ಗುರುವಾರ , ಅಕ್ಟೋಬರ್ 17, 2019
21 °C

ಪ್ರಯೋಗಶೀಲ ಚಿತ್ರಮಂದಿರದಲ್ಲಿ

Published:
Updated:

ಮಾವಳ್ಳಿಯ ಒಬ್ಬ ಹುಡುಗ. ತನ್ನನ್ನು ತಾನು ಸಚಿನ್ ತೆಂಡುಲ್ಕರ್ ಅಥವಾ ರಾಹುಲ್ ದ್ರಾವಿಡ್ ಎಂದುಕೊಂಡು ಕ್ರಿಕೆಟ್ ಆಡುತ್ತಿದ್ದಾನೆ. ಆ ಹುಡುಗನ ಆಟವನ್ನು ಕಂಡಿದ್ದೇ, ನಿರ್ದೇಶಕ ವೆಂಕಟಾಚಲ ಅವರ ಮನಸ್ಸಿನಲ್ಲಿ ಕಥೆಯೊಂದು ಮೂಡಿದೆ. ಆ ಕಥೆಯೇ- `ಚಿತ್ರಮಂದಿರದಲ್ಲಿ..~.`ಚಿತ್ರಮಂದಿರದಲ್ಲಿ..~ ಸಿನಿಮಾದ ಚಿತ್ರೀಕರಣವನ್ನು ಸದ್ದಿಲ್ಲದೆ ಪೂರೈಸಿರುವ ವೆಂಕಟಾಚಲ, ಚಿತ್ರದ ಶೀರ್ಷಿಕೆಗೆ ನ್ಯಾಯ ಒದಗಿಸುವ ದೃಷ್ಟಿಯಿಂದ ಶೇ 40ರಷ್ಟು ಚಿತ್ರೀಕರಣವನ್ನು ಉಲ್ಲಾಸ್ ಚಿತ್ರಮಂದಿರದಲ್ಲಿ ನಡೆಸಿದ್ದಾರೆ. ಈ ಸಿನಿಮಾದ ಮೂಲಕ, ರಂಗಭೂಮಿ ಹಿನ್ನೆಲೆಯ ವೆಂಕಟಾಚಲ ಅವರು ಸತತವಾಗಿ ಏಳು ವರ್ಷ ಕಂಡ ಕನಸನ್ನು ನನಸಾಗಿಸಿಕೊಂಡಿದ್ದಾರೆ.`ಇದು ಪ್ರಯೋಗಾತ್ಮಕ ಸಿನಿಮಾ. ಇದರಲ್ಲಿ ತುಂಬಾ ಹೊಸ ಅಂಶಗಳಿವೆ. ಬೆಂಗಳೂರಿನ ಬದುಕು ಮತ್ತು ಚಿತ್ರಮಂದಿರದ ಬದುಕನ್ನು ಬೆಸೆದು ವಿಭಿನ್ನ ಕತೆಯೊಂದನ್ನು ಹೆಣೆದಿರುವೆ. ಇದನ್ನು ಕಮರ್ಷಿಯಲ್ ಅಥವಾ ಕಲಾತ್ಮಕ ಸಿನಿಮಾ ಎಂದು ವಿಭಾಗ ಮಾಡುವುದಿಲ್ಲ. ಅದನ್ನು ಪ್ರೇಕ್ಷಕರು ನಿರ್ಧರಿಸಬೇಕು~ ಎನ್ನುವುದು ಅವರ ಅನಿಸಿಕೆ.`ಒಂದು ಪ್ರೀತಿಯ ಕಥೆ~ ಚಿತ್ರದಲ್ಲಿ ನಟಿಸಿದ್ದ ಮತ್ತು ಅನೇಕ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರುವ ಶಂಕರ್ ಈ ಚಿತ್ರದ ನಾಯಕ. `ಇಂಥದ್ದೊಂದು ಸವಾಲಿನ ಪಾತ್ರಕ್ಕಾಗಿ ಕಾಯುತ್ತಿದ್ದೆ. ನನ್ನ ದೇಹ ಮತ್ತು ಧ್ವನಿಯಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡು ಪಾತ್ರ ನಿರ್ವಹಿಸಿರುವೆ. ಭಯ ತುಂಬಿದ ಪ್ರೀತಿಯ ಕತೆ ಇದು. ಅಂತ್ಯದಲ್ಲಿ ವಾಸ್ತವವನ್ನು ತೋರಿಸಲಾಗಿದೆ~ ಎಂದು ಶಂಕರ್ ಹೇಳಿದರು.ಕಿರುತೆರೆ ನಟಿ ನಮಿತಾ, ಪಾತ್ರಗಳ ಏಕತಾನತೆಯಿಂದಾಗಿ ಮೂರು ವರ್ಷಗಳಿಂದ ನಟನೆಯಿಂದ ದೂರವಾಗಿದ್ದರಂತೆ. ಇದೀಗ `ಚಿತ್ರಮಂದಿರದಲ್ಲಿ~ ಸಿನಿಮಾದಲ್ಲಿ ಗಂಭೀರ ಪಾತ್ರ ಅವರಿಗೆ ದೊರೆತಿದೆ. `ಇದುವರೆಗೂ ತಾನು ಇಂಥ ಪಾತ್ರದಲ್ಲಿ ನಟಿಸಿದ್ದೇ ಇಲ್ಲ~ ಎಂದು ನಮಿತಾ ಹೇಳಿಕೊಂಡರು.ಮಿಮಿಕ್ರಿ ಗೋಪಿ ಅವರಿಗೆ ಈ ಸಿನಿಮಾದಲ್ಲಿ ನಿರ್ಮಾಪಕನ ಪಾತ್ರ. ಅದನ್ನು ಖುಷಿಯಿಂದ ಹೇಳಿಕೊಂಡ ಅವರು ಕನ್ನಡದ ಕೆಲವು ನಿರ್ಮಾಪಕರ ಅನುಕರಣೆ ಮಾಡಿ ತೋರಿಸಿದರು. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಅದರಲ್ಲೊಂದು ಗೀತೆಯನ್ನು ಹಂಸಲೇಖಾ ಬರೆದಿದ್ದಾರೆ. ಸಂಗೀತ ಪ್ರವೀಣ್ ಡಿ ರಾವ್ ಅವರದು.

 

Post Comments (+)