ಪ್ರಳಯ ಪೂಜೆ!

7
ವಾರದ ವಿನೋದ

ಪ್ರಳಯ ಪೂಜೆ!

Published:
Updated:
ಪ್ರಳಯ ಪೂಜೆ!

ನಾನು, ದೀಕ್ಷಿತ ಪರ‌್ಮೇಶಿ ಮನೆ ಬಳಿ ಹೋದಾಗ ಮನೆ ತುಂಬಾ ಹೊಗೆ ತುಂಬ್ಕಂಡಿತ್ತು. ಮನೆ ತುಂಬಾ ಗಿಜ ಗಿಜ ಜನ. ನೀರವ ಮೌನ! ನಾವು ಆತಂಕದಿಂದಲೇ ಒಳಗೆ ಹೋದ್ವಿ. ಬಾಗಿಲಲ್ಲೇ ನಾಣಿ ಸಿಕ್ಕಿದ. `ಏನೋ? ಪರ‌್ಮೇಶಿ ಹೊಗೆ ಹಾಕಿಸಿಕೊಂಡು ಬಿಟ್ನೇನೋ ?' ಕೇಳಿದೆ.

`ಥೂ! ಬಿಡ್ತು ಅನ್ನು! ಪರ‌್ಮೇಶಿ ದಂಪತಿ ಪ್ರಳಯ ಹೋಮ ಮಾಡ್ತಿದಾರೆ ` ಅಂದ ನಾಣಿ.`ಒಳಗೆ ಹೋಗಿ ನೋಡುದ್ವಿ. ಆಳೆತ್ತರದ ಕೋಣನ ಮೇಲೆ ಕೂತ ದೊಡ್ಡ ಯಮಧರ್ಮನ ಫೋಟೊ! ಅದರ ಮುಂದೆ ಅರಿಶಿಣ, ಕುಂಕುಮ ಹಚ್ಚಿಸಿಕೊಂಡು ಬಲಿಗೆ ಸಿದ್ಧವಾದ ಗುಡಾಣದಂತಹ ಕುಂಬಳಕಾಯಿ. ಎದುರಿಗೆ ಪರ‌್ಮೇಶಿ ದಂಪತಿ ಪ್ರಳಯ ಹೋಮದಲ್ಲಿ ತೊಡಗಿದ್ರು'.`ಪ್ರಳಯ ಪೂಜೆ, ಹೋಮ ಎಲ್ಲಾ ಯಾತಕ್ಕೆ? ಪ್ರಳಯ ಆಗದೆ ಇರಲಿ ಅಂತಾನಾ?'

`ಅಲ್ಲಲೇ! ಪ್ರಳಯ ಆಗಲಿ ಅಂತಾನೇ ಮಾಡುಸ್ತಿರೋದಂತೆ!'`ಶಾಕ್ ಹೊಡೆದ ಹಾಗಾಯ್ತು.  ಎಲಾ ಇವನ! ಎಲ್ಲಾ ಪ್ರಳಯ ಆಗದೇ ಇರಲಿ, ನಾವು ಹೀಗೇ ಭಂಡ ಬಾಳು ಬಾಳಕ್ಕೆ ಅನುವಾಗಲಿ ಅಂತ ಪೂಜೆ, ಪುನಸ್ಕಾರ ಹೋಮ ಮಾಡುಸ್ತಿದಾರೆ. ಅಂತಾದ್ರಲ್ಲಿ ಈ ಪರ‌್ಮೇಶಿ ತಲೆ ಕೆಟ್ಟೋರ ತರ ಪ್ರಳಯ ಆಗಲಿ ಅಂತ ಹೋಮ ಮಾಡುಸ್ತಿದಾನಲ್ಲ, ಇವನಿಗೇನು ಹುಚ್ಚಾ?'

`ಏನೋ! ಪ್ರಳಯ ಆಗೋದೇ ಗ್ಯಾರೆಂಟಿ ಅಂತ  ಅಲ್ಲಿ ಹೋಮ ಮಾಡುಸ್ತಿದಾರಲ್ಲ ಜ್ಯೋತಿಷ್ಯ ರತ್ನ ಪ್ರಳಯಾನಂದ ಸ್ವಾಮಿ ಹೇಳಿದಾರಂತೆ. ಹಾಗೇ ಎಲ್ಲಾ ವ್ರತಗಳಲ್ಲಿ ಪ್ರಳಯ ವ್ರತವೇ ಸರ್ವಶ್ರೇಷ್ಠವಂತೆ. ಯಾರು ಭಕ್ತಿಯಿಂದ ಪ್ರಳಯ ವ್ರತ ಮಾಡ್ತಾರೋ, ಮಾಡಿದ್ದನ್ನ ನೋಡ್ತಾರೋ ಅವರೆಲ್ಲರಿಗೆ ಪುಣ್ಯ ಸಿಗುತ್ತಂತೆ'`ಅಲ್ವೋ! ಓತನೇ ಹೋಗಬೇಕಾದ್ರೆ ಗಡ್ಡಕ್ಕೆ ಅತ್ರು ಅನ್ನೋ ಹಾಗಾಯ್ತಲ್ಲ. ನಾವೇ ನೆಗೆದು ಬೀಳ್ತೀವಿ ಅಂದ ಮೇಲೆ ಪಾಪ-ಪುಣ್ಯ ಕಟ್ಕಂಡು ಏನು ಮಾಡ್ತೀಯೋ?'`ಅಂದ್ರೆ ಪ್ರಳಯ ಆಗೋದು ಗ್ಯಾರೆಂಟಿ ಅಂತೀರಾ?'

`ಹೂ ಕಣೋ! ಆ ಕುಂಬಳಕಾಯಿ ನೋಡು, ಅದು ದಿನೇ ದಿನೇ ಒಂದು ಸುತ್ತು ಬಸುರಿರ ಹೊಟ್ಟೆ ತರ ದಪ್ಪ ಆಗುತ್ತಾ ಹೋಗುತ್ತಂತೆ. 21ನೇ ತಾರೀಖು ಡಮಾರ್ ಅನ್ನುತ್ತಂತೆ. ಕೂಡಲೇ ಪ್ರಳಯ ಆಗುತ್ತಂತೆ'`ಅಯ್ಯೋ! ಹಾಗಾದ್ರೆ ನಾವೆಲ್ಲಾ ಪ್ರಳಯದಲ್ಲಿ ಲಯ ಆಗಿ ಹೋಗ್ತೀವಿ ಅನ್ನಿ'

`ಪ್ರಪಂಚನೇ ಎಕ್ಕುಟ್ಟಿ ಹೋಗುತ್ತೆ ಅಂದ ಮೇಲೆ ನೀನ್ಯಾಕೋ ಒಂದೇ ಕಣ್ಣಲ್ಲಿ ಗೋಳಾಡ್ತೀಯಾ? ನೀನು ಬದುಕಿದ್ದು ಕಿಸಿದದ್ದು ಅಷ್ಟರಲ್ಲೇ ಇದೆ. ಸತ್ರೇನು ನಷ್ಟ ಬಿಡು'`ಹಾಗಲ್ಲಲೇ! ನನಗೆ ಪ್ರಣಯ ಆಗಿಲ್ಲ, ಪರಿಣಯ ಆಗಿಲ್ಲ, ಅಷ್ಟರಲ್ಲೇ ಪ್ರಳಯ ಅಂದ್ರೆ ಇಷ್ಟು ದಿವಸ ಬದುಕಿದ್ದೇ ವೇಸ್ಟ್ ಅಲ್ಲವೇನೋ?' ದೀಕ್ಷಿತ ಹಲುಬಿದ.

`ಲೇ ಗುಲ್ಡು, ಮದುವೆ ಆದ್ರೆ ದಿನಾ ಪ್ರಳಯ ಕಣೋ! ಪರ‌್ಮೇಶಿ ಹೇಳೋ ತರ ಒಂದು ಮಹಾ ಪ್ರಳಯ ಆಗಿ ಡಮಾರ್ ಅಂದು ಹೋದ್ರೆ ಸಾಕು ಅನಿಸಿಬಿಟ್ಟಿರುತ್ತೆ. ಅಷ್ಟು ಹೈರಾಣಾಗಿ ಹೋಗಿರ‌್ತೀವಿ ಕಣೋ' ನಾಣಿ ತನ್ನ ಅನುಭವಸಾರವನ್ನು ದೀಕ್ಷಿತನಿಗೆ ಗೊಟಾಯಿಸಿದ.`ಅದ್ಸರಿ, ಪ್ರಳಯ ಆಗೇ ಆಗುತ್ತೆ ಅಂದ ಮೇಲೆ ಪೂಜೆ, ಹೋಮ ಎಲ್ಲಾ ಯಾಕೆ ಅಂತೀನಿ'

ಹೋಮದಲ್ಲಿ  ಪಾಲ್ಗೊಂಡೋರಿಗೆಲ್ಲಾ ಮೂರು ಸ್ಕೀಮ್ ಓಪನ್ ಇದೆ. ಅದರಲ್ಲಿ ಒಂದನ್ನ ಆರಿಸ್ಕೊಬಹುದು

`ಸ್ಕೀಮಾ? ಸಾಯೋಕೆ ಎಂಥ ಸ್ಕೀಮೋ?'`ನೋಡೋ! ನಾವೆಲ್ಲಾ ಹೋಲ್ ಸೇಲಾಗಿ ನೆಗೆದು ಬಿದ್ದ ಮೇಲೆ ನಮಗೆ ಯಾರು ಪಿಂಡ ಇಡ್ತಾರೆ ಹೇಳು. ಅದಕ್ಕೇ ನಮ್ ಪಿಂಡ ನಾವೇ ತಿನ್ಕೊಳೋ ಹಾಗೆ ಒಂದು ಸ್ಕೀಮ್ ಇದೆ. ಅಂದ್ರೆ ಈಗಲೇ ಘಟಶ್ರಾದ್ಧ ಮಾಡ್ಕೊಂಡು ನಮ್ ಸೈಜಿಗೆ ಬೇಕಾದ ಪಿಂಡನ ನಾವೇ ಕಟ್ಟಿಸಿಕೊಂಡು ಬಿಡೋದು'

`ಲೇಯ್! ಅದನ್ನೇನು ಯಮಪುರಿಗೆ ಹೋಗ್ತಾ ಲಾಡು ಉಂಡೆ ತರ ತಿನ್ಕಂಡು ಹೋಗಕ್ಕಾಗುತ್ತೇನಲೇ! ಪ್ರಪಂಚನೇ ಪ್ರಳಯ ಆದಾಗ  ಈ ಪಿಂಡಗಳು ಉಳಿದಿರುತ್ತಾ?'`ಅದನ್ನ ನಮ್ ಸ್ವಾಮೀಜಿ ಒಂದು ದೊಡ್ಡ ಕರಂಡಕದಲ್ಲಿ ಹಾಕಿ ಕೈಲಾಸ ಪರ್ವತದಲ್ಲಿ ಹೂತು ಬಿಡ್ತಾರಂತೆ. ಮುಂದಿನ ಜನ್ಮದಲ್ಲಿ ಅದನ್ನ ತೆಗೆದು ಕಾಗೆಗೆ ಹಾಕೋದು. ಕಾಗೆ ಇಲ್ಲ ಅಂದ್ರೆ ನಾವೇ ತಿನ್ನೋದು. ಅವಾಗ ಸದ್ಗತಿ ಸಿಕ್ಕೇ ಸಿಗುತ್ತಾ? ಈ ಸ್ಕೀಮ್‌ಗೆ 5 ಲಕ್ಷ ರೂಪಾಯಂತೆ'

`ಹೌದಾ? ಎರಡನೇ ಸ್ಕೀಂ ಏನು?'`ಅದೇ ಈ ನಾಸ್ತಿಕರು ಇರ‌್ತಾರಲ್ಲ, ಅವರಿಗೊಂದು ಸ್ಪೆಷಲ್ ಸ್ಕೀಮ್! ಅವರ ಅಸ್ಥಿ, ರಕ್ತ, ಹಾಳು ಮೂಳು ಎಲ್ಲಾ ಒಂದು ಏರ್ ಟೈಟ್ ಕಂಟೇನರ್‌ಗೆ ಹಾಕಿ  ಅಂಟಾರ್ಟಿಕದಲ್ಲಿ  ಹೂತು ಬಿಡೋದು. ಪ್ರಳಯ ಮುಗಿದ ಮೇಲೆ ಕೋಟಿ ಕೋಟಿ ವರ್ಷಗಳ ನಂತರ ಯಾವನಾದರೂ ಅಡಮ್ ಈವ್ ಹುಟ್ಟುದ್ರೆ ಅವರು ಮತ್ತೆ ಇದನ್ನ ಅಗೆದು ನಮ್ಮ ಮರುಸೃಷ್ಟಿ ಮಾಡ್ತಾರೆ. ಇದಕ್ಕೆ 10ಲಕ್ಷ ರೂಪಾಯಿ'`ಈ ಜನ್ಮದಲ್ಲೇ ನಮ್ ಮುಖ ನೋಡಕ್ಕೂ ಯಾರೂ ಇಷ್ಟಪಡಲ್ಲ, ಇನ್ನು ಕೋಟಿ ವರ್ಷದ ಮೇಲೆ ಮತ್ತೆ ಕೋತಿಯಾಗಿ ಹುಟ್ಟುದ್ರೆ ಯಾವಳು ನಮ್ಮನ್ನ ನೋಡ್ತಾಳೆ. ನೆಕ್ಸ್ಟ್!'`ಮೂರನೇದು ತುಂಬಾ ಕಾಸ್ಟ್ಲಿ. ಪ್ರಳಯ ಆಗೋಕೆ ಮುಂಚೆ ಒಂದು ಚಂದ್ರಯಾನ, ಮಂಗಳಯಾನ ಯಾತ್ರೆ ಅರೇಂಜ್ ಮಾಡಿದಾರೆ. ಅಲ್ಲೇ ಸೈಟು, ಟೌನ್‌ಶಿಪ್ಪು ಎಲ್ಲಾ ರೆಡಿಯಾಗುತ್ತೆ. ಪ್ರಳಯಾನಂದ ಸ್ವಾಮಿಗಳೇ ವಾಸ್ತು ರೆಡಿ ಮಾಡ್ತಾರೆ. ಸೀದಾ ಇಲ್ಲಿಂದ ಅಲ್ಲಿಗೆ ಹಾರಿಬಿಡೋದು. ಇದಕ್ಕೆ ಒಂದು 20 ಲಕ್ಷ ಬಿಲಿಯನ್ ಡಾಲರ್ ಆಗಬಹುದು..'`ಸುಮ್ನಿರಲೇ! ಪ್ರಳಯದ ತನಕವಾದರೂ ಬದುಕಿರೋಣ. ಲಕ್ಷ, ಬಿಲಿಯನ್ ಅಂತ ಕೇಳಿ ಎದೆ ಒಡೆದು ಹೋದಾತು'

`ಏನೋ ನನಗೇನೋ ಪ್ರಳಯ ಆಗುತ್ತೆ ಅನಿಸಲ್ಲ' ಎಂದ ದೀಕ್ಷಿತ.`ಇಲ್ಲಿ ಇಷ್ಟೆಲ್ಲಾ ನಡೀತಿರಬೇಕಾದರೆ ಹೇಗೆ ನೀನು ಪ್ರಳಯ ಆಗಲ್ಲ ಅಂತೀಯ?'

`ಲೇಯ್! ನಮ್ ಯಡಿಯೂರಪ್ಪನವರು ಹೋದ ವಾರ ಇನ್ನೂ ಹೊಸ ಪಕ್ಷ ಕಟ್ಟಿದಾರೆ. ಅವರು ಕನಿಷ್ಠ ಅಂದ್ರೆ ಎರಡು ಡಜನ್ ಜ್ಯೋತಿಷಿಗಳನ್ನ ಕನ್‌ಸಲ್ಟ್ ಮಾಡದೆ ಪಕ್ಷ ಕಟ್ಟಿರಲ್ಲ. ಪ್ರಳಯ ಆಗುತ್ತೆ ಅಂದಿದ್ರೆ ಅವರ‌್ಯಾಕೆ ಬಿಜೆಪಿಯವರಿಗೆ ಜಾಪಾಳ ಕೊಡಕ್ಕೆ ಹೋಗ್ತಿದ್ರು!'`ಹೌದಲ್ಲವಾ? ಒಳ್ಳೇ ಐನಾತಿ ಪಾಯಿಂಟ್!' ನಾಣಿ ತಲೆದೂಗಿದ. ಅಷ್ಟರಲ್ಲಿ ಪರ‌್ಮೇಶಿ ಬರ‌್ರಂತ ಬಂದ.

`ಏಯ್! ಪ್ರಳಯ ಆಗಲ್ಲ ಅಂತ ಏನೇನೋ ಒದರಬೇಡಿ. ತೆಪ್ಪಗೆ ಬಾಯಿ ಮುಚ್ಕಂಡಿರಿ, ಹೋಮ ಆದ ಮೇಲೆ ವಡೆ, ಪಾಯಸ ಹಾಕ್ತೀವಿ, ತಿಂದ್ಕಂಡು ತೊಲಗ್ತಿರಿ.'`ಏನೋ? ಹಾಗಾದ್ರೆ ನೀನು ಪ್ರಳಯ ಆಗೇ ಆಗುತ್ತೆ ಅಂತ ನಂಬಿದೀಯ ಅನ್ನು?'

`ಯಾವಾನ್ಗಲೇ ಗೊತ್ತು? ಆಗುತ್ತೋ ಬಿಡುತ್ತೋ?  ಆದರೆ ಪ್ರಳಯದ ಹೆಸರಲ್ಲಿ ಲೈಫ್ ಸೆಟ್ಲ್ ಮಾಡ್ಕೊಳೋಣ ಅಂತಿದೀನಿ. ಅದಕ್ಕೆ ಕಲ್ಲು ಹಾಕಬೇಡಿ'

`ಅಂದ್ರೇನೋ? ಅದೇನು ಅಂತ ಬಿಡಿಸಿ ಹೇಳೋ!'`ನೋಡ್ರಲೇ! ಇಷ್ಟು ದಿವಸ ನನ್ ಹೆಂಡ್ತಿ ನನ್ನನ್ನ ಫುಟ್‌ಬಾಲ್ ಆಡ್ತಿದ್ಲು. ಈಗ ಪ್ರಳಯ ಆಗುತ್ತೆ, ಎಲ್ಲಾ ಹೊಗೆ ಹಾಕ್ಕತೀವಿ ಅಂತ ಗೊತ್ತಾದ ಮೇಲೆ ಸ್ವಲ್ಪ ಮೆತ್ತಗಾಗಿದಾಳೆ. ಎಲ್‌ಐಸಿ ಬಾಂಡ್‌ಗಳು, ಎಫ್‌ಡಿ ರೆಸಿಪ್ಟು ಎಲ್ಲಾ ಏಮಾರಿಸಿದೀನಿ. ಇನ್ನು ಸ್ವಾಮೀಜಿ ಮಾತು ಕೇಳಿ ನಮ್ ಚಿಕ್ಕಪ್ಪಂಗೆ ಈಗ ಬುದ್ಧಿ ಬಂದಿದೆ.ಮೋಸ ಮಾಡಿದ ಆಸ್ತಿಲಿ ನನ್ ಶೇರ್ ಕೊಟ್ಟು ಸಾಯ್ತೀನಿ ಅಂತ ಬಂದಿದಾನೆ. ಇನ್ನು ಸಾಲಗಾರರು ಮನೆ ಮುಂದೆ ಬಂದು ಪ್ರಾಣ ತೆಗೀತಿದ್ರು. ಅವರೆಲ್ಲರಿಗೆ ಘಟಶ್ರಾದ್ಧದ ಸ್ಕೀಮಲ್ಲಿ ಮೆಂಬರ್ಸ್‌ ಮಾಡಿ ಸಾಲ ವಜಾ ಮಾಡ್ಸಿದೀನಿ. ನಮ್ಮ ಪ್ರಳಯಾನಂದ ಸ್ವಾಮಿಗಳು ನನ್ನನ್ನೂ  ಮಠಕ್ಕೆ ಟ್ರಸ್ಟಿ ಮಾಡ್ಕಂಡಿದಾರೆ. ಇಲ್ಲಿ ತಲಾತಟ್ಟಿ ಮಾತಾಡಿ ಪ್ರಳಯ ಕಂಟಕರಾಗಬೇಡಿ, ಗೊತ್ತಾಯ್ತೊ?'

ಎವೆರಿವನ್ ಲವ್ಸ್ ಎ ಗುಡ್ ಡ್ರಾಟ್! ಸೋ ಆಲ್ಸೋ ಎವೆರಿವನ್ ಲವ್ಸ್ ಎ ಗುಡ್ ಪ್ರಳಯ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry