ಸೋಮವಾರ, ಜನವರಿ 27, 2020
25 °C
ಸಿ.ಎಂ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಗಗನಸಖಿ ಜತೆ ಅಸಭ್ಯ ವರ್ತನೆ

ಪ್ರಯಾಣಿಕನ ಕೆಳಗಿಳಿಸಿದ ಸಿಬ್ಬಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ಸ್ಪೈಸ್‌ಜೆಟ್‌ ವಿಮಾನದಲ್ಲಿ ಕುಡಿದು ಗಗನಸಖಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯನ್ನು ವಿಮಾನದ ಸಿಬ್ಬಂದಿ ಕೆಳಗೆ ಇಳಿಸಿ, ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳವಾರ ರಾತ್ರಿ ಇಲ್ಲಿನ ವಿಮಾನ ನಿಲ್ದಾಣದಲ್ಲಿ ನಡೆಯಿತು.ರಾತ್ರಿ 8.40ಕ್ಕೆ ಹುಬ್ಬಳ್ಳಿಗೆ ಬಂದ ವಿಮಾನ 9.15ಕ್ಕೆ ಬೆಂಗಳೂರಿಗೆ ಮರು ಪ್ರಯಾಣ ಆರಂಭಿಸಿತ್ತು. ವಿಜಾಪುರ ಜಿಲ್ಲೆಯ ಪ್ರವಾಸ ಕೈಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ರಸ್ತೆ ಮಾರ್ಗದಲ್ಲಿ ಹುಬ್ಬಳ್ಳಿಗೆ ಬಂದು ಅದೇ ವಿಮಾನದಲ್ಲಿ ಬೆಂಗಳೂರಿಗೆ ಹೊರಟಿದ್ದರು.ವಿಮಾನ ಟೇಕಾಫ್ ಆಗುವ ವೇಳೆ ಮೊಬೈಲ್ ಸ್ವಿಚ್‌ ಆಫ್ ಮಾಡುವಂತೆ ಗಗನಸಖಿ ಮನವಿ ಮಾಡಿಕೊಂಡಾಗ ಸಿಟ್ಟಿಗೆದ್ದ ಚೆನ್ನೈ ಮೂಲದ ಉದ್ಯಮಿಯೊಬ್ಬರುದಾಂದಲೆ ನಡೆಸಿ, ವಿಮಾನದ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ದಾಂದಲೆ ನಿಯಂತ್ರಿಸಲು ಸಾಧ್ಯವಾಗದೆ ಸಿಬ್ಬಂದಿ ಕೊನೆಗೆ ವಿಮಾನದಿಂದ ಕೆಳಗಿಳಿಸಿ ಸ್ಥಳೀಯ ಪೊಲೀಸರ ವಶಕ್ಕೆ ನೀಡಿದ್ದಾರೆ. ಇದರಿಂದ ವಿಮಾನ 30 ನಿಮಿಷ ತಡವಾಗಿ 9.45ಕ್ಕೆ ಟೇಕಾಫ್ ಆಗಿದೆ ಎಂದು ತಿಳಿದುಬಂದಿದೆ.‘ಅದೇ ವಿಮಾನದಲ್ಲಿ ಮುಖ್ಯಮಂತ್ರಿ ಪ್ರಯಾಣಿಸುತ್ತಿದ್ದ ಹಿನ್ನೆಲೆಯಲ್ಲಿ ಸ್ಪೈಸ್ ಜೆಟ್‌ ಸಿಬ್ಬಂದಿ ವಶಕ್ಕೆ ನೀಡಿದ ವ್ಯಕ್ತಿಯನ್ನು ತೀವ್ರವಾಗಿ ವಿಚಾರಣೆಗೊಳಪಡಿಸಲಾಯಿತು’ ಎಂದು ಅಪರಾಧ ವಿಭಾಗದ ಡಿಸಿಪಿ ಶ್ರೀನಾಥ ಜೋಶಿ ‘ಪ್ರಜಾವಾಣಿ’ಗೆ ತಿಳಿಸಿದರು.‘ವಿಚಾರಣೆಯ ವೇಳೆ ಆತ ಚೆನ್ನೈನ ಉದ್ಯಮಿ ಎಂಬುದು ಗೊತ್ತಾಯಿತು. ಕೆಲಸದ ನಿಮಿತ್ತ ಹುಬ್ಬಳ್ಳಿಗೆ ಬಂದು ವಾಪಸ್ ಬೆಂಗಳೂರಿಗೆ ಹೊರಟಿದ್ದರು’ ಎಂದರು. ‘ಮಿತಿಮೀರಿ ಕುಡಿದಿದ್ದರಿಂದ ಹಾಗೆ ವರ್ತಿಸಿದ್ದಾಗಿ ಹೇಳಿ ಕ್ಷಮಾಪಣಾ ಪತ್ರ ಬರೆದುಕೊಟ್ಟ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳದೇ  ಕಳುಹಿಸಲಾಯಿತು’ ಎಂದು ಜೋಶಿ ಹೇಳಿದರು.

ಪ್ರತಿಕ್ರಿಯಿಸಿ (+)