ಭಾನುವಾರ, ಆಗಸ್ಟ್ 25, 2019
27 °C

ಪ್ರಮುಖ ಆರೋಪಿಗಳ ಹೆಸರೆಲ್ಲಾ ಆನಂದ್ !

Published:
Updated:

ರಾಮನಗರ: ರಾಮನಗರ- ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ (ಆರ್‌ಸಿಯುಡಿಎ) 15.90 ಕೋಟಿ ರೂಪಾಯಿ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಳಿಸಿರುವ ಜಿಲ್ಲಾ ಪೊಲೀಸರು, ಈ ಹಣವೂ 10ಕ್ಕೂ ಹೆಚ್ಚು ಜನರ ಬಳಿ ಹರಿದಾಡಿರುವುದನ್ನು ಪತ್ತೆ ಹಚ್ಚಿದ್ದಾರೆ.ಇದರಲ್ಲಿ ಪ್ರಮುಖವಾಗಿ ಆರು ಮಂದಿ ಬಳಿ ದೊಡ್ಡ ಪ್ರಮಾಣದಲ್ಲಿ ಹಣ ಚಲಾವಣೆಯಾಗಿದೆ. ಇವರಲ್ಲಿ ಮೂವರ ಹೆಸರೂ ಆನಂದ್ ಎಂಬುದೇ ಆಗಿದೆ. ಒಬ್ಬ ಕೆ. ಆನಂದ್, ಮತ್ತೊಬ್ಬ ಕೆ.ಜಿ.ಆನಂದ್ ಹಾಗೂ ಇನ್ನೊಬ್ಬ ಜಿ.ಸಿ.ಆನಂದ್ ಎಂಬುವರಾಗಿದ್ದಾರೆ. ಇವರಲ್ಲದೆ ಪ್ರಮುಖ ಪಾತ್ರದಾರಿ ನಾಗಲಿಂಗಸ್ವಾಮಿ ಬಳಿಯೂ ಕೋಟ್ಯಂತರ ರೂಪಾಯಿ ಹಸ್ತಾಂತರವಾಗಿದೆ ಎಂಬುದು ತನಿಖೆಯಿಂದ ಬಹಿರಂಗವಾಗಿದೆ.ಇವರೊಂದಿಗೆ ರಾಮನಗರದ ಪೀಠೋಪಕರಣ ವ್ಯಾಪಾರಿ ಸೈಯದ್ ಹಾಗೂ ಚನ್ನಪಟ್ಟಣದ `ಫ್ಯೂಚರ್ ವೆಲ್' ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ವೆಂಕಟೇಶ್ ಪ್ರಸಾದ್ ಎಂಬಾತ ಕೂಡ ಪ್ರಕರಣದ ಆರೋಪಿಗಳಾಗಿದ್ದಾರೆ. ಇವರ ಬಳಿಯೂ ಹಣಕಾಸು ಹರಿದಾಡಿರುವುದು ತನಿಖೆ ವೇಳೆಯಲ್ಲಿ ದೃಢಪಟ್ಟಿದೆ ಎಂದು ಈ ಪ್ರಕರಣದ ತನಿಖಾಧಿಕಾರಿಯೂ ಆದ ಡಿಎಸ್‌ಪಿ ಎನ್.ಎಂ.ರಾಮಲಿಂಗಪ್ಪ `ಪ್ರಜಾವಾಣಿ'ಗೆ ತಿಳಿಸಿದರು.`ಈ ಪ್ರಕರಣದಲ್ಲಿ ಕೆ.ಜಿ.ಆನಂದ್ ಎಂಬುವರು ಪ್ರಮುಖ ಆರೋಪಿಯಾಗಿದ್ದು ನಾಪತ್ತೆಯಾಗಿದ್ದಾರೆ. ಈ ವ್ಯಕ್ತಿಯ ಬಳಿ ಪ್ರಾಧಿಕಾರದ 9 ಕೋಟಿ ರೂಪಾಯಿ ಹರಿದಾಡಿದೆ. ಕೆ. ಆನಂದ್ ಎಂಬುವರ ಬಳಿ ಎರಡು ಕೋಟಿ ರೂಪಾಯಿ, ನಾಗಲಿಂಗಸ್ವಾಮಿ ಬಳಿ ಎರಡರಿಂದ ಮೂರು ಕೋಟಿ ರೂಪಾಯಿ, ಜಿ.ಸಿ.ಆನಂದ್ ಎಂಬುವರ ಬಳಿ ್ಙ 1 ಕೋಟಿ, ರಾಮನಗರದ ಸೈಯದ್ ಎಂಬುವರ ಬಳಿ 1 ಕೋಟಿ ರೂಪಾಯಿ ವಹಿವಾಟು ನಡೆದಿದೆ. ಅಲ್ಲದೆ ವೆಂಕಟೇಶ್ ಪ್ರಸಾದ್ ಎಂಬಾತ 9 ಲಕ್ಷ ರೂಪಾಯಿಯನ್ನು ಪಡೆದುಕೊಂಡಿರುವುದು ತನಿಖೆ ವೇಳೆಯಲ್ಲಿ ಗೊತ್ತಾಗಿದೆ.ತಲೆ ಮರೆಸಿಕೊಂಡಿರುವ ಕೆ.ಜಿ. ಆನಂದ್, ಜಿ.ಸಿ.ಆನಂದ್, ಸೈಯದ್ ಅವರ ಪತ್ತೆಗೆ ತೀವ್ರ ಜಾಲ ಬೀಸಲಾಗಿದೆ ಎಂದು ಅವರು ಹೇಳಿದರು.ಪ್ರಾಧಿಕಾರದ ನಾಲ್ಕೈದು ವರ್ಷಗಳ ವ್ಯವಹಾರವನ್ನು ಸಮಗ್ರವಾಗಿ ಮರು ಲೆಕ್ಕ ಪರಿಶೋಧನೆಗೆ ಒಳಪಡಿಸಲಾಗಿದ್ದು, ಅಧಿಕಾರಿಗಳು ಪರಿಶೋಧನೆ ನಡೆಸುತ್ತಿದ್ದಾರೆ. ಇದರಿಂದ ಇನ್ನಷ್ಟು ಮಾಹಿತಿ ಲಭ್ಯವಾಗುವ ಸಾಧ್ಯತೆ ಇದೆ.ಆಯುಕ್ತ ಚಿದಾನಂದ ಅವರು ಪ್ರಾಧಿಕಾರವೇ ಅಲ್ಲದೆ ರಾಮನಗರ ಮತ್ತು ಚನ್ನಪಟ್ಟಣದ ನಗರಸಭೆಗಳಲ್ಲಿ ಕೆಲ ಕಾಲ ಪ್ರಭಾರಿ ಆಯುಕ್ತರಾಗಿಯೂ ಕೆಲಸ ನಿರ್ವಹಿಸಿದ್ದರು.ಈ ಕಾರಣದಿಂದ ರಾಮನಗರ ಮತ್ತು ಚನ್ನಪಟ್ಟಣ ನಗರಸಭೆಯಲ್ಲಿ ಇವರ ಅವಧಿಯಲ್ಲಿ ನಡೆದಿರಬಹುದಾದ ವ್ಯವಹಾರ, ವಹಿವಾಟು, ನಿರ್ಧಾರಗಳ ಬಗ್ಗೆಯೂ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವರನ್ನು ವಿಚಾರಣೆಗೆ ಒಳಪಡಿಸಿದ್ದು, ಬಹುತೇಕರು ತಮಗೆ ಗೊತ್ತಿಲ್ಲದೆ ಹಣಕಾಸಿನ ವ್ಯವಹಾರ ನಡೆದಿದೆ. ನಾಗಲಿಂಗಸ್ವಾಮಿ ಮತ್ತು ಕೆ. ಆನಂದ್ ಅವರ ಮೋಸದ ಜಾಲಕ್ಕೆ ನಾವೂ ಬಿದ್ದಿದ್ದೇವೆ.ಅವರು ಪ್ರಾಧಿಕಾರದ ಹಣ ಪಡೆಯಲು ನಮ್ಮನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ನಮ್ಮ ಖಾತೆಗಳಿಗೆ ಕೋಟ್ಯಂತರ ರೂಪಾಯಿ ಹಾಕಿ, ಅದನ್ನು ನಮ್ಮಿಂದ ನಗದು ಮಾಡಿಸಿಕೊಂಡು ಹಣ ಪಡೆದಿದ್ದಾರೆ. ಇದಕ್ಕೆ ನಮಗೆ ಕಮಿಷನ್ ಕೂಡ ಕೊಟ್ಟಿದ್ದಾರೆ. ಆದರೆ ನಮಗೆ ಈ ಹಣ ಪ್ರಾಧಿಕಾರದ್ದು ಎಂಬುದು ಗೊತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

Post Comments (+)