ಪ್ರವಾಸಿ ತಾಣಗಳಿಗೆ ಜನರ ದಂಡು

7
ವೈನ್‌ ಖರೀದಿಗೆ ಮುಗಿಬಿದ್ದವರು

ಪ್ರವಾಸಿ ತಾಣಗಳಿಗೆ ಜನರ ದಂಡು

Published:
Updated:
ಪ್ರವಾಸಿ ತಾಣಗಳಿಗೆ ಜನರ ದಂಡು

ಮಡಿಕೇರಿ: ಸಾಹಿತ್ಯದ ರಸಸ್ವಾದಕ್ಕೆ ನಗರಕ್ಕೆ ಬಂದಿದ್ದ ಸಾವಿರಾರು ಕನ್ನಡಾ­ಭಿ­ಮಾನಿಗಳು ಕೊಡಗಿನ ಜೇನು ತುಪ್ಪ, ವೈನ್, ಕಾಫಿ ಪುಡಿ, ಕರಿಮೆಣಸು, ಏಲಕ್ಕಿ ಖರೀದಿಸಲು ಮುಗಿಬಿದ್ದ ದೃಶ್ಯ ಗುರುವಾರ ಎಲ್ಲೆಡೆ ಕಂಡುಬಂತು.ಸಮ್ಮೇಳನದ ಮೊದಲೆರಡು ದಿನ­ಗಳಲ್ಲಿ ನಡೆದ ಸಮ್ಮೇಳನಾಧ್ಯಕ್ಷರ ಭಾಷಣ, ವಿಚಾರಗೋಷ್ಠಿ ಭಾಗವಹಿ­ಸಿದ್ದ ಜನರು, ಕೊನೆಯ ದಿನವನ್ನು ಶಾಪಿಂಗ್‌ಗಾಗಿ ಮೀಸಲಿಟ್ಟಂತೆ ಕಾಣುತ್ತಿತ್ತು.ಭಾಗಮಂಡಲ ಜೇನುಕೃಷಿಕರ ಸಹ­ಕಾರ ಸಂಘದ ವ್ಯಾಪಾರ ಮಳಿಗೆಯಲ್ಲಿ 3 ಬಾಟಲಿ ‘ಕೂರ್ಗ್‌ ಹನಿ’ ಖರೀದಿಸಿದ ಕುಷ್ಟಗಿ ಪಟ್ಟಣದ ಬಸಪ್ಪ ಮಾತ­ನಾಡಿ,‘ಕೊಡಗಿನ ಜೇನು ತುಪ್ಪದ ಬಗ್ಗೆ ಬಾಳಾ ಕೇಳಿದ್ವಿ, ನಮ್ಮೂರ ಕಡೆ­ಯವರು ಎರಡು ಬಾಟಲಿ ತರಾಕ್‌ ಹೇಳ್ಯಾರ್ರಿ’ ಎಂದರು.ಸ್ಥಳೀಯವಾಗಿ ತಯಾರಿಸಿದ ವೈನ್‌ ಖರೀದಿಸಲು ಹಲವರು ಆಸಕ್ತಿ ತೋರುತ್ತಿದ್ದರು. ವೈನ್‌ ಬಾಟಲಿಗಳ ಮೇಲೆ ಯಾವುದೇ ರೀತಿಯ ಲೇಬಲ್‌ ಅಂಟಿಸದಿರುವುದರ ಬಗ್ಗೆಯೂ ಅವರು ವಿಚಾರಿಸುತ್ತಿದ್ದರು. ಕರಿದ್ರಾಕ್ಷಿ­ಯಿಂದ ತಯಾರಿಸಿದ ವೈನ್‌ ಹಾಗೂ ಮನೆಯಲ್ಲಿ ತಯಾರಿಸಿದ ಚಾಕಲೇಟ್‌­ಗಳಿಗೂ ಬೇಡಿಕೆ ಕಂಡುಬಂದಿತು.ನಗರದ ಬಹುತೇಕ ಮಳಿಗೆಗಳ ಎದುರು ಕಾಫಿ ಪುಡಿ, ಕರಿಮೆಣಸು, ಏಲಕ್ಕಿ, ಗೋಡಂಬಿ ಸೇರಿದಂತೆ ಹಲವು ಮಸಾಲೆ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತಿತ್ತು. ‘ಕೊಡಗಿಗೆ ಬಂದ್‌ ಮ್ಯಾಲ್‌ ಕಾಫಿ ಪೌಡರ್‌ ಒಯ್ಯಲಿಲ್ಲಂದ್ರ ಹ್ಯಾಂಗ್ರಿ?’ ಎಂದು ಚಿಕ್ಕೋಡಿಯ ರಾಜಶೇಖರ್‌ ಪ್ರಶ್ನಿಸಿದರು.ಮಸಾಲೆ ಪದಾರ್ಥಗಳ ವ್ಯಾಪಾರಿ ಹುಸೇನ್‌ ಮಾತನಾಡಿ, ‘ಸಮ್ಮೇಳನ ನಡೆಯುತ್ತಿರುವುದರಿಂದ ಜನರ ಓಡಾಟ ಜಾಸ್ತಿಯಾಗಿದೆ. ಹೊರ­ಜಿಲ್ಲೆಗಳಿಂದ ಬಂದಿರುವ ಬಹಳ ಜನರು ಜೇನುತುಪ್ಪ, ಕರಿಮೆಣಸು ಖರೀದಿಸುತ್ತಿದ್ದಾರೆ. ಕೊಡಗಿನ ಏಲಕ್ಕಿಯು ಬಣ್ಣದಲ್ಲಿ ಕೊಂಚ ಮಸುಕಾಗಿರುತ್ತದೆ, ಕೇರಳದ ಏಲಕ್ಕಿಯು ತಿಳಿಹಸಿರು ಹೊಳೆಯುವ ಬಣ್ಣ ಹೊಂದಿರುತ್ತದೆ. ಕೊಡಗಿನ (ಮಸು­ಕಾಗಿರುವ) ಏಲಕ್ಕಿ ಬಿಟ್ಟು ಕೇರಳದ ಏಲಕ್ಕಿಯನ್ನೇ ಹೆಚ್ಚಿನ ಜನರು ತೆಗೆದುಕೊಂಡು ಹೋಗುತ್ತಿದ್ದಾರೆ’ ಎಂದರು.ಪ್ರವಾಸಿ ತಾಣಕ್ಕೆ ಭೇಟಿ: ಸಮ್ಮೇಳನ­ದಲ್ಲಿ ಭಾಗವಹಿಸಿದ್ದ ಸರ್ಕಾರಿ ನೌಕರರಿಗೆ ಬುಧವಾರ ರಾತ್ರಿ ಒಒಡಿ ಸರ್ಟಿಫಿಕೇಟ್‌ ವಿತರಿಸಲಾ­ಯಿತು. ಸರ್ಟಿಫಿಕೇಟ್‌ ಪಡೆದ ನೌಕರರು ಗುರುವಾರ ಬೆಳಿಗ್ಗೆ ಪ್ರವಾಸಿ ತಾಣಗಳತ್ತ ಹೆಜ್ಜೆ    ಹಾಕಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry