ಭಾನುವಾರ, ಜುಲೈ 25, 2021
28 °C

ಪ್ರಯಾಣಿಕರ ಬವಣೆ ತಪ್ಪಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಂದು ವಾರದಿಂದ ಮುಂದುವರಿದಿರುವ ಏರ್ ಇಂಡಿಯಾ ಪೈಲಟ್‌ಗಳ ಮುಷ್ಕರ ಇತ್ಯರ್ಥ ಕಾಣುವ ಸೂಚನೆ ಕಾಣುತ್ತಿಲ್ಲ. ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟಿರುವ ಪೈಲಟ್‌ಗಳನ್ನು ಸೇವಾ ನಿಯಮಗಳ ಮೂಲಕ ಶಿಸ್ತಿಗೆ ಒಳಪಡಿಸುವ ಆಡಳಿತ ಮಂಡಲಿಯ  ಪ್ರಯತ್ನಕ್ಕೂ ಯಶಸ್ಸು ಸಿಕ್ಕಿಲ್ಲ.

 

ಏರ್ ಇಂಡಿಯಾ ಆಡಳಿತ ಮಂಡಲಿ, ಬೇಡಿಕೆಗಳನ್ನು ಪರಿಶೀಲಿಸುವುದಕ್ಕಿಂತ ಪೈಲಟ್‌ಗಳನ್ನು ಶಿಸ್ತುಕ್ತಮಕ್ಕೆ ಒಳಪಡಿಸುವುದಕ್ಕೆ ಹೆಚ್ಚು ಆಸಕ್ತಿ ವಹಿಸುತ್ತಿರುವಂತೆ ತೋರುತ್ತಿದೆ. ಮುಷ್ಕರ ನಿಲ್ಲಿಸುವಂತೆ ಹೈ ಕೋರ್ಟ್ ನೀಡಿದ ಆದೇಶವಾಗಲೀ, ಸೇವೆಯಿಂದ ವಜಾ ಮಾಡುವ ಎಚ್ಚರಿಕೆಯಾಗಲೀ, ವೇತನ ತಡೆ ಹಿಡಿಯುವ ಕ್ರಮವಾಗಲೀ ಪೈಲಟ್‌ಗಳನ್ನು ಧೃತಿಗೆಡಿಸಿಲ್ಲ. ಬದಲಾಗಿ ಅವರಲ್ಲಿ ಇನ್ನಷ್ಟು ಹೋರಾಟದ ಕೆಚ್ಚನ್ನು ಹೆಚ್ಚಿಸಿದೆ. ಈ ಬಗ್ಗೆ ವಿಚಾರಣೆ ನಡೆಸುತ್ತಿರುವ ದೆಹಲಿ ಹೈಕೋರ್ಟ್, ಏರ್ ಇಂಡಿಯಾ ಆಡಳಿತ ಮಂಡಲಿ ಮತ್ತು ಪೈಲಟ್‌ಗಳ ಸಂಘಟನೆ ಪ್ರದರ್ಶಿಸುತ್ತಿರುವ ಹಠಮಾರಿ ಧೋರಣೆಗೆ ಬೇಸತ್ತು ತಾನೇ ಮಧ್ಯಸ್ಥಿಕೆದಾರರೊಬ್ಬರನ್ನು ನೇಮಿಸಿದೆ.

 

ಏರ್ ಇಂಡಿಯಾ ಶೇ 90ರಷ್ಟು ವಿಮಾನಗಳ ಹಾರಾಟ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಖಾಸಗಿ ವಿಮಾನ ಯಾನ ಸಂಸ್ಥೆಗಳು ಲಾಭಬಡುಕತನ ಪ್ರದರ್ಶಿಸಿ ದರ ಹೆಚ್ಚಿಸುವ ಮೂಲಕ ಪ್ರಯಾಣಿಕರನ್ನು ಸುಲಿಯಲು ಆರಂಭಿಸಿವೆ. ಪರಿಸ್ಥಿತಿಯ ದುರ್ಲಾಭ  ಪಡೆಯದಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ  ಖಾಸಗಿ ಸಂಸ್ಥೆಗಳಿಗೆ ಮನವಿ ಮಾಡುವ ವೇಳೆಗೆ ಸುಲಿಗೆ ಆರಂಭವಾಗಿ ಹೋಗಿರುವುದು ವಿಪರ್ಯಾಸದ ಸಂಗತಿ.ನಾಲ್ಕು ವರ್ಷಗಳ ಹಿಂದೆ ಇಂಡಿಯನ್ ಏರ್‌ಲೈನ್ಸ್ ಮತ್ತು ಏರ್ ಇಂಡಿಯಾ ಸಂಸ್ಥೆಗಳನ್ನು ವಿಲೀನಗೊಳಿಸಿದ ನಂತರ ಪೈಲಟ್‌ಗಳ ವೇತನಗಳಲ್ಲಿ ಸಮಾನತೆ ತರಬೇಕೆಂಬ ಬೇಡಿಕೆಗೆ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳದಿರುವುದು ಈ ಬಿಕ್ಕಟ್ಟಿಗೆ ಕಾರಣ. ಸೇವಾ ನಿಯಮಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಇತ್ಯರ್ಥಪಡಿಸುವುದಕ್ಕೆ ಆಡಳಿತ ಮಂಡಲಿ ಸಮರ್ಥವಾಗಿದ್ದರೂ ನಾಲ್ಕು ವರ್ಷಗಳಿಂದಲೂ ಈ ಬಗ್ಗೆ ಗಮನ ಹರಿಸದಿರುವುದು ಆಡಳಿತ ವಿಳಂಬ ನೀತಿಯ ಧೋರಣೆ. ಏರ್ ಇಂಡಿಯಾ ಆಡಳಿತ ಮಂಡಲಿ ಮತ್ತು ಪೈಲಟ್‌ಗಳ ಸಂಘಟನೆಗಳ ಮಧ್ಯೆ ಏರ್ಪಟ್ಟ ಸಮಸ್ಯೆಗಳನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಇತ್ಯರ್ಥಪಡಿಸಲು ಮುಂದಾಗಿಲ್ಲ. ಹಾಗೆ ನೋಡಿದರೆ ಡಿಜಿಸಿಎ ವಿರುದ್ಧವೂ ಗುರುತರವಾದ ಭ್ರಷ್ಟಾಚಾರ ಆರೋಪಗಳಿವೆ. ಪೈಲಟ್‌ಗಳ ನಕಲಿ ಲೈಸನ್ಸ್ ಹಗರಣವೂ ಇದರಲ್ಲಿ ಸೇರಿದೆ. ಈ ವ್ಯವಹಾರಗಳ ಕುರಿತಾಗಿ ಸಿಬಿಐ ತನಿಖೆ ನಡೆಯಬೇಕು ಎಂಬ ಬೇಡಿಕೆಯೂ ಇದೆ.ಇವೆಲ್ಲವನ್ನೂ ಗಮನಿಸಿದರೆ ಕೇಂದ್ರ ಸರ್ಕಾರಕ್ಕೆ ವಿಮಾನಯಾನ ಸೇವೆಯನ್ನು ಸಮರ್ಪಕವಾಗಿ ನಡೆಸುವುದಕ್ಕೆ ಈಗ ಸಾಧ್ಯವಾಗುತ್ತಿಲ್ಲವೆಂಬ ಅಂಶ ದೃಢವಾಗುತ್ತಿದೆ. ದೇಶದಲ್ಲಿ ಅವಶ್ಯಕ ವಿಮಾನನಿಲ್ದಾಣಗಳನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ.ವಿಮಾನಸೇವೆಯನ್ನು ಒದಗಿಸಲು ಖಾಸಗಿ ಸಂಸ್ಥೆಗಳೂ ಇವೆ. ವಿಮಾನಯಾನ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಲಾಗದಿದ್ದರೆ ಅದನ್ನು ಖಾಸಗಿ ಸಂಸ್ಥೆಗಳಿಗೆ ಬಿಟ್ಟು ಕೊಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು. ಅಧಿಕಾರಿಗಳು ಮತ್ತು ಪೈಲಟ್‌ಗಳ ಪ್ರತಿಷ್ಠೆಗಾಗಿ ಸಾರ್ವಜನಿಕರು ಬವಣೆ ಪಡುವಂತಾಗಬಾರದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.