ಪ್ರಮುಖ ಆರೋಪಿ ರಕ್ಷಣೆಗೆ ಯತ್ನ: ಆರೋಪ

ಗುರುವಾರ , ಜೂಲೈ 18, 2019
24 °C

ಪ್ರಮುಖ ಆರೋಪಿ ರಕ್ಷಣೆಗೆ ಯತ್ನ: ಆರೋಪ

Published:
Updated:

ಯಾದಗಿರಿ: ತಾಲ್ಲೂಕಿನ ಬಾಡಿಯಾಲ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಖಾತರಿ ಯೋಜನೆಯ ಸುಮಾರು ರೂ.8.15 ಲಕ್ಷ ಅನ್ನು, ನಕಲಿ ಸಹಿ ಮಾಡಿ ದುರುಪಯೋಗ ಮಾಡಿಕೊಳ್ಳಲಾಗಿದ್ದು, ಪ್ರಮುಖ ಆರೋಪಿಯನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ ಎಂದು ಬಿಜೆಪಿ ಮುಖಂಡ ವೆಂಕಟರೆಡ್ಡಿ ಮುದ್ನಾಳ ಆರೋಪಿಸಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಖಾತರಿಗೆ ಸಂಬಂಧಿಸಿದ ಸುಮಾರು ರೂ.10 ಲಕ್ಷ ಹಣದಲ್ಲಿ ರೂ.8.15 ಲಕ್ಷ ಅನ್ನು ಎರಡು ಚೆಕ್‌ಗಳ ಮೂಲಕ ಎತ್ತಿ ಹಾಕಲಾಗಿದೆ. ಪಿಡಿಓ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರ ನಕಲಿ ಸಹಿ ಮಾಡಿ, ಹಣವನ್ನು ಪಡೆದುಕೊಳ್ಳಲಾಗಿದೆ ಎಂದು ಹೇಳಿದರು.ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯ ಹೆಸರನ್ನು ಕೈಬಿಟ್ಟು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಕಾರ್ಯದರ್ಶಿಯ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯು ಗುರುಮಠಕಲ್ ಕ್ಷೇತ್ರ ಶಾಸಕರ ಸಂಬಂಧಿಯಾಗಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ರಕ್ಷಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ದೂರಿದರು.ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯು ಸಿಬ್ಬಂದಿಯ ವೇತನ ಪಾವತಿಗೆ ಹಣ ತೆಗೆಯಲು ನಗರದ ಕೃಷ್ಣಾ ಗ್ರಾಮೀಣ ಬ್ಯಾಂಕಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಖಾತೆಯನ್ನು ಪರಿಶೀಲಿಸಿದಾಗ ಎರಡು ಚೆಕ್‌ಗಳ ಮೂಲಕ ರೂ.8,15,218 ಅನ್ನು ಅಧ್ಯಕ್ಷರು ಹಾಗೂ ಪಿಡಿಓ ನಕಲಿ ಸಹಿ ಮಾಡಿ ಪಡೆದುಕೊಂಡಿರುವುದು ತಿಳಿದುಬಂದಿದೆ.ಈ ಚೆಕ್‌ಗಳನ್ನು ವೀರೇಶ ಶರಣಪ್ಪ ಎಂಬುವವರ ಹೆಸರಿಗೆ ಬರೆದು ಹಣವನ್ನು ಪಡೆಯಲಾಗಿದೆ. ಈ ಬಗ್ಗೆ ಪಿಡಿಓ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸೈದಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ವಿವರಿಸಿದರು.ಪ್ರಕರಣದ ಕುರಿತು ದೂರು ದಾಖಲಿಸುವ ಸಂದರ್ಭದಲ್ಲಿ ಪೊಲೀಸ್ ಠಾಣೆಯಲ್ಲಿಯೇ ಪ್ರಮುಖ ಆರೋಪಿಯು ಅವ್ಯವಹಾರ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೇ ಪಡೆದಿರುವ ಹಣವನ್ನು ಮರಳಿಸುವುದಾಗಿ ತಿಳಿಸಿದ್ದಾನೆ. ಪೊಲೀಸರ ಎದುರೇ ತಪ್ಪನ್ನು ಒಪ್ಪಿಕೊಂಡಿದ್ದರೂ, ಆರೋಪಿಯ ಮೇಲೆ ಪ್ರಕರಣ ದಾಖಲಿಸಲಾಗಿಲ್ಲ. ಶಾಸಕರ ಹತ್ತಿರದ ಸಂಬಂಧಿ ಎನ್ನುವ ಏಕೈಕ ಕಾರಣಕ್ಕೆ ಈ ರೀತಿ ಮಾಡಲಾಗುತ್ತಿದೆ ಎಂದು ಆಪಾದಿಸಿದರು.ಸೈದಾಪುರ ಠಾಣೆಯ ಇನ್ಸ್‌ಪೆಕ್ಟರ್ ರವೀಂದ್ರನಾಥ ಕಾರ್ಯವೈಖರಿಯೂ ಸಂಶಯಕ್ಕೆ ಎಡೆ ಮಾಡಿಕೊಡುತ್ತಿದೆ. ಅಮಾನತ್ತು ಆದೇಶ ತೆರವುಗೊಂಡ ನಂತರ, ಮತ್ತೆ ಸೇವೆಗೆ ಹಾಜರಾಗಿದ್ದ ರವೀಂದ್ರನಾಥ, ದೀಘ ಕಾಲದ ರಜೆ ಮೇಲೆ ತೆರಳಿದ್ದರು. ಆದರೆ ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರುತ್ತಿದ್ದಂತೆಯೇ ರವೀಂದ್ರನಾಥರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.ಪ್ರಕರಣದ ಎಲ್ಲ ವಿಚಾರಣೆಯನ್ನು ಸರ್ಕಲ್ ಇನ್ಸ್‌ಪೆಕ್ಟರ್ ಅವರೇ ಮಾಡಿದ್ದು, ಪ್ರಕರಣ ದಾಖಲಿಸುವಾಗ ಮಾತ್ರ ರವೀಂದ್ರನಾಥರು ಹಾಜರಾಗಿದ್ದು ಸಂಶಯಕ್ಕೆ ಕಾರಣವಾಗಿದೆ. ರವೀಂದ್ರನಾಥರ ಸಹಾಯದಿಂದಲೇ ಪ್ರಮುಖ ಆರೋಪಿಯ ಹೆಸರನ್ನು ಪ್ರಕರಣದಲ್ಲಿ ಕೈಬಿಡಲಾಗಿದೆ ಎಂದು ದೂರಿದರು.ಗುರುಮಠಕಲ್ ಕ್ಷೇತ್ರದ ಕೆರೆಗಳ ಹೂಳೆತ್ತುವ ಕಾಮಗಾರಿಯಲ್ಲಿ ಈಗಾಗಲೇ ಕೋಟ್ಯಂತರ ಹಣವನ್ನು ನುಂಗಿ ಹಾಕಲಾಗಿದೆ. ಈ ಬಗ್ಗೆ 13 ಅಧಿಕಾರಿಗಳ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ಜಿಲ್ಲಾ ಪಂಚಾಯಿತಿ ಸಿಇಓ ಸಲ್ಲಿಸಿದ್ದಾರೆ. ಶನಿವಾರ ಜಿಲ್ಲೆಗೆ ಆಗಮಿಸುತ್ತಿರುವ ಸಚಿವ ಜಗದೀಶ ಶೆಟ್ಟರಿಗೆ ಈ ಬಗ್ಗೆ ದೂರು ನೀಡಲಾಗುವುದು ಎಂದು ತಿಳಿಸಿದರು.ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಖಂಡಪ್ಪ ದಾಸನ್, ಗುರುಮಠಕಲ್ ಕ್ಷೇತ್ರ ಘಟಕದ ಪ್ರಧಾನ ಕಾರ್ಯದರ್ಶಿ ಶರಣಗೌಡ ಬಾಡಿಯಾಲ, ಎಪಿಎಂಸಿ ಸದಸ್ಯ ಭೀಮನಗೌಡ ಕ್ಯಾತನಾಳ ಮುಂತಾದವರು ಹಾಜರಿದ್ದರು.ಸೂಕ್ತ ಕ್ರಮಕ್ಕೆ ಜೆಡಿಎಸ್ ಆಗ್ರಹ

ಯಾದಗಿರಿ:
ತಾಲ್ಲೂಕಿನ ಬಾಡಿಯಾಲ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಖಾತರಿ ಯೋಜನೆಗೆ ಸಂಬಂಧಿಸಿದ ಹಣವನ್ನು ಪಡೆಯುವ ಮೂಲಕ ಶಾಸಕರ ಸಂಬಂಧಿ, ಅವ್ಯವಹಾರ ಮಾಡಿದ್ದು, ಕೂಡಲೇ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜೆಡಿಎಸ್ ಯುವ ಮುಖಂಡ ಶರಣಗೌಡ ಕಂದಕೂರ ಆಗ್ರಹಿಸಿದ್ದಾರೆ.ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಅವರು, ಎರಡು ಚೆಕ್‌ಗಳ ಮೂಲಕ ಒಟ್ಟು ರೂ. 8.15 ಲಕ್ಷ ನಗದು ಮಾಡಿಕೊಳ್ಳಲಾಗಿದೆ. ಚೆಕ್ ನಗದು ಮಾಡಿಕೊಳ್ಳಲು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಪರವಾನಿಗೆ ಪತ್ರ ಪಡೆಯಲಾಗಿದೆ.ಇದರಿಂದಾಗಿ ಅಧಿಕಾರಿಗಳು ಈ ಅವ್ಯವಹಾರದಲ್ಲಿ ಭಾಗಿಯಾಗಿದ್ದು, ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry