ಶುಕ್ರವಾರ, ನವೆಂಬರ್ 15, 2019
21 °C
ಪಿಯು ನಂತರ ಹತ್ತಾರು ಕೋರ್ಸುಗಳಲ್ಲಿ ಅವಕಾಶ

ಪ್ರವಾಸೋದ್ಯಮ: ಕೈತುಂಬ ಸಂಬಳ

Published:
Updated:

ಮೈಸೂರು: ಎಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸುಗಳ ಜತೆಗೆ ಇತ್ತೀಚಿನ ದಿನಗಳಲ್ಲಿ ಕೈತುಂಬ ಸಂಬಳ ತಂದುಕೊಡುವ ಶಾರ್ಟ್‌ಟರ್ಮ್ ಕೋರ್ಸುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ, ವಿದ್ಯಾರ್ಥಿಗಳು ಸಾಂಪ್ರದಾಯಿಕ ಶಿಕ್ಷಣದ ಪರಿಧಿಯಿಂದ ಆಚೆ ಬಂದು ತಮಗಿಷ್ಟವಾದ ಕೋರ್ಸುಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ, ಕೋರ್ಸು ಮುಗಿದ ಬಳಿಕ ಉತ್ತಮ ಸಂಬಳವನ್ನೂ ಪಡೆಯುತ್ತಿದ್ದಾರೆ.ಕಂಪ್ಯೂಟರ್, ಅನಿಮೇಷನ್, ಪ್ಯಾರಾ ಮೆಡಿಕಲ್ ಕೋರ್ಸ್‌ಗಳು ಕಡಿಮೆ ಅವಧಿಯಲ್ಲಿಯೇ ಹೆಚ್ಚಿನ ಸಂಬಳದ ಉದ್ಯೋಗಗಳನ್ನು ಒದಗಿಸುವಲ್ಲಿ ಸಫಲವಾಗಿವೆ. ಆದಾಗ್ಯೂ, ಕೋರ್ಸ್‌ನ ಆಯ್ಕೆಯ ಮೇಲೆ ಭವಿಷ್ಯ ಮತ್ತು ಉದ್ಯೋಗ   ಅವಲಂಬಿತವಾಗಿದೆ.ಪಿಯು ಕಲಾ ವಿಭಾಗದಲ್ಲಿ ಓದಿದವರು ಬಿ.ಎ, ಡಿ.ಇಡಿ (ಶಿಕ್ಷಕರ ತರಬೇತಿ), ಐದು ವರ್ಷದ ಎಲ್‌ಎಲ್‌ಬಿ (ಇಂಟಿಗ್ರೇಟೆಡ್ ಕೋರ್ಸ್), ಡಿಪ್ಲೊಮಾ, ಅನಿಮೇಷನ್, ಕಂಪ್ಯೂಟರ್ ತರಬೇತಿ, ಫ್ಯಾಷನ್ ಡಿಸೈನಿಂಗ್, ನರ್ಸಿಂಗ್, ಬಿಬಿಎ, ಬಿಸಿಎ ವಿಭಾಗಗಳಲ್ಲಿ ತರಬೇತಿ ಪಡೆದು ಒಳ್ಳೆಯ ಉದ್ಯೋಗ ಪಡೆದುಕೊಳ್ಳಬಹುದು.ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಬಿ.ಎಸ್ಸಿ, ಬಿಬಿಎ, ಬಿಸಿಎ, ಫಾರ್ಮಸಿ (ಔಷಧಶಾಸ್ತ್ರ), ಎಲ್‌ಎಲ್‌ಬಿ, ನರ್ಸಿಂಗ್ ಕೋರ್ಸ್‌ಗಳಿಗೆ (ಎಂಜಿನಿಯರಿಂಗ್, ಮೆಡಿಕಲ್, ಡೆಂಟಲ್ ಕೋರ್ಸುಗಳನ್ನು ಹೊರತುಪಡಿಸಿ) ಸೇರಬಹುದು. ಇನ್ನು, ವಾಣಿಜ್ಯ ವಿದ್ಯಾರ್ಥಿಗಳಿಗೆ ಬಿ.ಕಾಂ, ಬಿಬಿಎ, ಬಿಸಿಎ, ಎಲ್‌ಎಲ್‌ಬಿ ವಿಷಯಗಳಲ್ಲಿ ಸಾಕಷ್ಟು ಅವಕಾಶಗಳು ಲಭ್ಯ ಇವೆ.ವಕೀಲರಾಗಲು ಇಲ್ಲಿದೆ ದಾರಿ: ಪಿಯು ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಐದು ವರ್ಷದ ಎಲ್‌ಎಲ್‌ಬಿ (ಇಂಟಿಗ್ರೇಟೆಡ್ ಕೋರ್ಸ್) ಕೋರ್ಸ್ ಮಾಡಲು ಅವಕಾಶವಿದೆ. ಶ್ರದ್ಧೆಯಿಂದ ಕೋರ್ಸ್ ಮುಗಿಸಿದರೆ ಉತ್ತಮ  ವಕೀಲರಾಗಬಹುದು. ವಕೀಲಿ ವೃತ್ತಿ ಇಂದು ನ್ಯಾಯಾಲಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಬಹುರಾಷ್ಟ್ರೀಯ/ಕಾರ್ಪೋರೇಟ್ ಕಂಪೆನಿಗಳೂ ಸಹ ಕಾನೂನು ಸಲಹೆಗಾಗಿ ವಕೀಲರ ನೇಮಕ ಮಾಡಿಕೊಳ್ಳುತ್ತಿವೆ. ಇದರಿಂದಾಗಿ ಈ ಕೋರ್ಸ್‌ಗೆ ಹೆಚ್ಚಿನ ಬೇಡಿಕೆ, ಮಾನ್ಯತೆ ಇದೆ.ಹೋಟೆಲ್ ಮ್ಯಾನೇಜ್‌ಮೆಂಟ್‌ನಲ್ಲೂ ವಿಪುಲ ಅವಕಾಶಗಳಿವೆ. ಈ ಕೋರ್ಸ್ ಪೂರ್ಣಗೊಳಿಸಿದರೆ ತ್ರಿತಾರಾ ಮತ್ತು ಪಂಚತಾರಾ ಹೋಟೆಲ್‌ಗಳಲ್ಲಿ ಉತ್ತಮ ಸಂಬಳದ ಕೆಲಸ ಗ್ಯಾರಂಟಿ. ಹೋಟೆಲ್ ಮ್ಯಾನೇಜ್‌ಮೆಂಟ್ ಎಂದರೆ ಈ ಮೊದಲು ಗೋವಾ, ಮಂಗಳೂರು, ಬೆಂಗಳೂರಿಗೆ ಸೀಮಿತ ಎಂಬಂತಾಗಿತ್ತು. ಇತ್ತೀಚಿನ ದಿನಗಳಲ್ಲಿ ಈ ಕೋರ್ಸ್‌ಗೆ ಬೇಡಿಕೆ ಹೆಚ್ಚಾಗಿದೆ.ಔಷಧ ಕ್ಷೇತ್ರದ ಬೇಡಿಕೆಯೂ ದಿನೇ ದಿನೇ ಹೆಚ್ಚಾಗುತ್ತಿದೆ. ಫಾರ್ಮಸಿ ಓದುವ ವಿದ್ಯಾರ್ಥಿಗಳಿಗೆ ಕೆಲಸ ಖಚಿತ. ಇಲ್ಲವಾದಲ್ಲಿ ಔಷಧಿ ಅಂಗಡಿ ಆರಂಭಿಸಬಹುದು. ಎಂಜಿನಿಯರಿಂಗ್ ಆಸೆ ಕೈಗೂಡದವರು ಪಾಲಿಟೆಕ್ನಿಕ್ ಕೋರ್ಸ್‌ಗಳಿಗೆ ಸೇರ್ಪಡೆ ಆಗಬಹುದು.ಕಂಪ್ಯೂಟರ್ ಸೈನ್ಸ್, ಸಿವಿಲ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿ     ಕೇಷನ್, ಎಲೆಕ್ಟ್ರಿಕಲ್ ಕೋರ್ಸ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಕೋರ್ಸ್ ಮುಗಿದ ಬಳಿಕ ಆರಂಭದಲ್ಲೇ ನಾಲ್ಕಂಕಿ ಮೊತ್ತದ ಸಂಬಳ ಖಚಿತ.ಪಿಯು ನಂತರ ಸಾಂಪ್ರದಾಯಿಕ ಪದವಿ ಹೊರತುಪಡಿಸಿ ವೃತ್ತಿಪರ ಕೋರ್ಸುಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಸಾಕಷ್ಟು ಅವಕಾಶಗಳಿವೆ. `ಅತಿಥಿ ದೇವೋ ಭವ' ಮೂಲಮಂತ್ರದ ಪ್ರವಾಸೋದ್ಯಮ ಅಭಿವೃದ್ಧಿ ಅಧ್ಯಯನವೂ ಒಂದಾಗಿದ್ದು,   `ಬ್ಯಾಚಲರ್ ಆಫ್ ಟೂರಿಸಂ ಅಂಡ್ ಹಾಸ್ಪಿಟಾಲಿಟಿ'ಯಲ್ಲಿ ಸ್ನಾತಕ ಪದವಿ ಅಧ್ಯಯನ ಮಾಡಬಹುದು. ಐದು ವರ್ಷದ ಸಂಯೋಜಿತ (ಇಂಟಿಗ್ರೇಟೆಡ್) ಕೋರ್ಸ್ ಇದಾಗಿದ್ದು, ವಾಕ್ ಕೌಶಲ್ಯ, ಪ್ರಪಂಚ ಪರ್ಯಟನೆ ಕುತೂಹಲ, ಪ್ರವಾಸಿ ತಾಣಗಳ ಸುಸ್ಥಿರ ಅಭಿವೃದ್ಧಿ ಹುಮ್ಮಸ್ಸು, ವಿಶ್ವಪರಂಪರೆ ಸಂರಕ್ಷಣೆ ಹಂಬಲ, ವಿವಿಧ ಸಂಸ್ಕೃತಿ -ಇತಿಹಾಸ ವಿವರಿಸುವ ಚಾಕಚಕ್ಯತೆ, ಇಂಗ್ಲಿಷ್ ಭಾಷೆಯ ಮೇಲೆ ಪ್ರಭುತ್ವ, ಎಲ್ಲರಿಗೂ ಒಗ್ಗಿಕೊಳ್ಳುವ ಸ್ಮಾರ್ಟ್‌ನೆಸ್ ಇದ್ದರೆ ಪ್ರವಾಸೋದ್ಯಮ ಕೋರ್ಸು ಅಧ್ಯಯನ ಹೆಚ್ಚು ಸೂಕ್ತ.

ಪ್ರತಿಕ್ರಿಯಿಸಿ (+)