ಭಾನುವಾರ, ಮೇ 9, 2021
22 °C

ಪ್ರಮಾಣ ಪತ್ರ ಸಲ್ಲಿಸಲು ಹೈಕೋರ್ಟ್ ಸೂಚನೆ:ಅರಣ್ಯ ಗಡಿ: 100 ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ಸಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅರಣ್ಯ ಪ್ರದೇಶದ ಗಡಿ ಭಾಗದಿಂದ 100 ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸುವುದು ನಿಷಿದ್ಧ ಎಂದಿರುವ ಹೈಕೋರ್ಟ್, ಈ ರೀತಿ ಅನುಮತಿ ನೀಡಿದ್ದರೆ ಅದನ್ನು ಪ್ರಮಾಣ ಪತ್ರದ ಮೂಲಕ ತಿಳಿಸುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಗುರುವಾರ ನಿರ್ದೇಶಿಸಿದೆ.100 ಮೀಟರ್ ವ್ಯಾಪ್ತಿಯಲ್ಲಿ ತಮಗೆ ಗಣಿಗಾರಿಕೆಗೆ ಅನುಮತಿ ನೀಡದ ಕ್ರಮವನ್ನು ಪ್ರಶ್ನಿಸಿ ಬೆಂಗಳೂರು ಮೂಲದ `ಬಿಳಿಗಿರಿ ಗ್ರಾನೈಟ್ ಕಂಪೆನಿ~ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಡೆಸಿತು.`2007ರ ಫೆ.5ರಲ್ಲಿ ಸುತ್ತೋಲೆ ಹೊರಡಿಸಿದ್ದ ಸರ್ಕಾರ, 1969ಕ್ಕಿಂತ ಪೂರ್ವದಲ್ಲಿ ಅನುಮತಿ ಪಡೆದುಕೊಂಡಿದ್ದವರಿಗೆ ಗಣಿಗಾರಿಕೆಗೆ ಅನುಮತಿ ನೀಡಿತ್ತು. ಆದರೆ ಆ ಸುತ್ತೋಲೆಯನ್ನು 2011ನೇ ಸಾಲಿನಲ್ಲಿ ಹಿಂದಕ್ಕೆ ಪಡೆದುಕೊಳ್ಳಲಾಗಿದೆ. ಆದರೂ ಆ ಸುತ್ತೋಲೆ ಅನ್ವಯ 100 ಮೀಟರ್ ವ್ಯಾಪ್ತಿಯ ಒಳಗೆ ಗಣಿಗಾರಿಕೆ ನಡೆಯುತ್ತಿರುವ ಸಾಧ್ಯತೆಗಳೂ ಇರಬಹುದು~ ಎಂದು ಸರ್ಕಾರದ ಪರ ವಕೀಲ ರವೀಂದ್ರ ಕೊಲ್ಲೆ ಕೋರ್ಟ್‌ಗೆ ತಿಳಿಸಿದರು.`ಈಗಿನ ರಾಜಕಾರಣಿಗಳು ಯಾವ ರೀತಿ ಅನುಮತಿ ಪಡೆದುಕೊಳ್ಳುತ್ತಿದ್ದಾರೆ ಎನ್ನುವುದು ನಮ್ಮ ಗಮನಕ್ಕೂ ಬಂದಿದೆ. ಕಾನೂನಿನ ಅಡಿ ಗಣಿಗಾರಿಕೆ ಮಾಡುವ ವ್ಯಾಪ್ತಿಯ ಬಗ್ಗೆ ಉಲ್ಲೇಖಗೊಂಡಿದ್ದರೆ ಅದನ್ನು ಪಾಲನೆ ಮಾಡಬೇಕು. ಒಂದು ವೇಳೆ ಕಾನೂನು ಉಲ್ಲಂಘನೆ ಮಾಡಿ ಯಾರಿಗಾದರೂ ಅನುಮತಿ ನೀಡಿದ್ದರೆ ಅದನ್ನು ಲಿಖಿತ ರೂಪದಲ್ಲಿ ನೀಡಿ~ ಎಂದು ನ್ಯಾಯಮೂರ್ತಿಗಳು ಮೌಖಿಕವಾಗಿ ಹೇಳಿದರು. ಈ ಮಾಹಿತಿ ನೀಡಲು ಸರ್ಕಾರಕ್ಕೆ ಆರು ವಾರಗಳ ಕಾಲಾವಕಾಶ ನೀಡಲಾಗಿದೆ.ಪ್ರಕರಣದ ವಿವರ: ಕನಕಪುರ ತಾಲ್ಲೂಕಿನ ಕೋಟೆಕೊಪ್ಪ ಗ್ರಾಮದಲ್ಲಿನ 8.2 ಎಕರೆ ಜಮೀನಿನಲ್ಲಿ ಗಣಿಗಾರಿಕೆಗೆ 2000ನೇ ಸಾಲಿನಲ್ಲಿ ಅನುಮತಿ ಪಡೆದುಕೊಂಡಿದ್ದರು. ಆದರೆ ಈ ಪ್ರದೇಶದ ಪೈಕಿ 6 ಎಕರೆ ಜಮೀನು ಅರಣ್ಯ ವ್ಯಾಪ್ತಿಗೆ ಒಳಪಡುವ ಹಿನ್ನೆಲೆಯಲ್ಲಿ, ಉಳಿದ 2.2 ಎಕರೆ ಜಮೀನಿನಲ್ಲಿ ಮಾತ್ರ ಗಣಿಗಾರಿಕೆ ನಡೆಸಬಹುದು ಎಂದು 2011ರಲ್ಲಿ ಅರಣ್ಯ ಇಲಾಖೆಯು ನೋಟಿಸ್ ನೀಡಿತು. ಇದನ್ನು ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸ್ದ್ದಿದಾರೆ.ಈ ರೀತಿ ಮಾಡುವ ಅಧಿಕಾರ ಅರಣ್ಯ ಇಲಾಖೆಗೆ ಇಲ್ಲ ಎನ್ನುವುದು ಅವರ ವಾದವಾಗಿದೆ. `ಕರ್ನಾಟಕ ಅರಣ್ಯ ನಿಯಮ 1969~ರ ಅನ್ವಯ ಮೀಸಲು ಅರಣ್ಯ ಪ್ರದೇಶದ 100 ಮೀಟರ್ ವ್ಯಾಪ್ತಿಯಲ್ಲಿ ಮಾತ್ರ ಗಣಿಗಾರಿಕೆ ನಡೆಸಬಾರದು. ಆದರೆ ತಮಗೆ ಅನುಮತಿ ನೀಡಿರುವುದು ಮೀಸಲು ಅರಣ್ಯ ಪ್ರದೇಶ ಅಲ್ಲ ಎನ್ನುವುದು ಅವರ ವಾದ. ವಿಚಾರಣೆ ಮುಂದೂಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.