ಪ್ರವಾಸೋದ್ಯಮ ಇಲಾಖೆಯಿಂದ ಲಾಭ: ಹೆಚ್ಚು ಬಂಡವಾಳ ಆಕರ್ಷಿಸಲು ಒತ್ತು

7

ಪ್ರವಾಸೋದ್ಯಮ ಇಲಾಖೆಯಿಂದ ಲಾಭ: ಹೆಚ್ಚು ಬಂಡವಾಳ ಆಕರ್ಷಿಸಲು ಒತ್ತು

Published:
Updated:
ಪ್ರವಾಸೋದ್ಯಮ ಇಲಾಖೆಯಿಂದ ಲಾಭ: ಹೆಚ್ಚು ಬಂಡವಾಳ ಆಕರ್ಷಿಸಲು ಒತ್ತು

ಬೆಂಗಳೂರು: `ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಸಕ್ತ ಸಾಲಿನಲ್ಲಿ ನಡೆಯಲಿರುವ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಹೆಚ್ಚಿನ ಬಂಡವಾಳವನ್ನು ಆಕರ್ಷಿಸಲು ಉದ್ದೇಶಿಸಲಾಗಿದೆ~ ಎಂದು ಸಚಿವ ಮುರುಗೇಶ್ ಆರ್.ನಿರಾಣಿ ತಿಳಿಸಿದರು.

ಮಹಾರಾಣಿ ಮಹಿಳಾ ಕಲಾ, ವಾಣಿಜ್ಯ ಮತ್ತು ನಿರ್ವಹಣೆ ವಿದ್ಯಾಲಯವು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ `ಕರ್ನಾಟಕ ಜಾಗತಿಕ ಪ್ರವಾಸೋದ್ಯಮ ಉದ್ದೇಶ ಸವಾಲುಗಳು ಮತ್ತು ಅವಕಾಶಗಳು~ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ರಾಜ್ಯವು ಹೆಚ್ಚು ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತಿರುವುದರಿಂದ ಪ್ರವಾಸೋದ್ಯಮ ಇಲಾಖೆಯಿಂದ ಸರ್ಕಾರಕ್ಕೆ ಉತ್ತಮ ಆದಾಯವಿದೆ. ಸಮಾವೇಶದಲ್ಲಿ ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಪ್ರವಾಸೋದ್ಯಮದ ಜತೆಗೆ ನಾಡಿನ ಕಲೆ, ಸಂಸ್ಕೃತಿ ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ಒತ್ತು ನೀಡಲಾಗುವುದು~ ಎಂದು ಹೇಳಿದರು.

`ಪ್ರವಾಸೋದ್ಯಮದ ನಾಡಿ-ಮಿಡಿತಗಳನ್ನು  ಅರ್ಥೈಸಿಕೊಳ್ಳುವತ್ತ ಇಲಾಖೆ ಶ್ರಮ ವಹಿಸಬೇಕಿದೆ. ಎಲ್ಲಾ ಕ್ಷೇತ್ರಗಳ ಬೆಳವಣಿಗೆಯಲ್ಲಿ ಸಮಪಾಲು ಪಡೆಯುತ್ತಿರುವ ಮಹಿಳೆಯರು ಪ್ರವಾಸೋದ್ಯಮದ ಕ್ಷೇತ್ರದಲ್ಲೂ ಅವಿರತವಾಗಿ ದುಡಿಯುತ್ತಿದ್ದಾರೆ~ ಎಂದರು.

`ಗ್ರಾಮೀಣ ಪ್ರದೇಶಗಳಲ್ಲಿರುವ ಅಭ್ಯರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಅನುಗುಣವಾಗಿ ಉದ್ಯೋಗ ದೊರೆಯಬೇಕಿದ್ದು, ಈ ನಿಟ್ಟಿನಲ್ಲಿ ಕೈಗಾರಿಕಾ ಇಲಾಖೆಯು ಹಲವು ಉದ್ಯೋಗ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ~ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ, `ರಾಜ್ಯದ ಪ್ರವಾಸೋದ್ಯಮ ಸ್ಥಳಗಳ ರಸ್ತೆ ಅಭಿವೃದ್ಧಿಗಾಗಿ ಸರ್ಕಾರ 200 ಕೋಟಿ ರೂಪಾಯಿ ಹಣ ವಿನಿಯೋಗಿಸಿರುವುದು ಸಂತೋಷದ ವಿಚಾರ~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry