ಗುರುವಾರ , ಏಪ್ರಿಲ್ 22, 2021
28 °C

ಪ್ರವಾಸದ ಪ್ರಹಸನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದಲ್ಲಿ ಸಕಾಲಕ್ಕೆ ಮಳೆಯಾಗದೆ ಬರಗಾಲ ಬಿದ್ದಿದೆ ಎಂಬ ಸತ್ಯ ಬಿಜೆಪಿ ನಾಯಕರಿಗೆ ಈಗ ಗೊತ್ತಾದಂತಿದೆ. ಅದಕ್ಕಾಗಿಯೇ ಮೂರು ತಂಡಗಳನ್ನು ರಚಿಸಿ ಬರ ಅಧ್ಯಯನಕ್ಕೆ ಕಳಿಸುತ್ತಿದ್ದಾರೆ. ಆದರೆ ಇದೆಲ್ಲ ಕಣ್ಣೊರೆಸುವ ತಂತ್ರ ಎಂಬುದು ಸುಸ್ಪಷ್ಟ. ಏಕೆಂದರೆ ಜೂನ್ ಮೊದಲ ವಾರದಲ್ಲಿಯೇ ಮುಂಗಾರು ಮಳೆ ಎಲ್ಲ ನಿರೀಕ್ಷೆಯನ್ನು ತಲೆಕೆಳಗು ಮಾಡಿ ಕೈಕೊಟ್ಟಿತ್ತು. ಆ ನಂತರವೂ ಅದು ಕಣ್ಣಾಮುಚ್ಚಾಲೆ ಆಡುತ್ತಲೇ ಇದೆ. ಸರ್ಕಾರಿ ಲೆಕ್ಕದ ಪ್ರಕಾರವೇ 175 ತಾಲ್ಲೂಕುಗಳ ಪೈಕಿ ಶೇ 75ಕ್ಕಿಂತ ಹೆಚ್ಚು ತಾಲ್ಲೂಕುಗಳು ಭೀಕರ ಬರದ ದವಡೆಗೆ ಸಿಲುಕಿವೆ.  ರೈತರಂತೂ ಕಂಗಾಲಾಗಿದ್ದಾರೆ. ಅನೇಕ ಕಡೆ ಜನ ಕೆಲಸ ಅರಸಿ ಗುಳೇ ಹೋಗಿದ್ದಾರೆ. ಒಟ್ಟಾರೆ ಬರ ಬಂದು ಯಾವುದೋ ಕಾಲವಾಯಿತು. ಆಗ ಜನರಿಗೆ ಸಾಂತ್ವನ ಹೇಳದೇ, ಅವರ ನೋವಿಗೆ ಸ್ಪಂದಿಸದೆ ಅಧಿಕಾರಕ್ಕೆ ಕಿತ್ತಾಡುತ್ತ, ಮುಖ್ಯಮಂತ್ರಿಯನ್ನು ಇಳಿಸುವ- ಏರಿಸುವ ಆಟ ನಡೆಸುತ್ತ, ಒಬ್ಬರ ಮೇಲೊಬ್ಬರು ರಾಡಿ ಎರಚುತ್ತ, ಭಿನ್ನಮತೀಯ ಚಟುವಟಿಕೆಯಲ್ಲಿ ನಿರತರಾಗಿದ್ದ ಬಿಜೆಪಿ ಮುಖಂಡರು ಈಗ ದಿಢೀರನೆ `ತಂಡ~ ಕಟ್ಟಿಕೊಂಡು ಬರ ಅಧ್ಯಯನದ ನೆಪದಲ್ಲಿ `ದಂಡ~ಯಾತ್ರೆ ಹೊರಡುವುದು ನೋಡಿದರೆ ಆಶ್ಚರ್ಯವಾಗುತ್ತದೆ. ಈ ಹಿಂದೆಯೇ ಕೇಂದ್ರದ ತಂಡ ಬಂದು ಅಧ್ಯಯನ ನಡೆಸಿ ಹೋಗಿದೆ. ಒಂದು ಕಂತು ಪರಿಹಾರವೂ ಬಿಡುಗಡೆಯಾಗಿದೆ. ಕೆಲ ಸಮಯದ ಹಿಂದೆ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಸ್ವತಃ ಬಂದು ಮುಖ್ಯಮಂತ್ರಿ ಮತ್ತು ಅಧಿಕಾರಿಗಳ ಜತೆ ಚರ್ಚಿಸಿ ಕೇಂದ್ರದಿಂದ ಇನ್ನೊಂದು ತಂಡ ಕಳಿಸುವ ಆಶ್ವಾಸನೆ ಕೊಟ್ಟು ಹೋಗಿದ್ದಾರೆ. ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿಯಾದ ನಂತರ ತಮ್ಮ ಮತ್ತು ಇಬ್ಬರು ಉಪ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಿ ಬರ ಸೇರಿದಂತೆ ವಿವಿಧ ಕಾರ್ಯಗಳ ಉಸ್ತುವಾರಿ ವಹಿಸಿಕೊಟ್ಟಿದ್ದಾರೆ. ಹೀಗೆ ತಂಡಗಳ ಮೇಲೆ ತಂಡಗಳ ರಚನೆಯಾಗಿದೆ. ಆದರೆ ಬರದಿಂದ ತತ್ತರಿಸಿದ ರೈತರ, ಕೃಷಿ ಕಾರ್ಮಿಕರ ಕಷ್ಟ ಹಾಗೇ ಉಳಿದಿದೆ.ಈಗ ಬಿಜೆಪಿ ಮುಖಂಡರ ಮೂರು ತಂಡಗಳು ಹೊರಡುವ ಮೊದಲೇ ಅಲ್ಲೂ ಅಪಸ್ವರ ಎದ್ದಿದೆ. ಬರ ಅಧ್ಯಯನದ ಹೆಸರಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯವ್ಯಾಪಿ ಪ್ರವಾಸದ ವೇಳಾಪಟ್ಟಿ ಪ್ರಕಟಿಸುತ್ತಿದ್ದಂತೆ ಅನಂತಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ನೇತೃತ್ವದಲ್ಲಿ ಇನ್ನೆರಡು ತಂಡಗಳನ್ನು ಕಳಿಸುವ ಪಕ್ಷದ ನಿರ್ಧಾರ ಹೊರಬಿದ್ದಿದೆ. ಇದರಿಂದ ಯಡಿಯೂರಪ್ಪ ಸಹಜವಾಗಿಯೇ ಅಸಮಾಧಾನಗೊಂಡಿದ್ದಾರೆ. ಮುಖಂಡರ ನಡುವಿನ ವೈಮನಸ್ಯ ಈ ಮೂಲಕ ಮತ್ತೆ ಬೆಳಕಿಗೆ ಬಂದಿದೆ. ಬರ ಎದುರಿಸಲು ಯುದ್ಧೋಪಾದಿಯಲ್ಲಿ ಕೆಲಸ ಮಾಡುವುದನ್ನು ಬಿಟ್ಟು ಪರಸ್ಪರ ವಾಕ್ಸಮರ, ಮೂದಲಿಕೆಗಳಲ್ಲೇ ಕಾಲಹರಣ ಮಾಡಿದವರಿಗೆ ಇದು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಲು ಮತ್ತೊಂದು ವೇದಿಕೆಯಾಗಬಹುದಷ್ಟೆ.ವಸ್ತುಸ್ಥಿತಿ ಹೀಗಿರುವಾಗ ರಾಜಕೀಯ ಪ್ರೇರಿತವಾದ ಇಂಥ ಪ್ರವಾಸ, ಅಧ್ಯಯನದ ಹೆಸರಿನಲ್ಲಿ ನಡೆಯುವ ಪ್ರಹಸನಗಳಿಂದ ರೈತರಿಗೆ, ಜನಸಾಮಾನ್ಯರಿಗೆ ಏನಾದರೂ ಪ್ರಯೋಜನ ಆಗಬಹುದು ಎಂದು ನಿರೀಕ್ಷಿಸುವುದು ತಪ್ಪಾಗುತ್ತದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.