ಶನಿವಾರ, ಮೇ 21, 2022
28 °C

ಪ್ರಮುಖರಿಂದ ಪೈಪೋಟಿ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ರಾಜ್ಯ ವೇಟ್‌ಲಿಫ್ಟರ್ಸ್‌ ಸಂಸ್ಥೆಯು (ಕೆಎಸ್‌ಡಬ್ಲ್ಯುಎ) ಮಾರ್ಚ್ 23ರಿಂದ 27ರ ವರೆಗೆ ನಗರದ ಕಂಠೀರವ ಕ್ರೀಡಾಂಗಣದಲ್ಲಿ 63ನೇ ಪುರುಷರ ಹಾಗೂ 26ನೇ ಮಹಿಳೆಯರ ರಾಷ್ಟ್ರೀಯ ಸೀನಿಯರ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್ ಆಯೋಜಿಸಿದೆ.ಹನ್ನೆರಡು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಈ ಚಾಂಪಿಯನ್‌ಷಿಪ್ ನಡೆಯಲಿದೆ ಎಂದು ಕೆಎಸ್‌ಡಬ್ಲ್ಯುಎನ ಅಧ್ಯಕ್ಷ ಪಿ. ದಯಾನಂದ ಪೈ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.‘ದೇಶದ ವಿವಿಧ ರಾಜ್ಯಗಳಿಂದ 136 ಪುರುಷ, 85 ಮಹಿಳಾ ಸ್ಪರ್ಧಿಗಳು, ತಾಂತ್ರಿಕ ಹಾಗೂ ಇತರೆ ಅಧಿಕಾರಿಗಳು ಈ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಒಟ್ಟು 67 ತಂಡಗಳು ಇದರಲ್ಲಿ ಭಾಗವಹಿಸಲಿವೆ.ನವದೆಹಲಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಸ್ಪರ್ಧಿಗಳು ಕೂಡಾ ಇದರಲ್ಲಿ ಭಾಗವಹಿಸಲಿದ್ದಾರೆ’ ಎಂದು ಅವರು ವಿವರಿಸಿದರು.‘ಚಾಂಪಿಯನ್‌ಷಿಪ್‌ನಲ್ಲಿ ಉನ್ನತ ಮಟ್ಟದ ತಾಂತ್ರಿಕ ಸೌಲಭ್ಯಗಳನ್ನು ಬಳಸಿಕೊಳ್ಳಲಾಗುತ್ತಿದೆ. ಎಲೆಕ್ಟ್ರಾನಿಕ್ ಲೈಟಿಂಗ್ ವ್ಯವಸ್ಥೆ, ಅಂತರರಾಷ್ಟ್ರೀಯ ಮಟ್ಟದ ಬಾರ್ಬೆಲ್ ಸೆಟ್ ಮತ್ತು ಪ್ಲಾಟ್‌ಫಾರ್ಮ್ ವ್ಯವಸ್ಥೆ ಮಾಡಲಾಗುವುದು.ಪುರುಷರಿಗಾಗಿ 8 ವಿಭಾಗ ಹಾಗೂ ಮಹಿಳೆಯರಿಗಾಗಿ 7 ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಈ ಚಾಂಪಿಯನ್‌ಷಿಪ್‌ನಲ್ಲಿ  ಉತ್ತಮ ಪ್ರದರ್ಶನ ತೋರಿದ ವೇಟ್‌ಲಿಫ್ಟರ್‌ಗೆ 10,000 ರೂಪಾಯಿ ನಗದು ಬಹುಮಾನವನ್ನು ಮಾಜಿ ವೇಟ್‌ಲಿಫ್ಟರ್ ಹರೀಶ್ ನೀಡಲಿದ್ದಾರೆ ಎಂದು ಅವರು ವಿವರಿಸಿದರು.ಚಾಂಪಿಯನ್‌ಷಿಪ್ಪನ್ನು ಮಾರ್ಚ್ 23ರಂದು ಬೆಳಿಗ್ಗೆ 10ಗಂಟೆಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಸುರೇಶ್ ಕುಮಾರ್ ಉದ್ಘಾಟಿಸಲಿದ್ದಾರೆ. ಎಂ.ಆರ್.ಜಿ. ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಕೆ. ಪ್ರಕಾಶ್ ಶೆಟ್ಟಿ ಗೌರವ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಮಾ. 27ರಂದು ಸಂಜೆ 5.30ಕ್ಕೆ ಜರುಗಲಿದೆ.ಪ್ಲಾಟಿನಂ ಜುಬಿಲಿ ಸಂಭ್ರಮದಲ್ಲಿರುವ ಕರ್ನಾಟಕ ರಾಜ್ಯ ವೇಟ್‌ಲಿಫ್ಟರ್ಸ್‌ ಸಂಸ್ಥೆಯ ಇದೇ 26ರಂದು ಸಂಜೆ 5.30ಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ಸಮಾರಂಭವನ್ನು ಹಮ್ಮಿಕೊಂಡಿದೆ. ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ. ವಿ.ಎಸ್. ಆಚಾರ್ಯ ಅವರು ಕಾರ್ಯಕ್ರಮವನ್ನು  ಉದ್ಘಾಟಿಸಲಿದ್ದಾರೆ.ಇದರ ಸವಿ ನೆನಪಿಗಾಗಿ ವೇಟ್‌ಲಿಫ್ಟಿಂಗ್‌ನಲ್ಲಿ ಸಾಧನೆ ಮಾಡಿದ ರಾಜ್ಯದ 50 ಸಾಧಕರನ್ನು ಸನ್ಮಾನಿಸಲಾಗುವುದು ಎಂದು ದಯಾನಂದ ಪೈ ಹೇಳಿದರು.ಕೆಎಸ್‌ಡಬ್ಲ್ಯುಎನ ಗೌರವ ಕಾರ್ಯದರ್ಶಿ ಡಿ. ಚಂದ್ರಹಾಸ್ ರೈ, ಖಚಾಂಚಿ ಶ್ಯಾಮಲಾ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.