ಪ್ರವಾಸಿ ತಾಣವಾಗಿ ಸೂಳೆಕೆರೆ ಸಜ್ಜು

7

ಪ್ರವಾಸಿ ತಾಣವಾಗಿ ಸೂಳೆಕೆರೆ ಸಜ್ಜು

Published:
Updated:

ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ `ಸೂಳೆಕೆರೆ~ಯು ರಾಜ್ಯದ ಪ್ರಮುಖ ಪ್ರವಾಸಿ ತಾಣವಾಗಿ ಜನವರಿಯಲ್ಲಿ ಪ್ರವಾಸಿಗರಿಗೆ ಮುಕ್ತವಾಗಿ ತೆರೆದುಕೊಳ್ಳಲಿದೆ.ಐತಿಹಾಸಿಕ `ಸೂಳೆಕೆರೆ~ಯು ಜಿಲ್ಲಾ ಕೇಂದ್ರದಿಂದ 60 ಕಿ.ಮೀ. ದೂರವಿರುವ ನೈಸರ್ಗಿಕ ರಮ್ಯತಾಣ. ರಾಜ್ಯದ ಪ್ರಮುಖ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಸೇರಬೇಕಿದ್ದ ಇದು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಮೂಲೆಗುಂಪಾಗಿತ್ತು. ಹಾಗಾಗಿ,    `ಸೂಳೆಕೆರೆ~ ಸೌಂದರ್ಯ ಸವಿಯಲು ಬರುವ ಪ್ರವಾಸಿಗರು ಯಾವುದೇ ಮೂಲಸೌಕರ್ಯವಿಲ್ಲದೆ ಕಷ್ಟಪಡುವಂತಾಗಿತ್ತು. ಇದೀಗ ಪ್ರವಾಸೋದ್ಯಮ ಇಲಾಖೆ ರೂ5 ಕೋಟಿ ಅನುದಾನದಲ್ಲಿ `ಸೂಳೆಕೆರೆ~ಯ ಸೌಂದರ್ಯ ಇಮ್ಮಡಿಗೊಳಿಸಿದೆ.

 

ಜತೆಗೆ ಮೂಲ ಸೌಕರ್ಯ ಕಲ್ಪಿಸಿರುವುದು ಪ್ರವಾಸಿಗರ ಹರುಷಕ್ಕೆ ಕಾರಣವಾಗಿದೆ. ಶಾಸಕರ ಸ್ಥಳೀಯ ಕ್ಷೇತ್ರಾಭಿವೃದ್ಧಿ ಯೋಜನೆಯಡಿ ರೂ1.15 ಕೋಟಿ ಅನುದಾನದಲ್ಲಿ 10 ಪ್ರತ್ಯೇಕ ಕೊಠಡಿಗಳುಳ್ಳ `ಯಾತ್ರಿ    ನಿವಾಸ~ ನಿರ್ಮಿಸಲಾಗಿದೆ. ಕೆರೆ ಕಿನಾರೆಯಲ್ಲಿ ಸುಮಾರು 650 ಮೀಟರ್ ಉದ್ದಗಲಕ್ಕೆ ಪ್ರವಾಸಿಗರ ಅನುಕೂಲಕ್ಕೆ 10 ವಿವಿಧ ಅಂಗಡಿ ಮಳಿಗೆಗಳನ್ನು ತೆರೆಯಲಾಗುತ್ತಿದೆ. ಕಾಲು ಪಥ, ಹೂ ತೋಟ, ವಾಹನ ನಿಲುಗಡೆ, ದೋಣಿ ವಿಹಾರ, ಬಸ್ ನಿಲ್ದಾಣ, ನಿವೇಶನ ಅಭಿವೃದ್ಧಿ, ಕಬ್ಬಿಣದ ಬೇಲಿ, ವೀಕ್ಷಣಾ ತಾಣ, ಶೌಚಾಲಯ  ಕಾಮಗಾರಿಗಳು ಪೂರ್ಣಗೊಂಡಿವೆ. ಈಗಾಗಲೇ ಕೆರೆಯಲ್ಲಿ ಪ್ರಾಯೋಗಿಕವಾಗಿ ದೋಣಿ ವಿಹಾರ ಆರಂಭಗೊಂಡಿದೆ.ಮೀನುಗಾರರಿಗೆ ವರದಾನ

`ಸೂಳೆಕೆರೆಯಲ್ಲಿ ಮೀನುಗಾರಿಕೆಯನ್ನೇ ನಂಬಿ ಜೀವಿಸುತ್ತಿರುವ ಮೀನುಗಾರರ ಕುಟುಂಬಗಳಿಗೆ ಇದರಿಂದ ಯಾವುದೇ ತೊಂದರೆಯಿಲ್ಲ. ಇಲ್ಲಿ ವಾಣಿಜ್ಯ ದೃಷ್ಟಿಯಿಂದ ಮೀನುಗಾರಿಕೆ ನಡೆಸಲಾಗುತ್ತಿಲ್ಲ. ಮೀನುಗಾರರ ಕುಟುಂಬಗಳ ನಿರ್ವಹಣೆಗಾಗಿ ಮೀನು ಮರಿಗಳನ್ನು ಪ್ರತಿ ವರ್ಷ ಕೆರೆಗೆ ಬಿಡಲಾಗುತ್ತಿದೆ. ಸೂಳೆಕೆರೆ ಪ್ರವಾಸಿ ತಾಣವಾಗುತ್ತಿರುವುದು ಮೀನುಗಾರರಿಗೆ ವರದಾನ ಆಗಿದೆ.

 

ಇದರಿಂದ ಮೀನುಗಳ ಸಂತಾನೋತ್ಪತ್ತಿಗೂ ಯಾವುದೇ ತೊಂದರೆಯಿಲ್ಲ~ ಎನ್ನುತ್ತಾರೆ ಜಿಲ್ಲಾ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ.ಮೀನುಗಾರಿಕೆ ಮತ್ತು ಕುಡಿಯುವ ನೀರು ಪೂರೈಕೆಗೆ ಮಾತ್ರ ಸೀಮಿತವಾಗಿದ್ದ ಸೂಳೆಕೆರೆ ಈಗ ಪ್ರವಾಸಿಗರನ್ನೂ ಕೈಬೀಸಿ ಕರೆಯಲು ಸಜ್ಜುಗೊಂಡಿದೆ.ಜಲಕ್ರೀಡೆಗಳ ವೈಭೋಗ

ಮಧ್ಯ ಕರ್ನಾಟಕದ ಪ್ರಮುಖ    ಆಕರ್ಷಣೆಯ ತಾಣ ಸೂಳೆಕೆರೆ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಜಲಕ್ರೀಡೆಗಳನ್ನು ಆಯೋಜಿಸಲು ಯೋಗ್ಯ ತಾಣ. ದೋಣಿ ಸ್ಪರ್ಧೆ,  ಈಜು ಇತ್ಯಾದಿ ಸ್ಪರ್ಧೆಗಳನ್ನು ಇಲ್ಲಿ ನಡೆಸಲಾಗುವುದು. ಇದರಿಂದ ಪ್ರವಾಸಿಗರಿಗೆ ಪ್ರವಾಸದ ಸಂದರ್ಭದಲ್ಲಿ ಕ್ರೀಡಾ ಮನರಂಜನೆಯೂ ಸಿಕ್ಕಂತಾಗುತ್ತದೆ. ಜಲಕ್ರೀಡೆಗಳ ವೈಭೋಗವೂ ಇಲ್ಲಿ ನಡೆಯಲಿದೆ. ಆದರೆ, ಜಲಕ್ರೀಡೆಯನ್ನು ಪ್ರವಾಸೋದ್ಯಮ ಇಲಾಖೆ ಹಮ್ಮಿಕೊಳ್ಳುವುದಿಲ್ಲ. ಇದನ್ನು ಖಾಸಗಿಯವರಿಗೆ ವಹಿಸಿಕೊಡಲಾಗುತ್ತದೆ. ಮೂಲ ಸೌಲಭ್ಯ ಕಾಮಗಾರಿಗಳು ಸಂಪೂರ್ಣಗೊಂಡ ನಂತರ `ಸೂಳೆಕೆರೆ~ ಉಸ್ತುವಾರಿ ನಿರ್ವಹಣೆಯನ್ನು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿಗೆ ನಿಗಮಕ್ಕೆ ವಹಿಸಲಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್  `ಪ್ರಜಾವಾಣಿ~ ಗೆ ಮಾಹಿತಿ ನೀಡಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry