`ಪ್ರಯೋಗ' ನಡೆಸಲು ಅವಕಾಶ

7
ಕ್ರಿಕೆಟ್: ಭಾರತ- ಜಿಂಬಾಬ್ವೆ ನಾಲ್ಕನೇ ಏಕದಿನ ಪಂದ್ಯ ಇಂದು

`ಪ್ರಯೋಗ' ನಡೆಸಲು ಅವಕಾಶ

Published:
Updated:
`ಪ್ರಯೋಗ' ನಡೆಸಲು ಅವಕಾಶ

ಬುಲವಾಯೊ (ಪಿಟಿಐ): ಈಗಾಗಲೇ ಸರಣಿ ಗೆಲುವಿನ ಮುನ್ನಡೆ ಸಾಧಿಸಿದ ಹುಮ್ಮಸ್ಸಿನಲ್ಲಿರುವ ಭಾರತ ತಂಡ ಗುರುವಾರ ನಡೆಯಲಿರುವ ನಾಲ್ಕನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು ಎದುರಿಸಲಿದೆ.ಆಡಿದ ಮೂರೂ ಪಂದ್ಯಗಳಲ್ಲಿ ಗೆಲುವು ಪಡೆದಿರುವ ವಿರಾಟ್ ಕೊಹ್ಲಿ ಬಳಗ ಇದೀಗ ಐದು ಪಂದ್ಯಗಳ ಸರಣಿಯನ್ನು `ಕ್ಲೀನ್‌ಸ್ವೀಪ್' ಮಾಡುವತ್ತ ಕಣ್ಣು ನೆಟ್ಟಿದೆ. ಭಾನುವಾರ ನಡೆದಿದ್ದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಏಳು ವಿಕೆಟ್‌ಗಳ ಜಯ ಸಾಧಿಸಿ 3-0 ರಲ್ಲಿ ಮುನ್ನಡೆ ಪಡೆದಿತ್ತು.ಈ ಕಾರಣ ಕೊನೆಯ ಎರಡು ಪಂದ್ಯಗಳು ಮಹತ್ವ ಕಳೆದುಕೊಂಡಿವೆ. ಆದರೆ ಭಾರತಕ್ಕೆ ಕೆಲವು ಪ್ರಯೋಗಗಳನ್ನು ನಡೆಸಲು ಈ ಪಂದ್ಯಗಳು ಉತ್ತಮ ಅವಕಾಶ ಒದಗಿಸಿವೆ. ಮೊದಲ ಮೂರು ಪಂದ್ಯಗಳಲ್ಲಿ ಅವಕಾಶ ಪಡೆಯದ ಆಟಗಾರರು ಅಂತಿಮ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.ಚೇತೇಶ್ವರ ಪೂಜಾರ, ಪರ್ವೇಜ್ ರಸೂಲ್, ಮೋಹಿತ್ ಶರ್ಮ ಮತ್ತು ಅಜಿಂಕ್ಯ ರಹಾನೆ ಈ ಸರಣಿಯಲ್ಲಿ ಇನ್ನೂ ಯಾವುದೇ ಪಂದ್ಯ ಆಡಿಲ್ಲ. ರಹಾನೆ ಆರಂಭಿಕ ಆಟಗಾರನಾಗಿ ಅವಕಾಶ ಪಡೆಯುವ ಸಾಧ್ಯತೆಯಿದೆ. ಅದೇ ರೀತಿ ಪೂಜಾರ ಮಧ್ಯಮ ಕ್ರಮಾಂಕದಲ್ಲಿ ಆಡಬಹುದು.ಜಮ್ಮು ಕಾಶ್ಮೀರದ ರಸೂಲ್ ಆಲ್‌ರೌಂಡರ್ ರವೀಂದ್ರ ಜಡೇಜ ಅಥವಾ ಅಮಿತ್ ಮಿಶ್ರಾ ಬದಲು ತಂಡದಲ್ಲಿ ಸ್ಥಾನ ಪಡೆದರೆ ಅಚ್ಚರಿಯಿಲ್ಲ. ವೇಗದ ಬೌಲರ್ ಮೋಹಿತ್ ಶರ್ಮಗೆ ಅವಕಾಶ ದೊರೆಯುವುದು ಅಲ್ಪ ಕಷ್ಟ. ಯುವ ಬೌಲರ್‌ಗಳಾದ ಜಯದೇವ್ ಉನದ್ಕತ್ ಮತ್ತು ಮೊಹಮ್ಮದ್ ಶಮಿ ತಕ್ಕಮಟ್ಟಿಗೆ ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ತಂಡದ ಆಡಳಿತ ಆರ್. ವಿನಯ್ ಕುಮಾರ್ ಕುಮಾರ್‌ಗೆ ವಿಶ್ರಾಂತಿ ನೀಡಿ ಮೋಹಿತ್‌ಗೆ ಅವಕಾಶ ನೀಡುವುದೇ ಎಂಬುದನ್ನು ನೋಡಬೇಕು.ಕೊಹ್ಲಿ ಮತ್ತು ಶಿಖರ್ ಧವನ್ ಈ ಸರಣಿಯಲ್ಲಿ ಭಾರತದ ಪರ ಮಿಂಚಿರುವ ಬ್ಯಾಟ್ಸ್‌ಮನ್‌ಗಳು. ಮೂರು ಪಂದ್ಯಗಳಿಂದ 101 ರನ್ ಕಲೆಹಾಕಿರುವ ಅಂಬಟಿ ರಾಯುಡು ಕೂಡಾ ನಿರಾಸೆ ಉಂಟುಮಾಡಿಲ್ಲ. ಆದರೆ ರೋಹಿತ್ ಶರ್ಮ ಅವರ ಕಳಪೆ ಫಾರ್ಮ್ ಮಾತ್ರ ಭಾರತದ ಚಿಂತೆಗೆ ಕಾರಣವಾಗಿದೆ.ಮುಂಬೈನ ಬ್ಯಾಟ್ಸ್‌ಮನ್ ಸರಣಿಯಲ್ಲಿ ಒಟ್ಟು ಗಳಿಸಿದ್ದು 35 ರನ್ ಮಾತ್ರ. ಆದ್ದರಿಂದ ಫಾರ್ಮ್ ಕಂಡುಕೊಳ್ಳಲು ಅವರಿಗೆ ಮತ್ತೆ ಅವಕಾಶ ನೀಡುವ ಸಾಧ್ಯತೆಯಿದೆ.

ಮತ್ತೊಂದೆಡೆ ಸರಣಿ ಗೆಲುವಿನ ಅವಕಾಶ ಕಳೆದುಕೊಂಡಿರುವ ಜಿಂಬಾಬ್ವೆ ತವರು ನೆಲದಲ್ಲಿ `ಕ್ಲೀನ್ ಸ್ವೀಪ್' ಎದುರಾಗುವುದನ್ನು ತಪ್ಪಿಸಲು ಕಠಿಣ ಪ್ರಯತ್ನ ನಡೆಸಲಿದೆ. ಬ್ಯಾಟಿಂಗ್ ವೈಫಲ್ಯದಿಂದಲೇ ಈ ತಂಡ ಮೊದಲ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ.ಸಿಕಂದರ್ ರಾಜಾ, ಹ್ಯಾಮಿಲ್ಟನ್ ಮಸಕಜಾ ಮತ್ತು ವಸಿಮುಜಿ ಸಿಬಾಂಡ ಒಮ್ಮೆ ಮಿಂಚಿದ್ದನ್ನು ಬಿಟ್ಟರೆ, ಈ ತಂಡದ ಬ್ಯಾಟ್ಸ್‌ಮನ್‌ಗಳಿಂದ ಹೇಳಿಕೊಳ್ಳುವಂತಹ ಸಾಧನೆ ಮೂಡಿಬಂದಿಲ್ಲ. ವಿಶ್ವ ಚಾಂಪಿಯನ್ನರ ವಿರುದ್ಧ ಗೆಲುವು ಪಡೆಯಬೇಕಾದರೆ ಅಸಾಮಾನ್ಯ ಪ್ರದರ್ಶನ ನೀಡುವುದು ಅನಿವಾರ್ಯ ಎಂದು ನಾಯಕ ಬ್ರೆಂಡನ್ ಟೇಲರ್ ಹೇಳಿದ್ದಾರೆ.

ಭಾರತದ ಬಲಿಷ್ಠ ಬ್ಯಾಟಿಂಗ್ ಕ್ರಮಾಂಕದ ಮೇಲೆ ಒತ್ತಡ ಹೇರುವಲ್ಲಿ ಜಿಂಬಾಬ್ವೆ ಬೌಲರ್‌ಗಳು ಯಶಸ್ವಿಯಾಗಿದ್ದಾರೆ. ಆದರೆ ಬ್ಯಾಟ್ಸ್‌ಮನ್‌ಗಳು ಮಿಂಚದ ಕಾರಣ ಬೌಲರ್‌ಗಳ ಶ್ರಮಕ್ಕೆ ತಕ್ಕ ಫಲ ದೊರೆತಿಲ್ಲ.ತಂಡಗಳು...

ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಚೇತೇಶ್ವರ ಪೂಜಾರ, ಸುರೇಶ್ ರೈನಾ, ಅಂಬಟಿ ರಾಯುಡು, ಅಜಿಂಕ್ಯ ರಹಾನೆ, ರವೀಂದ್ರ ಜಡೇಜ, ಅಮಿತ್ ಮಿಶ್ರಾ, ಪರ್ವೇಜ್ ರಸೂಲ್, ಶಮಿ ಅಹ್ಮದ್, ಆರ್.ವಿನಯ್ ಕುಮಾರ್, ಜಯದೇವ್ ಉನದ್ಕತ್ ಹಾಗೂ ಮೋಹಿತ್ ಶರ್ಮ.

ಜಿಂಬಾಬ್ವೆ: ಬ್ರೆಂಡನ್ ಟೇಲರ್ (ನಾಯಕ ಹಾಗೂ ವಿಕೆಟ್ ಕೀಪರ್), ಸಿಕಂದರ್ ರಾಜಾ, ಟೆಂಡೈ ಚತಾರ, ಮೈಕೆಲ್ ಚಿನೋಯಾ, ಎಲ್ಟಾನ್ ಚಿಗುಂಬರ, ಗ್ರೇಮ್ ಕ್ರೆಮರ್, ಕೈಲ್ ಜಾರ್ವಿಸ್, ಟಿಮಿಸೆನ್ ಮರುಮಾ, ಹ್ಯಾಮಿಲ್ಟನ್ ಮಸಕಜಾ, ನಟ್ಸಾಯಿ ಮಶಾಂಗ್ವೆ, ಟಿನೊಟೆಂಡಾ ಮುಟೊಂಬೊಜಿ, ವಸಿಮುಜಿ ಸಿಬಾಂಡ ಪ್ರಾಸ್ಪರ್ ಉತ್ಸೆಯಾ, ಬ್ರಯಾನ್ ವಿಟೋರಿ, ಮಾಲ್ಕಂ ವಾಲರ್ ಹಾಗೂ ಸೀನ್ ವಿಲಿಯಮ್ಸ.  ಪಂದ್ಯ ಆರಂಭ: ಮಧ್ಯಾಹ್ನ 12.30ಕ್ಕೆ (ಭಾರತೀಯ ಕಾಲಮಾನ). ನೇರ ಪ್ರಸಾರ: ಟೆನ್ ಕ್ರಿಕೆಟ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry