ಪ್ರಯೋಗಶೀಲ `ಸ್ವರ ಸಂತ'

7

ಪ್ರಯೋಗಶೀಲ `ಸ್ವರ ಸಂತ'

Published:
Updated:

ಬೆಂಗಳೂರು: ಅದು ದಕ್ಷಿಣಾದಿ ಮತ್ತು ಉತ್ತರಾದಿ ಎರಡೂ ಸಂಗೀತ ಶೈಲಿಗಳಲ್ಲಿ ಇರುವ ರಾಗ, `ಖಮಾಚ್'. ಈ ಒಂದು ಸುಮಧುರ ರಾಗದಿಂದಲೇ ಬಿಳಿ ಗಡ್ಡದ `ಸ್ವರ ಸಂತ' ಪಂಡಿತ್ ರವಿಶಂಕರ್ ಅವರು ಸಿತಾರ್ ನಾದದಲ್ಲಿ  ಹಲವಾರು ರಾಗಗಳ ಎಳೆಯನ್ನು ಸೃಷ್ಟಿಸಿ ಒಂದು ಅದ್ಭುತ `ರಾಗ ರಸ' ಉಣಿಸುತ್ತಿದ್ದರು. ಎಂಟು ವರ್ಷಗಳ ಹಿಂದೆ ಅರಮನೆ ಮೈದಾನದಲ್ಲಿ ನಡೆದ ಕಛೇರಿಯಲ್ಲಿ ಈ ರಾಗದ ಮೂಲಕ ಕೇಳುಗರಲ್ಲಿ ಸಂಚಲನ ಮೂಡಿಸಿದ್ದು ಇಂದಿಗೂ ಸಂಗೀತಪ್ರಿಯರ ಮನದಲ್ಲಿ ಅಚ್ಚೊತ್ತಿದೆ.ಈ ನಾದ ಯೋಗಿಯ ಕೈಬೆರಳುಗಳು ಸಿತಾರ್ ತಂತಿಯ ಮೇಲೆ ಸರಸರನೆ ಓಡಾಡುವುದು ಕೂಡ ಒಂದು ಮಾಂತ್ರಿಕತೆಯೇ. ಸಿತಾರ್ ಮೂಲಕ ವಿಶ್ವಮಟ್ಟದಲ್ಲಿ ಭಾರತೀಯ ಸಂಗೀತ ಜನಪ್ರಿಯಗೊಳಿಸಿದ ಈ ನಾದ ಋಷಿಗೆ ಸಂಗೀತದಲ್ಲಿ ಪ್ರಯೋಗಶೀಲತೆಯೇ ಉಸಿರಾಗಿತ್ತು. ಹೀಗಾಗಿ ಶಾಸ್ತ್ರೀಯ ಸಂಗೀತದಲ್ಲಿ ಅವರ ಪ್ರಯೋಗಾತ್ಮಕ ಸಂಗೀತ ಜಗದ್ವಿಖ್ಯಾತವಾಯಿತು.ಸಪ್ತಸ್ವರಗಳು ಸಾಗರದಾಚೆಗೆ ಅನುರಣಿಸಲು, ಅಲ್ಲಿನ ಜನ ಆಸ್ವಾದಿಸಲು ಕಾರಣಕರ್ತರು ರವಿಶಂಕರ್. ಇದಕ್ಕಾಗಿಯೇ ಅವರ ಸಂಗೀತ ಕಛೇರಿ ಮತ್ತು ಧ್ವನಿಮುದ್ರಿಕೆಗಳು ಇಂದಿನ ಫ್ಯೂಷನ್ ಮತ್ತು ವರ್ಲ್ಡ್ ಮ್ಯೂಸಿಕ್‌ಗಳಿಗೆ ಭದ್ರ ಬುನಾದಿ ಎಂಬುದನ್ನು ಎಲ್ಲ ಸಂಗೀತಗಾರರೂ ಒಪ್ಪುತ್ತಾರೆ. ಅವರ ಕಛೇರಿಗಳಿಗೆ ಶಾಸ್ತ್ರೀಯ ಸಂಗೀತ ಮತ್ತು ಪ್ರಯೋಗಾತ್ಮಕ ಸಂಗೀತ ಕೇಳುವ ಆಸಕ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ.ಬೆಂಗಳೂರಿನಲ್ಲಿ ನಡೆದ ಅವರ ಅನೇಕ ಕಛೇರಿಗಳಲ್ಲಿ ಈ ಎರಡೂ ವರ್ಗದ ಜನ ಸಾಗರೋಪಾದಿಯಲ್ಲಿ ನೆರೆಯುತ್ತಿದ್ದುದು ಕೂಡ ಪಂಡಿತ್‌ಜಿಯ ಈ ವಿಭಿನ್ನ ಸಂಗೀತ ಗುಣಕ್ಕಾಗಿಯೇ.ಒಂದು ಅರ್ಥದಲ್ಲಿ ಶಾಸ್ತ್ರೀಯ ಸಂಗೀತಪ್ರಿಯರಿಗೆ ರವಿಶಂಕರ್ `ಪಂಡಿತ್‌ಜಿ'. ಆದರೆ ಫ್ಯೂಷನ್ ಸಂಗೀತಪ್ರಿಯರಿಗೆ ಅವರು ಅಕ್ಷರಶಃ `ಗಾಡ್ ಫಾದರ್'. ಪಂಡಿತ್‌ಜಿ ಮತ್ತು ಯೆಹೂದಿ ಮೆನ್ಯುಹಿನ್ ಅವರು ಅನೇಕ ಕಛೇರಿಗಳಲ್ಲಿ ನಾದ ಝರಿ ಹರಿಸಿದ್ದಾರೆ. ಅವರೊಂದಿಗೆ ನಡೆಸಿದ ಸ್ವರ ಒಡನಾಟ ಕೂಡ ವಿಶ್ವಮಟ್ಟದಲ್ಲಿ ಮೈಲಿಗಲ್ಲಾಗಿ ಉಳಿದಿದೆ.ಇವರಿಬ್ಬರ `ವೆಸ್ಟ್ ಟು ಈಸ್ಟ್' ಧ್ವನಿಮುದ್ರಿಕೆ ಜಾಗತಿಕ ದಾಖಲೆಯ ಭಾಷ್ಯ ಬರೆದಿದೆ. 1960 ದಶಕದಿಂದ ಈಚೆಗೆ ಪಾಶ್ಚಾತ್ಯ ರಾಷ್ಟ್ರಗಳಿಂದ ಭಾರತಕ್ಕೆ ಸಿತಾರ್ ಸೇರಿದಂತೆ ಸಂಗೀತ ಕಲಿಯಲು ವಿದೇಶೀಯರು ಬರುತ್ತಿದ್ದದ್ದು ಕೂಡ, ರವಿಶಂಕರ್ ಅಲ್ಲಿ ಹೋಗಿ  ಅವರಿಗೆ ಸಂಗೀತ ಪರಿಚಯಿಸಿದ ಮೇಲೆಯೇ ಎಂಬುದು  ಈ ಸ್ವರ ಮಾಂತ್ರಿಕನ ಸಂಗೀತ ಶಕ್ತಿಗೆ ನಿದರ್ಶನ. ಅಪರೂಪದ ರಾಗ ಸೃಷ್ಟಿ: ಪಂಡಿತ್‌ಜೀ ಕೆಲವು ಅಪರೂಪದ ರಾಗಗಳನ್ನು ಸೃಷ್ಟಿಸಿದ್ದರು. ರಾಗ ಜೋಗೇಶ್ವರಿ, ಪರಮೇಶ್ವರಿ, ತಿಲಕ್ ಶ್ಯಾಮ್ ಅವರು ಸೃಷ್ಟಿಸಿದ ಬಹಳ ಅಪರೂಪದ ರಾಗಗಳು. ಕರ್ನಾಟಕ ಸಂಗೀತದ `ಸಿಂಹೇಂದ್ರ ಮಧ್ಯಮ' ರಾಗವನ್ನು ಹಿಂದೂಸ್ತಾನಿ ಸಂಗೀತಕ್ಕೆ ಅಳವಡಿಸಿ ಸಿತಾರ್‌ನಲ್ಲಿ ನುಡಿಸುತ್ತಿದ್ದರು. ಯಮನ್ ಕಲ್ಯಾಣ್ ಅವರ ಅತ್ಯಂತ ಮೆಚ್ಚಿನ ರಾಗವಾಗಿತ್ತು.ಪ್ರಯೋಗಶೀಲ `ಸ್ವರ ಸಂತ'

ಹೆಚ್ಚು ಕಡಿಮೆ ಎಲ್ಲ ಕಛೇರಿಗಳಲ್ಲಿ ಈ ಸುಮಧುರ ರಾಗಕ್ಕೆ ಆದ್ಯತೆ ಇರುತ್ತಿತ್ತು. ತಬಲಾ ಜತೆ ಕೆಲವು ರಾಗಗಳ ಸವಾಲ್-ಜವಾಬ್ ಕೇಳುಗರನ್ನು ರೋಮಾಂಚನಗೊಳಿಸುತ್ತಿತ್ತು. ಸಿತಾರ್‌ನ ಮಂದ್ರ ತಂತಿಯಲ್ಲಿ ಅವರ ನುಡಿಸಾಣಿಕೆಯೂ ಅದ್ಭುತ ಅನುಭವ ನೀಡುತ್ತಿತ್ತು. ಇದರಲ್ಲಿನ ಕರ್ಜ್ ತಂತಿ ಬಳಕೆಯೂ ಬಹಳ ಅಪರೂಪದ್ದೇ ಆಗಿತ್ತು.

ಸಂಗೀತದ ಗರಿ ಗರಿಯಾದ ಸ್ವರಪುಂಜಗಳನ್ನು ಹಾಗೆಯೇ ಶಿಷ್ಯಂದಿರರಿಗೆ ಧಾರೆಯೆರೆಯುತ್ತಿದ್ದುದು ಅವರ ವಿಶಾಲ ಮನೋಭಾವನೆಗೆ ಸಾಕ್ಷಿ. ಸಪ್ತಸ್ವರಗಳನ್ನು ಅವರು ಜೋಡಿಸುವ ರೀತಿ ಸಂಕೀರ್ಣ ಮತ್ತು ಅತ್ಯಂತ ವಿಶಿಷ್ಟವಾದುದು.ಬೆಂಗಳೂರಿಗೆ ಬಂದಾಗ ಅವರು ಹಿಂದೂಸ್ತಾನಿ ರಾಗ ಮಾತ್ರವಲ್ಲದೆ ಕರ್ನಾಟಕ ಸಂಗೀತದ ಕೆಲವು ವಿಶಿಷ್ಟ ರಾಗಗಳನ್ನು ನುಡಿಸುತ್ತಿದ್ದರು. ದಕ್ಷಿಣಾದಿಯ `ಕದನ ಕುತೂಹಲ' ರಾಗ ಮತ್ತು ವಾಚಸ್ಪತಿ ರಾಗಗಳಿಂದ ಒಂದೇ ಕಛೇರಿಯಲ್ಲಿ ಒಂದೇ ವಾದ್ಯದ ಮೂಲಕ ಎರಡೂ ಶೈಲಿಯ ಸಂಗೀತವನ್ನು ಆಸ್ವಾದಿಸುವ ಸುಯೋಗ ಕೇಳುಗರದ್ದಾಗಿತ್ತು.ದಕ್ಷಿಣ ಭಾರತದಲ್ಲಿ ಸಿತಾರ್ ಸವಿ

ಅದು 1948-49 ನೇ ಇಸವಿ. ಆಗ ಬೆಂಗಳೂರಿನಲ್ಲಿ ಅಷ್ಟೇ ಅಲ್ಲ, ಇಡೀ ದಕ್ಷಿಣ ಭಾರತದಲ್ಲೇ ಸಿತಾರ್ ಎಂಬ ತಂತಿವಾದ್ಯ ಪ್ರಚಲಿತದಲ್ಲಿರಲೇ ಇಲ್ಲ. ಆ ಸಮಯದಲ್ಲಿ ಬೆಂಗಳೂರಿನ ಜಯನಗರದಲ್ಲಿದ್ದ ನಮ್ಮ ತಂದೆ ಪಂ. ಎನ್.ಆರ್. ರಾಮರಾವ್ ಅವರು ರವಿಶಂಕರ್ ಅವರ ಶಿಷ್ಯತ್ವ ಪಡೆದರು. ಪಂಡಿತ್‌ಜಿ ಬೆಂಗಳೂರಿಗೆ ಬಂದಾಗಲೆಲ್ಲ ನಮ್ಮ ಮನೆಯಲ್ಲೇ ವಾಸ. ತಂದೆಯವರು ಸುಮಾರು ಐವತ್ತು ವರ್ಷ ಪಂಡಿತ್‌ಜಿ ಶಿಷ್ಯರಾಗಿ ಅವರೊಂದಿಗೆ ವಿಶ್ವದಾದ್ಯಂತ ಕಛೇರಿ ನೀಡಿದ್ದರು' ಎಂದು ನೆನಪಿಸಿಕೊಳ್ಳುತ್ತಾರೆ ರಾಮರಾವ್ ಅವರ ಮಗ ಪಂ. ಶುಭೇಂದ್ರ ರಾವ್. `ಬಿ ಟ್ರು ವಿತ್ ಯುವರ್ ಮ್ಯೂಸಿಕ್; ಬಿ ಟ್ರು ವಿತ್ ಯುವರ್‌ಸೆಲ್ಫ್.. ಇದು ಪಂ. ರವಿಶಂಕರ್ ಹೇಳುವ ಮಂತ್ರ ಆಗಿತ್ತು. ದೆಹಲಿಯಲ್ಲಿ ಸುಮಾರು 10 ವರ್ಷ ಅವರ ಜತೆಯಲ್ಲೇ ಇದ್ದು ಸಿತಾರ್ ಕಲಿತೆ. ಒಬ್ಬ ಸಂಗೀತ ಗುರು ರಾಗಗಳನ್ನು ಕಲಿಸಬಹುದು. ಆದರೆ ಗುರು-ಶಿಷ್ಯ ಪರಂಪರೆಯಲ್ಲಿ ಇದ್ದುಕೊಂಡು ಬೆಳೆಸಿಕೊಂಡ ಗುರು ಭಕ್ತಿ ಮಾತ್ರ ಜೀವನದುದ್ದಕ್ಕೂ ದಾರಿದೀಪವಾಗಿಯೇ ಉಳಿದಿದೆ' ಎನ್ನುವ ಅವರು, `ದಕ್ಷಿಣ ಭಾರತದ ಸಂಗೀತ ತ್ರಿಮೂರ್ತಿಗಳಲ್ಲಿ ತ್ಯಾಗರಾಜರಿದ್ದರು, ಹಾಗೇ ಉತ್ತರ ಭಾರತದಲ್ಲಿ ತಾನ್‌ಸೇನ್. ಅವರದ್ದೇ ಸಾಲಿಗೆ ಪಂ. ರವಿಶಂಕರ್ ಅವರನ್ನೂ ಧಾರಾಳವಾಗಿ ಸೇರಿಸಬಹುದು' ಎಂದು ಹೇಳುತ್ತಾರೆ.ಸಂಗೀತದ ಕಂಪಿನ ಜತೆಗೆ ಮಾನಸಿಕ ನೆಮ್ಮದಿಗೆ ಹಾಸ್ಯವೂ ಬೇಕು ಎಂಬುದು ಪಂಡಿತ್‌ಜಿ ಅವರ ವಾದ. ಹಾಸ್ಯಪ್ರಜ್ಞೆ ಹೇಗಿತ್ತು ಎಂದರೆ ಬಿಳಿ ಗಡ್ಡ ತೋರಿಸಿ `ನನ್ನ ಮೈ ತೂಕ ಇಲ್ಲಿ ಹೆಚ್ಚಾಗಿದೆ' ಎನ್ನುತ್ತಾ ನಗುತ್ತಿದ್ದರು ಎಂದು ಅವರ ಜತೆಗಿನ 40 ವರ್ಷದ ಒಡನಾಟ ಸ್ಮರಿಸುತ್ತಾರೆ ಶುಭೇಂದ್ರ.ಬೆಂಗಳೂರಲ್ಲಿ ಕೊನೆ ಝಲಕ್

ಪಂಡಿತ್‌ಜಿ ಫೆಬ್ರುವರಿ 7ರಂದು ಬೆಂಗಳೂರಿಗೆ ಬಂದಿದ್ದರು. ತಮ್ಮ ಮಗಳು ಅನುಷ್ಕಾ ಜತೆ `ಫೇರ್‌ವೆಲ್ ಟು ಬೆಂಗಳೂರು' (ಬೆಂಗಳೂರಿಗೆ ವಿದಾಯ) ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾವಿರಾರು ಜನರನ್ನು ನಾದಲೋಕದಲ್ಲಿ ಮುಳುಗಿಸಿದರು.ಜನತೆಯತ್ತ ಆದರದ ಹೊಳೆಯನ್ನೂ ಹರಿಸಿದರು. ಆ ನೀಳ ಬೆರಳುಗಳ ಮೂಲಕ ಸಿತಾರ್ ತಂತಿಯ ಸ್ಪರ್ಶ ಮಾಡಿದಾಗ ಅದರಲ್ಲಿ ಯಾವುದೋ ಮಾಂತ್ರಿಕತೆ ಇದೆ ಎಂಬುದು ಕೂಡ ಸ್ಪಷ್ಟವಾಯಿತು. ತಂದೆಗೆ ಸರಿಸಮಾನವಾಗಿ ಮಗಳು ಅನುಷ್ಕಾ ಸಿತಾರ್‌ಗೆ ಬೆಂಬಲ ನೀಡಿದರು. ತಂದೆಯ ವೃದ್ಧ ಬೆರಳುಗಳು ತಂತಿ ಮೀಟುವಲ್ಲಿ ಸೋಲ ತೊಡಗಿದಾಗ ಮೀಟುಗಳ ಎಳೆಯನ್ನು ಗಟ್ಟಿ ಹಿಡಿಯುತ್ತಿದ್ದವರು ಅನುಷ್ಕಾ. ಬೆಂಗಳೂರಿಗೆ ವಿದಾಯ ಹೇಳಲು ಬಂದ ಈ `ಸ್ವರ ಚೇತನ' ಇಂದು ನಾದಲೋಕಕ್ಕೇ ಶಾಶ್ವತ ವಿದಾಯ ಹೇಳಿದ್ದಾರೆ. ಅಮೆರಿಕದಲ್ಲಿ ನವೆಂಬರ್ 4ರಂದು ನಾದ ಯೋಗಿಯ ಸಂಗೀತ ಕಛೇರಿ ಅವರ ಬದುಕಿನ ಕೊನೆಯ ಕಛೇರಿ. ಜೀವನದ ಇಳಿಸಂಜೆಯಲ್ಲಿ ಸಾಕಷ್ಟು ದೈಹಿಕ ಬಳಲಿಕೆ ಇತ್ತು. ಅವರು ವೇದಿಕೆ ಮೇಲೆ ಆಕ್ಸಿಜನ್ ಸಿಲಿಂಡರ್ ಹಾಕಿಕೊಂಡು ಒಂದು ತಾಸಿಗೂ ಹೆಚ್ಚು ಕಾಲ ಸಿತಾರ್ ನುಡಿಸಿದರು. ಅದು ಎಂದೆಂದಿಗೂ ಮರೆಯದ ದಾಖಲೆಯಾಗಿ ಉಳಿಯಿತು. ಸಿತಾರ್ ಮಾಧುರ್ಯದ ಹೊಳೆಯಲ್ಲಿ ಮಿಂದೆದ್ದ ಈ `ಸ್ವರ ಸಾಮ್ರಾಟ' ಮಿನುಗುವ ನಕ್ಷತ್ರದಂತೆ ಎಂದೆಂದೂ ಅಜರಾಮರ.ತಿಳಿಸಾರು ಇಷ್ಟ

`ಪಂಡಿತ್‌ಜೀ ಬೆಂಗಳೂರಿನ ಜಯನಗರದ ನಮ್ಮ ಮನೆಗೆ 2004ರ ವರೆಗೆ (ನನ್ನ ತಂದೆ ಪಂ. ರಾಮರಾವ್ ತೀರಿಕೊಳ್ಳುವವರೆಗೆ) ಪ್ರತೀ ವರ್ಷ ಬರುತ್ತಿದ್ದರು. ನಾಲ್ಕು ದಿನ ನಮ್ಮಲ್ಲೇ ಉಳಿದುಕೊಳ್ಳುತ್ತಿದ್ದರು. ನಮ್ಮ ಅಮ್ಮ ಮಾಡುವ ತಿಳಿಸಾರು ಅವರಿಗೆ ಬಹಳ ಇಷ್ಟವಾಗಿತ್ತು. ಲೋಟದಲ್ಲಿ ಹಾಕಿಸಿಕೊಂಡು ಖುಷಿಯಿಂದ ಕುಡಿಯೋರು.ಅವರು ಮನೆಗೆ ಬರ್ತಾರೆ ಎಂದರೆ ಮನೆಯಲ್ಲಿ ದೀಪಾವಳಿ, ಗಣೇಶ ಹಬ್ಬದಂತೆ ಸಂಭ್ರಮ ವಾತಾವರಣ. ಸಂಗೀತದ ಕಡೆಗೆ ಮಾತು ಹೊರಳಿದಾಗಲೆಲ್ಲ ಗುರು-ಶಿಷ್ಯ ಸಂಬಂಧದ ಬಗ್ಗೆ ಮಾತನಾಡೋರು. ಶಿಷ್ಯ ಎಂದರೆ ಆತ ಕಲಿಯುವವರೆಗೆ ಮಾತ್ರ ಶಿಷ್ಯ ಅಲ್ಲ. ಆ ಸಂಬಂಧ ಜೀವನ ಪರ್ಯಂತ ಹಾಗೇ ಇರಬೇಕು. ಅದನ್ನು ಜತನವಾಗಿ ಕಾಪಾಡುವುದು ಶಿಷ್ಯನ ಕರ್ತವ್ಯ ಎನ್ನುತ್ತಿದ್ದರು ಈ ಸಂಗೀತ ಸಂತ'.

-ಪಂ. ಶುಭೇಂದ್ರ ರಾವ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry