ಪ್ರಳಯ ಪ್ರಳಯ...!

7

ಪ್ರಳಯ ಪ್ರಳಯ...!

Published:
Updated:

ಡಿಸೆಂಬರ್ ಇಪ್ಪತ್ತೊಂದು ನಿರಾತಂಕವಾಗಿ ಕಳೆದು ಪ್ರಳಯ ಪಂಕ್ಚರ್ ಆದ ಹಿನ್ನೆಲೆಯಲ್ಲಿ  ಹರಟೆಕಟ್ಟೆಯಲ್ಲಿ ಸಂಭ್ರಮ ಗರಿಗೆದರಿತ್ತು. ದುಬ್ಬೀರನ ಅಧ್ಯಕ್ಷತೆಯಲ್ಲಿ  ಹರಟೆ ಮಿತ್ರಮಂಡಳಿಗೆಲ್ಲ ವಿಶೇಷ ಭೋಜನಕೂಟವನ್ನೂ ಏರ್ಪಡಿಸಲಾಗಿತ್ತು.`ಏನ್ರಲೆ ಎಲ್ಲ ಬದುಕಿದೀರಾ?' ಎಂದು ನಗುತ್ತಲೇ ಹರಟೆಗೆ ಚಾಲನೆ ನೀಡಿದ ಗುಡ್ಡೆ,  ನೀವೇನೋ ಪ್ರಳಯ ಆಗ್ಲಿಲ್ಲ ಅಂತ ಖುಷಿಗೆ ಪಾರ್ಟಿ ಇಟ್ಕಂಡಿದೀರಪ್ಪ, ನಂಗೇನೋ ಪ್ರಳಯ ಆಗಿದ್ರೇನೇ ಚೆನ್ನಾಗಿರ‌್ತಿತ್ತು ಅನಿಸ್ತಿದೆ' ಎಂದ ವಿಚಿತ್ರವಾಗಿ.`ಯಾಕೋ ತರ‌್ಲೆ, ಬದುಕೋಕೆ ಇಷ್ಟ ಇಲ್ಲೇನು? ಅಂಥದ್ದೇನಾತೀಗ?' ಮಿಸ್ಸಮ್ಮ ಗದರಿದಳು.

`ಸದ್ಯಕ್ಕೇನೂ ಆಗಿಲ್ಲ, ನಂಗೆ ಸಾಲ ಕೊಟ್ಟೋರೆಲ್ಲ ಒಟ್ಟಿಗೇ ಬಂದ್ರೆ ಪ್ರಳಯ ಆದ್ರೂ ಆಗಬಹುದು' ಎಂದು ನಕ್ಕ ಗುಡ್ಡೆ,  ಹೆಂಗೂ ಪ್ರಳಯ ಆಗ್ತೈತಿ, ಈ ಸಾಲಗಾರರೆಲ್ಲ ನೆಗೆದು ಬೀಳ್ತಾರೆ ಅನ್ಕಂಡಿದ್ದೆ. ಇದು ನೋಡಿದ್ರೆ ಹಿಂಗಾತು' ಎಂದ.`ಇರ‌್ಲಿ ಬಿಡೋ, ಜೋತಿಷಿಗಳಿಗೆ ಹೇಳಿ ಪ್ರಳಯ ಪೋಸ್ಟ್‌ಪೋನ್ ಮಾಡ್ಸಿದೀನಿ, ಸ್ವಲ್ಪ ತಡ್ಕಳ್ರಿ, ಬಡ್ಡಿ ಸಮೇತ ತೀರುಸ್ತೀನಿ ಅಂದ್ರಾತಪ...' ದುಬ್ಬೀರ ಸಮಾಧಾನ ಹೇಳಿದ.`ಈ ಜೋತಿಷಿಗಳ ಮಾತು ಕೇಳೇ ನಾ ಹಾಳಾಗಿದ್ದು. ಪ್ರಳಯ ನಿಲ್ಸಾಕೆ ಹೋಮ ಮಾಡ್ಬೇಕು, ಶಾಂತಿ ಮಾಡುಸ್ಬೇಕು ಅಂತ ಲಕ್ಷಾಂತರ ರೂಪಾಯಿ ರೊಕ್ಕ ಎತ್ತಿದ ನಮ್ ಏರಿಯಾದ ಬಂಬಂ ಬುರುಡೆ ಸ್ವಾಮಿ ಇವತ್ತು ಬೆಳಿಗ್ಗೆಯಿಂದ ನಾಪತ್ತೆ! ಜನ ಈಗ ನನ್ನ ಹುಡುಕ್ತಿದಾರಂತೆ...'`ಅಲೆ ಇವ್ನ, ಅವನು ನಾಪತ್ತೆ ಆದ್ರೆ ಜನ ನಿನ್ಯಾಕೆ ಹುಡುಕ್ತಾರೋ ಗುಡ್ಡೆ?' ಮಿಸ್ಸಮ್ಮ ಕೇಳಿದಳು.

`ಯಾಕೇಂದ್ರೆ? ಆ ಸ್ವಾಮಿಗೆ ಜನರಿಂದ ರೊಕ್ಕ ವಸೂಲಿ ಮಾಡಿಕೊಟ್ಟಿದ್ದು ಇವನೇ...' ತೆಪರೇಸಿ ಜೋರಾಗಿ ನಕ್ಕ.

`ಹೌದೇನೋ ಗುಡ್ಡೆ? ಅದಕ್ಯಾಕೆ ಹೆದರ‌್ತಿ ಬಿಡು. ನಮ್ ಸ್ವಾಮಿ ಅಜ್ಞಾತ ಸ್ಥಳದಲ್ಲಿ  ಭಯಾನಕ ಪ್ರಳಯ ನಿವಾರಣಾ ಯಾಗ' ಮಾಡ್ತಿದಾರೆ. ಅದರ ಪ್ರಭಾವದಿಂದ್ಲೇ ಈಗ ಪ್ರಳಯ ಆಗಿಲ್ಲ ಅಂತ ಇನ್ನೊಂದು ರೀಲ್ ಬಿಟ್ರಾತು. ಜನ ಸುಮ್ನೋಗ್ತಾರೆ. ಬೇಕಾದ್ರೆ ಯಾಗಕ್ಕೆ ಇನ್ನೊಂದಿಷ್ಟು ದುಡ್ಡೂ ಕೊಡ್ತಾರೆ. ಎಲ್ಲ ದುಂಡಗೆ ಮಾಡ್ಕಂಡು ಆ ಸ್ವಾಮಿ ತರ ನೀನೂ ಒಂದಿನ ಊರು ಬಿಡು' ಎಂದ ದುಬ್ಬೀರ.`ಆಹಾ, ಎಂಥ ಐಡಿಯಾ ಕೊಡ್ತೀಯೋ ದುಬ್ಬೀರ' ಎಂದು ನಕ್ಕ ಮಿಸ್ಸಮ್ಮ, ಅದಿರ‌್ಲಿ, ನಮ್ಮ ನಿತ್ಯಾನಂದರ ಶಿಷ್ಯ ಕೊಟ್ರೇಶಿ ಯಾಕೋ ಡಲ್ಲಾಗಿದಾನಲ್ಲ? ಏನ್ಸಮಾಚಾರ?' ಎಂದು ವಿಚಾರಿಸಿದಳು.

`ಅದಾ? ಅವನು ನಿತ್ಯಾನಂದರ ಉಪದೇಶ ಕೇಳಿ ಯಡವಟ್ ಮಾಡ್ಕಂಡಿದಾನೆ. ಅದೀಗ ಕುತ್ತಿಗೆಗೇ ಬಂದಿರೋ ಹಾಗೆ ಕಾಣುತ್ತೆ' ಎಂದ ಗುಡ್ಡೆ.`ಹೌದಾ? ಏನಾತೋ? ಏನ್ಮಾಡಿದ್ಯೋ ಕೊಟ್ರ?' ತೆಪರೇಸಿಗೆ ಆತಂಕ.

`ಏನಿಲ್ಲ, ಪ್ರಳಯದ ಬಗ್ಗೆ ಭಯ ಬೇಡ, ಪ್ರಣಯದಲ್ಲಿ ಮುಳುಗಿ ಹೋದ್ರೆ ಪ್ರಳಯ ಗೊತ್ತಾಗೋದೇ ಇಲ್ಲ ಅಂತ ನಿತ್ಯಾನಂದರು ಉಪದೇಶಿಸಿದ್ರಂತೆ. ಅದನ್ನ ಕೊಟ್ರೇಶಿಯೂ ಅವನ ಲವ್ವರೂ ಟೆಸ್ಟ್ ಮಾಡಾಕೋಗಿ ಈಗ ಯಡವಟ್ಟಾಗಿಬಿಟ್ಟಿದೆ. ಅವನ ಪಾಲಿಗೆ ಮೊನ್ನೆ ಆಗಬೇಕಾಗಿದ್ದ ಪ್ರಳಯ ಒಂದೆರಡು ತಿಂಗಳು ಲೇಟಾಗಿ ಡೆಲಿವೆರಿ ಆಗಂಗೆ ಕಾಣ್ಸುತ್ತೆ...' ಎಂದು ಕಣ್ಣು ಮಿಟುಕಿಸಿದ ಗುಡ್ಡೆ. ಕೊಟ್ರೇಶಿ ಮಾತಾಡಲಿಲ್ಲ.ಮಿಸ್ಸಮ್ಮಗೆ ಸಿಟ್ಟು ಬಂತು. `ಹೌದೇನೋ ಕೊಟ್ರ? ಥು ನಿನ್ ಮುಖಕ್ಕಿಷ್ಟು. ನೀ ಅಪ್ಪ ಆಗೋ ಮೊದ್ಲು ಆ ಹುಡುಗೀಗೆ ತಾಳಿ ಕಟ್ಟು. ಇಲ್ಲಾಂದ್ರೆ ನಾವೇ ನಿಂಗೊಂದು ಗತಿ ಕಾಣಿಸ್ತೀವಿ, ಏನು?' ಎಂದು ದೊಡ್ಡ ಧ್ವನಿಯಲ್ಲಿ ದಬಾಯಿಸಿದಳು. ಕೊಟ್ರೇಶಿ  ಆಯ್ತು' ಎನ್ನುವ ಹಾಗೆ ತಲೆಯಾಡಿಸಿದ.`ಅದೋಗ್ಲಿ, ಈಗ ಕೊಟ್ರೇಶಿ ಮಗೂಗೆ ಏನಂತ ಹೆಸರಿಡೋದು?' ಪರ‌್ಮೇಶಿ, ಗಾಯದ ಮೇಲೆ ಬೆಣ್ಣೆ ಸವರಿದ.

`ಇನ್ನೇನಿಡೋದು? ಪ್ರಳಯ ಕಾರಣ ಹುಟ್ಟಿದ್ದಕ್ಕೆ ಪ್ರಳಯಾಂತಕ್' ಅಂತ ಇಡೋದು ಅಷ್ಟೆ. ಫ್ಯಾನ್ಸಿಯಾಗು ಇದೆ, ಇಲ್ಲೆತಂಕ ಯಾರೂ ಇಟ್ಟಿಲ್ಲ..' ಎಂದ ಗುಡ್ಡೆ ನಗುತ್ತ.

`ಸರಿ, ಇನ್ನೇನಪ್ಪ ತೆಪರೇಸಿ? ಪ್ರಳಯದ ಬಗ್ಗೆ ನಿಮ್  ಬ್ರೇಕಿಂಗ್ ನ್ಯೂಸ್' ಚಾನೆಲ್ಗೆ ಯಾರ‌್ಯಾರು ಏನೇನು ಸಂದರ್ಶನ ಕೊಟ್ರು, ಏನ್ಕತೆ?' ದುಬ್ಬೀರ ವಿಚಾರಿಸಿದ.`ಇನ್ನೇನ್ ಹೇಳ್ತಾರಲೆ, ಮಾಮೂಲಿ. ನಮ್ ಯಡ್ಯೂರಪ್ಪ ಸಿಕ್ಕಿದ್ರು. ಪ್ರಳಯದ ಬಗ್ಗೆ ಕೇಳಿದ್ದಕ್ಕೆ `ಏನು? ಪ್ರಳಯನಾ? ಇದ್ಯಾವ ಸೀಮೆ ಪ್ರಳಯ ರೀ, ಚುನಾವಣೆ ಬರ‌್ಲಿ, ನಿಜವಾದ ಪ್ರಳಯ ಏನು ಅಂತ ನಾನು ತೋರಿಸ್ತೀನಿ. ಕೆಜೆಪಿ ಚಂಡಮಾರುತಕ್ಕೆ ಬಿಜೆಪಿ ದೂಳೀಪಟ ಆಗಿರುತ್ತೆ. ಈಗ್ಲೇ ಬರೆದಿಟ್ಕಳಿ...' ಅಂದ್ರು.ಸರಿ ಬಿಡಿ ಅಂತ ದೇವೇಗೌಡ್ರ ಹತ್ರ ಹೋಗಿ  `ಸಾರ್, ಪ್ರಳಯ ಆಗ್ಲಿಲ್ಲ, ನಿಮಗೆ ಸಂತೋಷನಾ?' ಅಂತ ಕೇಳಿದೆ. ಅದಕ್ಕೆ ಗೌಡ್ರು `ಪ್ರಳಯ ಆಗ್ಬೇಕು ಕಣ್ರಿ,  ನೈಸ್' ಆಗಿರೋ ರಸ್ತೆಗಳೆಲ್ಲ ಎಕ್ಕುಟ್ಟಿ ಹೋಗ್ಬೇಕು' ಅಂದ್ರು. ನಾನು ಪಿಟಿಕ್ಕೆನ್ನಲಿಲ್ಲ.

ಮುಂದೆ ಅಬ್ಕಾರಿ ಸಚಿವ ರೇಣುಕಾಚಾರ‌್ಯ ಸಿಕ್ರು.  `ಪ್ರಳಯ ಪೋಸ್ಟ್‌ಪೋನ್ ಆತಂತಲ್ಲ ಸಾರ್' ಅಂದೆ. `ಹೌದಾ? ಒಂದು ವೇಳೆ ಆದ್ರೂ ನಮಗೇನು ಚಿಂತೆ ಇಲ್ಲ ಬಿಡಿ. ನಮ್  ಪರಮಾತ್ಮ'ನ್ನ ಬೆಚ್ಚಗೆ ಒಳಗೆ ಇಳಿಸ್ಕೊಂಡ್‌ಬಿಟ್ರೆ ಜಗತ್ತು ಮುಳುಗಿ ಹೋದ್ರೂ ಗೊತ್ತಾಗಲ್ಲ. ನಿಮಗೂ ಒಂದು  ಫುಲ್' ಕಳಿಸಿಕೊಡ್ಲಾ?' ಅಂದ್ರು. ನಾನು ತಪ್ಪಿಸ್ಕೊಂಡ್ ಬಂದೆ ಎಂದ ತೆಪರೇಸಿ.ಗುಡ್ಡೆಗೆ ಸಿಟ್ಟು ಬಂತು. `ಅದ್ಯಾಕ್ ತಪ್ಪಿಸ್ಕೊಂಡ್ ಬಂದೆ? ಇಸ್ಕೊಂಡ್ ಬರ‌್ಬೇಕಿತ್ತು?' ಎಂದು ರೇಗಿದ.

`ಥೂ ನಿನ್ನ, ಆಸೆ ನೋಡು' ಎಂದ ತೆಪರೇಸಿ,  ಮುಂದೆ ರಜನೀಕಾಂತ್ ಸಿಕ್ಕಿದ್ರಪ್ಪ' ಅಂದ.  ಹೌದಾ? ನಿಜಾನಾ? ಏನಂದ್ರು?' ಮಿಸ್ಸಮ್ಮಗೆ ಖುಷಿಯಾಯಿತು.`ಪ್ರಳಯನಾ? ನನಗೆ ಹೇಳದಂಗೆ, ನನ್ನ ಕೇಳದಂಗೆ ಅದೆಂಗ್ರೀ ಬರುತ್ತೆ? ಅಂತ ಸ್ಟೈಲಾಗಿ ರೋಪ್ ಹೊಡೆದ್ರು' ನಾನು  ಕೇಳಿ ಹೇಳ್ತೀನಿ ಸಾ' ಅಂತ ಕ್ಯಾಮೆರಾ ಎತ್ಕಂಡ್ ಬಂದೆ ಎಂದ ತೆಪರೇಸಿ.

`ಆಯ್ತಪ್ಪ, ಯಾರದ್ರೂ ಏನಾದ್ರೂ ಆಗ್ಲಿ, ಲೇ ದುಬ್ಬೀರ, ನಿಂಗೆ ಪ್ರಳಯ ಅಂದ್ರೆ ಹೆದ್ರಿಕೆ ಇಲ್ವಾ? ಈ ಕ್ಷುದ್ರ ಗ್ರಹ, ಮಾಯನ್ ಕ್ಯಾಲೆಂಡರು ಎಲ್ಲ ವಿಚಿತ್ರ ಅಲ್ವಾ?' ಗುಡ್ಡೆ ಪ್ರಶ್ನಿಸಿದ.ದುಬ್ಬೀರ ಗಂಟಲು ಸರಿಪಡಿಸಿಕೊಂಡು `ನೋಡ್ರಪ್ಪಾ ಪ್ರಳಯಕ್ಕೆ ನಾನ್ಯಾಕೆ ಹೆದರೋದಿಲ್ಲ ಅನ್ನೋದನ್ನ ಒಂದು ಚುಟುಕದ ಮೂಲಕ ಹೇಳ್ತೀನಿ ಕೇಳಿ' ಎಂದ.  ಸರಿ ಹೇಳಿ' ಎಂದರು ಎಲ್ಲರೂ.    ಮಾಯನ್ ಕ್ಯಾಲೆಂಡರ್ ಇರಲಿನಿಬಿರು ಕ್ಷುದ್ರಗ್ರಹವೇ ಬರಲಿಪ್ರಳಯಕ್ಕೆ ನಾನು ಅಂಜುವುದಿಲ್ಲವಾವ್ಹಾ ವಾವ್ಹಾ...  ಏಕೆಂದರೆ ಅದರ ಜೊತೆಯಲ್ಲೇ ಈಗಸಂಸಾರ ನಡೆಸುತ್ತಿದ್ದೇನಲ್ಲ?ವಾವ್ಹಾ ವಾವ್ಹಾ... 

ಎಂದ ಗುಡ್ಡೆ,  ದುಬ್ಬೀರ, ಇದನ್ನ ನಿನ್ ಹೆಂಡ್ತಿಗೆ ಹೇಳ್ಲಾ? ಎಂದು ನಗುತ್ತಾ  ತಡೀರಪ್ಪ ಊಟಕ್ಕೆ ಮುಂಚೆ ನಂದೂ ಒಂದು ಚುಟುಕ... ಅಲ್ಲಲ್ಲ ಅಣಕ ಐತೆ. ಪೂಜಾಗಾಂಧಿ ಜೆ.ಡಿ.ಎಸ್. ಬಿಟ್ಟು ಕೆಜೆಪಿ ಸೇರಿದ್ದಕ್ಕೆ ಬರೆದಿದ್ದು.  ಕೃಷ್ಣನ ಕೊಳಲಿನಾ ಕರೆ, ಆಲಿಸು ಕೃಷ್ಣನ ಕೊಳಲಿನಾ ಕರೆ...' ಅಂತ ಒಂದು ಹಳೇ ಸಿನಿಮಾ ಹಾಡು ಐತೆ, ಕೇಳಿದಿರಾ? ಅದೇ ರಾಗದಲ್ಲಿ ಹೇಳ್ತೀನಿ... ಎಂಜಾಯ್ ಮಾಡಿ' ಎಂದು ಶುರು ಮಾಡಿದ.ಕೆಜೆಪೀ ಕೊಳಲಿನಾ ಕರೆ

ಆಲಿಸು ಕೆಜೆಪೀ ಕೊಳಲಿನಾ ಕರೆ...

ಇಳಿಸು ಹುಲ್ಲಿನಾ ಹೊರೆ

ಜೆಡಿಎಸ್. ಸಖ್ಯವ ತೊರೆ...

ಹೊರೇ ಹೊರೇ... ತೊರೇ ತೊರೇ.....

ಹೊರೇ ಹೊರೇ...' ಎಂದ ಗುಡ್ಡೆ. ಎಲ್ಲರೂ ಸಾಮೂಹಿಕವಾಗಿ  ತೊರೇ ತೊರೇ...' ಎಂದು ರಾಗವಾಗಿ ನಕ್ಕರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry