ಭಾನುವಾರ, ಏಪ್ರಿಲ್ 11, 2021
25 °C

ಪ್ರವಾಸಿ ತಾಣಗಳಿಗೆ ಸೌಲಭ್ಯ ಕಲ್ಪಿಸಿ: ಶಿವಶಂಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾಗಿರುವ ರಾಜಾಸೀಟ್, ಹೊನ್ನಮ್ಮನ ಕೆರೆ, ಅಬ್ಬಿ ಜಲಪಾತ, ಮಲ್ಲಹಳ್ಳಿ ಜಲಪಾತ, ಇರ್ಪು ಜಲಪಾತ, ಮಕ್ಕಳ ಗುಡಿಬೆಟ್ಟ, ನಾಲ್ಕುನಾಡು ಅರಮನೆ ಮತ್ತಿತರ ಸ್ಥಾನಗಳಲ್ಲಿ ಕುಡಿಯುವ ನೀರು, ಶೌಚಾಲಯ ಮತ್ತಿತರ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ  ನಿರ್ದೇಶನ ನೀಡಿದ್ದಾರೆ.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದರು.ರಾಜಾಸೀಟು ಸಮಗ್ರ ಅಭಿವೃದ್ಧಿ ಸಂಬಂಧಿಸಿದಂತೆ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುವುದು. ಇಲ್ಲಿಗೆ ಅತ್ಯಗತ್ಯವಾಗಿ ಬೇಕಿರುವ ಸೌಲಭ್ಯಗಳನ್ನು ಒದಗಿಸಲಾಗುವುದು  ಎಂದು ಅವರು ತಿಳಿಸಿದರು.ಕೊಡಗಿನ ಸಾಂಸ್ಕೃತಿಕ ಹಾಗೂ ಪುರಾತನ ಕಲೆಗಳು ಮತ್ತಿತರ ಅಂಶಗಳನ್ನು ಒಳಗೊಂಡ ಕೊಡವ ಹೆರಿಟೇಜ್ ಕೇಂದ್ರ ಕಟ್ಟಡವನ್ನು ಶೀಘ್ರದಲ್ಲಿ ಪೂರ್ಣಗೊಳಿಸಲು ಲೋಕೋಪಯೋಗಿ ಇಲಾಖೆ ಕ್ರಮ ವಹಿಸಬೇಕು. ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಅಗತ್ಯ ಅನುದಾನ ಬಿಡುಗಡೆಗೆ ಮುತುವರ್ಜಿ ವಹಿಸಬೇಕು ಎಂದು ಸಲಹೆ ಮಾಡಿದರು.ದುಬಾರೆಗೆ ತೆರಳುವ ಸಂಪರ್ಕ ರಸ್ತೆ ಅಭಿವೃದ್ಧಿ, ಚಿಕ್ಲಿ ಹೊಳೆ, ಕಣಿವೆ ರಾಮಲಿಂಗೇಶ್ವರ ದೇವಸ್ಥಾನ, ಸೋಮವಾರಪೇಟೆ ತಾಲ್ಲೂಕಿನ ದೊಡ್ಡಕೊಡ್ಲಿ ಬಳಿ ನಂಜುಂಡೇಶ್ವರ ದೇವಾಲಯಗಳಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಗಮನಹರಿಸುವಂತೆ  ಪ್ರವಾಸೋದ್ಯಮ ಇಲಾಖೆ ಅಧಿಕಾರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.ರಾಜಾಸೀಟು ಅಭಿವೃದ್ಧಿ ಸಮಿತಿಯ ಸದಸ್ಯರಾದ ಮೋಂತಿ ಗಣೇಶ್ ಅವರು, ನಗರದ ನೆಹರು ಮಂಟಪ, ರೈಲ್ವೆ ವಾಚ್ ಟವರ್, ರೈಫಲ್ ಶೂಟಿಂಗ್ ಕೇಂದ್ರ ಮತ್ತಿತರ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಬೇಕಿದೆ. ರಾಜಾಸೀಟ್‌ನ್ನು ಮತ್ತಷ್ಟು ಆಕರ್ಷಣೀಯವಾಗಿ ಮಾಡಲು ಪ್ರಯತ್ನಿಸಬೇಕಿದೆ ಎಂದು ಅವರು ಸಲಹೆ ಮಾಡಿದರು.

ಕೊಡಗು ವನ್ಯಜೀವಿ ಸಂಸ್ಥೆಯ ಮುತ್ತಣ್ಣ ಮಾತನಾಡಿ, ಜಿಲ್ಲೆಯ ನಾನಾ ಪ್ರವಾಸಿ ತಾಣಗಳಲ್ಲಿ ಶುಚಿತ್ವ ಮತ್ತು ಪರಿಸರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಸಲಹೆ ಮಾಡಿದರು.ಲೋಕೋಪಯೋಗಿ ಇಲಾಖೆಯ ಕಾರ್ಯಪಾಲ ಎಂಜಿನಿಯರ್ ದೊಡ್ಡ ಸಿದ್ದಯ್ಯ, ಜಿಲ್ಲಾ ಪಂಚಾಯಿತಿ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ, ಪ್ರಾದೇಶಿಕ ಸಾರಿಗೆ ಅಧಿಕಾರಿ ಮಹಮ್ಮದ್ ಹಬೀಬುಲ್ಲಾ ಖಾನ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಗುರುಪ್ರಸಾದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಇಂದಿರಮ್ಮ ಇದ್ದರು.

ಕೋಟೆ ಶೌಚಾಲಯ- ಕ್ರಮಕ್ಕೆ ಆದೇಶ

ಮಡಿಕೇರಿಯ ಕೋಟೆ ಆವರಣ ದಲ್ಲಿ ಶೌಚಾಲಯ ನಿರ್ಮಾಣವಾಗಿ ಒಂದು ವರ್ಷಕ್ಕೂ ಹೆಚ್ಚಿನ ಅವಧಿ ಕಳೆದಿದ್ದರೂ ಇದುವರೆಗೆ ಸಾರ್ವಜನಿಕರ ಉಪಯೋಗಕ್ಕೆ ದೊರೆತಿಲ್ಲ. ಇದರ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಯಿತು.ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಮಾತನಾಡಿ, ಶೌಚಾಲಯಕ್ಕೆ ನೀರು ಸಂಪರ್ಕ ಕಲ್ಪಿಸಿ ಸಾರ್ವಜನಿಕರ ಉಪಯೋಗಕ್ಕೆ ಅನುಕೂಲ ಮಾಡಿಕೊಡಬೇಕು. ನಗರದಲ್ಲಿನ ನೆಹರೂ ಮಂಟಪವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಬೇಕು ಎಂದು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅನಧಿಕೃತ ಹೋಂ ಸ್ಟೇಗಳಿಗೆ ಕಡಿವಾಣ- ಕೋರಿಕೆ

ಹೋಂ ಸ್ಟೇ ಅಸೋಸಿಯೇಷನ್ ಅಧ್ಯಕ್ಷರಾದ ಕರುಂಬಯ್ಯ ಅವರು ಮಾತನಾಡಿ, ಜಿಲ್ಲೆಯಲ್ಲಿ 252 ಹೋಂ ಸ್ಟೇಗಳು ಮಾತ್ರ ನೋಂದಣಿ ಮಾಡಿಸಿದ್ದು, ಉಳಿದ 2,500ಕ್ಕೂ ಹೆಚ್ಚು ಹೋಂ ಸ್ಟೇಗಳು ಅನಧಿಕೃತವಾಗಿವೆ. ಇಂತಹ ಹೋಂ ಸ್ಟೇಗಳಿಗೆ ಕಡಿವಾಣ ಹಾಕುವಂತೆ ಜಿಲ್ಲಾಧಿಕಾರಿಗಳನ್ನು ಕೋರಿದರು.ಅಧಿಕೃತ ಹೋಂ ಸ್ಟೇ ಮತ್ತು ಅನಧಿಕೃತ ಹೋಂ ಸ್ಟೇಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಮುಂದಿನ ಸಭೆಯಲ್ಲಿ ಮಂಡಿಸಬೇಕು ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಶಿವಲಿಂಗಪ್ಪ ಅವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ನಗರಸಭೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಅನಧಿಕೃತ ಹೋಂ ಸ್ಟೇಗಳನ್ನು ನಿಯಂತ್ರಿಸಲು ನಗರಸಭೆ ನಿರ್ಣಯ ಕೈಗೊಂಡಿದೆ. ನಗರ ವ್ಯಾಪ್ತಿಯಲ್ಲಿ ಕೇವಲ 36 ಹೋಂ ಸ್ಟೇಗಳು ಮಾತ್ರ ನೋಂದಣಿಯಾಗಿವೆ ಎಂದರು.  ಕೊಡಗು ಜಿಲ್ಲಾ ಹೋಟೆಲ್, ಉಪಾಹಾರ ಗೃಹಗಳನ್ನು ಮತ್ತು ರೆಸಾರ್ಟ್‌ಗಳ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಬಿ.ಜಹೀರ್ ಅಹಮದ್ ಮಾತನಾಡಿ, ಅನಧಿಕೃತ ಹೋಂಸ್ಟೇಗಳಿಂದಾಗಿ ಹೋಟೆಲ್‌ಗಳಿಗೆ ಹೊಡೆತ ಬಿದ್ದಿದ್ದು, ಇಂಥವುಗಳನ್ನು ನಿಯಂತ್ರಿಸುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.