ಭಾನುವಾರ, ಆಗಸ್ಟ್ 9, 2020
22 °C
ನೂರು ಕಣ್ಣು ಸಾಲದು

ಪ್ರಯೋಗಶೀಲತೆಯ ಹೊಸ ಪರ್ವ

-ನೇಸರ Updated:

ಅಕ್ಷರ ಗಾತ್ರ : | |

ಪ್ರಯೋಗಶೀಲತೆಯ ಹೊಸ ಪರ್ವ

ಸಾಮಾಜಿಕ ಸಮಸ್ಯೆಗಳು ಹಾಗೂ ವೈಯಕ್ತಿಕ ಬದುಕನ್ನು ವಸ್ತುನಿಷ್ಠವಾಗಿ ಅನಾವರಣಗೊಳಿಸುವ ಚಿತ್ರ ತಯಾರಿಕಾ ಪರ್ವವೊಂದಕ್ಕೆ ವೇದಿಕೆ ಮಾಡಿಕೊಟ್ಟಿದ್ದು ಇಟಲಿ.ಹಾಲಿವುಡ್‌ನಲ್ಲಿ ಮತ್ತು ಭಾರತದಲ್ಲಿ ರಂಗಭೂಮಿಯನ್ನೇ ಆಧಾರ ಆಗಿರಿಸಿಕೊಂಡ ಸಿನಿಮಾಗಳ ತಯಾರಿಕೆ ಆರಂಭಗೊಂಡು, ಈ ಚಿತ್ರಗಳು ಹೊಸ ಹೊಸ ಪ್ರಯತ್ನಗಳಿಗೆ ನಾಂದಿ ಹಾಡಿದವು. ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ಚಿತ್ರಗಳ ಜೊತೆ ಜೊತೆಗೆ ಸಂಗೀತ ಪ್ರಧಾನ ಮತ್ತು ನೃತ್ಯ ಪ್ರಾಮುಖ್ಯವಾಗಿದ್ದ ಚಿತ್ರಗಳು ಭಾರತೀಯ ಪ್ರೇಕ್ಷಕರನ್ನು ರಂಜಿಸುತ್ತಿರುವ ಸಂದರ್ಭದಲ್ಲಿಯೇ ತಾಂತ್ರಿಕವಾಗಿ ಹಲಬಗೆಯ ಬೆಳವಣಿಗೆಗಳು ಇದಕ್ಕೆ ನೆರವಾದವು. ಇಂತಹ ಸಂದರ್ಭದಲ್ಲಿಯೇ ಇಟಲಿಯ ಗಾಳಿ ಭಾರತಕ್ಕೂ ಬೀಸಿತು. `ಬೈಸಿಕಲ್ ಥೀಫ್' ಇಟಲಿಯಲ್ಲಿ ತಯಾರಾಗಿ ಜಾಗತಿಕ ಸಿನಿಮಾ ಕ್ಷೇತ್ರದಲ್ಲಿ ಹೊಸ ಶಕೆಯನ್ನು ಶುರುಮಾಡಿದ ಚಿತ್ರ. ನಾಟಕೀಯ ಸನ್ನಿವೇಶಗಳೊಂದಿಗೆ ಮನರಂಜನೆಯನ್ನೇ ಮುಂಚೂಣಿಗೆ ತಂದು ತಯಾರಾಗುತ್ತಿದ್ದ ಭಾರತೀಯ ಚಿತ್ರರಂಗದಲ್ಲಿ `ಬೈಸಿಕಲ್ ಥೀಫ್'ನಂತೆ ಛಾಯೆಯನ್ನು ಹೊದ್ದುಕೊಂಡ ಚಿತ್ರಗಳು ತೆರೆಗೆ ಬರಲಾರಂಭಿಸಿದವು. ಬಿಮಲ್ ರಾಯ್, ಗುರುದತ್, ರಾಜ್ ಕಪೂರ್, ಶಾಂತಾರಾಂ, ಕೆ.ಎ. ಅಬ್ಬಾಸ್ ಅವರಂತಹ ಪ್ರತಿಭಾವಂತ ನಿರ್ದೇಶಕರು ವಾಸ್ತವತೆಯನ್ನು ಬಿಂಬಿಸುವ ಹತ್ತಾರು ಚಿತ್ರಗಳನ್ನು ತಯಾರಿಸಿ ತೆರೆಗಿತ್ತರು. ನೈಜ ಅಂಶಗಳನ್ನು ಒಳಗೊಂಡ ಕಥಾ ವಸ್ತುಗಳು ರಂಜನೆಯ ಜೊತೆಗೆ ಸುತ್ತಲ ಸಮಾಜದ ಆಗುಹೋಗುಗಳನ್ನು ಅಳವಡಿಸಿಕೊಂಡು ದೃಶ್ಯರೂಪಕಗಳಾಗಿ ಮೂಡಿಬಂದವು. ಇಂತಹ ಚಿತ್ರಗಳಲ್ಲಿ `ಮುನ್ನ', `ಜಾಗ್ತೇ ರಹೋ', `ಕಾಗಜ್ ಕೆ ಪೂಲ್' ಪ್ರಮುಖವಾದವು. ಕಲಾತ್ಮಕವಾಗಿ ರೂಪುಗೊಳ್ಳುವುದರ ಜೊತೆಗೆ ಮನುಷ್ಯರ ಹಾಗೂ ಸಮಾಜದ ನಡುವಣ ನೇರ ಸಂಬಂಧ ಹೊಂದಿರುವಂತಹ ಕಥಾ ಹೂರಣವನ್ನು ಹೊಂದಿದ್ದ ಇಂತಹ ಚಿತ್ರಗಳನ್ನು ಅನುಸರಿಸುವ ನಿರ್ದೇಶಕರ ಸಂಖ್ಯೆ ಹೆಚ್ಚತೊಡಗಿತು. ಕೆಲವು ಚಾರಿತ್ರಿಕ ಸತ್ಯ ಸಂಗತಿಗಳನ್ನು ಒಳಗೊಂಡಿದ್ದ ಚಿತ್ರಗಳೂ ಆಗ ತೆರೆಗೆ ಬಂದವು. ವಾಸ್ತವ ಸ್ಥಿತಿಗತಿಗಳ ಮೇಲೆ ಬೆಳಕು ಚೆಲ್ಲುವ ಭಾರತೀಯ ಚಿತ್ರಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದ್ದ ಜನಪ್ರಿಯ ಸಿದ್ಧಸೂತ್ರಗಳನ್ನು ಬದಿಗೆ ಸರಿಸಿ ಇಟಲಿಯಲ್ಲಿ ಹೊರಹೊಮ್ಮಿದ ವಾಸ್ತವಿಕ ಚಿತ್ರಗಳ ಪರಂಪರೆಗೆ ಗಟ್ಟಿ ಬುನಾದಿ ಒದಗಿಸುವಲ್ಲಿ ಸತ್ಯಜಿತ್ ರೇ ಮೊದಲನೆಯವರಾದರು. ಬಂಗಾಲಿ ಭಾಷೆಯಲ್ಲಿ ಸತ್ಯಜಿತ್ ರೇ ಮಾಡಿದ ಇಂತಹ ಪ್ರಥಮ ಪ್ರಯೋಗವೇ `ಪಥೇರ್ ಪಾಂಚಾಲಿ'. ಬಂಗಾಲದ ಬಡ ಕುಟುಂಬವೊಂದರ ನಿಜ ಬದುಕನ್ನು ಅರ್ಥಪೂರ್ಣವಾಗಿ ಚಿತ್ರಿಸಿದ್ದ `ಪಥೇರ್ ಪಾಂಚಾಲಿ' ಭಾರತ ಮಾತ್ರವಲ್ಲ ಜಾಗತಿಕ ಚಲನಚಿತ್ರ ನಕಾಶೆಯಲ್ಲಿಯೂ ತನ್ನ ಮೊಹರನ್ನು ಒತ್ತಿತು. ಫ್ರಾನ್ಸ್ ದೇಶದ ಕಾನ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಹೊಸ ಸಂಚಲನ ಮೂಡಿಸಿದ `ಪಥೇರ್ ಪಾಂಚಾಲಿ' ರೇ ಅವರ ನಿರ್ದೇಶನದ ಮೊದಲ ಚಿತ್ರ. ದೇಶ ವಿದೇಶಗಳಲ್ಲಿ ಭಾರತದ ಚಿತ್ರಗಳ ಬಗ್ಗೆ ಚರ್ಚೆಯಾಗದ ಆ ಸಂದರ್ಭದಲ್ಲಿ `ಪಥೇರ್...' ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ವಿಶ್ವದ ಅನೇಕ ದೇಶಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಟ್ಟ ಸತ್ಯಜಿತ್ ರೇ ಅವರ `ಪಥೇರ್ ಪಾಂಚಾಲಿ'ಗೆ ಪಂಡಿತ್ ರವಿಶಂಕರ್ ಅತ್ಯಂತ ಪರಿಣಾಮಕಾರಿ ಸಂಗೀತವನ್ನು ಒದಗಿಸಿದ್ದರು. ಮೇಕಪ್ ಸಾಧನಗಳ ಸಹಾಯವಿಲ್ಲದ ಕಲಾವಿದರು ತಮ್ಮ ನಿಜ ಪೋಷಾಕಿನಲ್ಲಿಯೇ ಚಿತ್ರದಲ್ಲಿ ಅಭಿನಯಿಸಿದ್ದರು. ಅವರಲ್ಲಿ ಅನೇಕರು ಕ್ಯಾಮೆರಾಗೆ ಮುಖ ಮಾಡಿದ್ದು ಮೊದಲ ಬಾರಿ.ಆವರೆಗೂ ಜನಪ್ರಿಯವಾಗಿದ್ದ ಚಿತ್ರಗಳ ಯಾವ ಅಂಶಗಳೂ ಇಲ್ಲದ `ಪಥೇರ್ ಪಾಂಚಾಲಿ'ಯಲ್ಲಿ ಹಾಡು ಇರಲಿಲ್ಲ. ಖ್ಯಾತ ನಟ ನಟಿಯರೂ ಇರಲಿಲ್ಲ. `ಪಥೇರ್ ಪಾಂಚಾಲಿ' ಸತ್ಯಜಿತ್ ರೇ ಅವರು ನಿರ್ಮಿಸಲು ಹೊರಟಿದ್ದ ಮೂರು ಚಿತ್ರಗಳ ಸರಣಿಯಲ್ಲಿ ಮೊದಲ ಭಾಗವಾಗಿತ್ತು. ನಂತರ  ಅವರು `ಅಪಾರಜಿತೋ' ಹಾಗೂ `ಅಪೂರ ಸಂಸಾರ' ಭಾಗಗಳನ್ನು ಮುಂದಿನ ಕೆಲವರ್ಷಗಳ ಅಂತರದಲ್ಲಿ ತಯಾರಿಸಿ ಆ ಸರಣಿಯನ್ನು ಅಂತ್ಯಗೊಳಿಸಿದರು. ಹೆಚ್ಚಿನ ಬಂಡವಾಳವಿಲ್ಲದೆ ಆರಂಭಿಸಿದ್ದ `ಪಥೇರ್ ಪಾಂಚಾಲಿ' ಚಿತ್ರೀಕರಣ ನಿರಂತರವಾಗೇನೂ ಸಾಗಿರಲಿಲ್ಲ. ಪದೇ ಪದೇ ಎದುರಾಗುತ್ತಿದ್ದ ಹಣಕಾಸಿನ ಸಮಸ್ಯೆಗಳ ನಡುವೆಯೂ ರೇ ಅವರ ಉತ್ಸಾಹ ತಗ್ಗಿರಲಿಲ್ಲ. ಕೊನೆಗೆ ಪಶ್ಚಿಮ ಬಂಗಾಲ ಸರ್ಕಾರದ ಸಹಾಯ ಹಸ್ತದೊಡನೆ ಮೂರು ಚಿತ್ರಗಳ ಸರಣಿಯಲ್ಲಿ ಮೊದಲ ಚಿತ್ರವನ್ನು ಮುಗಿಸಿದ ಮೇಲೆ `ಪಥೇರ್ ಪಾಂಚಾಲಿ'ಯ ಅಸಲಿಯತ್ತನ್ನು ವಿಶ್ವದ ಸಿನಿಮಾ ಜಗತ್ತೇ ಅಚ್ಚರಿಯಿಂದ ನೋಡಿ ಮೆಚ್ಚಿತು. ಸತ್ಯಜಿತ್ ರೇ ಅವರ ಮುಂದಿನ ನಡೆ ಜಾಗತಿಕ ಸಿನಿಮಾ ಇತಿಹಾಸದಲ್ಲಿ ಭಾರತೀಯ ನಿರ್ದೇಶಕರೊಬ್ಬರ ಹೆಸರನ್ನು ಅಚ್ಚಳಿಯದೆ ಮೂಡಿಸಿತು. ಸುಮಾರು ಮೂವತ್ತು ಸಿನಿಮಾಗಳನ್ನು ರೇ ನಿರ್ಮಿಸಿ ಪ್ರಪಂಚದ ಶ್ರೇಷ್ಠ ನಿರ್ದೇಶಕರ ಸಾಲಿನಲ್ಲಿ ಸೇರಿ ವಿಶೇಷ ಆಸ್ಕರ್ ಪ್ರಶಸ್ತಿಗೂ ಪಾತ್ರರಾದರು. ನೂರು ವಸಂತಗಳನ್ನು ಕಂಡಿರುವ ಭಾರತೀಯ ಸಿನಿಮಾ ರಂಗದಲ್ಲಿ ಹೊಸ ದೃಷ್ಟಿಕೋನವೊಂದನ್ನು ಹುಟ್ಟುಹಾಕಿದ ರೇ ಅವರ ಹೆಜ್ಜೆಗಳಲ್ಲಿ ಹೆಜ್ಜೆಯನ್ನಿಡುತ್ತಾ ನಡೆದವರು ಹಲವಾರು ಮಂದಿ. ಅವರುಗಳಲ್ಲಿ ರಿತ್ವಿಕ್ ಘಟಕ್, ತಪನ್ ಸಿನ್ಹ, ಅಶಿತ್ ಸೇನ್, ಮೃಣಾಲ್ ಸೇನ್, ಗಿರೀಶ ಕಾಸರವಳ್ಳಿ ಮೊದಲಾದವರು ಮುಖ್ಯರು. ನಿಜ ನೆಲೆಗಟ್ಟಿನ ಮೇಲೆ ಚಿತ್ರಗಳನ್ನು ಬಿಂಬಿಸುವ ಪರಂಪರೆಯನ್ನು ಮುಂದುವರಿಸಿದ ಅನೇಕ ನಿರ್ದೇಶಕರು ಭಾರತದಲ್ಲಿದ್ದಾರೆ. ಹಿಂದಿ ಭಾಷೆಯೊಂದಿಗೆ ಬಂಗಾಲಿ, ಮರಾಠಿ, ಕನ್ನಡ, ಮಲಯಾಳಂ, ತಮಿಳು ಮೊದಲಾದ ಪ್ರಾದೇಶಿಕ ಭಾಷೆಗಳೂ ಕೂಡ ಕಲಾತ್ಮಕ ಚಿತ್ರಗಳ ತಯಾರಿಕೆಯಲ್ಲಿ ತಮ್ಮ ಇರುವನ್ನು ದಾಖಲಿಸಿವೆ. ತಾಂತ್ರಿಕ ಕ್ಷೇತ್ರದಲ್ಲಾಗುತ್ತಿರುವ ಅಗಾಧ ಬೆಳವಣಿಗೆಯ ಜೊತೆ ಜೊತೆಯಲ್ಲಿಯೇ ವಿವಿಧ ನಮೂನೆಯ ಚಿತ್ರಗಳು ಭಾರತೀಯ ಭಾಷೆಗಳಲ್ಲಿ ನಿರಂತರವಾಗಿ ತಯಾರಾಗುತ್ತಿವೆ. ವಸ್ತು ವಿಶೇಷ, ತಾಂತ್ರಿಕ ಕೌಶಲ್ಯ, ಪರಿಣಾಮಕಾರಿ ಅನಾವರಣ, ಬಹುಮುಖ ಮನರಂಜನೆ, ಸಂಗೀತ ವೈವಿಧ್ಯ, ಚಾರಿತ್ರಿಕ ಪರಂಪರೆ ಹೀಗೆ ಹಲವು ಅಂಶಗಳನ್ನು ಅಪ್ಪಿಕೊಂಡ ಭಾರತೀಯ ಚಿತ್ರರಂಗ ಭದ್ರವಾಗಿ ನೆಲೆಯೂರುವುದರೊಂದಿಗೆ ಅತಿ ದೊಡ್ಡ ಉದ್ಯಮವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಜಗತ್ತಿನ ಅತಿ ದೊಡ್ಡ ಚಲನಚಿತ್ರ ತಯಾರಿಕೆಯ ದೇಶಗಳಲ್ಲಿ ಒಂದೆಂಬ ಮನ್ನಣೆಗೂ ಪಾತ್ರವಾಗಿರುವ ಭಾರತದ ಚಲನಚಿತ್ರರಂಗ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಗಮನ ಸೆಳೆಯುವಂತಹ ಸಿನಿಮಾಗಳನ್ನು ತಯಾರಿಸುವ ರಾಷ್ಟ್ರವೆಂದು ಗುರುತಿಸಿಕೊಂಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.