ಸೋಮವಾರ, ಆಗಸ್ಟ್ 19, 2019
28 °C

ಪ್ರವಾಹದ ನದಿಯಲ್ಲಿ ಈಜಿದ ಭೂಪ!

Published:
Updated:

ಶ್ರೀರಂಗಪಟ್ಟಣ: ಇಲ್ಲಿನ ವ್ಲ್ಲೆಲೆಸ್ಲಿ ಸೇತುವೆ ಬಳಿ, ಕಾವೇರಿ ನದಿ ದಡದಲ್ಲಿ ಶುಕ್ರವಾರ ಜನವೋ ಜನ. ಪ್ರವಾಹ ನೋಡಲು ಬೆಳಿಗ್ಗೆಯಿಂದ ಸಂಜೆವರೆಗೆ ವಿವಿಧೆಡೆಗಳಿಂದ ಜನ ಬರುತ್ತಲೇ ಇದ್ದರು. ಉಕ್ಕಿ ಹರಿಯುತ್ತಿರುವ ನದಿಯ ಸೊಬಗನ್ನು ಜನರು ಕಣ್ಣೆವೆಯಿಕ್ಕದೆ ನೋಡುತ್ತಿರುವಾಗ ವ್ಯಕ್ತಿಯೊಬ್ಬ ನದಿಗೆ ದಿಢೀರ್ ಹಾರಿದ.ಪಾಂಡವಪುರ ತಾಲ್ಲೂಕು ಕೆನ್ನಾಳು ಗ್ರಾಮದ ಕೆ.ವಿ. ನಂಜುಂಡೇಗೌಡ ಅವರ ಪುತ್ರ 40 ವರ್ಷದ ಶಿವಕುಮಾರ್ ನದಿಗೆ ಧುಮುಕಿದವರು. ನದಿಯಲ್ಲಿ 85 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದ್ದು, ತಮ್ಮ ಕೌಶಲ ಪ್ರದರ್ಶಿಸಲೆಂದೇ ನದಿಗೆ ಜಿಗಿದರು. ದೂರದಲ್ಲಿದ್ದವರು `ಓಹೋ.., ಯಾರೋ ನದಿಗೆ ಬಿದ್ದುಬಿಟ್ಟರು. ಅದೋ ಅಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದಾರೆ... ತೆಪ್ಪ ತರಿಸಿ... ಪೊಲೀಸರಿಗೆ ಫೋನ್ ಮಾಡಿ..ಈಜುಗಾರರನ್ನು ಕರೆಸಿ, ಹೇಗಾದರೂ ಮಾಡಿ ರಕ್ಷಿಸಿ...' ಹೀಗೆ ಜನರು ಆತಂಕ ವ್ಯಕ್ತಪಡಿಸಿದರು. ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್‌ಎಸ್‌ಕೆ) ಕ್ಷೇತ್ರ ಸಹಾಯಕರೂ ಆಗಿರುವ ಶಿವಕುಮಾರ್ ಅವರ ನದಿ ನೋಡಲು ಜಮಾಯಿಸಿದ್ದ ಜನರಿಗೆ ಖುಷಿ ನೀಡಬೇಕು ಎಂಬ ಉದ್ದೇಶದಿಂದ ಮೈದುಂಬಿ ಹರಿಯುತ್ತಿರುವ ನದಿಗೆ ಧುಮುಕಿ ಸುರಕ್ಷಿತವಾಗಿ ದಡ ಸೇರಿದರು.ವೆಲ್ಲೆಸ್ಲಿ ಸೇತುವೆಯಿಂದ ಬೆಂಗಳೂರು- ಮೈಸೂರು ಹೆದ್ದಾರಿ ಸೇತುವೆ ಕೆಳಗೆ ಹಾದು ಕಾವೇರಿಪುರದವರೆಗೆ ಸುಮಾರು 400 ಮೀಟರ್ ದೂರ ನಿರಾಯಾಸವಾಗಿ ಈಜಿದರು. ಶಿವಕುಮಾರ್ ಅವರು ಲೀಲಾಜಾಲವಾಗಿ, ವಿವಿಧ ಭಂಗಿಗಳಲ್ಲಿ ಈಜುತ್ತಾ ನೆರೆದಿದ್ದವರಿಗೆ ಮನರಂಜನೆ ನೀಡಿದರು.

ಅವರು ನದಿಯಲ್ಲಿ ಈಜುತ್ತಾ ಹೋದಂತೆ ದಡ ಸೇರುವವರೆಗೂ ಜನರು ಅವರನ್ನೇ ಹಿಂಬಾಲಿಸುತ್ತಾ ನಡೆದರು. ಈಜಿ ದಡ ಸೇರಿದ ಸಾಹಸಿ ಶಿವಕುಮಾರ್ ಅವರನ್ನು ಜನರು ಅಭಿನಂದಿಸಿದರು.  `ಈ ಹಿಂದೆ ಹೇಮಾವತಿ ಜಲಾಶಯವನ್ನು ಸಲೀಸು ಈಜಿದ್ದೆ' ಎಂದು ತಮ್ಮ ಸಾಹಸಗಾಥೆಯನ್ನು ಹೇಳಿದರು.

Post Comments (+)