ಪ್ರವಾಸಿಗರ ಕಣ್ಮನ ಸೆಳೆವ ಆಲಮಟ್ಟಿ ಜಲಾಶಯ

7

ಪ್ರವಾಸಿಗರ ಕಣ್ಮನ ಸೆಳೆವ ಆಲಮಟ್ಟಿ ಜಲಾಶಯ

Published:
Updated:
ಪ್ರವಾಸಿಗರ ಕಣ್ಮನ ಸೆಳೆವ ಆಲಮಟ್ಟಿ ಜಲಾಶಯ

ಆಲಮಟ್ಟಿ: ಕಳೆದ ತಿಂಗಳವಷ್ಟೇ ಬಹುತೇಕ ಖಾಲಿಯಾಗಿದ್ದ ಆಲಮಟ್ಟಿಯ ಲಾಲಬಹಾದ್ದೂರ ಶಾಸ್ತ್ರಿ ಜಲಾಶಯ ತುಂಬಿ ಹರಿದು ಮಲೆನಾಡಿನ ಸೊಬಗನ್ನು ನೆನಪಿಸುತ್ತಿದೆ.ಮಹಾರಾಷ್ಟ್ರದ ಕೃಷ್ಣಾ ಕೊಳ್ಳದ ವಿವಿಧ ಜಲಾಶಯಗಳಿಂದ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಜಲಾಶಯದ ಎಲ್ಲಾ 26 ಕ್ರಸ್ಟ್‌ಗೇಟ್‌ಗಳನ್ನು ತೆರೆದು ಕೃಷ್ಣಾ ನದಿ ಕೆಳ ಪಾತ್ರಕ್ಕೆ ಹರಿಸಲಾಗುತ್ತಿದೆ. 26 ಕ್ರಸ್ಟ್ ಗೇಟ್‌ಗಳಿಂದ ಭೋರ್ಗರೆಯುತ್ತಾ ಬರುವ ನೀರು ಆಕರ್ಷಕವಾಗಿ ಕಾಣುತ್ತದೆ. ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.ಜಲಾಶಯದ ಸನಿಹ ನಿಂತಾಗ ತೂರಿ ಬರುವ ತುಂತುರು ಹನಿ ಮನಸ್ಸಿಗೆ ಮುದ ನೀಡುತ್ತದೆ. ಭೋರ್ಗರೆಯುವ ನೀರಿನ ರಭಸಕ್ಕೆ ಗಾಳಿಯಲ್ಲಿ ತೇಲಿ ಮಂಜಿನಂತೆ ಬರುವ ನೀರ ಹನಿಗಳು ಮೈಗೆ ತಾಗಿದಾಗ ವಿಶೇಷ ಅನುಭವವಾಗುತ್ತದೆ.ಬೊಗಸೆ ನೀರಿಗೂ ಬಾಯಿಬಿಡುವ ಬಿರು ಬಿಸಿಲಿನ ವಿಜಾಪುರ ಜಿಲ್ಲೆಯ ಜನತೆಗೆ ಇದು ಹೊಸ ಅನುಭೂತಿಯನ್ನು ನೀಡುತ್ತಿದೆ. ಒಂದರ ಹಿಂದೆ ಒಂದರಂತೆ ಬರುವ ಅಲೆಗಳು, 26 ಗೇಟ್‌ಗಳ ಮೇಲಿಂದ ಧುಮ್ಮಿಕ್ಕುತ್ತಿರುವ ನೀರು, ನದಿಯ ತೀರಕ್ಕೆ ಬರುವ ಏಡಿ, ಮೀನು ಮತ್ತಿತರ ಜಲಚರಗಳು, ಪ್ರವಾಸಿಗರ ಹೃದಯಕ್ಕೆ ಲಗ್ಗೆ ಇಡುತ್ತವೆ. ಅಲ್ಲದೇ ವಿವಿಧ ಪಕ್ಷಿಗಳು ನದಿಗುಂಟ ಹಾರಿ ಬಂದು ಜಲಚರಗಳನ್ನು ಕೊಕ್ಕೆಯಿಂದ ಕಚ್ಚಿಕೊಳ್ಳುವ ದೃಶ್ಯ ಗಮನ ಸೆಳೆಯುವುದು.ಸೀತಮ್ಮನಗುಡ್ಡ ಮತ್ತು ಆಲಮಟ್ಟಿಯ ಗುಡ್ಡದ ಮಧ್ಯದಲ್ಲಿ ನಿರ್ಮಾಣವಾದ ಆಲಮಟ್ಟಿ ಜಲಾಶಯದ ಕ್ರಸ್ಟ್ ಗೇಟುಗಳ ನಡುವಿನಿಂದ ಜಾರಿ ಬರುವ ಕೃಷ್ಣೆಯ ಓಟ, ಹಾಲ್ನೊರೆಯಂತೆ ಚಿಮ್ಮುತ್ತಿದೆ. ಆ ನೀರು ಬಿಳಿ ನೊರೆ ನೋಡುಗರ ಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆ.ಅಣೆಕಟ್ಟೆಯ ಎಡಬಲದ ಸುತ್ತ ಎತ್ತರವಾದ ಕಲ್ಲುಬಂಡೆಗಳಿಂದ ಕೂಡಿದ ಗುಡ್ಡಗಳ ಸಾಲು. ನಡುವೆ ಮೈವೆತ್ತ ಹಸಿರಿನ ಸಿರಿ. ಇವುಗಳ ಜೊತೆಗೆ ಗೇಟ್‌ಗಳ ಮೂಲಕ ಚಿಮ್ಮುವ ಜಲ ರಾಶಿ. ಒಂದೊಂದು ಕೋನದಿಂದಲೂ ಒಂದೊಂದು ಬಗೆಯಲ್ಲಿ ಸೊಬಗು ನೀಡುವುದು. ಇದರ ಮಧ್ಯೆ ಎರಡೆರಡು ನಿಮಿಷ ಮೂಡಿ ಮಾಯವಾಗುವ ಕಾಮನಬಿಲ್ಲು ಮೋಡಿ ಮಾಡುವುದು. ನಿಸರ್ಗ ಸಹಜ ಚಿತ್ತಾರ ವರ್ಣಿಸಲಸದಳ. ಸಹೃದಯರ ಮೈ ಮನಸ್ಸು ಲೌಕಿಕ ಬದುಕನ್ನು ಮರೆಸುತ್ತದೆ.ಇಷ್ಟು ಸುಂದರವಾಗಿರುವ ಜಲಾಶಯವನ್ನು ಹತ್ತಿರದಿಂದ ನೋಡಿ ಕಣ್ತುಂಬಿಕೊಳ್ಳಲು ಪ್ರವಾಸಿಗರಿಗೆ ಆಸೆ. ಆದರೆ ಭದ್ರತೆ ದೃಷ್ಟಿಯಿಂದ ಜಲಾಶಯದ ಸಮೀಪ ಹೋಗಲು ಅವಕಾಶ ನೀಡುವುದಿಲ್ಲ. ಇದರಿಂದ ಪ್ರವಾಸಿಗರಿಗೆ ಬೇಸರವಾಗುತ್ತದೆ.ದೂರದ ಊರುಗಳಿಂದ ಆಗಮಿಸುವ ಪ್ರವಾಸಿಗರು ಈ ಸೌಂದರ್ಯವನ್ನು ಕಣ್ಣು ತುಂಬಿಕೊಳ್ಳಲು ಅವಕಾಶ ಮಾಡಿಕೊಟ್ಟರೆ ಸೂಕ್ತ. ಭದ್ರತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಸರ್ಕಾರ ಪ್ರವಾಸಿಗರ ಬಗ್ಗೆಯೂ ಗಮನ ನೀಡಬೇಕು ಎಂದು ಬೈಲಹೊಂಗಲದ ಪ್ರವಾಸಿ ಎನ್.ಎಸ್. ಪಾಟೀಲ ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry