ಪ್ರಯಾಣಿಕ ಸ್ನೇಹಿ ರೈಲು

7

ಪ್ರಯಾಣಿಕ ಸ್ನೇಹಿ ರೈಲು

Published:
Updated:

ನವದೆಹಲಿ: ನಿರೀಕ್ಷೆಯ ಹಳಿ ಮೇಲೇ ಸಾಗಿರುವ ಸಚಿವೆ ಮಮತಾ ಬ್ಯಾನರ್ಜಿ ಅವರ ಪ್ರಸ್ತಕ ಸಾಲಿನ ರೈಲ್ವೆ ಬಜೆಟ್, ಸತತ ಮೂರನೇ ವರ್ಷವೂ ಪ್ರಯಾಣ ಮತ್ತು ಸರಕು ಸಾಗಣೆ ದರವನ್ನು ಏರಿಸುವ ಗೋಜಿಗೆ ಹೋಗದೆ ಜನಸಾಮಾನ್ಯರು- ಕೈಗಾರಿಕೋದ್ಯಮಿಗಳ ಮೊಗದಲ್ಲಿ ನಗೆ ಅರಳಿಸಿದೆ.ಇದರ ಜೊತೆಗೆ ‘ದೀದಿ’ಯ ಜನಪ್ರಿಯ ಬಜೆಟ್ ಹಲವು ರಾಜ್ಯಗಳಿಗೆ ಸಿಹಿಯನ್ನೇ ಉಣಬಡಿಸಿದೆ. ಆದರೂ, ಇನ್ನು ಮೂರು ತಿಂಗಳಿಗೆ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಎದುರಿಸಲಿರುವ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ, ತವರು ರಾಜ್ಯಕ್ಕೆ ಸಾಕಷ್ಟು ಕೊಡುಗೆಗಳನ್ನು ಘೋಷಿಸಿಕೊಳ್ಳುವ ಮೂಲಕ ‘ಸ್ವಜನಹಿತ’ ಮೆರೆದಿದ್ದಾರೆ.ದೇಶದಾದ್ಯಂತ 106 ಹೊಸ ರೈಲುಗಳನ್ನು ಓಡಿಸುವ ಪ್ರಸ್ತಾವವನ್ನು 2011- 12ನೇ ಸಾಲಿನ ಬಜೆಟ್ ಒಳಗೊಂಡಿದೆ. ಇವುಗಳಲ್ಲಿ 56 ಎಕ್ಸ್‌ಪ್ರೆಸ್‌ಗಳು, 13 ಪ್ರಯಾಣ ರೈಲುಗಳು, 9 ತುರಂತ್ ಎಕ್ಸ್‌ಪ್ರೆಸ್‌ಗಳು, ಮೂರು ಶತಾಬ್ದಿಗಳು, ಎರಡು ಹವಾನಿಯಂತ್ರಿತ ಡಬಲ್ ಡೆಕರ್ ರೈಲುಗಳು ಸೇರಿವೆ. ‘ರಾಜ್ಯ ರಾಣಿ ಎಕ್ಸ್‌ಪ್ರೆಸ್’ ಎಂಬ ಹೊಸ ಮಾದರಿಯ ರೈಲುಗಳನ್ನೂ ಮಮತಾ ಪ್ರಸ್ತಾಪಿಸಿದ್ದಾರೆ. ಈ ರೈಲುಗಳು ರಾಜ್ಯಗಳ ಪ್ರಮುಖ ನಗರಗಳ ಮೂಲಕ ಅವುಗಳ ರಾಜಧಾನಿಗಳನ್ನು ಸಂಪರ್ಕಿಸಲಿವೆ. ‘ಜನ್ಮಭೂಮಿ ಗೌರವ್’ ವಿಶೇಷ ಪ್ರವಾಸಿ ರೈಲುಗಳು ‘ಬಜೆಟ್ ಬುಟ್ಟಿ’ಯಲ್ಲಿ ಸ್ಥಾನ ಪಡೆದುಕೊಂಡಿವೆ.ರಿಯಾಯಿತಿಗೆ ಧಕ್ಕೆ ಇಲ್ಲ: ಕೆಲ ರಿಯಾಯಿತಿಗಳಿಗೂ ದೀದಿ ಎಡೆ ಮಾಡಿಕೊಟ್ಟಿದ್ದಾರೆ. ಹಿರಿಯ ಮಹಿಳಾ ನಾಗರಿಕರ ಅರ್ಹತಾ ವಯೋಮಾನದ ಮಿತಿಯನ್ನು 60ರಿಂದ 58 ವರ್ಷಕ್ಕೆ ಇಳಿಸಲಾಗಿದೆ. ಅಂತೆಯೇ 60 ವರ್ಷಕ್ಕಿಂತ ಮೀರಿದ ಪುರುಷರಿಗೆ ಪ್ರಯಾಣ ದರದಲ್ಲಿ ಶೇ 30- 40ರಷ್ಟು ರಿಯಾಯಿತಿ ಪ್ರಕಟಿಸಲಾಗಿದೆ. ಅಂಗವಿಕಲರು, ಕೀರ್ತಿ ಮತ್ತು ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತರಿಗೆ ರಾಜಧಾನಿ/ ಶತಾಬ್ದಿ ರೈಲುಗಳಲ್ಲೂ ಸಂಚರಿಸುವ ಅವಕಾಶ ಕಲ್ಪಿಸಲಾಗಿದೆ.ಅವಿವಾಹಿತರಾಗಿದ್ದು ಮರಣೋತ್ತರವಾಗಿ ‘ಪರಮವೀರ ಚಕ್ರ’ ಮತ್ತು ‘ಅಶೋಕ ಚಕ್ರ’ ಪ್ರಶಸ್ತಿ ಪಡೆದವರ ಪೋಷಕರಿಗೆ ‘ಕಾರ್ಡ್ ಪಾಸ್’ ಸೌಲಭ್ಯವನ್ನು ವಿಸ್ತರಿಸಲಾಗಿದೆ. ದೀದಿಯ ಆಶಯದಂತೆ ಮಾರ್ಚ್ ತಿಂಗಳೊಳಗೆ 16 ಸಾವಿರ ಮಾಜಿ ಸೈನಿಕರು ರೈಲ್ವೆ ಇಲಾಖೆಯನ್ನು ಸೇರಲಿದ್ದಾರೆ.ಶ್ರೀಮಂತ ಪ್ರಯಾಣಿಕರಿಗೆ ಇನ್ನಷ್ಟು ಉತ್ತಮ, ಆರಾಮದಾಯಕ ಮತ್ತು ಪ್ರತ್ಯೇಕ ಸೌಲಭ್ಯಗಳನ್ನು ಒದಗಿಸಲು ಬದ್ಧವಾಗಿರುವ ಇಲಾಖೆ, ಹೊಸ ಸೂಪರ್ ಎ.ಸಿ ರೈಲುಗಳನ್ನು ಓಡಿಸಲು ಮುಂದೆ ಬಂದಿದೆ. ಹೌರಾ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಾಯೋಗಿಕವಾಗಿ ಇಂಟರ್ನೆಟ್ ಸೌಲಭ್ಯ ಜಾರಿಗೆ ತರಲಾಗುತ್ತದೆ. ಇಂಟರ್ನೆಟ್ ಮೂಲಕ ಟಿಕೆಟ್ ಕಾಯ್ದಿರಿಸಲು ಅನುವಾಗುವಂತೆ ಸದ್ಯದಲ್ಲೇ ಹೊಸ ಪೋರ್ಟಲ್ ಅಸ್ತಿತ್ವಕ್ಕೆ ಬರಲಿದೆ.ಬಂಪರ್ ಕೊಡುಗೆ: ಪಶ್ಚಿಮ ಬಂಗಾಳದ ಕಾಂಗ್ರೆಸ್- ತೃಣಮೂಲ ಕಾಂಗ್ರೆಸ್ ಮೈತ್ರಿಕೂಟದ ‘ಮುಖ್ಯಮಂತ್ರಿ ಅಭ್ಯರ್ಥಿ’ ಎಂದೇ ಬಿಂಬಿತವಾಗಿರುವ ಮಮತಾ, ಸಿಂಗೂರಿನಲ್ಲಿ ಮೆಟ್ರೊ ರೈಲು ಗಾಡಿ ತಯಾರಿಕಾ ಕಾರ್ಖಾನೆ, ಜೆಲ್ಲಿಗಾಂವ್‌ನಲ್ಲಿ ರೈಲ್ವೆ ಕೈಗಾರಿಕಾ ಪಾರ್ಕ್ ಸ್ಥಾಪನೆ, ಕೋಲ್ಕತ್ತಾಗೆ ಸಮಗ್ರ  ಉಪವಲಯ ಕಾರ್ಯಜಾಲ, ಕೋಲ್ಕತ್ತ ಮೆಟ್ರೊಗೆ 34 ಹೊಸ ಸೇವಾ ಸೌಲಭ್ಯಗಳನ್ನು ಘೋಷಿಸಿದ್ದಾರೆ.ರೈಲ್ವೆ ಸುರಕ್ಷತೆಯಲ್ಲಿ ಪ್ರಗತಿ ಕಂಡುಬಂದಿರುವುದಾಗಿ ಸಮರ್ಥಿಸಿಕೊಂಡಿರುವ ಸಚಿವರು, ಮುಂದಿನ ಹಣಕಾಸು ವರ್ಷದ ಕೊನೆಯೊಳಗೆ ಎಲ್ಲ ಮಾನವರಹಿತ ಕ್ರಾಸಿಂಗ್‌ಗಳಿಗೂ ತಡೆ ಒಡ್ಡುವ ಭರವಸೆ ಇತ್ತಿದ್ದಾರೆ. ದೇಶದ 17 ರೈಲ್ವೆ ವಲಯಗಳಲ್ಲಿ 8 ಕಡೆ ‘ಡಿಕ್ಕಿ ತಡೆ’ ಉಪಕರಣಗಳನ್ನು ಜೋಡಿಸಲಾಗುತ್ತದೆ.ಆಲ್ ಈಸ್ ನಾಟ್ ವೆಲ್: ರೈಲ್ವೆಯು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ ಎಂದು ಹೇಳುವ ಮೂಲಕ ಇಲಾಖೆಯಲ್ಲಿ ‘ಆಲ್ ಈಸ್ ನಾಟ್ ವೆಲ್’ (ಎಲ್ಲವೂ ಸರಿಯಾಗಿಲ್ಲ) ಎಂಬುದನ್ನು ಮಮತಾ ಒಪ್ಪಿಕೊಂಡಿದ್ದಾರೆ. ಆದರೆ ಇದೇ ವೇಳೆ, ಮುಂದಿನ ಹಣಕಾಸು ವರ್ಷದ ಹೊತ್ತಿಗೆ ಆರ್ಥಿಕ ಸ್ಥಿತಿ ಸುಧಾರಿಸುವ ಆಶಯವೂ ಅವರಿಂದ ವ್ಯಕ್ತವಾಗಿದೆ. 2010 -11ರಲ್ಲಿ ಇಲಾಖೆಯ ಗಳಿಕೆ 1 ಲಕ್ಷ ಕೋಟಿ ರೂಪಾಯಿ ಮುಟ್ಟುವ ಅಂದಾಜನ್ನು ಅವರು ಮಾಡಿದ್ದಾರೆ. ಈ ಬಾರಿಯ ಬಜೆಟ್ ಗಾತ್ರವು ಭಾರಿ ಪ್ರಮಾಣದ 57,630 ಕೋಟಿ ರೂಪಾಯಿಗೆ ಏರಿಕೆಯಾಗಿದ್ದು, ಸರಕು ಸಾಗಣೆ ಪ್ರಮಾಣ 993 ದಶಲಕ್ಷ ಟನ್‌ಗೆ ಏರಿಕೆ ಹಾಗೂ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ 6.4ರಷ್ಟು ವೃದ್ಧಿ ನಿರೀಕ್ಷಿಸಲಾಗಿದೆ. ರೈಲು ಸಂಚಾರಕ್ಕೆ ಉಂಟಾದ ಅಡಚಣೆಗಳು ಮತ್ತು ಕಬ್ಬಿಣದ ಅದಿರು ರಫ್ತಿಗೆ ನಿಷೇಧ ಹೇರಿದ್ದರಿಂದ ಕ್ರಮವಾಗಿ 1500 ಕೋಟಿ ಮತ್ತು 2 ಸಾವಿರ ಕೋಟಿ ರೂಪಾಯಿ ನಷ್ಟ ಉಂಟಾಗಿರುವುದನ್ನು ಬಜೆಟ್ ಬಹಿರಂಗಪಡಿಸಿದೆ.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry