ಪ್ರಯತ್ನ ಮುಂದುವರಿಯಲಿ

ಬುಧವಾರ, ಜೂಲೈ 24, 2019
27 °C

ಪ್ರಯತ್ನ ಮುಂದುವರಿಯಲಿ

Published:
Updated:

ಮುಂಬೈ ಮೇಲಿನ 2008ರ ಭಯೋತ್ಪಾದಕರ ದಾಳಿ ಪ್ರಕರಣದ ಸಂಚುಗಾರ ಎನ್ನಲಾಗಿದ್ದ ತಹಾವುರ್ ರಾಣಾನನ್ನು ಅಮೆರಿಕದ ಷಿಕಾಗೋ ನ್ಯಾಯಾಲಯ ಆರೋಪಮುಕ್ತಗೊಳಿಸಿರುವುದು ನಿಜಕ್ಕೂ ಆಘಾತಕಾರಿ ಮತ್ತು ನಿರಾಶೆ ಹುಟ್ಟಿಸುವ ಬೆಳವಣಿಗೆ.

 

ಮುಂಬೈ ದಾಳಿಕೋರರಿಗೆ ನೆರವಾಗಿದ್ದಾನೆ ಎಂಬುದಕ್ಕೆ ಸರಿಯಾದ ಸಾಕ್ಷ್ಯಾಧಾರಗಳಿಲ್ಲ ಎಂದು 12 ಮಂದಿ ಸದಸ್ಯರಿದ್ದ ನ್ಯಾಯಾಲಯ ಬಹುಮತದ ತೀರ್ಪು ನೀಡಿರುವುದು ಸಹಜವಾಗಿಯೇ ಭಾರತದಲ್ಲಿ ಅಚ್ಚರಿ ಮೂಡಿಸಿದೆ.ಆದರೆ ಡೆನ್ಮಾರ್ಕಿನ ಪತ್ರಿಕೆಯೊಂದರ ಮೇಲೆ ದಾಳಿಯ ಯತ್ನದಲ್ಲಿ ಭಯೋತ್ಪಾದಕ ಸಂಘಟನೆ ಲಷ್ಕರ್- ಎ- ತೊಯ್ಬಾಗೆ ನೆರವಾದ ಆರೋಪವನ್ನು ಎತ್ತಿ ಹಿಡಿದಿರುವ ನ್ಯಾಯಾಲಯ ಅವನನ್ನು ತಪ್ಪಿತಸ್ಥ ಎಂದು ಘೋಷಿಸಿರುವುದು ಸಮಾಧಾನಪಟ್ಟುಕೊಳ್ಳಬೇಕಾದ ವಿಚಾರ.ಷಿಕಾಗೋ ನ್ಯಾಯಾಲಯದಲ್ಲಿ ಮಹತ್ವದ ತೀರ್ಪು ಬರುತ್ತದೆ ಎಂದು ನಿರೀಕ್ಷಿಸಿದ್ದೆೀ ಭಾರತದ ತಪ್ಪು. ಅಮೆರಿಕದ ಗೂಢಚಾರ ಸಂಸ್ಥೆ ಎಫ್‌ಬಿಐ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಅಸಕ್ತಿ ವಹಿಸಿ ಸಾಕ್ಷ್ಯಾಧಾರ ಸಂಗ್ರಹಿಸಲಿಲ್ಲ ಎನ್ನುವುದು ಈಗಾಗಲೇ ಗೊತ್ತಾಗಿರುವ ವಿಚಾರ.ಜೊತೆಗೆ ಪಾಕಿಸ್ತಾನದ ಭಯೋತ್ಪಾದಕರ ಬಗೆಗಿನ ಅಮೆರಿಕದ ನಿಲುವನ್ನು ಗಮನಿಸಿದರೆ ಈ ಬೆಳವಣಿಗೆ ಆಶ್ಚರ್ಯ ಹುಟ್ಟಿಸುವುದಿಲ್ಲ. ಒಸಾಮ ಹತ್ಯೆ ಪ್ರಕರಣದಲ್ಲಿ ಪಾಕಿಸ್ತಾನದ ನೈತಿಕ ಸ್ಥೈರ್ಯ ಉಡುಗಿಸುವಂತೆ ಅಮೆರಿಕ ವರ್ತಿಸಿತ್ತು.ಅದರಿಂದ  ಪಾಕಿಸ್ತಾನದಲ್ಲಿ ಉಂಟಾಗಿದ್ದ ಅಸಮಾಧಾನವನ್ನು ಉಪಶಮನಗೊಳಿಸುವ ತಂತ್ರವಾಗಿ ರಾಣಾ ಪ್ರಕರಣದಲ್ಲಿ ಐಎಸ್‌ಐ ಪಾತ್ರವನ್ನು ನಿರ್ಲಕ್ಷಿಸಿದಂತೆ ತೋರುತ್ತದೆ. ಅಮೆರಿಕಕ್ಕೆ ಸ್ವಹಿತಾಸಕ್ತಿ ಕಡೆಗೇ ಹೆಚ್ಚು ಗಮನ, ಭಾರತದ ಹಿತಾಸಕ್ತಿ ಬಗೆಗಲ್ಲ.ಭಾರತ ಇಂಥ ಸ್ಥಿತಿಯನ್ನು ಸಮರ್ಥವಾಗಿ ಎದುರಿಸಲೇ ಬೇಕಾಗಿದೆ. ರಾಣಾನನ್ನು ಖುಲಾಸೆ ಮಾಡಿದ್ದರೂ ಈ ಪ್ರಕರಣದ ವಿಚಾರಣೆ ಸಮಯದಲ್ಲಿ ಲಭ್ಯವಾಗಿರುವ ಕೆಲವು ಮಹತ್ವದ ಮಾಹಿತಿಗಳನ್ನು ಭಾರತ ಬಳಸಿಕೊಂಡು ಮುಂದುವರಿಯಬೇಕಿದೆ.ಭಯೋತ್ಪಾದನೆ ಕೃತ್ಯಗಳನ್ನು ನಡೆಸಲು ಬೇಕಾದ ನೆರವನ್ನು ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಪಾಕಿಸ್ತಾನದ ಗೂಢಚಾರ ಸಂಸ್ಥೆ ಐಎಸ್‌ಐ ನೀಡುತ್ತಿರುವ ಬಗ್ಗೆ ರಾಣಾ ಖಚಿತ ಮಾಹಿತಿಯನ್ನು ವಿಚಾರಣೆ ವೇಳೆ ನೀಡಿದ್ದಾನೆ.ಮುಂಬೈ ಮೇಲೆ ದಾಳಿ ನಡೆಸಿದ ಭಯೋತ್ಪಾದಕರಿಗೆ ಶಸ್ತ್ರಾಸ್ತ್ರಗಳನ್ನು ಕೊಟ್ಟಿದ್ದೆೀ ಐಎಸ್‌ಐ ಎಂದು ರಾಣಾ ತಿಳಿಸಿದ್ದಾನೆ.

 

ಭಾರತದಲ್ಲಿ ನಡೆದ ಭಯೋತ್ಪಾದನಾ ಘಟನೆಗಳ ಹಿಂದೆ ಐಎಸ್‌ಐ ಕೈವಾಡವಿದೆ ಎಂದು ಭಾರತ ಮೊದಲಿನಿಂದಲೂ ಹೇಳುತ್ತಲೇ ಇದೆ. ಇದನ್ನು ಪುಷ್ಟೀಕರಿಸುವಂಥ ಸಾಕ್ಷ್ಯಗಳನ್ನು ರಾಣಾ ಒದಗಿಸಿದ್ದಾನೆ.ಇನ್ನೂ ಹಲವು ಪ್ರಕರಣಗಳಲ್ಲಿ ಐಎಸ್‌ಐ ಭಾಗಿಯಾಗಿರುವ ಬಗ್ಗೆ ಅಮೆರಿಕವೂ ಪಾಕಿಸ್ತಾನಕ್ಕೆ ಮಾಹಿತಿ ನೀಡಿದೆ. ಪಾಕಿಸ್ತಾನದ ವಿರುದ್ಧ ಅಮೆರಿಕ ಕ್ರಮ ತೆಗೆದುಕೊಳ್ಳುತ್ತದೆ ಎಂದು ಭಾರತ ಕಾಯುತ್ತ ಕೂರಬಾರದು.ಈ ವಿಚಾರದಲ್ಲಿ ಭಾರತ ಅಂತರರಾಷ್ಟ್ರೀಯವಾಗಿ ಅಭಿಪ್ರಾಯ ಮೂಡಿಸಲು ಕಾರ್ಯತಂತ್ರ ರೂಪಿಸಬೇಕು. ಭಯೋತ್ಪಾದನೆಗೆ ನೆರವು ನೀಡುತ್ತಿರುವ ಐಎಸ್‌ಐ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನಕ್ಕೆ ಒತ್ತಾಯಿಸುವ ನಿರ್ಣಯವೊಂದನ್ನು ವಿಶ್ವಸಂಸ್ಥೆ ಅಂಗೀಕರಿಸುವಂತೆ ಮಾಡುವತ್ತ ಭಾರತ ಕಾರ್ಯತತ್ಪರವಾಗಬೇಕು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry