ಬುಧವಾರ, ಜೂನ್ 16, 2021
21 °C

ಪ್ರಯೋಗವೇ ಇವರ ಉಸಿರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಯೋಗವೇ ಇವರ ಉಸಿರು

ಕೃಷಿ ಕ್ಷೇತ್ರದಲ್ಲಿ ಸಾಂಪ್ರದಾಯಕ ವಿಧಾನದ ಜೊತೆಗೆ ಹೊಸ ಪ್ರಯೋಗಗಳ ಮೂಲಕ ಗಮನ ಸೆಳೆದಿದ್ದಾರೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹೊಸಳ್ಳಿಯ ಹಿಂಡೂಮನೆ ತಿಮ್ಮಪ್ಪನವರು. ಅವರಿಗೆ ಹಸಿರೇ ಉಸಿರು. ಶ್ರದ್ಧೆಯೊಂದಿದ್ದರೆ ಯಾರೂ ಯಾವ ಕಾರ್ಯವನ್ನಾದರೂ ಸಾಧಿಸಬಹುದು ಎಂಬುದನ್ನು ಅವರು ತೋರಿಸಿದ್ದಾರೆ.ತಿಮ್ಮಪ್ಪನವರು ತಮ್ಮ ಊರಾದ ಹೊಸಳ್ಳಿಯಲ್ಲಿ ಹತ್ತು ಎಕರೆ ಜಮೀನನ್ನು ಹೊಂದಿದ್ದಾರೆ. ಕೃಷಿ ಕುಟುಂಬದಿಂದ ಬಂದ ಅವರು ಓದಿದ್ದು ನಾಲ್ಕನೇ ತರಗತಿಯ ವರೆಗೆ ಮಾತ್ರ. ಇಪ್ಪತ್ತು ವರ್ಷಗಳಿಂದ ಅವರು ಸಾವಯವ ಕೃಷಿಯನ್ನು ಕೈಗೊಂಡಿದ್ದಾರೆ. ಇದನ್ನು ಗುರುತಿಸಿದ ರಾಜ್ಯ ಸರ್ಕಾರ ಇವರಿಗೆ 2009-10ನೇ ಸಾಲಿನ `ಕೃಷಿ ಪಂಡಿತ~ ಪ್ರಶಸ್ತಿ ನೀಡಿ ಗೌರವಿಸಿದೆ.ಅವರು ಮನೆಯ ಹತ್ತಿರದ ಕಾಡಿನಿಂದ ಪೈಪ್‌ಲೈನ್ ಮೂಲಕ ಅಬ್ಬಿ ನೀರು ಬರುವಂತೆ ಮಾಡಿದ್ದಾರೆ. ಹಿತ್ತಲಲ್ಲಿ ನಿರ್ಮಿಸಿದ ಒಂದು ದೊಡ್ಡ ಟ್ಯಾಂಕ್‌ಗೆ ಈ ನೀರು ಸೇರುತ್ತದೆ. ಎರಡು ದೊಡ್ಡ ಹಸುಗಳನ್ನು ಗೊಬ್ಬರ ಮತ್ತು ಹಾಲಿಗಾಗಿ ಸಾಕಿದ್ದಾರೆ.

 

ನಿತ್ಯ ಕೊಟ್ಟಿಗೆ ತೊಳೆದ ನೀರು, ಸಗಣಿ, ಗಂಜಲ ಎಲ್ಲವೂ ಸೇರಿ ಪೈಪ್ ಮೂಲಕ ಈ ಟ್ಯಾಂಕ್‌ಗೆ ಬಂದು ಬೀಳುತ್ತದೆ. ಅವರ ಜಮೀನಿಗೆ ಈ ಟ್ಯಾಂಕ್‌ನ ನೀರು ಸರಾಗವಾಗಿ ಹರಿದು ಹೋಗುತ್ತದೆ.ಸ್ಪ್ರಿಂಕ್ಲರ್ ವ್ಯವಸ್ಥೆಯೂ ಇದೆ. ಎರಡು ತೆರೆದ ಬಾವಿಗಳ ನೀರಿನಿಂದಲೂ ಹತ್ತು ಎಕರೆ ತೋಟಕ್ಕೆ ನೀರಿನ ಸಮರ್ಪಕ ಬಳಕೆಯಾಗುತ್ತಿದೆ. ಮಳೆನೀರನ್ನು ಹಿಡಿದಿಡಲು ಇಂಗುಗುಂಡಿಯೊಂದನ್ನು ತೋಟದಲ್ಲಿ ನಿರ್ಮಿಸಿರುವುದರಿಂದ ಇವರ ತೋಟಕ್ಕೆ ನೀರಿನ ಕೊರತೆ ಕಾಣುವುದಿಲ್ಲ.ತೋಟದಲ್ಲಿನ ಒಣ ತರಗೆಲೆ- ಕಸಕಡ್ಡಿಗಳನ್ನು ಅಲ್ಲಿಯೇ ಕೊಳೆಯಲು ಬಿಟ್ಟು ಗಿಡ ಮರಗಳಿಗೆ ಅಗತ್ಯವಾದ ಪೋಷಕಾಂಶಗಳು ಲಭ್ಯವಾಗುವಂತೆ ಮಾಡಿದ್ದಾರೆ. ಸಾವಯವ ಗೊಬ್ಬರ, ಎರೆಹುಳು ಗೊಬ್ಬರ, ಕುರಿಗೊಬ್ಬರ, ಕೊಟ್ಟಿಗೆ ಗೊಬ್ಬರಗಳನ್ನು ಮರಗಳ ಬುಡಕ್ಕೆ ಹಾಕುತ್ತಾರೆ.

 

ಪೇಟೆಯಿಂದ ಕೋಳಿ ಮೊಟ್ಟೆಯ ಹೊರಕವಚಗಳನ್ನು ಸಂಗ್ರಹಿಸಿ ತಂದು ಅವುಗಳನ್ನು ಕುಟ್ಟಿ ಪುಡಿ ಮಾಡಿ ಗಿಡಗಳಿಗೆ ಹಾಕುವುದಲ್ಲದೇ ತೆಂಗಿನ ಸಿಪ್ಪೆಗಳನ್ನು ಮರಗಳ ಬುಡದಲ್ಲಿ ಹುಗಿದು ನೀರು ಹಾಕಿ ಅವು ಅಲ್ಲೆೀ ಕೊಳೆತು ಗೊಬ್ಬರವಾಗುವಂತೆ ಮಾಡುತ್ತಾರೆ.ವರ್ಷ ಪೂರ್ತಿ ದಟ್ಟ ಹಸಿರಾಗಿ ಕಂಗೊಳಿಸುವ ಇವರ ಜಮೀನಿನಲ್ಲಿ ಏನುಂಟು, ಏನಿಲ್ಲ? ತೆಂಗು, ರಬ್ಬರ್, ತಾಳೆಮರ, ಮೂರು ಜಾತಿಯ ಬಿದಿರು, ಅಡಿಕೆ ಮರಗಳು, ಗೇರು, ಮಾವು (ಕಸಿ ಮಾವು, ಅಪ್ಪೆಮಿಡಿ), ಹಲಸು, ಮೇಣರಹಿತ ಹಲಸು, 350 ಲವಂಗದ ಗಿಡಗಳು, 150 ದಾಲ್ಚಿನಿ ಗಿಡಗಳು, 200 ನಿಂಬೆ ಗಿಡಗಳು, ವೆನಿಲ್ಲಾ, ಕೋಕೋ, ಕಾಫಿ ಗಿಡಗಳು (ರೋಬಸ್ಟಾ, ಕಾವೇರಿ ತಳಿಗಳು) ಇಂಗಿನ ಗಿಡ, ಅಂಜೂರ, ನೆಲ್ಲಿ, ರಾಜ ನೆಲ್ಲಿ, ಹುಣಸೆ, ಕಿತ್ತಳೆ, ಗಿಡ ಟೊಮೆಟೊ, ಮರ ಟೊಮೆಟೊ, ಬೆಣ್ಣೆ ಹಣ್ಣು, ಎಗ್ ಫ್ರುಟ್, ಸ್ಟ್ರಾಬೆರಿ, ಸಪೋಟಾ, ಸೀಡ್‌ಲೆಸ್ ನಿಂಬೆ, ಜಾಯಿಕಾಯಿ, ಉಪ್ಪಗೆ ಮರಗಳು, ನೇಪಾಳದಿಂದ ತರಿಸಿದ ರುದ್ರಾಕ್ಷಿ ಕಾಯಿ ಗಿಡ - ಒಂದೇ ಎರಡೇ? ಇವುಗಳಲ್ಲಿ ಹಲವು ಮರಗಳು ಸಮದ್ಧ ಫಸಲು ಕೊಡುತ್ತಿವೆ. ಕೆಲವು ಈಗಷ್ಟೆ ಪ್ರಾಯಕ್ಕೆ ಬರುತ್ತಿವೆ.ಮನೆಯ ಹಿತ್ತಲಿನಲ್ಲೂ ದಾಸವಾಳ, ಸೇವಂತಿಗೆ, ಗುಲಾಬಿ, ಆಂಥೋರಿಯಂ ಸಸ್ಯಗಳನ್ನೂ ಬೆಳೆಸಿದ್ದಾರೆ. ಹಿತ್ತಲಿನ ಇನ್ನೊಂದು ಭಾಗದಲ್ಲಿ ಕೆಂಪು ಹಸಿರು ದಂಟಿನ ಬಸಳೆ ಬಳ್ಳಿಗಳು, ಬಿಳಿ - ಕೆಂಪು ಪುನರ್ಪುಳಿ ಹಣ್ಣಿನ ಗಿಡಗಳು, ಅರಿಶಿನ, ಅರಾರೂಟ್, ಕ್ಯಾರೆಟ್, ಈರುಳ್ಳಿ - ಬೆಳ್ಳುಳ್ಳಿ ಸಸಿಗಳು, ಪುದಿನ, ಸಬ್ಬಸಿಗೆ, ಪಲಾವು ಸೊಪ್ಪು, ಒಂದೆಲಗ, ಸರ್ಪಗಂಧಿ, ತುಳಸಿ, ಗರಿಕೆ, ಪುತ್ರಜೀವಿ (ಸಂತಾನವಿಲ್ಲದವರಿಗೆ ಸಂತಾನ ಪ್ರಾಪ್ತಿಯಾಗುವ ಔಷಧಿ ಸಸ್ಯ) ಗಿಡಗಳೂ ನಳನಳಿಸುತ್ತಿವೆ. ಬೀನ್ಸ್, ಸೀಮೆ ಬದನೇಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಗಿಡ ಕಂಗೊಳಿಸುತ್ತಿವೆ.

 

9 ಸದಸ್ಯರಿರುವ ತಮ್ಮ ಮನೆಯ ಉಪಯೋಗಕ್ಕೆ ತಿಮ್ಮಪ್ಪನವರು ಅಂಗಡಿ- ಪೇಟೆಯಿಂದ ತರಕಾರಿ, ಹಣ್ಣು ಹಂಪಲುಗಳನ್ನು ಖರೀದಿಸಿ ತರುವುದಿಲ್ಲ. ಅವುಗಳಿಗೆ ರಾಸಾಯನಿಕ ಸಿಂಪರಣೆ ಆಗಿರುವುದರಿಂದ ತಮ್ಮ ಹಿತ್ತಲಲ್ಲೆೀ ಬೆಳೆದ ಹಣ್ಣು ತರಕಾರಿಗಳನ್ನೇ ಉಪಯೋಗಿಸುತ್ತಾರೆ. ಅಕ್ಕಪಕ್ಕದವರಿಗೂ ಕಳುಹಿಸಿಕೊಡುತ್ತಾರೆ.ಅಡಿಕೆ ಸುಗ್ಗಿಯ ದಿನಗಳಲ್ಲಿ ಆಳುಗಳ ಕೊರತೆ ನೀಗಿಸಲು ಹಸಿ ಗೊನೆಯಿಂದ ಅಡಿಕೆಯನ್ನು ಬೇರ್ಪಡಿಸಲು ಸರಳ ಯಂತ್ರವೊಂದನ್ನು ಅವರು ತಯಾರು ಮಾಡಿದ್ದಾರೆ. ತೆಂಗಿನ ಕಾಯಿಗಳನ್ನು ಸುಲಭವಾಗಿ ಸುಲಿಯಲು ಪುಟ್ಟ ಯಂತ್ರ ರೂಪಿಸಿದ್ದಾರೆ.ಕೃಷಿಯಲ್ಲಿ ತಿಮ್ಮಪ್ಪನವರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಸೊಸೆಯಂದಿರು ಸಹಕಾರ ನೀಡುತ್ತಾರೆ. `ಈಗ ಕೂಲಿ ಕಾರ್ಮಿಕರ ಸಮಸ್ಯೆ ವಿಪರೀತವಾದ್ದರಿಂದ ತೋಟದ ಕೆಲಸಗಳು ಸರಾಗವಾಗಿ ನಡೆಯಲು ಅಡಚಣೆಯಾಗುತ್ತಿದೆ. ಬೆಳೆಗಳಿಗೆ ಸರಿಯಾದ ಬೆಲೆ ಸಿಗದಿರುವುದೂ ಸಹ ಸಂಕಟಪಡುವ ಸಂಗತಿ~ ಎಂದು ತಿಮ್ಮಪ್ಪ ಹೇಳುತ್ತಾರೆ. ಇಂದಿಗೂ ಕೃಷಿಯಲ್ಲಿ ಹೊಸ ಹೊಸ ಪ್ರಯೋಗ ನಡೆಸುತ್ತ ಖುಷಿ ಕಾಣುತ್ತಾರೆ. ಅವರ ದೂರವಾಣಿ  08183-229090

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.