ಗುರುವಾರ , ಮೇ 13, 2021
24 °C

ಪ್ರವಾಸಿ ತಾಣ ಅಭಿವೃದ್ಧಿ: ಧ್ರುವನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಂಜನಗೂಡು: `ದೇವಾಲಯ ನಗರಿ~ ನಂಜನಗೂಡು, ಬಿಳಿಗಿರಿರಂಗನಬೆಟ್ಟ, ಮಲೆ ಮಹದೇಶ್ವರಬೆಟ್ಟ, ತಲಕಾಡು, ಗಗನಚುಕ್ಕಿ ಜಲಪಾತ ಸೇರಿದಂತೆ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಎಲ್ಲ ಪ್ರವಾಸಿ ಮತ್ತು ಧಾರ್ಮಿಕ ಸ್ಥಳಗಳನ್ನು 100 ಕೋಟಿ ರೂಪಾಯಿ ವೆಚ್ಚದಲ್ಲಿ ಸಮಗ್ರ ಅಭಿವೃದ್ಧಿಪಡಿಸಲಾಗುವುದು ಎಂದು ಸಂಸದ ಆರ್.ಧ್ರುವನಾರಾಯಣ ತಿಳಿಸಿದರು.ಪಟ್ಟಣದ ಪತ್ರಿಕಾ ಭವನದಲ್ಲಿ ಗುರು ವಾರ ನಡೆದ ಸಂವಾದ ಕಾರ್ಯ ಕ್ರಮದಲ್ಲಿ ಮಾತನಾಡಿ, ಈ ಸಂಬಂಧ ಕೇಂದ್ರ ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.ರೈಲ್ವೆ ಬಜೆಟ್‌ನಲ್ಲಿ ಘೋಷಿತ ವಾಗಿರುವ ಮೈಸೂರು- ಚಾಮರಾಜ ನಗರ ನಡುವಣ ಮತ್ತೊಂದು ಪ್ಯಾಸೆಂಜರ್ ರೈಲು ಎರಡು ತಿಂಗಳಲ್ಲಿ ಸಂಚಾರ ಆರಂಭಿಸಲಿದೆ. ಯಾತ್ರಾ ಸ್ಥಳವಾದ ನಂಜನಗೂಡು- ಮೈಸೂರು ಮಧ್ಯೆ ಪ್ರತ್ಯೇಕವಾಗಿ ಹೆಚ್ಚು ರೈಲು ಸಂಚಾರಕ್ಕೆ ಕ್ರಮ ವಹಿಸಲಾಗುವುದು.

 

ರೈಲ್ವೆ ಅಂಡರ್‌ಪಾಸ್ ರಸ್ತೆಯಲ್ಲಿ ಮಳೆ ನೀರು ನಿಲ್ಲದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಚಾಮರಾಜ ನಗರದಲ್ಲಿ ಬೋಗಿಗಳ ಫಿಟ್‌ಲೈನ್ ಮತ್ತು ಶುದ್ಧೀಕರಣ ಘಟಕ ಸ್ಥಾಪನೆಗೆ ಚಿಂತನೆ ನಡೆಸಲಾಗಿದೆ. ಕೊಳ್ಳೇಗಾಲ- ಮೈಸೂರು- ನಂಜನಗೂಡು- ಗುಂಡ್ಲುಪೇಟೆ ನಡುವಣ ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ. ಸರ್ಕಾರ, ಖಾಸಗಿ ಸಹ ಭಾಗಿತ್ವದಲ್ಲಿ ಅಂದಾಜು ರೂ. 433 ಕೋಟಿ ವೆಚ್ಚದ ಈ ಕಾಮಗಾರಿಗೆ ಟೆಂಡರ್ ಕರೆಯುವ  ಹಂತ ತಲುಪಿದೆ ಎಂದು ವಿವರಿಸಿದರು.ಮೊದಲಿಗೆ ಶಾಸಕನಾಗಿ, ಪ್ರಸ್ತುತ ಸಂಸದನಾಗಿ ಎರಡು ಕ್ಷೇತ್ರದಲ್ಲೂ ತೃಪ್ತಿದಾಯಕ ಕೆಲಸ ಮಾಡಿದ್ದೇನೆ. ಹಲವು ಯೋಜನೆಗಳನ್ನು ಜಾರಿಗೆ ತರಲು ಪ್ರಯತ್ನಿಸಿದ್ದೇನೆ. ವಿವಿಧ ಯೋಜನೆ ಅಡಿ ಫಲಾನುಭವಿಗಳನ್ನು ಆಯ್ಕೆ ಮಾಡುವ ಅಧಿಕಾರ ಶಾಸಕರಿಗೆ ಇರುತ್ತದೆ. ಕೇಂದ್ರ  ಸರ್ಕಾರದ ಯೋಜನೆಗಳು ರಾಜ್ಯ ಸರ್ಕಾರದ  ಮೂಲಕವೇ ಅನುಷ್ಠಾನಗೊಳ್ಳಬೇಕು. ಹಾಗಾಗಿ ಶಾಸಕರಾದವರಿಗೆ ಜನರ ಜತೆ ನಿಕಟ ಸಂಪರ್ಕವಿರುತ್ತದೆ ಎಂದರು.ಸಂಘದ ಹೆಚ್ಚಿನ ಅಭಿವೃದ್ಧಿಗೆ ತಮ್ಮ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ನೆರವು ನೀಡುವ ಭರವಸೆ ನೀಡಿದರು. ಆಸರೆ ಟ್ರಸ್ಟ್ ವತಿಯಿಂದ ಸಂಘದ ಕಚೇರಿಗೆ ಕೊಡುಗೆಯಾಗಿ ನೀಡಿದ ಮೈಕ್ ಸೆಟ್‌ನ್ನು ಇದೇ ವೇಳೆ ಸಂಸದರು ಹಸ್ತಾಂತರಿಸಿದರು.ಸಂವಾದದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಕೆಂಪೇಗೌಡ, ಗೌರವ ಅಧ್ಯಕ್ಷ ಎನ್.ಟಿ.ಮಧುಸೂದನ್ ಅವರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.