ಪ್ರಯಾಣ ದರ ಏರಿಕೆ ವಿರುದ್ಧ ಪ್ರತಿಭಟನೆ

7

ಪ್ರಯಾಣ ದರ ಏರಿಕೆ ವಿರುದ್ಧ ಪ್ರತಿಭಟನೆ

Published:
Updated:

ಬಳ್ಳಾರಿ: ರಾಜ್ಯ ಸಾರಿಗೆ ಸಂಸ್ಥೆಯು ಬಸ್ ಪ್ರಯಾಣ ದರವನ್ನು ದಿಢೀರ್ ಹೆಚ್ಚಿಸಿರುವುದನ್ನು ವಿರೋಧಿಸಿ ಎಸ್‌ಯುಸಿಐ (ಸಿ) ಪಕ್ಷದ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ನಗರದ ಹಳೆಯ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಲಾಯಿತು.ಈಗಾಗಲೇ ಸರ್ಕಾರ ಜನ ವಿರೋಧಿ ನೀತಿ ಅನುಸರಿಸಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತಿತರ ವಸ್ತುಗಳ ದರ ಹೆಚ್ಚಿಸಿದ್ದು, ಶಿಕ್ಷಣ, ಆರೋಗ್ಯ ಮತ್ತಿತರ ಅಗತ್ಯ ಸೇವೆಯ ಬೆಲೆಗಳೂ ಗಗನಕ್ಕೇರಿವೆ. ಇದರಿಂದ ಜನ ಸಾಮಾನ್ಯರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಇದೀಗ ಸಾರಿಗೆ ಸಂಸ್ಥೆಯು ಶೇ 12ರಿಂದ 15ರಷ್ಟು ಪ್ರಯಾಣ ದರ ಹೆಚ್ಚಿಸಿರುವುದು ಬಡವರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ಸೋಮಶೇಖರ್ ಹೇಳಿದರು.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರು, ಕಾರ್ಮಿಕರು ಹಾಗೂ ಜನಸಾಮಾನ್ಯರ ಮೇಲೆ ಅಧಿಕ ತೆರಿಗೆ ಭಾರ ಹೊರಿಸಿ ಹಗಲು ದರೋಡೆ ಮಾಡುತ್ತಿವೆ. ಇನ್ನೊಂದೆಡೆ, ಶ್ರೀಮಂತ ಉದ್ಯಮಿಗಳಿಗೆ ಕಳೆದ 3 ವರ್ಷಗಳಲ್ಲಿ ರೂ 10 ಲಕ್ಷ ಕೋಟಿ ತೆರಿಗೆ ವಿನಾಯಿತಿ ನೀಡಿವೆ.

 

ಅಲ್ಲದೆ, ಉಭಯ ಸರ್ಕಾರಗಳು ಲಕ್ಷಾಂತರ ಕೋಟಿ ಅವ್ಯವಹಾರ, ಭ್ರಷ್ಟಾಚಾರದಲ್ಲಿ ಮುಳುಗಿವೆ. ರಾಜ್ಯದ ಬಿಜೆಪಿ ನೇತೃತ್ವದ, ಕೇಂದ್ರದ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಬೆಲೆ ಏರಿಕೆ ನಿಯಂತ್ರಿಸುವುದರ ಬದಲಿಗೆ, ಬಡವರ ಮೇಲೆ ಗದಾಪ್ರಹಾರ ನಡೆಸಿವೆ ಎಂದು ಅವರು ಟೀಕಿಸಿದರು.ರಾಜ್ಯದಲ್ಲಿ ಕೆಲವೇ ಖಾಸಗಿ ಬಸ್ ಹೊಂದಿದವರೂ ಅಧಿಕ ಲಾಭ ಮಾಡುತ್ತಿದ್ದು, ಸಾರಿಗೆ ಸಂಸ್ಥೆಗಳು ಮಾತ್ರ ನಷ್ಟದ ನೆಪ ಹೇಳುತ್ತಿವೆ. ಇದಕ್ಕೆ  ಸಾರಿಗೆ ಸಂಸ್ಥೆಗಳಲ್ಲಿನ ಭ್ರಷ್ಟಾಚಾರ, ದುರಾಡಳಿತ ಹಾಗೂ ಸೋರಿಕೆಯೇ ಕಾರಣ ಎಂದು ಅವರು ದೂರಿದರು.ಆಳುವ ಪಕ್ಷಗಳು ಐದು ವರ್ಷಕೊಮ್ಮೆ ಬದಲಾಗುತ್ತವೆ. ಆದರೂ ಜನರ ಸಮಸ್ಯೆಗಳು ನಿರಂತರ ಮುಂದುವರಿಯುತ್ತಲೇ ಇವೆ. ಜನರು ಇದನ್ನು ಅರಿತು,  ಭ್ರಷ್ಟ, ಜನವಿರೋಧಿ ಸರ್ಕಾರ ಗಳ ವಿರುದ್ಧ ಪ್ರಜಾತಾಂತ್ರಿಕ ಹೋರಾಟ ರೂಪಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ಜಿಲ್ಲಾ ಸಮಿತಿ ಸದಸ್ಯ ಎ.ದೇವದಾಸ್, ಎಂ.ಎನ್. ಮಂಜುಳಾ ಮಾತನಾಡಿದರು.ಭುವನಾ, ಡಾ.ಪ್ರಮೋದ್, ವಿದ್ಯಾರ್ಥಿಗಳು, ರೈತರು ಹಾಗೂ ಪಕ್ಷದ ಸದಸ್ಯರು ಪ್ರತಿಭಟನೆಯ ಕಾಲಕ್ಕೆ ಉಪಸ್ಥಿತರಿದ್ದು, ರಾಜ್ಯ ಸರ್ಕಾರದ ಪ್ರತಿಕೃತಿ ದಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry