ಪ್ರಳಯ ತಡೆಯಲು ದೇವರಿಗೆ ಮೊರೆ!

7

ಪ್ರಳಯ ತಡೆಯಲು ದೇವರಿಗೆ ಮೊರೆ!

Published:
Updated:

ಬಾಗಲಕೋಟೆ: 2012ರಲ್ಲಿ ಸಂಭವಿಸಲಿದೆ ಎನ್ನಲಾದ ಪ್ರಳಯವನ್ನು ತಡೆಯುವಂತೆ ಪ್ರಾರ್ಥಿಸಲು ಸಾವಿರಾರು ಮಹಿಳೆಯರು ಮಂಗಳವಾರ ಸಂಜೆ ಏಕಕಾಲಕ್ಕೆ ಮುಚಖಂಡಿ ವೀರಭದ್ರೇಶ್ವರನ ಸನ್ನಿಧಿಗೆ ದೌಡಾಯಿಸುವ ಮೂಲಕ ಅಚ್ಚರಿ ಮೂಡಿಸಿದರು.ಒಂದು ತಟ್ಟೆಯಲ್ಲಿ ಐದು ಹಣತೆಗಳನ್ನಿಟ್ಟುಕೊಂಡು ದೇವಸ್ಥಾನಕ್ಕೆ ಆಗಮಿಸಿದ ಮಹಿಳೆಯರು ದೇವರಿಗೆ ದೀಪ ಬೆಳಗುತ್ತ ಪ್ರಳಯದಿಂದ ತಮ್ಮನ್ನು ಪಾರು ಮಾಡುವಂತೆ ಬೇಡಿಕೊಂಡರು.ಸರಿಯಾಗಿ ಸಂಜೆ 7.05 ನಿಮಿಷಕ್ಕೆ ದೇವಸ್ಥಾನದ ಆವರಣದಲ್ಲಿ ನೆರೆದ ಸಾವಿರಾರು ಮಹಿಳೆಯರು ಏಕಕಾಲಕ್ಕೆ ದೀಪಗಳನ್ನು ಹಚ್ಚಿ ಪ್ರಾರ್ಥನೆ ಆರಂಭಿಸಿದರು. 7.25ರವರೆಗೆ ಪ್ರಾರ್ಥನೆ ಮುಂದುವರಿಯಿತು.ಕನ್ನಡದ ಟಿವಿ ಚಾನೆಲ್‌ವೊಂದರಲ್ಲಿ ‘ ಬೃಹತ್ ಬ್ರಹ್ಮಾಂಡ’ ಎಂಬ ಕಾರ್ಯಕ್ರಮವನ್ನು ನಡೆಸಿಕೊಡುವ ಜ್ಯೋತಿಷಿಯೊಬ್ಬರು ಹಳೆಯ ದೇವಸ್ಥಾನದ ಎದುರು ಸಾಮೂಹಿಕ ದೀಪೋತ್ಸವ ಏರ್ಪಡಿಸಿ ಭಗವಂತನಲ್ಲಿ ಪ್ರಾರ್ಥಿಸಿದರೆ ಪ್ರಳಯ ದೂರವಾಗುತ್ತದೆ ಎಂದು ತಿಳಿಸಿದ್ದರು ಎನ್ನಲಾಗಿದೆ.ಈ ಮಾತನ್ನು ನಂಬಿದ ಮಹಿಳೆಯರು ಮಂಗಳವಾರ ಸಂಜೆ ತಂಡೋಪ ತಂಡವಾಗಿ ಮುಚಖಂಡಿ ವೀರಭದ್ರೇಶ್ವರ ದೇವಸ್ಥಾನಕ್ಕೆ ದೌಡಾಯಿಸಿದ್ದರು.ಯಾವ ಜಿಲ್ಲೆಗಳಲ್ಲಿ ಯಾವ ದೇವಸ್ಥಾನದ ಆವರಣದಲ್ಲಿ ದೀಪೋತ್ಸವ ನಡೆಸಬೇಕು ಎಂಬುದನ್ನು ಆ ಕಾರ್ಯಕ್ರಮದಲ್ಲಿ  ಜ್ಯೋತಿಷಿ ತಿಳಿಸಿದ್ದರು. ಬಾಗಲಕೋಟೆ ಜಿಲ್ಲೆಯಲ್ಲಿ ಮುಚಖಂಡಿ ವೀರಭದ್ರೇಶ್ವರ ದೇವಸ್ಥಾನ ತೋರಿಸಿದ್ದರಿಂದ ಜನರು ವೀರಭದ್ರನ ಸನ್ನಿಧಿಗೆ ಆಗಮಿಸಿದ್ದರು.ಇದೇ ರೀತಿ ಬಾಗಲಕೋಟೆ ನಗರದ ಕಣವಿ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲೂ ಭಕ್ತರು ಜಮಾಯಿಸಿದ್ದರು.ಮಹಿಳೆಯರು ಒಂದು ತಟ್ಟೆಯಲ್ಲಿ ಐದು ಹಣತೆಗಳನ್ನಿಟ್ಟು ಅದರ ಎದುರು ಕುಳಿತುಕೊಂಡು ಪ್ರಳಯದಿಂದ ಪಾರು ಮಾಡುವಂತೆ ಪ್ರಾರ್ಥಿಸುತ್ತಿದ್ದ ದೃಶ್ಯ ದೇವಸ್ಥಾನದ ಆವರಣದ ತುಂಬ ಕಂಡುಬಂದವು.ಸ್ವಾಮೀಜಿ ಅಚ್ಚರಿ

ಮಂಗಳವಾರ ಸಂಜೆ ಸಾವಿರಾರು ಜನರು ದೇವಸ್ಥಾನಕ್ಕೆ ಆಗಮಿಸುತ್ತಿರುವುದನ್ನು ಕಂಡು ಕಣವಿ ವೀರಭದ್ರೇಶ್ವ ದೇವಸ್ಥಾನದ ಪೂಜಾರಿ ಕೂಡ ಅಚ್ಚರಿಗೊಂಡರು.ದೇವಸ್ಥಾನದ ಪೂಜಾರಿಗೂ ಈ ವಿಷಯ ಗೊತ್ತಿರಲಿಲ್ಲ; ಅವರು ಕೂಡ ಜನರಿಂದಲೇ ತಿಳಿದುಕೊಂಡು ಪ್ರಾರ್ಥನೆಗೆ ಸಹಕರಿಸಿದರು.2012ರಲ್ಲಿ ಸಂಭವಿಸಬಹುದಾದ ಪ್ರಳಯವನ್ನು ದೂರಗೊಳಿಸುವುದರ ಜತೆಗೆ ಲೋಕ ಕಲ್ಯಾಣ ಬಯಸಿ ದೀಪೋತ್ಸವ ಮಾಡುತ್ತಿದ್ದೇವೆ ಎಂದು ಪೂಜಾನಿರತ ಮಹಿಳೆಯರು ‘ಪ್ರಜಾವಾಣಿ’ಗೆ ತಿಳಿಸಿದರು.ಟಿವಿ ಕಾರ್ಯಕ್ರಮವೊಂದರಿಂದ ಪ್ರೇರಿತಗೊಂಡ ಸಾವಿರಾರು ಜನರು ಏಕಕಾಲಕ್ಕೆ ದೇವಸ್ಥಾನಕ್ಕೆ ದೌಡಾಯಿಸಿದ್ದರಿಂದ ‘ಗಣಪತಿ ಹಾಲು ಕುಡಿದ’ ಸನ್ನಿವೇಶ ಮರುಕಳಿಸಿದಂತಾಗಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry