ಶುಕ್ರವಾರ, ನವೆಂಬರ್ 22, 2019
23 °C

ಪ್ರವಾಸಿಗರ ಹುಲ್ಲುಗಾವಲು

Published:
Updated:
ಪ್ರವಾಸಿಗರ ಹುಲ್ಲುಗಾವಲು

ಬೇಸಿಗೆ ಧಗೆಯ ಸಂದರ್ಭದಲ್ಲೇ ಪ್ರವಾಸದ ಬುತ್ತಿ ಕೂಡ ಸಿದ್ಧವಾಗುತ್ತಿದೆ. ರಜೆಯ ಸಂಭ್ರಮದಲ್ಲಿ ಊರು ಸೇರಿ ಅಜ್ಜಿ-ತಾತನ ಜೊತೆ ಹರಟೆ ಹೊಡೆಯುವುದು, ಮನೆ, ತೋಟ, ದೇಗುಲ ಸುತ್ತುವ ಗೀಳಿನೊಂದಿಗೆ ಊರೂರು ಸುತ್ತುವ ಚಾಳಿಯೂ ಬೆಳೆಯುತ್ತಿದೆ. ರಜೆಯ ಮಜಾ ಅನುಭವಿಸಲು ಪ್ರಯಾಸದ ಪ್ರಯಾಣವಾದರೂ ಸರಿ ಎಂದು ಪ್ರವಾಸಕ್ಕೆ ಹೊರಡುವವರೇ ಹೆಚ್ಚು. ಇಲ್ಲಿಗೂ ಬರುವವರೂ ಕಡಿಮೆ ಇಲ್ಲ.ಇಷ್ಟಕ್ಕೂ ನಗರದ ಹವಾಮಾನ ಉಳಿದ ಅನೇಕ ರಾಜ್ಯಗಳ ಜನರ ಪಾಲಿಗೆ ಹಿತಕರ. ಹಾಗಾಗಿ ನಗರವನ್ನು ಪ್ರವಾಸಕ್ಕೆ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಸಲ ಧಗೆ ಜೋರಾಗಿದ್ದರೂ ಅತಿಥಿಗಳ ಸಂಖ್ಯೆಯಲ್ಲಿ ಇಳಿಮುಖವೇನೂ ಆಗಿಲ್ಲ. ಆತಿಥ್ಯ ನಿರ್ವಹಿಸುವ ಕೆಲವರು `ಮೆಟ್ರೊ' ಜೊತೆ ಮಾತನಾಡಿದ್ದಾರೆ.ಚುನಾವಣೆ ಬಾಧಿಸದು

ನಗರದ ಸಾಲಿಟೆರ್ ಹೊಟೇಲ್‌ನ ನಿರ್ದೇಶಕ ಬಾಲಾಜಿ ಪ್ರಕಾರ ಈಗಾಗಲೇ ರೂಮ್ ಬುಕ್ಕಿಂಗ್ ನಡೆದಿದೆಯಂತೆ. ಬೇಸಿಗೆ ಕಾಲದಲ್ಲಿ ಇಲ್ಲಿಗೆ ಬರುವ ಅತಿಥಿಗಳು ಬಹುತೇಕ ಉತ್ತರ ಭಾರತದವರು ಹಾಗೂ ಕಾರ್ಪೋರೇಟ್ ಕಂಪೆನಿಗಳ ಪ್ರತಿನಿಧಿಗಳು. ಇಲ್ಲಿನ ವಾತಾವರಣ ಚೆನ್ನಾಗಿರುವುದರಿಂದ ವಿದೇಶೀಯರು ಕೂಡ ಬರುತ್ತಾರೆ. ಬೇರೆ ರಾಜ್ಯಗಳಿಂದ ಬರುವವರ ಸಂಖ್ಯೆ ಹೆಚ್ಚು.ಹೀಗಾಗಿ ವಿಧಾನಸಭಾ ಚುನಾವಣೆಯ ಭರಾಟೆ ಆಗಲೀ, ಏರಿದ ಬಿಸಿಲಾಗಲೀ ತಮ್ಮ ಹೋಟೆಲ್‌ನ ವಹಿವಾಟಿನ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಿಲ್ಲ ಎಂಬುದು ಬಾಲಾಜಿ ಸ್ಪಷ್ಟನೆ. ಕಳೆದ ಬಾರಿಗಿಂತ ಈ ಬಾರಿ ಬುಕ್ಕಿಂಗ್ ಪ್ರಮಾಣದಲ್ಲಿ ಏರಿಕೆಯಾಗಿದೆಯಂತೆ. `ನಗರದವರು ವಾರಾಂತ್ಯದಲ್ಲಿ ನಮ್ಮ ಹೊಟೇಲ್‌ಗೆ ಭೇಟಿ ನೀಡುತ್ತಾರೆ. ಮಕ್ಕಳಿಗೆ ಆಟವಾಡಲು ಇಲ್ಲಿ ವ್ಯವಸ್ಥೆ ಕೂಡ ಮಾಡಿದ್ದೇವೆ. ಹಾಗಾಗಿ ಜನ ಮಕ್ಕಳೊಂದಿಗೆ ಬರುವುದಕ್ಕೆ ಇಷ್ಟಪಡುತ್ತಾರೆ' ಎನ್ನುತ್ತಾರೆ ಬಾಲಾಜಿ.ಬೆಲೆ ಏರಿಕೆ ಕಿರಿಕಿರಿ

ವಿಂಟೇಜ್ ಟೂರ್ಸ್‌ ಅಂಡ್ ಟ್ರಾವೆಲ್ಸ್‌ನ ಟಿ. ರೆಹಮಾನ್ ಹೇಳುವಂತೆ- `ನಾನು 22 ವರ್ಷದಿಂದ ಟೂರ್ಸ್‌ ಅಂಡ್ ಟ್ರಾವಲ್ಸ್‌ನ ಉದ್ಯೋಗ ಮಾಡಿಕೊಂಡು ಇದ್ದೇನೆ. ಈ ವರ್ಷ ನಿರಾಸೆಯಾಗಿದೆ. ಕಳೆದ ವರ್ಷ ಇಷ್ಟು ಹೊತ್ತಿಗಾಗಲೇ ಜನ ಹೋಟೆಲ್, ಪ್ರಸಿದ್ಧ ಸ್ಥಳಗಳ ಬುಕ್ಕಿಂಗ್ ಮಾಡಲು ಕರೆ ಮಾಡುತ್ತಿದ್ದರು. ಈ ಬಾರಿ ಯಾರೂ ಬುಕ್ ಮಾಡುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಬೆಲೆ ಏರಿಕೆ. ಪ್ರವಾಸಕ್ಕೆ ಹೋಗುವವರು ಪ್ರತಿವರ್ಷ ಕಡಿಮೆಯಾಗುತ್ತಿದ್ದಾರೆ. ಕೆಲವರು ಅವರದೇ ಸ್ವಂತ ಗಾಡಿಯಲ್ಲಿ ಹೋಗುವುದರಿಂದ ಟ್ರಾವೆಲ್ ಏಜೆನ್ಸಿ ಅವರ ಮೊರೆಹೋಗುವುದಿಲ್ಲ.ಈಗ ಸ್ಪರ್ಧೆ ಕೂಡ ಜಾಸ್ತಿಯಾಗುತ್ತಿದೆ. ಪಕ್ಕದ ಏಜೆನ್ಸಿಯವರು 95 ರೂಪಾಯಿ ಹೇಳಿದರೆ, ನಾವು 90 ರೂಪಾಯಿ ಹೇಳುತ್ತೇವೆ. ಗ್ರಾಹಕರಿಗೆ ಇದರಿಂದ ಲಾಭವಾಗುತ್ತದೆ. ಇಷ್ಟೆಲ್ಲ ಇದ್ದರೂ ಪ್ರವಾಸಕ್ಕೆ ಬರುವವರ ಸಂಖ್ಯೆ ಕಡಿಮೆಯಾಗುತ್ತಿದೆ.ಮೊದಲೆಲ್ಲಾ ಮುಂಬೈ, ಗಲ್ಫ್, ಮಹಾರಾಷ್ಟ್ರದಿಂದ ಜನ ಬೆಂಗಳೂರು ನೋಡಲು ಬರುತ್ತಿದ್ದರು. ಆಗ ಇಷ್ಟು ಟ್ರಾಫಿಕ್ ಕಿರಿಕಿರಿ ಇರಲಿಲ್ಲ. ನಗರಕ್ಕೆ ಬಂದವರು ವಾಪಾಸ್ ಹೋಗುವಾಗ ಒಳ್ಳೆಯ ನಗರಿಯನ್ನು ಬಿಟ್ಟು ಹೋಗುತ್ತಿದ್ದೇವೆ ಎನ್ನುತ್ತಿದ್ದರು. ಈಗ ಕಾಲ ಬದಲಾಗಿದೆ. ಚುನಾವಣೆ ಬಂತೆಂದರೆ ಬೆಂಗಳೂರಿಗೆ ಕಾಲಿಡಲು ಜನ ಹಿಂದೆ ಮುಂದೆ ನೋಡುತ್ತಾರೆ.ಬೆಂಗಳೂರಿನ ಕೆಲವರು ರಜೆಯಲ್ಲಿ ಶಿಮ್ಲಾ, ಮನಾಲಿ, ಡಾರ್ಜಿಲಿಂಗ್‌ಗೆ ಹೋಗಲು ಮನಸ್ಸು ಮಾಡುತ್ತಾರೆ. ಹೊರಗಡೆಯಿಂದ ಬಂದವರು ಗಿರಿಧಾಮ, ಐತಿಹಾಸಿಕ ಸ್ಥಳಗಳಾದ ಹಂಪೆ, ಮೈಸೂರಿಗೆ ಪಯಣ ಬೆಳೆಸಲು ಇಷ್ಟಪಡುತ್ತಾರೆ'.ವಿದೇಶಿ ಪ್ರಯಾಣ ಬಲು ಜೋರು

`ವಿಮಾನದಲ್ಲಿ ಪಯಣಿಸಲು ಈಗಾಗಲೇ ಟಿಕೆಟ್ ಬುಕ್ಕಿಂಗ್ ನಡೆದಿದೆ. ಹೊರಗಡೆಯಿಂದ ಬರುವವರಿಗಿಂತ ಇಲ್ಲಿಂದ ಹೊರಗಡೆ ಹೋಗುವವರ ಸಂಖ್ಯೆ ಜಾಸ್ತಿ ಇದೆ. ಅದರಲ್ಲೂ ಐ.ಟಿ, ಬಿ.ಟಿ, ಕಂಪೆನಿಯವರು ತುಂಬಾ ಜನ ಬುಕ್ ಮಾಡುತ್ತಾರೆ. ನಗರದ ಜನತೆ ದುಬೈ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಚೀನಾ, ಮಲೇಷ್ಯಾ, ಬ್ಯಾಂಕಾಕ್, ಹಾಕಾಂಗ್‌ಗೆ ಹೋಗಲು ಇಷ್ಟಪಡುತ್ತಾರೆ' ಎಂದು ಮಾಹಿತಿ ನೀಡುತ್ತಾರೆ ಏರ್ ಟ್ರಾವೆಲ್ಸ್ ಎಂಟರ್‌ಪ್ರೈಸಸ್ ಇಂಡಿಯಾ ಲಿಮಿಟೆಡ್‌ನ ಬ್ರಾಂಚ್ ಮ್ಯಾನೇಜರ್ ಸ್ವಾಮಿ.ಬುಕ್ಕಿಂಗ್ ಗಳಿಕೆ, ಇಳಿಕೆ

`ಕಳೆದ ಬಾರಿಗಿಂತ ಈ ಬಾರಿ ನಮ್ಮ ಹೋಟೆಲ್‌ನಲ್ಲಿ ಬುಕಿಂಗ್ ಜಾಸ್ತಿಯಾಗಿದೆ. ದ್ವೀತಿಯ ಪಿ.ಯು.ಸಿ ಪರೀಕ್ಷೆಯ ಮೌಲ್ಯಮಾಪನಕ್ಕೆ ಉಪನ್ಯಾಸಕರು ಬರುತ್ತಿದ್ದಾರೆ. ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ವೀಕ್ಷಿಸುವವರು, ಚುನಾವಣೆಗಾಗಿ ಬಂದವರು ಹೊಟೇಲ್‌ಗೆ ಬರುತ್ತಾರೆ. ಬೇಸಿಗೆಯ ರಜೆ ಕಳೆಯುವವರು ಶಿವಮೊಗ್ಗ, ಹುಬ್ಬಳ್ಳಿ, ಧಾರಾವಾಡದಿಂದ ಹೆಚ್ಚು ಜನ ಬರುತ್ತಾರೆ. ನಗರದವರು ಕೂಡ ಮಕ್ಕಳೊಂದಿಗೆ ಬಂದು ಎರಡು, ಮೂರು ದಿನ ಇದ್ದು ಹೋಗುತ್ತಾರೆ' ಎನ್ನುತ್ತಾರೆ ಟೂರಿಸ್ಟ್ ಹೊಟೇಲ್‌ನ ವೇಣುಕುಮಾರ್.`ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವ್ಯಾಪಾರ ಕಡಿಮೆಯಾಗಿದೆ. ಸರಿಯಾದ ಕಾರಣ ಮಾತ್ರ ತಿಳಿದಿಲ್ಲ. ಬೆಂಗಳೂರಿನಿಂದ ಮಾತ್ರವಲ್ಲದೆ ಹೊರಗಿನಿಂದಲೂ ಜನ ಬರುತ್ತಾರೆ. ಗೋವಾ, ಮುಂಬೈ, ಬೆಳಗಾವಿ ಮುಂತಾದ ಕಡೆಯಿಂದ ಬರುವವರು ಹೆಚ್ಚು. ನಮ್ಮದು ರೆಸಾರ್ಟ್ ಆಗಿರುವುದರಿಂದ ಈಜುಕೊಳ, ಚದುರಂಗದಾಟ, ಜಿಮ್, ಮಕ್ಕಳಿಗೆ ಆಟವಾಡಲು ಕೂಡ ಉತ್ತಮವಾದ ವ್ಯವಸ್ಥೆ ಇದೆ. ನಗರದವರು ರಜೆ ಇದ್ದಾಗ ಬಂದು ತಂಗುತ್ತಾರೆ' ಎನ್ನುತ್ತಾರೆ ಯಲಹಂಕದಲ್ಲಿರುವ ರಮಣಶ್ರೀ ಕ್ಯಾಲಿಫೋರ್ನಿಯಾ ರೆಸಾರ್ಟ್‌ನ ವ್ಯವಸ್ಥಾಪಕ ಸೈಯದ್.ಹೆಚ್ಚಿದ ನಿರೀಕ್ಷೆ

`ಕಳೆದ ವರ್ಷ ಬ್ರಹ್ಮಮಹೋತ್ಸವ ಏಪ್ರಿಲ್ ಮೊದಲ ವಾರದಲ್ಲಿಯೇ ಇದ್ದಿದ್ದರಿಂದ ವಾರದ ದಿನಗಳಲ್ಲಿ ದಿನವೊಂದಕ್ಕೆ ಒಂಬತ್ತು ಸಾವಿರ ಜನ ಬಂದಿದ್ದರು, ವಾರಾಂತ್ಯದಲ್ಲಿ 36 ಸಾವಿರ ಜನವಿದ್ದರು. ಈ ವರ್ಷ ತುಂಬಾ ವ್ಯತ್ಯಾಸವೇನೂ ಕಂಡುಬಂದಿಲ್ಲ. ಬ್ರಹ್ಮಮಹೋತ್ಸವ ಆಗಬೇಕಿದೆಯಷ್ಟೆ. ಆ ಸಂದರ್ಭದಲ್ಲಿ ಹೆಚ್ಚಿನ ಪ್ರವಾಸಿಗರು ಬರುತ್ತಾರೆ ಎಂಬ ನಂಬಿಕೆ ಇದೆ. ಶೇ ಎರಡರಿಂದ ಮೂರರಷ್ಟು ಜನ ವಿದೇಶೀಯರು, ಶೇ 40ರಷ್ಟು ದಕ್ಷಿಣ ಭಾರತದವರು ಬರುತ್ತಾರೆ. ಉಳಿದವರು ಇಲ್ಲಿಯವರೇ. ನಗರದಲ್ಲಿಯೇ ಇರುವುದರಿಂದ ಜನ ವಾರಾಂತ್ಯದಲ್ಲಿ ಹೆಚ್ಚು ಬರುತ್ತಾರೆ. ಬೇಸಿಗೆ ರಜೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚು' ಎಂಬುದು ಇಸ್ಕಾನ್‌ನ ಭರತ್ ವೃಷಭ್‌ದಾಸ್ ಪ್ರತಿಕ್ರಿಯೆ.ಒಟ್ಟಿನಲ್ಲಿ ಪ್ರವಾಸದ ಸುಖ ಮೊಗೆದುಕೊಳ್ಳುವವರಿಗೆ ಬಿಸಿಲು, ಚುನಾವಣೆಯ ಕಾವು ಯಾವುದೂ ಅಡ್ಡಿಪಡಿಸುತ್ತಿಲ್ಲ. ಕಬ್ಬನ್ ಉದ್ಯಾನದ ಹಸಿರು ಕಡಿಮೆಯಾಗಿ, ವಿಧಾನಸೌಧದ ಮುಂಭಾಗ ನಿಂತು ಫೋಟೊ ತೆಗೆಸಿಕೊಳ್ಳುವವರ ಸಂಖ್ಯೆ ಇಳಿಮುಖವಾದರೂ ಪ್ರವಾಸಕ್ಕೆ ಬರುವವರಿಗೆ ನಗರದಲ್ಲಿ ಬೇರೆ ಆಕರ್ಷಣೆಗಳೂ ಇವೆ.

 

ಪ್ರತಿಕ್ರಿಯಿಸಿ (+)