೋಪಲಕಟ್ಟೆಯ ಕನಕನಗೌಡ, ಇದ್ಲಾಪೂರದ ಮೈಲಾರಪ್ಪ, ಶಿರಗುಂಪಿಯ ಗಂಗಾಧರ ಮತ್ತಿತರರು ಅಳಲು ತೋಡಿಕೊಂಡರು.ಅಸಹಕಾರ: ಈ ಕುರಿತು ವಿವರಿಸಿದ ಕಂದಾಯ ಸಿರಸ್ತೇದಾರ ನಾಗಪ್ಪ ಸಜ್ಜನ, ಆ.11ರಂದು ಡಿಜಿಟಲ್ ಕಾರ್ಡ್ ಕೆಲಸ ಮಾಡುತ್ತಿಲ್ಲ, ಹಾಗಾಗಿ ರಜೆ ಇದ್ದರೂ ಕೆಲಸ ಮಾಡುತ್ತಿದ್ದೇವೆ, ಆದರೆ ಸಹಕಾರ ನೀಡದ ಜನ ಮುಗಿಬೀಳುತ್ತಿರುವುದರಿಂದ ಮತ್ತಷ್ಟು ವಿಳಂಬವಾಗುತ್ತಿದೆ ಎಂದರು. ಅಲ್ಲದೇ ಹೊಸ ಡಿಜಿಟಲ್ ಕಾರ್ಡ್ ಬಂದಿದ್ದು ಆನ್‌ಲೈನ್ ಪ್ರಕ್ರಿಯೆ ಮಂಗಳವಾರದಿಂದ ಪುನರಾರಂಭಗೊಳ್ಳಲಿದೆ ಎಂದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry