ಪ್ರಳಯ- ಭಯಭೀತರಾಗಬೇಡಿ

7
ಕಡೂರಿನಲ್ಲಿ ಪೇಜಾವರ ಶ್ರೀ ಅಭಯ

ಪ್ರಳಯ- ಭಯಭೀತರಾಗಬೇಡಿ

Published:
Updated:

ಕಡೂರು: ಯಾವುದೊ ಕ್ಯಾಲೆಂಡರ್ ಸೂಚನೆಯಿಂದ ಪ್ರಳಯ ಸಂಭಂವಿಸುವುದಿಲ್ಲ. ಕಲಿಯುಗದ ಆಯಸ್ಸು ಇನ್ನೂ ಕೋಟಿ ಕೋಟಿ ವರ್ಷಗಳಿರುವುದರಿಂದ ಜನರು ಪ್ರಳಯದ ಭಯ-ಭೀತಿಯಿಂದ ಹೊರ ಬಂದು ನೆಮ್ಮದಿಯಿಂದಿರಿ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶ್ವರ ತೀರ್ಥರು ಹೇಳಿದರು.ಪಟ್ಟಣಕ್ಕೆ ಗುರುವಾರ ಆಗಮಿಸಿದ ಶ್ರೀಗಳು ರಾಘವೇಂದ್ರ ಸ್ವಾಮಿ ಮಠದಲ್ಲಿ  ಪ್ರಳಯ ಕುರಿತು ಮಾತನಾಡಿದರು.

ಪ್ರಳಯಕ್ಕೆ ವೈಜ್ಞಾನಿಕ ಕಾರಣಗಳಿಲ್ಲ. ಪುರಾಣ ಕಥೆಗಳಲ್ಲಿ ಎಲ್ಲಿಯೂ ಈ ಬಗ್ಗೆ ನಮೂದಿಸಿಲ್ಲ,  ಪ್ರಳಯ ಸಂಭವಿಸುತ್ತದೆ ಎಂದು ಟಿವಿ ಮಾಧ್ಯಮಗಳು ಸುದ್ದಿ ಬಿತ್ತರಿಸುತ್ತಿರುವುದರಿಂದ ಜನರು ಭಯ ಪಡಬಾರದು  ಎಂದು ನುಡಿದರು.ಪ್ರಜಾಪ್ರಭುತ್ವದ ನೆರಳೇ ಭ್ರಷ್ಟಾಚಾರವಾ ಗಿರುವುದು ವಿಪರ್ಯಾಸವಾಗಿದೆ. ಚುನಾವಣೆಗಳೆಂದರೆ ಭ್ರಷ್ಟಾಚಾರ ಎಂಬಂತಾಗಿದೆ. ಚುನಾವಣೆಗೆ ವೆಚ್ಚ ಮಾಡಿದ ಹಣವನ್ನು ಭರಿಸಿಕೊಳ್ಳಲು ಅಡ್ಡದಾರಿಯಲ್ಲಿ ಸಾಗುತ್ತಿದ್ದಾರೆ. ಉದ್ಯಮಿ, ರಾಜಕಾರಣಿ, ಅಧಿಕಾರಿಗಳು ಸೇರಿದಂತೆ ನ್ಯಾಯಾಲಯ ಸಹ ಭ್ರಷ್ಟಾಚಾರದ ನೆರಳಿನಲ್ಲಿದೆ. ಇದನ್ನು ತೊಲಗಿಸಲು ಮಹಾ ಕ್ರಾಂತಿಯಾಗಬೇಕಾಗಿದೆ ಎಂದರು.  ಕಾವಿ ಸಂಸ್ಕೃತಿ ಮೇಲೆ ಕೆಟ್ಟ ಪರಿಣಾಮಗಳು ಕೇಳಿ ಬರುತ್ತಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲಾ ಕ್ಷೇತ್ರಗಳಲ್ಲೂ ಒಳ್ಳೆಯವರು, ಕೆಟ್ಟವರು ಇದ್ದಾರೆ. ಕೆಲವರಿಂದ ಕಾವಿ ಸಂಸ್ಕೃತಿಗೆ ಧಕ್ಕೆ ಬಂದಿರುವುದು ಸತ್ಯ ಆದರೆ  ಇದು ಸಮುದಾಯಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದರು. ನಕ್ಸಲರು ಧರ್ಮದ ಬಗ್ಗೆ ಕೆಟ್ಟ ಭಾವನೆಗಳನ್ನು ಬೆಳೆಸುತ್ತಿದ್ದಾರೆ. ಇಂತಹ ಭಾವನೆಗಳನ್ನು ದೂರ ಸರಿಸಿ ಮೂಲ ಸೌಕರ್ಯಗಳನ್ನು ಪಡೆಯಲಿ ಎಂದರು.ಮಡೆಸ್ನಾನದ ಬದಲು ದೇವರ ನೈವೇದ್ಯ ಅಥವಾ ಪ್ರಸಾದವನ್ನು ಎಲೆಯ ಮೇಲೆ ಹಾಕಿ ಬೇಕಾದರೆ ಉರುಳು ಸೇವೆ ಮಾಡಲಿ. ಆದರೆ ಬ್ರಾಹ್ಮಣರು ಊಟ ಮಾಡಿ ಬಿಟ್ಟ ಎಲೆಯ ಮೇಲಿನ ಉರುಳು ಸೇವೆ ನಿಲ್ಲಲಿ. ಆಗ ಮಾತ್ರ ಬ್ರಾಹ್ಮಣರ ಬಗ್ಗೆ ವಿರೋಧಗಳು ಬೆಳೆಯುವುದು ತಪ್ಪುತ್ತದೆ. ನೈವೇದ್ಯ(ಎಡೆ) ಸ್ನಾನ ಸ್ವೀಕರಿಸಲು  ಸಹ ಸರ್ಕಾರಕ್ಕೆ ಒತ್ತಾಯ ಮಾಡಿದ್ದು, ಸಮಾಜದಲ್ಲಿ ಜಾತಿಯ ಭಾವನೆ ಕೆರಳಿಸುವಂತಹ ಮಡೆ ಸ್ನಾನ ನಿಲ್ಲಬೇಕಾಗಿದೆ ಎಂಬ ಮಾಹಿತಿ ನೀಡಿದರು.ತಾಲ್ಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಅನಂತಪದ್ಮನಾಭ, ಶಿವಶಂಕರ್, ವಿದ್ಯಾಶಂಕರ್, ಸುರೇಶ್, ನಾಗರಾಜರಾವ್, ಶ್ರೀನಿವಾಸ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry