ಪ್ರಯಾಣಿಕ ಸ್ನೇಹಿ ಸೌಲಭ್ಯ: ಸುರಕ್ಷತೆಗೆ ಆದ್ಯತೆ

7

ಪ್ರಯಾಣಿಕ ಸ್ನೇಹಿ ಸೌಲಭ್ಯ: ಸುರಕ್ಷತೆಗೆ ಆದ್ಯತೆ

Published:
Updated:
ಪ್ರಯಾಣಿಕ ಸ್ನೇಹಿ ಸೌಲಭ್ಯ: ಸುರಕ್ಷತೆಗೆ ಆದ್ಯತೆ

ಬೆಂಗಳೂರು:  `ಬೈಯಪ್ಪನಹಳ್ಳಿಯಿಂದ ಎಂ.ಜಿ. ರಸ್ತೆವರೆಗಿನ 6.7 ಕಿ.ಮೀ. ಉದ್ದದ ರೀಚ್- 1ರ ಮಾರ್ಗವು `ನಮ್ಮ ಮೆಟ್ರೊ~ ರೈಲಿನ ಸಾರ್ವಜನಿಕ ಸಂಚಾರಕ್ಕೆ ಸಜ್ಜಾಗಿದೆ. ಆದರೆ ರೈಲು ಓಡಿಸಲು ರೈಲ್ವೆ ಸುರಕ್ಷತಾ ಆಯುಕ್ತರು ಅನುಮತಿ ನೀಡುವುದು ಬಾಕಿ ಇದೆ~ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ವಕ್ತಾರ ಬಿ.ಎಲ್.ವೈ.ಚವಾಣ್ ತಿಳಿಸಿದರು.ರೀಚ್- 1ರ ಮಾರ್ಗವು ರೈಲು ಸಂಚಾರಕ್ಕೆ ಅಣಿಯಾಗಿದೆ ಎಂಬುದನ್ನು ಗುರುವಾರ ಮಾಧ್ಯಮ ಪ್ರತಿನಿಧಿಗಳಿಗೆ ತೋರಿಸಿದ ಬಳಿಕ ಚವಾಣ್ ಮಾತನಾಡಿದರು.`ಸೆಪ್ಟೆಂಬರ್ 15ರಂದು ಮೆಟ್ರೊ ರೈಲಿನ ಸಾರ್ವಜನಿಕ ಸಂಚಾರ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಈಗಾಗಲೇ ಪ್ರಕಟಿಸಿದ್ದಾರೆ. ನಿಗಮದ ಕಡೆಯಿಂದ ಸಿದ್ಧತಾ ಕಾರ್ಯಗಳು ಬಹುತೇಕ ಪೂರ್ಣಗೊಂಡಿವೆ~ ಎಂದು ಅವರು ಹೇಳಿದರು.`ರೈಲ್ವೆ ಇಲಾಖೆಯ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆಯ (ಆರ್‌ಡಿಎಸ್‌ಒ) ತಜ್ಞರ ತಂಡ ಈಗಾಗಲೇ ಪರೀಕ್ಷಾರ್ಥ ಸಂಚಾರದ ವರದಿ ನೀಡಿದೆ. ಅದರ ಆಧಾರದಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರು ಅಂತಿಮ ಒಪ್ಪಿಗೆ ನೀಡಬೇಕಾಗಿದೆ. ಕೆಲವೇ ದಿನಗಳಲ್ಲಿ ಆಯುಕ್ತರಿಂದ ಅಂತಿಮ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ~ ಎಂದು ನುಡಿದರು.`ನಮ ಮೆಟ್ರೊ~ದ ನಿಲ್ದಾಣಗಳ ಪ್ರವೇಶ ದ್ವಾರದ ಮುಂದೆ ಕಳೆದ ವಾರದ ತನಕ `ಪತ್ರಕರ್ತರು ಮತ್ತು ಛಾಯಾಗ್ರಹಣಕ್ಕೆ ಅನುಮತಿ ಇಲ್ಲ~ ಎಂಬ ಪ್ರಕಟಣೆಯನ್ನು ನಿಗಮವು ಹಾಕಿತ್ತು. ಮುಖ್ಯಮಂತ್ರಿಯವರೇ ಸೂಚನೆ ನೀಡಿದ ಮೇಲೆ ನಿಗಮವು ಮಾಧ್ಯಮ ಪ್ರತಿನಿಧಿಗಳನ್ನು ಆಹ್ವಾನಿಸಿ, ನಿಲ್ದಾಣಗಳು ಸೇರಿದಂತೆ ಮಾರ್ಗವು ರೈಲ್ವೆ ಓಡಾಟಕ್ಕೆ ಸಜ್ಜಾಗಿರುವುದನ್ನು ತೋರಿಸಿದರು.ಸುರಕ್ಷತೆಗೆ ಆದ್ಯತೆ: ನಿಲ್ದಾಣಗಳಲ್ಲಿ ನಾಗರಿಕರ ಸುರಕ್ಷತೆ ಮತ್ತು ಅನುಕೂಲಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.  ದೊಡ್ಡ ದೊಡ್ಡ ಟಿವಿ ಪರದೆಗಳನ್ನು ಹಾಕಿ, ಅದರಲ್ಲಿ ರೈಲು ಸಂಚಾರ ಮತ್ತಿತರ ಮಾಹಿತಿ ಪ್ರಸಾರ ಮಾಡಲು ವ್ಯವಸ್ಥೆ ಮಾಡಲಾಗಿದೆ. ರೈಲುಗಳ ಒಳಗೆ ಸಣ್ಣ ಸಣ್ಣ ಟಿವಿ ಪರದೆಗಳನ್ನು ಹಾಕಲಾಗಿದೆ.ಧ್ವನಿ ಪ್ರಸಾರದ ವ್ಯವಸ್ಥೆಯೂ ಇದೆ.ನಿಲ್ದಾಣದ ಒಳ ಆವರಣದಲ್ಲಿ ಟಿಕೆಟ್ ಮಾದರಿ, ದರಗಳ ಪಟ್ಟಿ, ನಾಗರಿಕರು ಮಾಡಬೇಕಾದ ಮತ್ತು ಮಾಡಬಾರದ ಅಂಶಗಳ ಬಗ್ಗೆ ಗಮನ ಸೆಳೆಯುವ ಪ್ರದರ್ಶನ ಫಲಕಗಳನ್ನು ಹಾಕಲಾಗಿದೆ.ರೈಲು ಗಾಡಿಗಳಿಗೆ ವಿದ್ಯುತ್ ಪೂರೈಸುವ ಮೂರನೇ ಹಳಿ (ಥರ್ಡ್ ರೈಲ್) ಇರುವುದರಿಂದ ಪ್ಲಾಟ್‌ಫಾರಂ ಅಂಚಿನಿಂದ 1.5 ಅಡಿ ದೂರವೇ ನಿಲ್ಲುವಂತೆ ಹಳದಿ ಬಣ್ಣದ ಪಟ್ಟಿಗಳನ್ನು ಬರೆಸಲಾಗಿದೆ.ಆಕಸ್ಮಿಕವಾಗಿ ಹಳಿಗಳ ಮೇಲೆ ಯಾರಾದರೂ ಬಿದ್ದರೆ ತಕ್ಷಣ ವಿದ್ಯುತ್ ಸಂಪರ್ಕವನ್ನು ಕಡಿದು ಹಾಕಬಹುದಾದ ತುರ್ತು ವ್ಯವಸ್ಥೆಯನ್ನೂ ಮಾಡಲಾಗಿದೆ. ರೈಲುಗಳ ಒಳಗೆ ಮಾತ್ರವಲ್ಲದೇ ನಿಲ್ದಾಣಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿದೆ.ಬೆಂಗಳೂರಿನ ಮಟ್ಟಿಗೆ ಮೆಟ್ರೊ ಹೊಸ ವ್ಯವಸ್ಥೆ ಆಗಿರುವುದರಿಂದ ನಾಗರಿಕರು ರೈಲು ಹತ್ತುವಾಗ ಅಥವಾ ಇಳಿಯುವಾಗ ತೊಂದರೆ ಆಗದಿರಲಿ ಎಂದು ಭಾರಿ ಭದ್ರತಾ ವ್ಯವಸ್ಥೆಯನ್ನು ಒದಗಿಸಲಾಗುವುದು. ಪ್ರತಿ ರೈಲು ಬೋಗಿಗೆ ಒಂದು ಬದಿಯಲ್ಲಿ ನಾಲ್ಕು ದ್ವಾರಗಳಿದ್ದು, ನಾಲ್ಕೂ ದ್ವಾರಗಳ ಬಳಿ ಒಬ್ಬ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು.ಪ್ರತಿ ರೈಲು ಗಾಡಿಗೆ ಒಬ್ಬ ಚಾಲಕ ಇರುತ್ತಾನೆ. ಚಾಲಕರಿಗೆ ನಿಲ್ದಾಣದ ಪ್ಲಾಟ್‌ಫಾರಂನಲ್ಲಿನ ಸ್ಥಿತಿಗತಿಯ ಸಂಪೂರ್ಣ ಚಿತ್ರಣ ವೀಕ್ಷಿಸಲು ಅನುಕೂಲವಾಗುವಂತೆ ಕ್ಯಾಮೆರಾಗಳ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಪ್ರಯಾಣಿಕರಿಗೆ ತೊಂದರೆಗಳಾಗುವುದನ್ನು ತಪ್ಪಿಸಬಹುದು. ಸದ್ಯ ನಿಗಮದಲ್ಲಿ 96 ಮಂದಿ ತರಬೇತಿ ಪಡೆದ ಚಾಲಕರು, ನಿಲ್ದಾಣ ನಿಯಂತ್ರಕರು ಇದ್ದಾರೆ.ಅಂಗವಿಕಲರ ಸ್ನೇಹಿ: `ನಮ್ಮ ಮೆಟ್ರೊ~ದ ನಿಲ್ದಾಣಗಳು ಮತ್ತು ರೈಲು ಗಾಡಿಗಳು ಸಂಪೂರ್ಣವಾಗಿ ಅಂಗವಿಕಲರ ಸ್ನೇಹಿಯಾಗಿವೆ. ಗಾಲಿ ಕುರ್ಚಿಯೊಂದಿಗೆ ನಿಲ್ದಾಣವನ್ನು ಸುಲಭವಾಗಿ ಪ್ರವೇಶಿಸಲು ರ‌್ಯಾಂಪ್ ನಿರ್ಮಿಸಲಾಗಿದೆ. ಗಾಲಿ ಕುರ್ಚಿಯಲ್ಲಿ ಕುಳಿತೇ ಪ್ಲಾಟ್‌ಫಾರಂ ತಲುಪಲು ಟಿಕೆಟ್ ಕೌಂಟರ್‌ನಲ್ಲಿ ಒಂದು ದೊಡ್ಡ ಗೇಟ್, ಲಿಫ್ಟ್ ವ್ಯವಸ್ಥೆ ಮಾಡಲಾಗಿದೆ. ಲಿಫ್ಟ್ ಸ್ವಿಚ್ ಬಟನ್‌ಗಳನ್ನು ಕೆಳಗೆ ಸಿಗುವಂತೆ ಹಾಕಿರುವುದರ ಜತೆ ಬ್ರೈಲ್ ಲಿಪಿಯ ಬಟನ್ ಅನ್ನೂ ಹಾಕಲಾಗಿದೆ.ಪ್ರವೇಶ ದ್ವಾರದಿಂದ ಸ್ಪರ್ಶ ಜ್ಞಾನದಿಂದಲೇ ಪ್ಲಾಟ್‌ಫಾರಂ ತಲುಪಲು ಫ್ಲೋರಿಂಗ್‌ನಲ್ಲಿ ವಿಶೇಷ ಟೈಲ್ಸ್‌ಗಳ ಕಿರು ಹಾದಿಯನ್ನು ನಿರ್ಮಿಸಲಾಗಿದೆ.ವೈವಿಧ್ಯಮಯ ಟಿಕೆಟ್ ವ್ಯವಸ್ಥೆ: ಮೆಟ್ರೊ ಪ್ರಯಾಣಕ್ಕೆ ವೈವಿಧ್ಯಮಯ ಟಿಕೆಟ್ ವ್ಯವಸ್ಥೆ ಇದ್ದು, ಪ್ರಯಾಣಿಕರು ತಮಗೆ ಅನುಕೂಲವಾಗುವ ಟೋಕನ್ ಅಥವಾ ಸ್ಮಾರ್ಟ್ ಕಾರ್ಡ್ ಖರೀದಿಸಿ ಪ್ರಯಾಣಿಸಬಹುದು.ಸ್ಮಾರ್ಟ್ ಟೋಕನ್: ಇದು ಪ್ರಯಾಣ ಮಾಡುವಾಗ ಬಳಸುವ ಟಿಕೆಟ್ ಇದ್ದಂತೆ. ಒಂದು ಸಲದ ಪ್ರಯಾಣಕ್ಕೆ ಮಾತ್ರ ಇದು ಬಳಕೆಯಾಗುತ್ತದೆ. ನಿಲ್ದಾಣದಲ್ಲಿ ಹಣ ಪಾವತಿ ಮಾಡಿ ನಿಗದಿತ ಸ್ಥಳಕ್ಕೆ ನಿಗದಿತ ದರ ಪಾವತಿಸಿದರೆ ಸ್ಮಾರ್ಟ್ ಟೋಕನ್ ಕೊಡಲಾಗುತ್ತದೆ. ಆ ಟೋಕನ್ ಅನ್ನು ಪ್ರವೇಶ ದ್ವಾರಗಳಲ್ಲಿರುವ ಸ್ವಯಂ ಚಾಲಿತ ಯಂತ್ರದ ಪ್ಯಾಡ್ ಮೇಲೆ ಸ್ಪರ್ಶಿಸಿದರೆ ಮಾತ್ರ ನಿಲ್ದಾಣಕ್ಕೆ ಪ್ರವೇಶ ತೆರೆದುಕೊಳ್ಳುತ್ತದೆ.

ಅದೇ ಟೋಕನ್ ಇಟ್ಟುಕೊಂಡು ಪ್ರಯಾಣ ಮಾಡಬೇಕು. ಇಳಿಯುವ ನಿಲ್ದಾಣದಲ್ಲಿ ಸ್ವಯಂ ಚಾಲಿತ ಯಂತ್ರಕ್ಕೆ ಆ ಟೋಕನ್ ಅನ್ನು ಹಾಕಿದರೆ ಮಾತ್ರ ಹೊರಗೆ ಬರಬಹುದು.ಸ್ಮಾರ್ಟ್ ಕಾರ್ಡ್: ಹಲವು ಸಲ ಪ್ರಯಾಣ ಮಾಡುವವರಿಗೆ ಸ್ಮಾರ್ಟ್ ಕಾರ್ಡ್ ಬಹಳ ಉಪಯುಕ್ತ. ಈ ಕಾರ್ಡ್ ಬಳಕೆದಾರರಿಗೆ ಟಿಕೆಟ್ ದರದಲ್ಲಿ ರಿಯಾಯಿತಿ ಸಿಗಲಿದೆ. ರೂ 50 ಶುಲ್ಕ ಪಾವತಿಸಿ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಬೇಕು. `ವಾರ್ಷಿಕ್~ ಮತ್ತು `ಸಂಚಾರ್~ ಎಂಬ ಎರಡು ಬಗೆಯ ಸ್ಮಾರ್ಟ್ ಕಾರ್ಡ್‌ಗಳನ್ನು ನಿಗಮವು ಪರಿಚಯಿಸಲಿದೆ.ಒಂದೇ ಸ್ಮಾರ್ಟ್ ಕಾರ್ಡ್‌ನಲ್ಲಿ `ವಾರ್ಷಿಕ್~ ಮತ್ತು `ಸಂಚಾರ್~ ಎರಡೂ ಬಗೆಯ ಅಥವಾ ಎರಡರಲ್ಲಿ ಒಂದು ಬಗೆಯ ಟಿಕೆಟ್ ಮಾದರಿಯನ್ನು ಬಳಸಿ ಸಂಚರಿಸಬಹುದು. ಈ ಎರಡೂ ಬಗೆಯ ಟಿಕೆಟ್ ವಿಧಾನಗಳಲ್ಲಿ ಪ್ರಯಾಣಿಕರಿಗೆ ರಿಯಾಯಿತಿ ಸಿಗಲಿದೆ. ಅದರ ವಿವರಗಳಿಗೆ ಪಟ್ಟಿಯನ್ನು ನೋಡಬಹುದು.ವಾರ್ಷಿಕ್ ಕಾರ್ಡ್‌ನಲ್ಲಿ ರೂ 50ರ ಗುಣಕದಲ್ಲಿ ಗರಿಷ್ಠ ರೂ 1500ರವರೆಗೆ ಹಣದ ಮೌಲ್ಯವನ್ನು ತುಂಬಿಸಿಕೊಳ್ಳಬಹುದು. ಪ್ರತಿ ಸಲ ಪ್ರಯಾಣ ಮಾಡಿದಾಗ ನಿಗದಿತ ಮೊತ್ತದ ಹಣ ಕಡಿತಗೊಳ್ಳುತ್ತದೆ. ಈ ಕಾರ್ಡ್‌ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೆಟ್/ ಮೊಬೈಲ್ ಬ್ಯಾಂಕಿಂಗ್ ಅಥವಾ ಎಟಿಎಂಗಳಿಂದ ಹಣದ ಮೌಲ್ಯ ತುಂಬಿಸಿಕೊಳ್ಳಬಹುದು. ಬಿಎಂಆರ್‌ಸಿಎಲ್ ವೆಬ್‌ಸೈಟ್ ಅಥವಾ ಸ್ಕ್ಯ್ರಾಚ್ ಕಾರ್ಡ್‌ಗಳ ಮೂಲಕವೂ ವಾರ್ಷಿಕ್ ಕಾರ್ಡ್ ರೀಚಾರ್ಜ್ ಮಾಡಿಸಿಕೊಳ್ಳಬಹುದು.ಇನ್ನು `ಸಂಚಾರ್~ ಕಾರ್ಡ್, ನಿರ್ದಿಷ್ಟ ಸ್ಥಳಗಳ ನಡುವೆ ನಿಯಮಿತವಾಗಿ ಸಂಚರಿಸುವವರಿಗೆ ರಿಯಾಯಿತಿ ಸೌಲಭ್ಯ ದೊರಕಿಸಿಕೊಡಲಿದೆ. ಈ ಕಾರ್ಡ್ ನೌಕರರು, ವಿದ್ಯಾರ್ಥಿಗಳು ಮತ್ತು ಉದ್ಯಮಿಗಳಿಗೆ ಅನುಕೂಲಕರವಾಗಿದೆ. `ಸಂಚಾರ್ 10~ ಕಾರ್ಡ್‌ಗೆ ಒಂದು ತಿಂಗಳು, `ಸಂಚಾರ್ 40 ಮತ್ತು 50~ಕ್ಕೆ ಮೂರು ತಿಂಗಳು ಹಾಗೂ `ಸಂಚಾರ್ 100~ಕ್ಕೆ ಆರು ತಿಂಗಳ ಕಾಲಾವಕಾಶ (ವ್ಯಾಲಿಡಿಟಿ) ಇರಲಿದೆ.ಗುಂಪು ಟಿಕೆಟ್: ನಿರ್ದಿಷ್ಟ ನಿಲ್ದಾಣಗಳ ನಡುವೆ ಪ್ರಯಾಣಿಸುವ ಕನಿಷ್ಠ ಹತ್ತು ಮಂದಿಯ ಗುಂಪಿಗೆ ಕಾಗದದ ರೂಪದ ಟಿಕೆಟ್ ಕೊಡಲಾಗುವುದು. ಇಂತಹ ಕಾಗದದ ಟಿಕೆಟ್‌ಗಳನ್ನು ಪರಿಶೀಲಿಸಲು ಪ್ರತಿ ನಿಲ್ದಾಣದಲ್ಲೂ ಪ್ರತ್ಯೇಕ ಆಗಮನ/ ನಿರ್ಗಮನ ದ್ವಾರದ ವ್ಯವಸ್ಥೆ ಮಾಡಲಾಗಿರುತ್ತದೆ. ಇಂತಹ ಗುಂಪು ಟಿಕೆಟ್‌ನಲ್ಲಿ ಪ್ರತಿ ಪ್ರಯಾಣಿಕರಿಗೂ ಶೇ 10ರಷ್ಟು ರಿಯಾಯಿತಿ ನೀಡಲಾಗುವುದು.ಮೆಟ್ರೊ ಬಸ್ ಟಿಕೆಟ್ (ಎಂಬಿಟಿ) ಪಾಸ್: ಈ ದೈನಿಕ ಪಾಸ್ ಮೂಲಕ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್ ಮತ್ತು ಮೆಟ್ರೊ ರೈಲುಗಳಲ್ಲಿ ಸಂಚರಿಸಬಹುದು. ಇದರಲ್ಲೂ ಸರಳ್ ಮತ್ತು ಸರಾಗ್ ಎಂಬ ಎರಡು ಬಗೆ.ರೂ 110 ಮೌಲ್ಯದ ಎಂಬಿಟಿ ತೆಗೆದುಕೊಂಡರೆ ಮೆಟ್ರೊ ರೈಲು ಮತ್ತು ವಾಯು ವಜ್ರ ಹೊರತು ಪಡಿಸಿ ಬಿಎಂಟಿಸಿಯ ಎಲ್ಲ ವರ್ಗದ ಬಸ್‌ಗಳಲ್ಲೂ ಸಂಚರಿಸಬಹುದು. ರೂ 70 ಮೌಲ್ಯದ ಎಂಬಿಟಿ ಪಾಸ್‌ನಲ್ಲಿ ಮೆಟ್ರೊ ರೈಲು ಮತ್ತು ಬಿಎಂಟಿಸಿಯ ಹವಾನಿಯಂತ್ರಣ ರಹಿತ ಬಸ್‌ಗಳಲ್ಲಿ ಪ್ರಯಾಣಿಸಬಹುದು.13 ನಿಮಿಷದ ಪ್ರಯಾಣ

6.7 ಕಿ.ಮೀ ಉದ್ದದ ಮಾರ್ಗ ಕ್ರಮಿಸಲು ರೈಲು ಗಾಡಿಯು ತೆಗೆದುಕೊಳ್ಳುವ ಸಮಯ 13 ನಿಮಿಷಗಳು. ರೈಲು ಗಾಡಿಯು ಪ್ರತಿ ನಿಲ್ದಾಣದಲ್ಲಿ 30 ಸೆಕೆಂಡ್‌ಗಳಷ್ಟು ಸಮಯ ಮಾತ್ರ ನಿಲ್ಲಲಿದೆ. ಇದರಲ್ಲಿ ಬಾಗಿಲು ತೆಗೆಯಲು ಮತ್ತು ಮುಚ್ಚಲು ತಲಾ 5 ಸೆಕೆಂಡ್‌ಗಳು, ಪ್ರಯಾಣಿಕರು ಹತ್ತಿಳಿಯಲು 20 ಸೆಕೆಂಡ್‌ಗಳ ಕಾಲಾವಕಾಶ ಇರಲಿದೆ.ನಿಲುಗಡೆ ಅವಧಿ ಕಡಿಮೆ ಅವಧಿಯೆನಿಸಿದರೂ ಒಂದರ ಹಿಂದೆ ಮತ್ತೊಂದು ರೈಲು ಬರುವುದರಿಂದ ಪ್ರಯಾಣಿಕರ ನೂಕು ನುಗ್ಗಲು ಆಗದು ಎಂದು ಭಾವಿಸಲಾಗಿದೆ. ಒಂದು ವೇಳೆ ನಿರೀಕ್ಷೆಗಿಂತ ಪ್ರಯಾಣಿಕರ ಸಂಖ್ಯೆ ಹೆಚ್ಚಾದರೆ ರೈಲುಗಳ ಓಡಾಟದ ಸಂಖ್ಯೆಯನ್ನು ಹೆಚ್ಚಿಸಲು ನಿಗಮ ಸಿದ್ಧವಿದೆ.ಸದ್ಯಕ್ಕೆ ದಟ್ಟಣೆ ವೇಳೆ 10 ನಿಮಿಷಕ್ಕೊಂದರಂತೆ ಹಾಗೂ ಉಳಿದ ವೇಳೆ 15 ನಿಮಿಷಕ್ಕೊಂದರಂತೆ ರೈಲು ಗಾಡಿಯನ್ನು ಓಡಿಸಲು ನಿಗಮ ನಿರ್ಧರಿಸಿದೆ.3 ಅಡಿಗಿಂತ ಎತ್ತರ ಇರುವ ಮಕ್ಕಳಿಗೆ ಟಿಕೆಟ್

90 ಸೆಂಟಿ ಮೀಟರ್ ಅಥವಾ 3 ಅಡಿಗಿಂತ ಕಡಿಮೆ ಎತ್ತರ ಇರುವ ಮಕ್ಕಳು ಟಿಕೆಟ್ ಪಡೆಯುವ ಅಗತ್ಯವಿಲ್ಲ. ನಿಲ್ದಾಣದ ಒಳಗೆ ಹೋಗಿ ಬರಲು ಪ್ಲಾಟ್‌ಫಾರಂ ಟಿಕೆಟ್ ಮಾದರಿಯಲ್ಲಿ ಟಿಕೆಟ್ ಪಡೆಯಬೇಕಾಗುತ್ತದೆ. ಇದರ ದರವನ್ನು ಇನ್ನೂ ನಿಗದಿ ಪಡಿಸಿಲ್ಲ.ಸೆ. 2ರಂದು ನಿಲ್ದಾಣದ ಕಟ್ಟಡ ಉದ್ಘಾಟನೆ

ನಗರದ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ `ನಮ್ಮ ಮೆಟ್ರೊ~ ನಿಲ್ದಾಣದ ಕಟ್ಟಡವನ್ನು ಸೆಪ್ಟೆಂಬರ್ 2ರಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಉದ್ಘಾಟಿಸುವರು.ಎಂ.ಜಿ. ರಸ್ತೆಯ ಇತಿಹಾಸ, ಪ್ರತಿಷ್ಠೆಯ ಹಿನ್ನೆಲೆಯಲ್ಲಿ ಮೆಟ್ರೊ ನಿಲ್ದಾಣಗಳ ಪೈಕಿ `ಎಂ.ಜಿ. ರಸ್ತೆ ನಿಲ್ದಾಣ~ಕ್ಕೆ ವಿಶೇಷ ಮಹತ್ವ ಬಂದಿದೆ. ಈ ಕಾರಣಕ್ಕಾಗಿಯೇ ಎಂ.ಜಿ. ರಸ್ತೆ ನಿಲ್ದಾಣವನ್ನು ಮಹಾತ್ಮ ಗಾಂಧೀಜಿಯವರ ಕಲಾಕೃತಿಗಳೊಂದಿಗೆ ಅಲಂಕರಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ ನಿರ್ಧರಿಸಿದೆ.ರೀಚ್- 1ರ ವ್ಯಾಪ್ತಿಯಲ್ಲಿನ ಆರು ನಿಲ್ದಾಣಗಳ ಪೈಕಿ ಎಂ.ಜಿ. ರಸ್ತೆ ನಿಲ್ದಾಣಕ್ಕೆ ಸದ್ಯಕ್ಕೆ ಎರಡೂ ಕಡೆಯಿಂದ ಸಂಪರ್ಕ ಸೌಕರ್ಯ ಇಲ್ಲ. ಉಳಿದ ಐದು ನಿಲ್ದಾಣಗಳಲ್ಲಿ ರಸ್ತೆಯ ಎರಡೂ ಬದಿಯಿಂದ ಹೋಗಿ ಬರಲು ಅವಕಾಶ ಇದೆ.ಎಂ.ಜಿ. ರಸ್ತೆಯಲ್ಲಿ ಪ್ಲಾಜಾ ಚಿತ್ರಮಂದಿರದ ನಿವೇಶನದಲ್ಲಿ ನಿಲ್ದಾಣದ ಪೂರಕ ಕಟ್ಟಡ ನಿರ್ಮಿಸಿದ ಮೇಲೆ ಇಲ್ಲಿಯೂ ಎರಡೂ ಕಡೆ ಸಂಪರ್ಕ ಸಾಧ್ಯವಾಗಲಿದೆ.ಯಾವ್ಯಾವುದಕ್ಕೆ ದಂಡ ತಪ್ಪು ದಂಡ 

ತಪ್ಪಾಗಿ ಪ್ರವೇಶಿಸಿದರೆ ಅಥವಾ ನಿರ್ಗಮಿಸಿದರೆ ರೂ 10,

ಟಿಕೆಟ್ ರಹಿತ ಪ್ರಯಾಣ(ಪ್ರಯಾಣ ದರ ಹೊರತು ಪಡಿಸಿ) ರೂ 50

ನಿಲ್ದಾಣದಲ್ಲಿ ಪಾವತಿ ಮಾಡಿದ ಪ್ರದೇಶದಲ್ಲಿ ಅವಧಿ ಮೀರಿ ಇದ್ದರೆ ಪ್ರತಿ ಗಂಟೆಗೆ ರೂ10-50

ಸ್ಮಾರ್ಟ್ ಕಾರ್ಡ್/ಟೋಕನ್‌ಗಳ ಅನಧಿಕೃತ ಮಾರಾಟ ರೂ 500

ನಿರ್ಗಮನ ದ್ವಾರದಲ್ಲಿ ಟೋಕನ್ ಹಾಕದೇ ಹೋದರೆ ರೂ 200

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry