ಸೋಮವಾರ, ಸೆಪ್ಟೆಂಬರ್ 16, 2019
29 °C

ಪ್ರವಾಹದ ಭೀತಿ: ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತ

Published:
Updated:

ನರಗುಂದ:  ನವಿಲು ತೀರ್ಥ ಜಲಾಶಯವು ಭರ್ತಿಯಾಗ್ದ್ದಿದು ಹೆಚ್ಚಿನ ನೀರನ್ನು ಹೊರಬಿಟ್ಟ ಪರಿಣಾಮ ತಾಲ್ಲೂಕಿನ ಕೊಣ್ಣೂರು ಬಳಿ ಇರುವ ಹುಬ್ಬಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಮೇಲಿನ ಮಲಪ್ರಭಾ ಸೇತುವೆ ತುಂಬಿ ಹರಿಯುತ್ತಿದೆ.ಇದರಿಂದ ಸಂಚಾರ ಸ್ಥಗಿತಗೊಂಡಿದ್ದು, ಜನಜೀವನ ಅಸ್ತವ್ಯಸ್ತ ಗೊಂಡಿದೆ. ಎಲ್ಲ ವಾಹನಗಳು  ರಾಮದುರ್ಗ ಮಾರ್ಗವಾಗಿ ವಿಜಾಪುರ, ಬಾಗಲಕೋಟೆ  ಮಾರ್ಗವಾಗಿ ಸಂಚರಿಸುತ್ತಿವೆ.ನವಿಲುತೀರ್ಥ ಜಲಾಶಯದ ಸಾಮರ್ಥ್ಯ 2079.50 ಅಡಿ ಇದ್ದು ಅದು ಸಂಪೂರ್ಣ ಭರ್ತಿಯಾಗಿದ್ದು ಒಳಹರಿವು 7020 ಕ್ಯೂಸೆಕ್ ಹರಿದು ಬರುತ್ತಿದೆ.  ಆದ್ದರಿಂದ ಜಲಾಶಯಕ್ಕೆ ಬರುವ ನೀರನ್ನು  ಸಂಪೂರ್ಣ ಕಾಲುವೆ ಹಾಗು ಹೊಳೆ, ಹಳ್ಳಗಳಿಗೆಹರಿ ಬಿಡಲಾಗಿದೆ. ಅದರಲ್ಲಿ 5029 ಕ್ಯೂಸೆಕ್ ನೀರು ಹೊಳೆ ಹಾಗೂ ಹಳ್ಳಗಳಿಗೆ ಬಿಟ್ಟದ್ದರಿಂದ ಕೊಣ್ಣೂರು ಬಳಿ ಪ್ರವಾಹ ಬಂದು ಸೇತುವೆ ತುಂಬಿ ಹರಿಯುತ್ತಿರುವುದರಿಂದ  ಸಂಚಾರ ಸ್ಥಗಿತಗೊಂಡಿದೆ.  ಹೊಳೆ ಸಮೀಪವಿರುವ ಜಮೀನುಗಳಿಗೆ ನೀರು ನುಗ್ಗಿದ್ದು ಬೆಳೆ ಹಾನಿ ಮೆಕ್ಕೆಜೋಳ, ಹತ್ತಿ ಬೆಳೆ ಹಾನಿ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಕೊಣ್ಣೂರ  ಗ್ರಾಮಸ್ಥರು ತಿಳಿಸಿದರು. ಜಲಾಶಯಕ್ಕೆ ಬರುವ ಹೆಚ್ಚಿನ ನೀರನ್ನು  ಹೊರಗೆ ಹರಿ  ಬಿಡಲಾಗುವುದು  ಎಂದು ನೀರಾವರಿ ಅಧಿಕಾರಿ ಕೌದಿ ತಿಳಿಸಿದರು. ಸುಮಾರು 12 ಸಾವಿರಕ್ಕಿಂತಲೂ ಹೆಚ್ಚು ನೀರನ್ನು ಹೊರ ಬಿಟ್ಟರೆ ಮಾತ್ರ ಅಪಾಯ ಉಂಟಾಗುತ್ತಿದೆ ಈಗ ಅಪಾಯವಿಲ್ಲ ಎಂದು `ಪ್ರಜಾವಾಣಿ~ಗೆ ತಿಳಿಸಿದರು.ಗುರುವಾರ ಬೆಳಿಗ್ಗೆಯಿಂದಲೇ ಸೇತುವೆ ಮೇಲೆ ನೀರು ಹರಿದು ಬರುತ್ತಿದೆ. ಸಂಜೆ ಹೊತ್ತಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿರುವುದು ವರದಿಯಾಗಿದೆ.   ಈ ಪ್ರವಾಹದಿಂದ ಕೊಣ್ಣೂರು ಸುತ್ತಮುತ್ತಲಿನ ಬೂದಿಹಾಳ, ವಾಸನ, ಲಕಮಾಪುರ ಗ್ರಾಮದ ನಿವಾಸಿಗಳು ಭೀತಿಗೊಳಗಾಗಿದ್ದು. ಯಾವುದೇ ಸಂದರ್ಭದಲ್ಲೂ ಪ್ರವಾಹ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ  ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ  ಮುಂಜಾಗ್ರತೆ ಕ್ರಮ ಕೈಗೊಳ್ಳುತ್ತಿದೆ. ಪೊಲೀಸರು ಹಾಗೂ ಕಂದಾಯ, ನೀರಾವರಿ ಇಲಾಖೆ ಸಿಬ್ಬಂದಿ ಕೊಣ್ಣೂರಿನಲ್ಲಿ ಬೀಡು ಬಿಟ್ಟಿದ್ದಾರೆ.

Post Comments (+)