ಪ್ರಯೋಜನ ನೀಡದ `ಆರೋಗ್ಯ ಕಾರ್ಡ್'

ಗುರುವಾರ , ಜೂಲೈ 18, 2019
22 °C

ಪ್ರಯೋಜನ ನೀಡದ `ಆರೋಗ್ಯ ಕಾರ್ಡ್'

Published:
Updated:

ಬೆಂಗಳೂರು: ಪೌರಕಾರ್ಮಿಕರಿಗೆ ಆರೋಗ್ಯ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2007ರಲ್ಲಿ ಆರಂಭಿಸಿದ ಆರೋಗ್ಯ ಕಾರ್ಡ್ ಯೋಜನೆಯಿಂದ ಯಾವುದೇ ಪ್ರಯೋಜವಾಗುತ್ತಿಲ್ಲ. ಆರೋಗ್ಯ ಕಾರ್ಡ್‌ಗಳನ್ನು ಹೊಂದಿರುವ ಪೌರ ಕಾರ್ಮಿಕರಿಗೆ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೌಲಭ್ಯವನ್ನು ನೀಡಲು ನಿರಾಕರಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.ರಾಜ್ಯ ಸರ್ಕಾರದ ಆದೇಶದಂತೆ 2007ರಲ್ಲಿ ಬಿಬಿಎಂಪಿಯ ಅಂದಿನ ಆಯುಕ್ತ ಎಸ್.ಸುಬ್ರಹ್ಮಣ್ಯ ಅವರು ಪೌರಕಾರ್ಮಿಕರಿಗೆ ಆರೋಗ್ಯ ಕಾರ್ಡ್‌ಗಳನ್ನು ನೀಡುವ ಯೋಜನೆಗೆ ಚಾಲನೆ ನೀಡಿದ್ದರು. ನಂತರ ಈ ಸೇವೆಯನ್ನು ಪಾಲಿಕೆಯ ಗ್ಯಾಂಗ್‌ಮನ್‌ಗಳಿಗೂ ವಿಸ್ತರಿಸಲಾಗಿತ್ತು.ಬಿಬಿಎಂಪಿ ನೀಡಿದ್ದ ಆರೋಗ್ಯ ಕಾರ್ಡ್‌ಗಳ ಮೂಲಕ ನಿಗದಿತ ಆಸ್ಪತ್ರೆಗಳಲ್ಲಿ ಒಂದು ಕುಟುಂಬ ಒಂದು ವರ್ಷದಲ್ಲಿ ರೂ. 2 ಲಕ್ಷ ವರೆಗಿನ ಚಿಕಿತ್ಸೆ ಪಡೆಯಲು ಅವಕಾಶವಿದೆ. ಪಾಲಿಕೆಯ ಉದ್ಯೋಗಿಗಳು ಕಳೆದ 2- 3 ವರ್ಷಗಳಿಂದ ಕಾರ್ಡ್‌ಗಳ ಮೂಲಕ ಆರೋಗ್ಯ ಸೇವೆ ಪಡೆಯುತ್ತಿದ್ದರು. ಆದರೆ, ಇದೀಗ ಪಾಲಿಕೆಯು ಸರಿಯಾಗಿ ಬಿಲ್ ಪಾವತಿಸಿಲ್ಲ ಎಂಬ ಕಾರಣ ನೀಡಿ ಕೆಲವು ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸುತ್ತಿವೆ.`ನಾನು ಕೆಲವು ದಿನಗಳ ಹಿಂದೆ ರಕ್ತ ಪರೀಕ್ಷೆಗೆಂದು ಕ್ಲಿನಿಕ್‌ಗೆ ಹೋಗಿದ್ದೆ. ಆದರೆ, ಅಲ್ಲಿನ ವೈದ್ಯರು ಆರೋಗ್ಯ ಕಾರ್ಡ್‌ಗಳ ಸೇವೆಗೆ ಬಿಬಿಎಂಪಿ ಹಿಂದಿನ ಆಸ್ಪತ್ರೆಯ ಬಿಲ್ ಭರಿಸಿಲ್ಲ. ಹೀಗಾಗಿ ಯಾವುದೇ ಚಿಕಿತ್ಸೆ ನೀಡುವುದಿಲ್ಲ ಎಂದು ಸೇವೆ ನಿರಾಕರಿಸಿದರು' ಎಂದು ಪೌರಕಾರ್ಮಿಕರಾದ ಚನ್ನಮ್ಮ ಹೇಳಿದರು. `ಯೋಜನೆ ಆರಂಭವಾದಾಗ ಒಟ್ಟು 120 ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಈಗ ಸೇವೆಯನ್ನು 60 ಆಸ್ಪತ್ರೆಗಳಿಗೆ ಇಳಿಸಲಾಗಿದೆ. ಹೊರರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ನೀಡುವುದನ್ನು ಬಿಟ್ಟು ಆಗಲೇ ಆರು ತಿಂಗಳಾಗಿದೆ' ಎಂದು ಬಿಬಿಎಂಪಿ ಪೌರಕಾರ್ಮಿಕ ಮತ್ತು ಆರೋಗ್ಯ ಗ್ಯಾಂಗ್‌ಮೆನ್‌ಗಳ ಒಕ್ಕೂಟದ ಕಾರ್ಯದರ್ಶಿ ಪೋತಣ್ಣ ಅಸಮಾಧಾನ ವ್ಯಕ್ತಪಡಿಸಿದರು.`ಆರೋಗ್ಯ ಕಾರ್ಡ್‌ಗಳ ಯೋಜನೆ ಚೆನ್ನಾಗಿದೆ. ಆದರೆ, ಅದನ್ನು ಜಾರಿಗೆ ತರುವಲ್ಲಿ ಅನೇಕ ಲೋಪಗಳಿವೆ. ಪಾಲಿಕೆಯಲ್ಲಿ 3,500 ಕಾಯಂ ಪೌರಕಾರ್ಮಿಕರಿದ್ದಾರೆ. ಆದರೆ, ಆರೋಗ್ಯ ಕಾರ್ಡ್‌ಗಳನ್ನು ಪಡೆದಿರುವ ಪೌರಕಾರ್ಮಿಕರು ಕಾರ್ಡ್‌ಗಳ ಮೂಲಕ ಚಿಕಿತ್ಸೆಯನ್ನು ಪಡೆಯಲಾಗದೆ ತೊಂದರೆ ಅನುಭವಿಸುತ್ತಿದ್ದಾರೆ' ಎಂದು ಅವರು ಆರೋಪಿಸಿದರು.ಬಿಲ್ ಪಾವತಿಯಾಗಿದೆ

`ಪೌರಕಾರ್ಮಿಕರ ಆರೋಗ್ಯ ಕಾರ್ಡ್‌ಗಳ ಬಿಲ್‌ಗಳ ಪೈಕಿ ಒಂದು ಆಸ್ಪತ್ರೆಯ ಬಿಲ್ ಮಾತ್ರ ಪಾವತಿ ಮಾಡಬೇಕಿದೆ. ಉಳಿದ ಎಲ್ಲ ಆಸ್ಪತ್ರೆಗಳ ಬಿಲ್ ಅನ್ನು ಪಾವತಿ ಮಾಡಲಾಗಿದೆ. ಈ ಕುರಿತು ಪೌರಕಾರ್ಮಿಕರಿಗೆ ಏನೇ ಸಮಸ್ಯೆಗಳಿದ್ದರೂ ಪಾಲಿಕೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು'

- ಎಂ.ಲಕ್ಷ್ಮೀನಾರಾಯಣ,

ಬಿಬಿಎಂಪಿ ಆಯುಕ್ತ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry