ಶನಿವಾರ, ನವೆಂಬರ್ 23, 2019
18 °C

ಪ್ರವಾಸ ಆಗದಿರಲಿ ಪ್ರಯಾಸ

Published:
Updated:
ಪ್ರವಾಸ ಆಗದಿರಲಿ ಪ್ರಯಾಸ

`ಪ್ರವಾಸ? ಸದ್ಯ ನಮಗೆ ಎಲ್ಲೂ ಪ್ರವಾಸ ಹೋಗೋದೇ ಬೇಡ ಎನಿಸಿಬಿಟ್ಟಿದೆ. ಯಾಕೇಂದ್ರೆ ಎಲ್ಲ ಕಾಂಬಿನೇಷನ್‌ನಲ್ಲೂ ಜಗಳ. ಗಂಡ- ಹೆಂಡತಿ, ಅಪ್ಪ  ಮಕ್ಕಳು, ಅಮ್ಮ- ಮಕ್ಕಳು, ಮಕ್ಕಳು- ಮಕ್ಕಳು, ಕೊನೆಗೆ ಡ್ರೈವರ್ ಜೊತೆಗೆ, ಪ್ರವಾಸಿ ಏಜೆಂಟ್ ಜೊತೆಗೆ. ಅಬ್ಬಬ್ಬಾ ಸಾಕಪ್ಪಾ ಸಾಕು. ಯಾರಿಗೆ ಬೇಕು ಈ ಪ್ರವಾಸ?'-ಈ ಅನುಭವ ನಿಮ್ಮದೂ ಹೌದೆ? ಇಂತಹ ಪ್ರವಾಸಿ ಜಗಳದ ಒಂದು ಸ್ಯಾಂಪಲ್ ಹೀಗಿದೆ ನೋಡಿ:

ನಿತಿನ್- ನಂದಿನಿ ಪ್ರವಾಸಿ ಸ್ಥಳ ತಲುಪಿ ಕಾಯ್ದಿರಿಸಿದ್ದ ಹೋಟೆಲ್ ಹುಡುಕುತ್ತಿದ್ದಾರೆ. ನಿತಿನ್ ಕಾರು ಓಡಿಸುತ್ತಿದ್ದಾನೆ. ನಾಲ್ಕೈದು ಸುತ್ತು ಸುತ್ತಿದರೂ  ಹೋಟೆಲ್ ಸಿಗುತ್ತಿಲ್ಲ. ನಂದಿನಿಗೆ ಪ್ರಯಾಣದ ಆಯಾಸದ ಮಧ್ಯೆ ಅಸಹನೆ.`ಯಾರನ್ನಾದರೂ ಕೇಳಬಹುದಲ್ಲ' ಎನ್ನುತ್ತಾಳೆ. ನಿತಿನ್ ಅದಕ್ಕೆ ಪ್ರತಿಕ್ರಿಯಿಸುತ್ತಿಲ್ಲ. ಅರ್ಧ ಗಂಟೆಯ ನಂತರ ಹೋಟೆಲ್ ತಲುಪುತ್ತಾರೆ. `ನಮಗೆ ಗೊತ್ತಿಲ್ಲದಿದ್ದಾಗ ಬೇರೆಯವರನ್ನು ಕೇಳಿದರೆ ಏನು ತಪ್ಪು? ಸಮಯ- ಶ್ರಮ ಎರಡೂ ಉಳಿಯುತ್ತದೆ' ಎನ್ನುವ ನಂದಿನಿಗೆ `ಬೇರೆಯವರು ನಮಗೆ ಹೇಳಿಕೊಡುವುದು ಅಷ್ಟರಲ್ಲೇ ಇದೆ. ಎಷ್ಟೋ ಬಾರಿ ಬೇರೆಯವರೇ ನಮಗೆ ದಾರಿ ತಪ್ಪಿಸುತ್ತಾರೆ.  ಅಷ್ಟಕ್ಕೂ ಈಗ ಆದದ್ದಾದರೂ ಏನು? ನಾನು ಸರಿಯಾಗಿ ಹೋಗಬೇಕಾದ ಸ್ಥಳಕ್ಕೆ ಕರೆದುಕೊಂಡು ಹೋಗಲಿಲ್ಲವೇ? ಐದು ನಿಮಿಷದಲ್ಲಿ ತಲೆ ಹೋಗುವಂಥದ್ದು ಏನೂ ಇಲ್ಲ, ಸುಮ್ಮನೇ ನಿನಗೆ ಅಸಹನೆ' ಎಂಬುದು ನಿತಿನ್ ಉತ್ತರ.ಇನ್ನೊಂದು ಉದಾಹರಣೆ ಹೀಗಿದೆ:

ಜಯಾ- ವಿಜಯ್ ಮಕ್ಕಳನ್ನು ಕರೆದುಕೊಂಡು ಪ್ರವಾಸಕ್ಕೆ ಬಂದಾಗಿದೆ. ಗಂಟೆಗಟ್ಟಲೆ ಪ್ರಯಾಣದ ನಂತರ ತಲುಪಿದ್ದು ಬೆಳಿಗ್ಗೆ 9 ಗಂಟೆಗೆ. ಕಾಯ್ದಿರಿಸಿದ ಹೋಟೆಲ್‌ಗೆ ಬಂದರೆ ಅಲ್ಲಿನ ಚೆಕ್ ಇನ್ ಟೈಂ ಮಧ್ಯಾಹ್ನ 2 ಗಂಟೆಗೆ. ಈ 5 ಗಂಟೆಗಳ ಕಾಲ ಮಾಡಬೇಕಾದ್ದಾದರೂ ಏನು? ಗಿಜಿಗುಡುವ ಹೋಟೆಲ್ ಲಾಬಿಯಲ್ಲಿ ಲಗೇಜ್ ಸಮೇತ ಕೂತು, ಪ್ರಯಾಣದ ಅವಧಿಯಲ್ಲಿ ಬೆವರಿ ಮೈಗೆ ಅಂಟಿದ ಬಟ್ಟೆ, ಧಿಮಿಗುಡುವ ತಲೆ ಹೊತ್ತು ಕಾಯುವುದಿದೆಯಲ್ಲಾ... ಈಗ ಶುರು ನೋಡಿ ಕಾದಾಟ! ಖಾಲಿ ಹೊಟ್ಟೆ, ದಣಿದ ಮನಸ್ಸು ಜಗಳಕ್ಕೆ ನಾಂದಿ ಹಾಡಲು ಸೂಪರ್ ಕಾಂಬಿನೇಷನ್.ಜಯಾಳಿಗೆ ವಿಜಯ್ ಮೇಲೆ ಇರುಸುಮುರುಸು. `ಇವನು ಸ್ವಲ್ಪ ಗಟ್ಟಿಯಾಗಿ ಆ ಹೋಟೆಲಿನವರ ಹತ್ತಿರ ಮಾತಾಡಿದರೆ, ಮಕ್ಕಳಿದ್ದಾರೆ ಅಂತ `ರಿಕ್ವೆಸ್ಟ್' ಮಾಡಿಕೊಂಡ್ರೆ ಆಗಲ್ವೆ? ನಾವು ಸುಮ್ಮನಿದ್ರೆ ಅವರು ಇವತ್ತಿಗಲ್ಲ, ನಾಳೆಗೆ ರೂಮ್ ಕೊಟ್ರೂ ಕೊಟ್ರೆ' ಎಂಬ ಆತಂಕ. ಅದೇ ವಿಜಯ್‌ಗೋ `ಅವರವರ ನಿಯಮ ಅಂತ ಒಂದಿರೋದಿಲ್ವೆ. ಮೊದಲೇ ಓಚರ್‌ನಲ್ಲಿ ಚೆಕ್ ಇನ್ ಟೈಂ ಎರಡು ಗಂಟೆ ಅಂತ ತೋರಿಸಿದ್ದಾರೆ. ನಾವು ಹೋಗಿ ಈಗ್ಲೇ ನಮಗೆ ರೂಮ್ ಕೊಡಿ ಅಂತ ಮತ್ತೆ ಮತ್ತೆ ಕೇಳೋದಾದ್ರೂ ಹೇಗೆ? ಆಮೇಲೆ `ಅರ್ಲಿ ಚೆಕ್ ಇನ್' ಅಂಥ ಜಾಸ್ತಿ ಚಾರ್ಜು ಮಾಡಿದ್ರೂ ಮಾಡಬಹುದು. ಸುಮ್ಮನೇ ಇನ್ನೊಂದು ನಾಲ್ಕು ಗಂಟೆ ಕಣ್ಮುಚ್ಚಿಕೊಂಡು ಕೂತ್ರಾಯ್ತು'.ತುಂಬಾ ಸಣ್ಣ `ಸಿಲ್ಲಿ' ಎನಿಸಬಹುದಾದ ಹಲವು ವಿಷಯಗಳು, ಯಾವುದು ಮುಖ್ಯವಲ್ಲವೋ ಅಂಥವು ಕೂಡ `ಗಂಭೀರ' ಎನಿಸಬಹುದಾದ ಜಗಳ- ವಾಗ್ಯುದ್ಧಗಳಿಗೆ ಕಾರಣ ಆಗಬಹುದು. ಇದೇ ಕಾರಣವಾಗಿ, ಮುಂದೆ ಎಲ್ಲಿಗೆ ಹೋಗಬೇಕು, ಏನು ನೋಡಬೇಕು, ಏನು ತಿನ್ನಬೇಕು ಎಲ್ಲದರ ಬಗ್ಗೆಯೂ ಜಗಳವಾಗುವ ಸಾಧ್ಯತೆ ಇರುತ್ತದೆ.ಈ ಕಾದಾಟಗಳು ದಂಪತಿಯ ದೈನಂದಿನ ಜೀವನದಲ್ಲೂ ನಡೆಯುತ್ತವೆ, ಇನ್ನು ಪ್ರವಾಸದಲ್ಲಿ ನಡೆಯುವುದರಲ್ಲಿ ವಿಶೇಷವೇನು ಎಂದು ಕೇಳಬಹುದು. ಆದರೆ, ಸೂಕ್ಷ್ಮವಾಗಿ ಗಮನಿಸಿದರೆ ಪ್ರವಾಸದಲ್ಲಿ ಈ ಜಗಳಗಳು ಹೆಚ್ಚಾಗುವುದನ್ನು ಕಾಣಬಹುದು. ಗುಂಪುಗಳಲ್ಲಂತೂ ದಂಪತಿಯ ಜಗಳ ಇತರರಿಗೆ ಮುಜುಗರ ಉಂಟು ಮಾಡುವಂತೆ ಇರಬಹುದು. ಈ ಎಲ್ಲ ಅಂಶಗಳಿಂದ, ಹಲವು ಬಗೆಯಲ್ಲಿ ಉಪಯೋಗ ಆಗುವ ಪ್ರವಾಸವೇ ಬೇಡ ಎಂಬ ತೀರ್ಮಾನಕ್ಕೆ ಬರುವ ಅಪಾಯ ಇರುತ್ತದೆ. ಆದರೆ ಈ ಜಗಳಗಳು ತಾತ್ಕಾಲಿಕ. ಆಯಾಸ, ನಿದ್ರಾಹೀನತೆ, ಅವ್ಯವಸ್ಥೆಗಳ ಮಧ್ಯೆ ಸಾಮಾನ್ಯವಾಗಿ ನಡೆಯುವಂಥವು ಎನ್ನುವುದನ್ನು ಮನಗಂಡರೆ, ಜಗಳಗಳು ಪ್ರವಾಸದ ಅವಿಭಾಜ್ಯ ಅಂಗ ಎಂಬ ಅರಿವು ಉಂಟಾಗುತ್ತದೆ.ಸಿಕ್ಕಿತೊಂದು ಪಿಳ್ಳೆ ನೆವ...

ಹಲವು ಗಂಟೆಗಳ ಕಾಲದ ಬಸ್/ ಕಾರು/ ರೈಲು/ ವಿಮಾನದ ಪಯಣ ಎಲ್ಲರಲ್ಲೂ ಇರುವ ಅಸಹನೆ- ಸಿಟ್ಟು- ಹತಾಶೆಗಳನ್ನು ಹೊರತರುತ್ತದೆ. ಇಂಥ ಸಂದರ್ಭದಲ್ಲಿ ಜಗಳ ಆರಂಭವಾಗಲು ದೊಡ್ಡ ಕಾರಣವೇನೂ ಬೇಕಾಗದು. ಮಾತಿಗೆ ಮಾತು ಬೆಳೆಯಲು, ಒಬ್ಬರು ಇನ್ನೊಬ್ಬರ ಭಾವನೆಗಳನ್ನು ಹೇಗೆ ಅರ್ಥ ಮಾಡಿಕೊಳ್ಳುವುದಿಲ್ಲವೆಂದು ದೂರಲು ಇದೊಂದು ನೆಪ ಆಗುತ್ತದಷ್ಟೆ.ಜಗಳಕ್ಕೆ `ಕಾರಣ'ವಾಗಿದ್ದ (ಹೋಟೆಲಿಗೆ ಹೋಗಲು ಟ್ಯಾಕ್ಸಿ ಹಿಡಿಯಬೇಕೇ ಅಥವಾ ನಡಿಗೆಯೇ ಸಾಕೆ/ ಎಲ್ಲಿಗೆ ಮೊದಲು ಹೋಗಬೇಕು ಇತ್ಯಾದಿ) ನಿಜವಾದ ಕಾರಣದ ಬಗೆಗಿನ ಚರ್ಚೆ ಮಾಯವಾಗಿ ಕೆಲ ನಿಮಿಷಗಳಲ್ಲೇ, ಪ್ರವಾಸಕ್ಕೆ ಸಂಬಂಧವೇ ಇಲ್ಲದ ಎಲ್ಲ ವಿಷಯಗಳ ಬಗೆಗೂ ಜಗಳ ಮುಂದುವರಿಯುತ್ತದೆ. ಕೊನೆಗೆ ಈ ಪ್ರವಾಸಕ್ಕೆ ಬಂದೇ ಇರದ ಅಪ್ಪ- ಅಮ್ಮ- ಅಕ್ಕ- ತಂಗಿಯರ ವಿಷಯವೂ ಬಂದು, ಯಾರ‌ಯಾರದೋ ಪರವಾಗಿ, ವಿರುದ್ಧವಾಗಿ ಗಂಡ- ಹೆಂಡಿರ ಜಗಳ ಮುಂದುವರಿಯುತ್ತದೆ.ಇವೆಲ್ಲದರ ಮಧ್ಯೆ ನಿಜವಾಗಿಯೂ ಉದ್ದೇಶವಿಲ್ಲದೆ ಆಡುವ ಮಾತುಗಳು, ಒಮ್ಮೆ ಹೇಳಿ ಆಮೇಲೆ ಪಶ್ಚಾತ್ತಾಪ ಪಡುವಂತೆ ಮಾಡುವ ಮಾತುಗಳು ಎಲ್ಲವೂ ಬರತೊಡಗುತ್ತವೆ. ತಾತ್ಕಾಲಿಕ ಎನ್ನಬಹುದಾದರೂ ಈ ಜಗಳಗಳು ಪ್ರವಾಸದ ಕೆಲ ಸಮಯವನ್ನಾದರೂ ಕಬಳಿಸುತ್ತವೆ. ಮನಸ್ಸಿಗೆ ಸಾಕಷ್ಟು ನೋವುಂಟು ಮಾಡುತ್ತವೆ. ಆಗ ಸಹಜವಾಗಿಯೇ ಇಂತಹ `ಪ್ರವಾಸಿ ಜಗಳ'ಗಳು ಅನಿವಾರ್ಯವೇ ಎಂದು ಕೇಳಿಕೊಳ್ಳಬೇಕಾಗುತ್ತದೆ. ಖಂಡಿತಾ ಇಲ್ಲ.ಯಾವುದೇ ಕಾರ್ಯವನ್ನಾದರೂ ಯೋಜಿಸಿ ಮಾಡಿದಾಗ ಆಕಸ್ಮಿಕಗಳನ್ನು ತಡೆಯುವ ಸಾಧ್ಯತೆ ಹೇಗೆ ಹೆಚ್ಚೋ ಹಾಗೆಯೇ `ಪ್ರವಾಸಿ ಜಗಳ'ಗಳೂ ಅಷ್ಟೆ. ಅದರ ಬಗ್ಗೆ ಸರಿಯಾಗಿ ತಿಳಿದು, ಅಂಥ ಸಂದರ್ಭಗಳಲ್ಲಿ ಮಾತನ್ನು ನಿಯಂತ್ರಿಸಿದರೆ, ಸಹನೆಯನ್ನು ಬೆಳೆಸಿಕೊಂಡರೆ ಪ್ರವಾಸದ ಆನಂದ ಹೆಚ್ಚುವಂತೆ ಮಾಡಬಹುದು. ಅಷ್ಟೇ ಅಲ್ಲ, `ಪ್ರವಾಸಿ ಜಗಳ' ನಿಭಾಯಿಸುವುದನ್ನು ಕಲಿತರೆ, ನಂತರ ಅದು ಮನೆಯಲ್ಲೂ ಜಗಳಗಳನ್ನು ಕಡಿಮೆ ಮಾಡಲು ನೆರವಾಗಬಲ್ಲದು.

ದಂಪತಿಯಲ್ಲಿ ಇಬ್ಬರೂ ಈ ಸಂಗತಿಗಳ ಬಗೆಗೆ ಗಮನ ನೀಡುವುದು ಅಗತ್ಯ.ಒಬ್ಬರ ಭಾವನೆ- ಸಹನೆಗಳನ್ನು ಪರೀಕ್ಷಿಸುವ ಮಾತುಗಳು- ಸಂದರ್ಭಗಳು ದಂಪತಿಗಳಿಬ್ಬರಿಗೂ ಗೊತ್ತಿರುತ್ತವೆ. ಇವು ಎದುರಾದಾಗ ಇನ್ನೊಬ್ಬರು ಆ ಸಂದರ್ಭವನ್ನು ಬೆಂಬಲಿಸುವುದನ್ನು ಕಲಿಯಬೇಕು. ಇಬ್ಬರಿಗೂ ಆಯಾಸ, ಹಸಿವು, ಮಕ್ಕಳ ಅನಾರೋಗ್ಯ, ನಿದ್ರೆಯಲ್ಲಿ ಏರುಪೇರಾಗುವ ಸಂದರ್ಭಗಳಲ್ಲಿ ಮಾತು ಕಡಿಮೆಯಿರಲಿ. ಮೌನವೇ ಬಂಗಾರ, ಕೃತಿ ವಜ್ರ ಸದೃಶ!ಪ್ರವಾಸದ ಮೊದಲ ಮತ್ತು ಕೊನೆಯ ದಿನಗಳಲ್ಲಿ ಈ ಜಗಳಗಳ ಸಾಧ್ಯತೆ ಅತಿ ಹೆಚ್ಚು. ಹಾಗಾಗಿ ಈ ದಿನಗಳಲ್ಲಿ ಆದಷ್ಟೂ ಈ ಸಮಸ್ಯೆಗಳ ಬಗ್ಗೆ ನಿರೀಕ್ಷಿಸುವುದು, ಸಮತೋಲನ ಕಾಯ್ದುಕೊಳ್ಳುವುದು ಅವಶ್ಯ.ಹಾಗೆಯೇ ಜಗಳ ಆರಂಭವಾಗುವ ಸೂಚನೆ ಕಂಡಾಕ್ಷಣ ಪತಿ ಪತ್ನಿ ಇಬ್ಬರೂ ಅದನ್ನು ಗುರುತಿಸಿ, ಇಬ್ಬರನ್ನೂ ನಿಯಂತ್ರಿಸಲು ಪದವೊಂದನ್ನು ಉಪಯೋಗಿಸುವ ತಂತ್ರವನ್ನು ಬಳಸಬಹುದು. ಇದರ ಬಗ್ಗೆ ಮೊದಲೇ ಚರ್ಚಿಸಿರಬೇಕು. ಪಯಣಿಸುವಾಗ ಹಲವು ಜವಾಬ್ದಾರಿಗಳು ಇರುತ್ತವೆಯಷ್ಟೆ. ಅವುಗಳನ್ನು ಸರಿಯಾಗಿ ಹಂಚಿಕೊಳ್ಳುವುದು, ಅವುಗಳನ್ನು ಸರಿಯಾಗಿ ನಿಭಾಯಿಸುವುದು ಅತ್ಯವಶ್ಯಕ. ಉದಾಹರಣೆಗೆ

`ಕೀ ನಿನ್ನ ಹತ್ರ ಇದ್ಯಾ?'

`ಇಲ್ಲ ನಾನು ಆಗ್ಲೇ ನಿಮಗೆ ಕೊಟ್ಟೆ ಅನಿಸುತ್ತೆ'

`ಇಲ್ಲ ನಾನೇನು ತೊಗೊಂಡಿಲ್ಲ, ನಿನ್ನ ಹತ್ತಿರದ ಟೇಬಲ್ ಮೇಲೇ ಇಟ್ಟಿದ್ದೆ'.

`ಹಾಗಿದ್ರೆ ಎಲ್ಲಿ? ನನ್ನ ಹತ್ರ ಅಂತೂ ಇಲ್ಲ'.ಇದೊಂದು ಸಾಮಾನ್ಯ, ಸಣ್ಣ ವಿಷಯ ಎನಿಸಿದರೂ, ಪ್ರಯಾಣದಲ್ಲಿ ಮತ್ತೆ ಮತ್ತೆ ಹೋಟೆಲಿನ ಕೊಠಡಿ ಚಿಲಕ ಹಾಕಿ ಹೊರಡಬೇಕಾದಾಗ ತಲೆನೋವಿನ, ಜಗಳದ ವಿಷಯವಾಗಿ ಪರಿಣಮಿಸಬಹುದು. ಜವಾಬ್ದಾರಿಗಳನ್ನು ಪ್ರವಾಸದಲ್ಲಿ ಹಂಚಿಕೊಳ್ಳುವುದು ಎಷ್ಟು ಮುಖ್ಯ ಮತ್ತು ಅದು ಹೇಗೆ ವ್ಯಕ್ತಿತ್ವವನ್ನು ಬೆಳೆಸಲು ಸಾಧ್ಯವಿದೆ ಎಂಬುದಕ್ಕೆ ಈ ಉದಾಹರಣೆಯನ್ನು ನೋಡಬಹುದು.ಗಿರೀಶ್- ಗೀತಾ ಪ್ರವಾಸ ಎಂದರೆ ಉತ್ಸಾಹದಿಂದ ಹೊರಡುವ ದಂಪತಿ. ಅವರು ತಮ್ಮ ದೀರ್ಘ ಪ್ರವಾಸಗಳ ಅನುಭವವನ್ನು, ಜವಾಬ್ದಾರಿ ಹಂಚಿಕೊಳ್ಳುವುದನ್ನು ಗೀತಾ ವಿವರಿಸುವುದು ಹೀಗೆ: ಅವರ ಈ ಮಾತುಗಳು ನಮ್ಮ ನಮ್ಮ ಅನುಭವಗಳನ್ನು ನೆನಪಿಸಬಹುದು.`ನನಗಿನ್ನೂ ನೆನಪಿದೆ, ಗಿರೀಶ್ ಮತ್ತು ನಾನು ಒಮ್ಮೆ ದೂರ ಪ್ರವಾಸಕ್ಕೆ ಹೋದಾಗ ಗಂಟೆಗಟ್ಟಲೆ ಬಸ್‌ನಲ್ಲಿ ಪಯಣಿಸಿ ಸರಿ ರಾತ್ರಿಯಲ್ಲಿ ಹೋಗಿ ಇಳಿದಿದ್ದೆವು. ಅಲ್ಲಿ ಹೋಟೆಲೊಂದೂ ಸಿಗದೆ, ಇಬ್ಬರಿಗೂ ಜಗಳ ಆರಂಭವಾಗಿ ಹೇಗೋ ಒಂದು ಹೋಟೆಲನ್ನು ಸೇರಿದ್ದಾಗಿತ್ತು. ಅದಾದ ಮೇಲಿನಿಂದ ನಾವೆಲ್ಲೇ ಪ್ರವಾಸ ಹೋಗಲಿ ವಸತಿಯನ್ನು ಖಾತ್ರಿಪಡಿಸಿಕೊಳ್ಳುವ, ಗಂಟೆಗಟ್ಟಲೆ ಇಂಟರ್‌ನೆಟ್‌ನಲ್ಲಿ ಹುಡುಕಿ ಅದನ್ನು ನಿರ್ಧರಿಸುವ, ಅದರಲ್ಲಿ ಬರೆದಿರುವ ಇತರ ಪ್ರವಾಸಿಗರ ವರದಿ ಓದುವ ಕೆಲಸ ನನ್ನದು.ಗಿರೀಶ್ ದ್ವೇಷಿಸುವ ಕೆಲಸ ಇದು. ನನಗೋ ಅತಿ ಪ್ರಿಯವಾದದ್ದು. ನಾನು ಸರಿಯಾದದ್ದನ್ನು ಮಾಡುತ್ತೇನೆಂಬ ಭರವಸೆ ಗಿರೀಶ್‌ಗೆ. ಅದರ ಜೊತೆಗೆ ತಾನು ಅದನ್ನು ಮಾಡಬೇಕಿಲ್ಲ ಎಂಬ ಸಂತಸ ಕೂಡ.ಅದೇ ದಾರಿ ಹುಡುಕುವುದರಲ್ಲಿ,  ಮ್ಯಾಪ್ ನೋಡುವುದರಲ್ಲಿ ನಾನು ತುಂಬಾ `ವೀಕ್'.  ಒಮ್ಮೆ ನಾನೇ ಮ್ಯಾಪ್ ನೋಡುತ್ತೇನೆಂದು ಹಟ ಮಾಡಿ ದಾರಿ ಸವೆಸುತ್ತಾ ಹೊರಟರೆ, ನಾಲ್ಕು ಗಂಟೆ ನಡೆದರೂ ನಮಗೆ ಸಿಗಬೇಕಾದ ಸ್ಥಳದ ಸುಳಿವೇ ಇರಲಿಲ್ಲ. ಗಿರೀಶ್ ತಾನೇ ತೆಗೆದುಕೊಂಡು ನೋಡಿ, ನಾವು ಪೂರ್ತಿ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿದ್ದೇವೆ ಎನ್ನಬೇಕೇ? ಇಂಥ ಹಲವಾರು ಅನುಭವಗಳ ನಂತರ ಈಗ ಜವಾಬ್ದಾರಿಗಳ ಹಂಚಿಕೆ ನಮ್ಮದು.ನಮ್ಮ ನಮ್ಮ ಜವಾಬ್ದಾರಿಗಳ ಬಗ್ಗೆ ಪೂರ್ಣ ಗಮನ, ಇನ್ನೊಬ್ಬರ ಜವಾಬ್ದಾರಿಯ ಬಗ್ಗೆ ವಿಶ್ವಾಸ, ಕಡಿಮೆ ಕಲಹಗಳಿದ್ದರೆ ಆರಾಮದ ಪ್ರವಾಸ ಸಾಧ್ಯ. ಹೀಗಾಗಿ ಪ್ರವಾಸ ಈಗ ನಮ್ಮ `ಟೀಂ ವರ್ಕ್'. ಮತ್ತೊಬ್ಬರ ಗುಣಗಳನ್ನು  ನೋಡಿ ಕಲಿಯುವ, ನಮ್ಮ ದೋಷಗಳನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸುವ ದಾರಿ. ಮೊದಲೇ ಕುಳಿತು, ಕಲಹವಿಲ್ಲದ ಸಮಯದಲ್ಲಿ ನಿರ್ಧಾರಗಳ ಬಗ್ಗೆ ಚಿಂತಿಸಿ, ಯೋಚಿಸಿ ಹಂಚಿಕೊಳ್ಳುವುದು ನಮ್ಮ ಪ್ರವಾಸದ ಯಶಸ್ಸಿನ ಗುಟ್ಟು'.

 

ಹಂಚಿಕೊಳ್ಳಿ ಜವಾಬ್ದಾರಿ

ಪ್ರವಾಸದ ಯೋಜನೆಯಿಂದ ಹಿಡಿದು ಪ್ರವಾಸದುದ್ದಕ್ಕೂ, ಕೊನೆಗೆ ಹಿಂದಿರುಗಿದ ಮೇಲೂ ಹಂಚಿಕೊಳ್ಳಬೇಕಾದ ಹಲವು ಜವಾಬ್ದಾರಿಗಳು ಇರುತ್ತವೆ. ಅವುಗಳಲ್ಲಿ ಕೆಲವನ್ನು ಹೀಗೆ ಪಟ್ಟಿ ಮಾಡಬಹುದು.-ಪ್ರವಾಸ ಸ್ಥಳದ ಬಗ್ಗೆ ಮಾಹಿತಿ ಕಲೆ ಹಾಕುವುದು, ಏನೇನು ನೋಡಬೇಕು, ಯಾವ ಟೂರ್ ಏಜೆಂಟ್ ಇತ್ಯಾದಿ.

-ಪ್ರಯಾಣದ ಬುಕಿಂಗ್, ಟಿಕೆಟ್, ಪ್ರವಾಸ ಸ್ಥಳದಲ್ಲಿ ವಸತಿಯ ವಿವರಗಳು

-ಬಟ್ಟೆಬರೆ, ಬೇಕಾದ ವಸ್ತುಗಳು, ಔಷಧಿ- ಆಹಾರ ಪದಾರ್ಥ ಜೋಡಿಸಿಕೊಳ್ಳುವುದು

-ಪ್ರವಾಸದಲ್ಲಿ ಕೀ-ಹಣ ಮೊದಲಾದವುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವ ಜವಾಬ್ದಾರಿ

-ಸಣ್ಣ ಮಕ್ಕಳಿದ್ದರೆ ಅವರ ಊಟ-ತಿಂಡಿ, ಸ್ನಾನ, ನಿದ್ರೆ ಮತ್ತು ಸುರಕ್ಷತೆಯ ಜವಾಬ್ದಾರಿ.

ಕಾರಣ ಹೀಗಿರಬಹುದು

ಪ್ರವಾಸಿ ಜಗಳಕ್ಕೆ ಕಾರಣ ಹಲವು. ಅವುಗಳಲ್ಲಿ ಕೆಲವು ಹೀಗಿರಬಹುದು:

-ಪ್ರವಾಸದಲ್ಲಿ `ಒಟ್ಟಿಗೆ' ಕಳೆಯುವ ಸಂದರ್ಭ ಹೆಚ್ಚು.

-ಹಸಿವು, ನಿದ್ರೆ ಕಾಲಕಾಲಕ್ಕೆ ಆಗದಿರುವುದರಿಂದ ಎಲ್ಲರ ಮನಸ್ಸು- ತಲೆಗಳಲ್ಲಿ ಕಿರಿಕಿರಿ.

-ಅಭಿಪ್ರಾಯ ಭೇದಗಳು, ಕಡಿಮೆ ಅವಧಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆ. ಎಲ್ಲಿಗೆ ಮೊದಲು ಹೋಗಬೇಕು, ಯಾರು ಮೊದಲು ಹೋಗಬೇಕು ಇತ್ಯಾದಿ.

-ಹಠಾತ್ ಒತ್ತಡಮಯ ಸಂದರ್ಭಗಳು.

-`ಶಾಪಿಂಗ್' ಬಗ್ಗೆ, ಹಣ ಖರ್ಚು ಮಾಡುವ ಬಗ್ಗೆ, ಕೊಂಡ ವಸ್ತು ದುಬಾರಿ ಆಯಿತು, ಆ ವಸ್ತು ಚೆನ್ನಾಗಿಲ್ಲ ಎನ್ನುವ ಬಗ್ಗೆ... ಹೀಗೆ ಎಲ್ಲದರ ಬಗ್ಗೆಯೂ ಅಸಮಾಧಾನ.

ಪ್ರತಿಕ್ರಿಯಿಸಿ (+)